ಇಸ್ರೇಲ್ ಪರವಾಗಿ ನಿಂತಿದ್ದಕ್ಕೆ ಧನ್ಯವಾದ ಅರ್ಪಿಸಿದ ನೆತನ್ಯಾಹು: ಮೋದಿ ಸ್ನೇಹಿತನಿಗಿಂತ ಹೆಚ್ಚು ಎಂದು ಬಣ್ಣನೆ
ನೀವು ಇಸ್ರೇಲ್‌ನ ಉತ್ತಮ ಸ್ನೇಹಿತ ಮತ್ತು ವಿಶ್ವ ವೇದಿಕೆಯಲ್ಲಿ ಉತ್ತಮ ನಾಯಕ. ನರೇಂದ್ರ ನೀವು ಸ್ನೇಹಿತನಿಗಿಂತ ಹೆಚ್ಚು. ನೀವು ಒಬ್ಬ ಸಹೋದರ ಎಂದು ನೆತನ್ಯಾಹು ತಮ್ಮ ಭಾಷಣದ ಆರಂಭದಲ್ಲಿ ಭಾವನಾತ್ಮಕವಾಗಿ ಹೇಳಿದರು.

By PTI
Published : February 26, 2026 at 7:12 AM IST
ಜೆರುಸಲೆಮ್, ಇಸ್ರೇಲ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ನೇಹಿತನಿಗಿಂತ ಹೆಚ್ಚು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಣ್ಣಿಸಿದ್ದಾರೆ. ಇದೇ ವೇಳೆ ಅವರು ಅಕ್ಟೋಬರ್ 7, 2023 ರ ಘೋರ ದಾಳಿಯ ನಂತರ ಇಸ್ರೇಲ್ ಪರವಾಗಿ ಭಾರತ ನಿಂತಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.
ಹಮಾಸ್ ನಡೆಸಿದ ಮಾರಕ ದಾಳಿಯನ್ನು ಖಂಡಿಸಿದ ಮೊದಲ ವಿಶ್ವ ನಾಯಕರಲ್ಲಿ ಮೋದಿ ಕೂಡಾ ಒಬ್ಬರು. ಇದರಲ್ಲಿ ಸುಮಾರು 1,200 ಇಸ್ರೇಲಿಗಳು ಸಾವನ್ನಪ್ಪಿದ್ದರು ಮತ್ತು ಸುಮಾರು 250 ಜನರನ್ನು ಅಪಹರಿಸಲಾಗಿತ್ತು.
ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಗಳ ಮುಖ್ಯಸ್ಥರು ನೆಸ್ಸೆಟ್‌ಗೆ ಬರುತ್ತಾರೆ ಮತ್ತು ಇದು ನಮಗೆಲ್ಲರಿಗೂ ಯಾವಾಗಲೂ ರೋಮಾಂಚಕಾರಿ ಕ್ಷಣವಾಗಿದೆ. ಆದರೆ ನನ್ನ ಪ್ರೀತಿಯ ಸ್ನೇಹಿತ ನರೇಂದ್ರ ಮೋದಿ ಅವರೇ ಈ ನಿಮ್ಮ ಭೇಟಿಯಿಂದ ನಾನು ವಿಶೇಷವಾಗಿ ಭಾವುಕನಾಗಿದ್ದೇನೆ. ನೀವು ಇಸ್ರೇಲ್‌ನ ಉತ್ತಮ ಸ್ನೇಹಿತ ಮತ್ತು ವಿಶ್ವ ವೇದಿಕೆಯಲ್ಲಿ ಉತ್ತಮ ನಾಯಕ. ನರೇಂದ್ರ ನೀವು ಸ್ನೇಹಿತನಿಗಿಂತ ಹೆಚ್ಚು. ನೀವು ಒಬ್ಬ ಸಹೋದರ ಎಂದು ನೆತನ್ಯಾಹು ತಮ್ಮ ಭಾಷಣದ ಆರಂಭದಲ್ಲಿ ಭಾವನಾತ್ಮಕವಾಗಿ ಹೇಳಿದರು.

ನಾವು ನಮ್ಮ ಶೂಗಳನ್ನು ತೆಗೆದು ಸಮುದ್ರದಲ್ಲಿ ನಡೆದೆವು. ನಾವು ನೀರಿನ ಮೇಲೆ ನಡೆಯಲಿಲ್ಲ, ಆದರೆ, ಪವಾಡಗಳನ್ನು ಮಾಡಿದ್ದೇವೆ ಎಂದು ನೆತನ್ಯಾಹು ಹೇಳಿದರು. 2017ರಲ್ಲಿ ಪ್ರಧಾನಿಯಾಗಿ ಮೋದಿ ಇಸ್ರೇಲ್‌ಗೆ ಮೊದಲ ಭೇಟಿ ನೀಡಿದ ಸಂದರ್ಭದಲ್ಲಿ ಇಬ್ಬರು ನಾಯಕರು ಸಾಗರದಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುವ ವೈರಲ್ ಚಿತ್ರವನ್ನು ಉಲ್ಲೇಖಿಸಿ ಅವರು ಮಾತನಾಡಿದರು. ಇದು ಇಸ್ರೇಲ್‌ನಲ್ಲಿ ಪ್ರೀತಿಯ ಮಾತುಕತೆಗೆ ಕಾರಣವಾಯಿತು.
ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರವು ಹೇಗೆ ದ್ವಿಗುಣಗೊಂಡಿದೆ ಎಂಬುದನ್ನು ಒಳಗೊಂಡಂತೆ ಜಂಟಿ ಯಶಸ್ಸನ್ನು ಇದೇ ವೇಳೆ ನೆತನ್ಯಾಹು ಪ್ರಸ್ತಾಪಿಸಿದರು. ಇಬ್ಬರು ನಾಯಕರ ನಡುವಿನ ವೈಯಕ್ತಿಕ ಬಾಂಧವ್ಯದ ಬಗ್ಗೆ ಇಸ್ರೇಲ್‌ನಲ್ಲಿ ಹೆಚ್ಚು ಪ್ರಚಾರ ಮಾಡಲಾಗಿದೆ. ಇದಕ್ಕೆ ಇಂಬು ನೀಡುವಂತೆ ನೆಸ್ಸೆಟ್‌ನಲ್ಲಿಯೂ ಸಹ ಇಬ್ಬರ ನಾಯಕರ ನಡುವಣ ದೀರ್ಘ ಅಪ್ಪುಗೆ ನೆರೆದಿದ್ದ ಜನಸಮೂಹ ಮತ್ತು ಸಂಸದರ ಕರತಾಡನೊದಿಗೆ ಸ್ಪಷ್ಟವಾಗಿ ಗೋಚರಿಸಿತು.
ಭಾರತವನ್ನು ಒಂದು ದೈತ್ಯ ದೇಶ ಎಂದು ವಿವರಿಸಿದ ಅವರು, ನಾಗರಿಕತೆಗಳು ಅಭಿವೃದ್ಧಿ ಹೊಂದಿದ ಎರಡು ಸ್ಥಳಗಳೆಂದರೆ ಸಿಂಧೂ ಕಣಿವೆ ಮತ್ತು ಜೋರ್ಡಾನ್ ಕಣಿವೆ. ನಾವಿಬ್ಬರೂ ಕಾಲದ ಯುಗಗಳನ್ನು ದಾಟಿ, ಬ್ರಿಟಿಷ್ ಆಳ್ವಿಕೆಯಿಂದ ಹೊರಬಂದೆವು. ನಾವು ಅನೇಕ ವೈಶಿಷ್ಟ್ಯಗಳನ್ನು ಹಂಚಿಕೊಂಡಿದ್ದೇವೆ. ಕೆಲವೇ ಜನರಿಗೆ ಅರ್ಥವಾಗುವ ಸಂದರ್ಭಗಳಲ್ಲಿ ನಾವು ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುತ್ತೇವೆ ಎಂದು ಇಸ್ರೇಲಿ ನಾಯಕ ಬಣ್ಣಿಸಿದರು. ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದ್ದಕ್ಕಾಗಿ ಮೋದಿಯವರನ್ನು ಶ್ಲಾಘಿಸಿದ ನೆತನ್ಯಾಹು, ಭಾರತವು ಬಾಹ್ಯಾಕಾಶ ಮಹಾಶಕ್ತಿ ಮತ್ತು ಏಷ್ಯಾದ ಹುಲಿಯಾಗಿರುವುದರಿಂದ ಆಕಾಶಕ್ಕೆ ಮಿತಿಯಲ್ಲ ಎಂದು ಗುಣಗಾನ ಮಾಡಿದರು.

ದೀರ್ಘ ಕರತಾಡನ: ಅಕ್ಟೋಬರ್ 7, 2023 ರಂದು ಹಮಾಸ್ ದಾಳಿಯ ನಂತರ ಮೋದಿ ಇಸ್ರೇಲ್‌ಗೆ ಬೆಂಬಲವಾಗಿ ನಿಂತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸಿದ ರೀತಿಯನ್ನು ನೆತನ್ಯಾಹು ನೆನಪಿಸಿಕೊಂಡಾಗ ನೆರೆದಿದ್ದ ಎಲ್ಲರಿಂದಲೂ ದೀರ್ಘ ಪ್ರಶಂಸೆ ಸಿಕ್ಕಿತು.
ಇಸ್ರೇಲ್‌ನಲ್ಲಿ ನಿಮ್ಮ ಮೇಲಿನ ಪ್ರೀತಿಗೆ ಮತ್ತೊಂದು ಕಾರಣವಿದೆ: ಅಕ್ಟೋಬರ್ 7 ರಂದು ನಡೆದ ಭೀಕರ ದಾಳಿಯ ನಂತರ, ನೀವು ಇಸ್ರೇಲ್ ಅನ್ನು ನೈತಿಕವಾಗಿ ಬೆಂಬಲಿಸಿದ್ದೀರಿ. ನೀವು ಹಿಂಜರಿಯಲಿಲ್ಲ, ನೀವು ಇಸ್ರೇಲ್ ಬೆನ್ನ ಹಿಂದೆ ನಿಂತಿದ್ದೀರಿ ಮತ್ತು ಯಹೂದಿಗಳಿಗೆ ಬೆಂಬಲ ಸೂಚಿಸಿದ್ದೀರಿ. ನಿಮಗೆ ಧನ್ಯವಾದಗಳು ಎಂದು ನೆತನ್ಯಾಹು ಹೇಳಿದರು.
ಅಸ್ಥಿರ ಅವ್ಯವಸ್ಥೆ ಪ್ರದೇಶದಲ್ಲಿ ಬಂಡೆಯಂತೆ ನಿಂತಿದ್ದೇವೆ: ಇಸ್ಲಾಮಿಕ್ ಭಯೋತ್ಪಾದನೆಯ ಅನಾಗರಿಕತೆಯ ವಿರುದ್ಧ ಇಸ್ರೇಲ್ ನಾಗರಿಕತೆಯು ಮುಂಚೂಣಿಯಲ್ಲಿದೆ. ಆದರೆ, ಈ ಜ್ವಾಲಾಮುಖಿಯ ಲಾವಾ ಪ್ರಪಂಚದಾದ್ಯಂತ ಹರಡಿದೆ. ಭಾರತ ಇಸ್ರೇಲ್ ಅನ್ನು ಬೆಂಬಲಿಸುತ್ತದೆ ಏಕೆಂದರೆ ಇಸ್ರೇಲ್ ಅನಾಗರಿಕತೆಯ ವಿರುದ್ಧ ಕಬ್ಬಿಣದ ಗೋಡೆಯಾಗಿ ನಿಂತಿದೆ. ಅಸ್ಥಿರ ಅವ್ಯವಸ್ಥೆಯ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಭದ್ರಕೋಟೆಯಾಗಿದೆ ಎಂದು ನೆತನ್ಯಾಹು ಬಣ್ಣಿಸಿದರು.
ನಮ್ಮ ಸೈನಿಕರ ಶೌರ್ಯದಿಂದ ನಾವು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇವೆ. ನಮ್ಮ ಕೆಲವು ಸೈನಿಕರು ಗಾಯಗೊಂಡಿದ್ದಾರೆ ಮತ್ತು ಅಂಗವಿಕಲರಾಗಿದ್ದಾರೆ ಎನ್ನುವ ಮೂಲಕ ಯುದ್ಧದಲ್ಲಿ ಭಾರತೀಯ ಮೂಲದ ಯಹೂದಿಗಳು ಮಾಡಿದ ಶೌರ್ಯ ಮತ್ತು ತ್ಯಾಗದ ಕಥೆಗಳನ್ನು ವಿವರಿಸಿದರು.
ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದಾಗಿ ಪ್ರತಿಜ್ಞೆ ಮಾಡಿದ ಇಸ್ರೇಲ್ ಪ್ರಧಾನಿ, ವೈಯಕ್ತಿಕ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬಿಗಿಗೊಳಿಸಲು, ರಕ್ಷಣೆ, ಆರ್ಥಿಕತೆ, ವ್ಯಾಪಾರ, ಸೈಬರ್, AI ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಹಕಾರವನ್ನು ಹೆಚ್ಚಿಸಲು ಮತ್ತು ಮಹತ್ವಾಕಾಂಕ್ಷೆಯ IMEC ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕೆಲಸ ಮಾಡುವುದಾಗಿ ಹೇಳಿದರು.
ಇಸ್ರೇಲ್ ಪ್ರಧಾನಿಯೊಂದಿಗೆ ಫೋಟೋ ಹಂಚಿಕೊಂಡ ಮೋದಿ, ನನ್ನ ನೆಸ್ಸೆಟ್ ಭಾಷಣದ ನಂತರ, ಪ್ರಧಾನಿ ನೆತನ್ಯಾಹು ಮತ್ತು ನಾನು ತಂತ್ರಜ್ಞಾನದ ಜಗತ್ತಿನಲ್ಲಿ ಮಾಡಿದ ಪ್ರಗತಿಯನ್ನು ಪ್ರದರ್ಶಿಸುವ ಪ್ರದರ್ಶನಕ್ಕೆ ಹೋಗುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.
ಇವುಗಳನ್ನು ಓದಿ:
ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ: ಪ್ರಧಾನಿ ಮೋದಿ

