ನೇಪಾಳ ಪ್ರವಾಹ: ಸಾವಿನ ಸಂಖ್ಯೆ 1252ಕ್ಕೆ ಏರಿಕೆ; ಹಿಮಾಲಯದಲ್ಲಿನ ನಿರಂತರ ಅಭಿವೃದ್ಧಿಗಳೇ ದುರಂತಕ್ಕೆ ಕಾರಣ ಎಂದ ಪರಿಸರ ತಜ್ಞರು!
ಮಳೆಯ ಮಾದರಿಗಳಲ್ಲಿನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ಅನಿಯಂತ್ರಿತ ಅಭಿವೃದ್ಧಿ ಮತ್ತು ಎತ್ತರದ ಹಿಮಾಲಯ ಪ್ರದೇಶಗಳಲ್ಲಿ ಏರುತ್ತಿರುವ ಮಾನವ ಚಟುವಟಿಕೆಗಳು ಈ ದುರಂತಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

Published : September 3, 2026 at 2:09 PM IST
ಕಠ್ಮಂಡು: ನೇಪಾಳ- ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ ಸಂಭವಿಸಿ, ವಾರ ಕಳೆದಿದ್ದು, ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಇಂದು ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಸಾವನ್ನಪ್ಪಿದವರ ಸಂಖ್ಯೆ 1252ಕ್ಕೆ ಏರಿಕೆ ಕಂಡಿದೆ. 4,000 ಜನರು ಕಣ್ಮರೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಮತ್ತು ರಕ್ಷಣಾ ತಂಡಗಳು ಕಾರ್ಯ ನಿರತವಾಗಿದೆ. ಎನ್‌ಡಿಆರ್‌ಆರ್‌ಎಂಎ ಪ್ರಕಾರ, ಭದ್ರತಾ ಪಡೆಗಳು ಚಿತ್ವಾನ್ ಜಿಲ್ಲೆಯಿಂದ 348, ನವಾಲ್‌ಪರಸಿ ಪೂರ್ವದಿಂದ 218, ನವಾಲ್‌ಪರಸಿ ಪಶ್ಚಿಮದಿಂದ 208 ಮತ್ತು ನುವಾಕೋಟ್‌ನಿಂದ 155 ಮೃತದೇಹಗಳನ್ನು ಹೊರತೆಗೆದಿವೆ. ರಸುವಾದಿಂದ 127, ಗೋಖಾದಿಂದ 69, ಧಾಡಿಂಗ್‌ನಿಂದ 60 ಮತ್ತು ತನಾಹುವಿನಿಂದ 38 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸುಮಾರು 21,314 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚೀನಾದ ಮಾಧ್ಯಮ ವರದಿಗಳ ಪ್ರಕಾರ, ಈ ದುರಂತದಲ್ಲಿ ಚೀನಾ ಭಾಗದಲ್ಲೂ 21 ಮಂದಿ ಮೃತಪಟ್ಟಿದ್ದು, ಟಿಬೆಟ್‌ನಲ್ಲಿ ಸುಮಾರು 540 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹ ಪೀಡಿತ ನೇಪಾಳಕ್ಕೆ ಭಾರತ ಮಾನವೀಯ ನೆರವನ್ನು ನೀಡುವುದನ್ನು ಮುಂದುವರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ನೇಪಾಳ ಪ್ರವಾಹದಲ್ಲಿ 275ಕ್ಕೂ ಹೆಚ್ಚು ಭಾರತೀಯರು ಮತ್ತು ಭಾರತೀಯ ಮೂಲದ 128 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
ಭಾರತದ ನೆರವು: ವಿಶೇಷ ಉಪಕರಣಗಳೊಂದಿಗೆ 11 ಸದಸ್ಯರ ರಕ್ಷಣಾ ತಂಡ ಹಾಗೂ 5.5 ಟನ್ ಅಗತ್ಯ ಔಷಧಗಳನ್ನು ಹೊತ್ತ ಐದನೇ ಭಾರತೀಯ ವಿಮಾನವು ಬುಧವಾರ ನೇಪಾಳಕ್ಕೆ ಬಂದಿಳಿದಿದ್ದು, ರಾಯಭಾರಿ ನವೀನ್ ಶ್ರೀವಾಸ್ತವ ಅವರು ಪರಿಹಾರ ಸಾಮಗ್ರಿಗಳನ್ನು ಹಸ್ತಾಂತರಿಸಿದ್ದಾರೆ. ಭೀಕರ ಪ್ರವಾಹದಲ್ಲಿ ನಾಪತ್ತೆಯಾಗಿದ್ದ ನೇಪಾಳಿ ಮತ್ತು ವಿದೇಶಿ ಪ್ರಜೆಗಳ ಪತ್ತೆಯಾದ ಮೃತದೇಹಗಳು ಅಥವಾ ದೇಹದ ಭಾಗಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ಅಮೆರಿಕ ನೆರವು: ನೇಪಾಳದ ನೇತೃತ್ವದಲ್ಲಿ ನಡೆಯುತ್ತಿರುವ ಶೋಧ, ರಕ್ಷಣೆ ಮತ್ತು ಚೇತರಿಕೆ ಕಾರ್ಯಾಚರಣೆಗಳಿಗೆ ಬೆಂಬಲವಾಗಿ, ಅಮೆರಿಕದ ಎರಡು ಮಿಲಿಟರಿ ಸರಕು ಸಾಗಣೆ ವಿಮಾನಗಳನ್ನು ಕಳುಹಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್, ವಿಪತ್ತಿಗೆ ತುತ್ತಾದವರಿಗೆ ಅಗತ್ಯವಿರುವ 5,000 ವಿಶೇಷ ಪರಿಹಾರ ಸಾಮಗ್ರಿಗಳು, 500 ಪ್ರಥಮ ಚಿಕಿತ್ಸಾ ಕಿಟ್‌ಗಳು, ಸ್ಟ್ರೆಚರ್‌ಗಳು ಮತ್ತು ಫ್ರಂಟ್ - ಎಂಡ್ ಲೋಡರ್ಗಳನ್ನು ತಲುಪಿಸಿವೆ. ಪ್ರವಾಹ ಪರಿಹಾರ ಕಾರ್ಯಕ್ಕಾಗಿ ಅಮೆರಿಕ ಈಗಾಗಲೇ ಘೋಷಿಸಿರುವ 3.6 ದಶಲಕ್ಷ ಡಾಲರ್ ಮೌಲ್ಯದ ನೆರವಿಗೆ ಇದು ಹೆಚ್ಚುವರಿ ನೆರವು ಎಂದು ತಿಳಿಸಿದ್ದಾರೆ.
ಅಧ್ಯಯನದಲ್ಲಿ ತಜ್ಞರ ತಂಡ: ಹಿಮಾಲಯದ ತಪ್ಪಲಿನಲ್ಲಿ ಸಂಭವಿಸಿದ ಈ ಭೀಕರ ದುರಂತದ ಕುರಿತು ಅಧ್ಯಯನ ನಡೆಸಿರುವ ತಜ್ಞರು, ಮಳೆಯ ಮಾದರಿಗಳಲ್ಲಿನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ಅನಿಯಂತ್ರಿತ ಅಭಿವೃದ್ಧಿ ಮತ್ತು ಎತ್ತರದ ಹಿಮಾಲಯ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳು ಈ ದುರಂತಕ್ಕೆ ಕಾರಣವಾಗಿದೆ. ಮಳೆ ಮತ್ತು ವೇಗವಾಗಿ ಬದಲಾಗುತ್ತಿರುವ ಹವಾಮಾನ ಮಾದರಿಗಳು ಸ್ಪಷ್ಟವಾಗಿ ಕಂಡುಬಂದವು. ವಿಪರೀತ ಮಳೆ ಮತ್ತು ವೇಗವಾಗಿ ಕರಗುತ್ತಿರುವ ಹಿಮನದಿಗಳು ಹಿಮಾಲಯವನ್ನು ಗಮನಾರ್ಹವಾಗಿ ಹೆಚ್ಚು ದುರ್ಬಲಗೊಳಿಸಿವೆ ಎಂದಿದ್ದಾರೆ.
ಇದನ್ನೂ ಓದಿ:
ನೇಪಾಳ ಪ್ರವಾಹ: 30 ನಿಮಿಷದಲ್ಲಿ ಬದುಕು, ಪ್ರಕೃತಿ ಸೌಂದರ್ಯ ತಾರುಮಾರು, ಕಾಣೆಯಾದವರಿಗಾಗಿ ನಡೆದಿದೆ ಹುಡುಕಾಟ!
ನೇಪಾಳ ಪ್ರವಾಹ: ಮೃತರ ಸಂಖ್ಯೆ 1,100ಕ್ಕೆ ಏರಿಕೆ; ರಕ್ಷಣಾ ತಂಡದೊಂದಿಗೆ ಹೊರಟ ಭಾರತದ 5ನೇ ವಿಮಾನ

