ETV Bharat / international

ಅಮೆರಿಕದ ನೆಲೆಗಳ ಮೇಲೆ ಇರಾನ್​ ದಾಳಿ: ಕ್ಷಿಪಣಿ, ಡ್ರೋನ್​​ ದಾಳಿಗಳನ್ನ ಹೊಡೆದುರುಳಿಸಿದ್ದೇವೆ ಎಂದ ಕುವೈತ್​: USನಿಂದಲೂ ಪ್ರತಿದಾಳಿ!

ಕ್ಷಿಪಣಿ ಮತ್ತು ಡ್ರೋನ್​ ಗಳನ್ನು ನಮ್ಮ ರಕ್ಷಣಾ ವ್ಯವಸ್ಥೆಗಳು ವ್ಯವಸ್ಥಿತವಾಗಿ ಆಕಾಶದಲ್ಲೇ ಹೊಡೆದುರುಳಿಸುತ್ತಿದ್ದು, ಅಲ್ಲಿಂದ ಬೀಳುವ ಕ್ಷಿಪಣಿ ಅವಶೇಷಗಳು, ಚೂರುಗಳು ಅಥವಾ ಗುರುತಿಸಲಾಗದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಟ್ಟದಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

Kuwait neutralises "hostile missile and drone attacks"
ಅಮೆರಿಕದ ನೆಲೆಗಳ ಮೇಲೆ ಇರಾನ್​ ದಾಳಿ: ಕ್ಷಿಪಣಿ, ದ್ರೋಣ್​ ದಾಳಿಗಳನ್ನ ಹೊಡೆದುರುಳಿಸಿದ್ದೇವೆ ಎಂದ ಕುವೈತ್ (ANI)
author img

By ANI

Published : June 3, 2026 at 7:18 AM IST

2 Min Read
Choose ETV Bharat

ಕುವೈತ್ ಸಿಟಿ: ಗಲ್ಫ್ ಪ್ರದೇಶದಾದ್ಯಂತ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಕುವೈತ್​​​ ನ ಬಹು ವಲಯಗಳಲ್ಲಿ ಸ್ಫೋಟದ ಸದ್ದು ಜೋರಾಗಿ ಕೇಳಿ ಬಂದಿರುವ ವರದಿಗಳು ಆಗುತ್ತಿವೆ. ಈ ನಡುವೆ ಕುವೈತ್ ವಾಯು ರಕ್ಷಣಾ ಪಡೆಗಳು ಬುಧವಾರ, ತನ್ನ ವಾಯು ವ್ಯಾಪ್ತಿಯೊಳಗೆ ಬಂದ ಇರಾನ್​ ನ ಕ್ಷಿಪಣಿ ಮತ್ತು ಡ್ರೋನ್​ ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿರುವುದಾಗಿ ಹೇಳಿದೆ.

ಪರಿಸ್ಥಿತಿ ಬಗ್ಗೆ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿರುವ ಅಲ್ಲಿನ ಸೇನೆ, ಕುವೈತ್ ವಾಯು ರಕ್ಷಣಾ ಪಡೆ, ಪ್ರಸ್ತುತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸುತ್ತಿದೆ. ಸ್ಫೋಟದ ಶಬ್ದಗಳು ಕೇಳಿಬಂದಿದ್ದರೆ ಅದು, ಅವು ನಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ಪ್ರತಿಕೂಲ ದಾಳಿಗಳನ್ನು ಪ್ರತಿಬಂಧಿಸುವುದರಿಂದ ಉಂಟಾಗುತ್ತಿರುವ ಶಬ್ದಗಳಾಗಿವೆ ಎಂದು ಸ್ಪಷ್ಟಪಡಿಸಿದೆ.

ಕ್ಷಿಪಣಿ ಮತ್ತು ಡ್ರೋನ್​ ಗಳನ್ನು ನಮ್ಮ ರಕ್ಷಣಾ ವ್ಯವಸ್ಥೆಗಳು ವ್ಯವಸ್ಥಿತವಾಗಿ ಆಕಾಶದಲ್ಲೇ ಹೊಡೆದುರುಳಿಸುತ್ತಿದ್ದು, ಅಲ್ಲಿಂದ ಬೀಳುವ ಕ್ಷಿಪಣಿ ಅವಶೇಷಗಳು, ಚೂರುಗಳು ಅಥವಾ ಗುರುತಿಸಲಾಗದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಟ್ಟದಂತೆ ಹಾಗೂ ಅವುಗಳ ಕಡೆ ಸುಳಿಯದಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ನಾಗರಿಕರು ಮತ್ತು ವಿದೇಶಿ ನಿವಾಸಿಗಳು ತೀವ್ರ ಜಾಗರೂಕತೆಯನ್ನು ಕಾಯ್ದುಕೊಳ್ಳುವಂತೆ ಮತ್ತು ಯಾವುದೇ ಅಸಹಜ ಅವಶೇಷಗಳು ಪತ್ತೆಯಾದಾಗ 112 ಹಾಟ್‌ಲೈನ್ ಮೂಲಕ ತುರ್ತು ಸೇವೆಗಳಿಗೆ ತಕ್ಷಣ ಎಚ್ಚರಿಕೆ ನೀಡುವಂತೆ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ಸೌದ್ ಅಬ್ದುಲಜೀಜ್ ಅಲ್-ಒಟೈಬಿ ಮನವಿ ಮಾಡಿದ್ದಾರೆ.

ಊಹಾಪೋಹಗಳಿಗೆ ಕಿವಿಕೊಡಬೇಡಿ: ಊಹಾಪೋಹದ ವರದಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತೆ ಜನರಿಗೆ ಅವರು ಇದೇ ವೇಳೆ ಕರೆ ನೀಡಿದ್ದಾರೆ.ಸರ್ಕಾರದ ಅನುಮೋದಿತ ಮಾಹಿತಿ ಜಾಲಗಳ ಮೂಲಕ ಮಾತ್ರ ಬೆಳವಣಿಗೆಗಳನ್ನು ಪರಿಶೀಲಿಸಲು ಮತ್ತು ಸುರಕ್ಷತಾ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾರ್ವಜನಿಕರನ್ನು ಅವರು ಒತ್ತಾಯಿಸಿದ್ದಾರೆ.

ಈ ನಡುವೆ ಇರಾನ್​​​​​​​​ ನ ಸರ್ಕಾರಿ ಮಾಧ್ಯಮ IRIB, ಇರಾನ್​ ನ ಈ ವೈಮಾನಿಕ ದಾಳಿಗಳು ಕುವೈತ್‌ನಲ್ಲಿ ನೆಲೆಗೊಂಡಿರುವ ಅಮೆರಿಕನ್ ಮಿಲಿಟರಿ ಮೂಲಸೌಕರ್ಯವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿವೆ ಎಂದು ಪ್ರತಿಪಾದಿಸಿದೆ. ಇತ್ತೀಚಿನ ಪಾಶ್ಚಿಮಾತ್ಯದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಯನ್ನು ಮಾಡಲಾಗಿದೆ. ಪರ್ಷಿಯನ್ ಕೊಲ್ಲಿ, ಹಾರ್ಮುಜ್ ಜಲಸಂಧಿ ಮತ್ತು ಕೆಶ್ಮ್ ದ್ವೀಪದಲ್ಲಿ ಅಮೆರಿಕದ ದಾಳಿಗಳ ನಂತರ ಕುವೈತ್‌ನಲ್ಲಿರುವ ಅಮೆರಿಕನ್​ ನೆಲೆಗಳನ್ನು ಗುರಿಯಾಗಿಸಿಕೊಂಡು ನಾವು ದಾಳಿ ಮಾಡಿದ್ದೇವೆ ಎಂದು ಇರಾನ್​ ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ದಿಗ್ಬಂಧನ ಉಲ್ಲಂಘಿಸಿದ ತೈಲ ಟ್ಯಾಂಕರ್ ಮೇಲೆ ಅಮೆರಿಕದ ಕ್ಷಿಪಣಿ ದಾಳಿ: ದಿಗ್ಬಂಧನವನ್ನು ಉಲ್ಲಂಘಿಸಿ ಇರಾನ್ ಬಂದರನ್ನು ತಲುಪಲು ಪ್ರಯತ್ನಿಸುತ್ತಿದ್ದ ಮತ್ತೊಂದು ತೈಲ ಟ್ಯಾಂಕರ್ ಅನ್ನು ತಡೆಯಲು ಕ್ಷಿಪಣಿ ಹಾರಿಸಿರುವುದಾಗಿ ಅಮೆರಿಕ ಸೇನೆ ಹೇಳಿದೆ ಎಂದು ವರದಿಗಳು ತಿಳಿಸಿವೆ.

ಕುವೈತ್ ಮತ್ತು ಬಹ್ರೇನ್ ಮೇಲೆ ಹಾರಿಸಿದ ಇರಾನ್ ಕ್ಷಿಪಣಿಗಳು ವಿಫಲವಾಗಿವೆ ಅಥವಾ ಹೊಡೆದುರುಳಿಸಲ್ಪಟ್ಟಿವೆ ಎಂದು ಅಮೆರಿಕ ಸೇನೆ ಹೇಳಿದೆ. ಅಷ್ಟೇ ಅಲ್ಲ ಈ ದಾಳಿಗೆ ಪ್ರತಿಯಾಗಿ ಇರಾನ್​ ನ ಸೌಲಭ್ಯದ ಮೇಲೆ ದಾಳಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಇವುಗಳನ್ನೂ ಓದಿ:

ಆಪರೇಷನ್ ಚೆಕ್‌ಮೇಟ್: ಅಮೆರಿಕದಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿರುವ 30 ಭಾರತೀಯರ ಬಂಧನ, ಟ್ರಕ್ ಚಾಲಕರ ಗಡೀಪಾರು

ಇರಾನ್ ಜೊತೆ ತ್ವರಿತಗತಿಯಲ್ಲಿ ಮಾತುಕತೆ ಮುಂದುವರೆದಿದೆ: ಟ್ರಂಪ್