ಕಾನೂನಾತ್ಮಕ, ಸಾಮಾಜಿಕ ಕಟ್ಟುಪಾಡಿನ ಹೊರತಾಗಿ ಛಾಪು ಮೂಡಿಸುತ್ತಿರುವ ಇರಾನಿನ ಮಹಿಳಾ ಬೈಕರ್
ಇರಾನ್‌ನ ಸಾಂಪ್ರದಾಯಿಕ ಕಟ್ಟುಪಾಡು, ಹಿಜಾಬ್ ಕಟ್ಟುನಿಟ್ಟಿನ ನಿಯಮದ ನಡುವೆ ಈ ಮಹಿಳಾ ಬೈಕರ್ಗಳು ದೇಶದೆಲ್ಲೆಡೆ ಸದ್ದು ಮಾಡುತ್ತಿದ್ದಾರೆ.


Published : December 15, 2025 at 5:56 PM IST
ಟೆಹ್ರಾನ್ (ಇರಾನ್): ಆರಂಭದಲ್ಲಿ ಮೋಟಾರ್ಬೈಕ್ ಓಡಿಸಲು ಕಲಿತಿರದ ಇರಾನಿನ ಮರಿಯಮ್ ಗೆಲಿಚ್, ಇದೀಗ ಅದರ ತರಬೇತಿ ನೀಡುವ ಟ್ರೈನರ್ಆಗಿದ್ದಾರೆ. ಲೈಸೆನ್ಸ್ ಇಲ್ಲದೇ ಆರಂಭದಲ್ಲಿ ರಾತ್ರಿ ಸಮಯದಲ್ಲಿ ಟೆಹ್ರಾನ್‌ನ ಖಾಲಿ ಬೀದಿಗಳಲ್ಲಿ ವಾಹನ ಚಲಾಯಿಸುತ್ತಿದ್ದರು ಇವರು.
ಕಳೆದ 15 ವರ್ಷಗಳಲ್ಲಿ ಗೆಲಿಚ್, ನೂರಾರು ಮಹಿಳೆಯರಿಗೆ ಈ ತರಬೇತಿ ನೀಡಿದ್ದು, ಅವರು ಟೆಹ್ರಾನ್‌ನ ದಟ್ಟವಾದ ಬೀದಿಗಳಲ್ಲಿ ಮಾತ್ರವಲ್ಲದೇ ಸಂಪ್ರದಾಯವಾದಿ ಇಸ್ಲಾಮಿಕ್ ಗಣರಾಜ್ಯದಲ್ಲಿ ಮಹಿಳಾ ಮೋಟಾರ್‌ಸೈಕ್ಲಿಸ್ಟ್‌ಗಳು ಎದುರಿಸುತ್ತಿರುವ ಅಡೆತಡೆಗಳನ್ನೂ ಮೀರಿ ಸಾಗಲು ಸಹಾಯ ಮಾಡಿದ್ದಾರೆ. ಅಲ್ಲದೇ ಗೆಲಿಚ್ ಇದೀಗ ಬೇಡಿಕೆಯ ತರಬೇತುದಾರರಾಗಿ ರೂಪುಗೊಂಡಿದ್ದಾರೆ.
ಈ ಕ್ರೀಡೆಯು ನನ್ನ ಪ್ಯಾಷನ್ ಆಗಿತ್ತು. ಇರಾನ್‌ನಲ್ಲಿ ಮೋಟರ್ಬೈಕ್ಗಳು ಕೇವಲ ಪುರುಷರಿಗೆ ಮಾತ್ರ ಎಂಬುದಾಗಿತ್ತು. ಇರಾನ್‌ನಾದ್ಯಂತ ಬೀದಿಗಳಲ್ಲಿ ವರ್ಣರಂಜಿತ ಹೆಲ್ಮೆಟ್‌ಗಳನ್ನು ಧರಿಸಿ ಮೊಪೆಡ್‌ಗಳು ಮತ್ತು ಮೋಟಾರ್‌ಬೈಕ್‌ಗಳಲ್ಲಿ ಮಹಿಳೆಯರು ಓಡಾಡುವುದು ಹೆಚ್ಚು ಸಾಮಾನ್ಯ ದೃಶ್ಯವಾಗಿದೆ. ಇದು ಕೆಲವು ತಿಂಗಳುಗಳಲ್ಲಿ ಸಾಮಾಜಿಕ ವರ್ತನೆಗಳಲ್ಲಿ ಸೂಕ್ಷ್ಮವಾದ ಆದರೆ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತಿದೆ.
ಈ ಕ್ಷೇತ್ರದಲ್ಲಿ ಮಹಿಳೆಯರು ಸಹ ಯಶಸ್ವಿಯಾಗಿ ಭಾಗವಹಿಸಬಹುದು ಎಂದು ನಾನು ಸಾಬೀತುಪಡಿಸಲು ಪ್ರಯತ್ನಿಸಿದೆ ಎಂದು ಇರಾನ್‌ನ ಮೋಟಾರ್‌ಸೈಕ್ಲಿಂಗ್ ಮತ್ತು ಆಟೋಮೊಬೈಲ್ ಫೆಡರೇಶನ್‌ನ ದೀರ್ಘಕಾಲದ ಸದಸ್ಯರಾಗಿರುವ 49 ವರ್ಷದ ಗೆಲಿಚ್ ಹೇಳಿದರು. ಫೆಡರೇಶನ್‌ನಲ್ಲಿ ಪ್ರಮಾಣೀಕೃತ ತರಬೇತುದಾರರಾಗಿರುವ ಗೆಲಿಚ್, ಬೆರಳೆಣಿಕೆಯಷ್ಟು ಮಹಿಳಾ ಸವಾರರಲ್ಲಿ ಒಬ್ಬರಾಗಿದ್ದಾರೆ. ಕಳೆದೊಂದು ದಶಕದಿಂದ ಆಗಿರುವ ಬದಲಾವಣೆಗಳ ಬಗ್ಗೆ ಅವರು ವಿವರಿಸಿದ್ದಾರೆ.
ನಮ್ಮ ಸಮಾಜದಲ್ಲಿ ಜನರ ದೃಷ್ಟಿಕೋನಗಳು ನಿಜವಾಗಿಯೂ ಬದಲಾಗಿವೆ. ಆರಂಭದಲ್ಲಿ ಈ ರೀತಿಯ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ನಗರ ಅಥವಾ ರೇಸಿಂಗ್ ಕೋರ್ಸ್‌ಗಳಿಗೆ ದಾಖಲಾಗುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಆರಂಭದಲ್ಲಿ ನಾವು ಮಹಿಳೆಯರಿಗೆ ಸವಾರಿ ತರಬೇತಿ ನೀಡಲು ಆರಂಭಿಸಿದಾಗ ಜನರು ಅದನ್ನು ಸ್ವೀಕರಿಸುತ್ತಿರಲಿಲ್ಲ. ಆದರೆ, ಈಗ ನನಗೆ ನಿಜವಾಗಿ ಸಂತೋಷವಾಗುತ್ತಿದೆ ಎಂದರು.
ಲೈಸೆನ್ಸ್ ಸಮಸ್ಯೆ: ಈ ಪ್ರಗತಿ ಹೊರತಾಗಿ ಇರಾನ್‌ನಲ್ಲಿ ಮಹಿಳೆಯರಿಗೆ ಮೋಟಾರ್ಬೈಕ್ ಮತ್ತು ಸ್ಕೂಟರ್ ಲೈಸೆನ್ಸ್ ಇನ್ನು ಕೈಗೆಟುಕುತ್ತಿಲ್ಲ. ಸಂಚಾರಿ ಕಾನೂನುಗಳು ಮಹಿಳೆಯರು ಸವಾರಿ ಮಾಡುವುದನ್ನು ಸ್ಪಷ್ಟವಾಗಿ ನಿಷೇಧಿಸದಿದ್ದರೂ, ಅಧಿಕಾರಿಗಳು ಪ್ರಾಯೋಗಿಕವಾಗಿ ಅವರಿಗೆ ಮೋಟಾರ್‌ಸೈಕಲ್ ಲೈಸೆನ್ಸ್ ನೀಡುತ್ತಿಲ್ಲ. ಇದು ಮಹಿಳಾ ಸವಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ ಎಂದು ಅಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಇತ್ತೀಚಿಗೆ ಗೆಲಿಚ್ ಸಿಟಿ ರೈಡಿಂಗ್ ಕೋರ್ಸ್ಗೆ ಸೇರಿರುವ 43 ವರ್ಷದ ಫ್ಯಾಷನ್ ಡಿಸೈನರ್ ನಿಲೌಫರ್, ಈ ಲೈಸೆನ್ಸ್ ಸಮಸ್ಯೆ ಗಂಭೀರ ಕಳವಳವಾಗಿದೆ. ಮಹಿಳೆಯೊಬ್ಬರು ವೃತ್ತಿಪರವಾಗಿ ಸವಾರಿ ಮಾಡಿದರೂ ಸಹ ಅವರಿಗೆ ಲೈಸೆನ್ಸ್ ಇಲ್ಲದ ಕಾರಣ ಅಪಘಾತ ಅಥವಾ ಸಂತ್ರಸ್ತೆಯಾಗಿಸಲಾಗುವುದು ಎಂದು ತಮಗೆ ಆಗುತ್ತಿರುವ ಅಡೆತಡೆಗಳ ಬಗ್ಗೆ ಮಾತನಾಡಿದರು.
ಮಹಿಳೆಯರು ಮೋಟಾರ್ ಸೈಕಲ್ ಓಡಿಸಬಹುದು: ಸಾರ್ವಜನಿಕವಾಗಿ ಮಹಿಳೆಯರು ಮೋಟಾರ್ ಸೈಕಲ್ ಓಡಿಸಬಹುದು ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರಿ ವಕ್ತಾರೆ ಫಾತಿಮೆಹ್ ಮೊಹಜೆರಾನಿ ಮಾತನಾಡಿ, ಮಹಿಳೆಯರ ಮೋಟಾರ್ಬೈಕ್ ಸವಾರಿಗೆ ಯಾವುದೇ ಕಾನೂನು ನಿಷೇಧವಿಲ್ಲ. ಇರಾನ್‌ನ ಸಂಚಾರ ಪೊಲೀಸ್ ಮುಖ್ಯಸ್ಥ ತೈಮೌರ್ ಹೊಸೇನಿ, ತಮ್ಮ ಅಧಿಕಾರಿಗಳು ಧಾರ್ಮಿಕ ಅಥವಾ ಯಾವುದೇ ಇತರ ಆಧಾರದ ಮೇಲೆ ಕಾನೂನಿಗೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡುವ ಅಧಿಕಾರ ಹೊಂದಿಲ್ಲ. ಪೊಲೀಸರು ಕಾನೂನನ್ನು ಜಾರಿಗೊಳಿಸುತ್ತಾರೆ. ನಾವು ಅದನ್ನು ಜಾರಿಗೆ ತರಲು ಬದ್ಧರಾಗಿದ್ದೇವೆ ಎನ್ನುತ್ತಾರೆ.
ಸವಾರಿಗೆ ಇದೆ ಡ್ರೆಸ್ಕೋಡ್: 1979ರ ಕ್ರಾಂತಿಯ ಸ್ವಲ್ಪ ಸಮಯದ ನಂತರ ಜಾರಿಯಲ್ಲಿರುವ ಇಸ್ಲಾಮಿಕ್ ಗಣರಾಜ್ಯದ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಉಲ್ಲೇಖಿಸಲಾಗಿದೆ. ಮೋಟಾರ್ ಸೈಕಲ್ ಸವಾರಿ ಮಾಡುವ ಮಹಿಳೆಯರು ಸಡಿಲವಾದ ಬಟ್ಟೆಗಳನ್ನು ಧರಿಸಿ ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.
ಕೆಲವರು ಹಿಜಾಬ್ ಧರಿಸದೇ, ಸರಿಯಾಗಿ ಹಿಜಾಬ್ ಧರಿಸದೇ ಅಥವಾ ಸರಿಯಾಗಿ ಹೊದಿಕೆ ಹಾಕದೇ ಮೋಟಾರ್ ಸೈಕಲ್ ಓಡಿಸುತ್ತಾರೆ. ಇಂತಹ ನಡವಳಿಕೆ ಶರಿಯಾ ಕಾನೂನಿಗೆ ವಿರುದ್ಧವಾಗಿದೆ ಎಂದು ಇಸ್ಲಾಮಿಕ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನೀತಿಯನ್ನು ಮೇಲ್ವಿಚಾರಣೆ ಮಾಡುವ ರಾಜ್ಯ ಸಂಸ್ಥೆಯಾದ ಸುಪ್ರೀಂ ಕೌನ್ಸಿಲ್ ಆಫ್ ದಿ ಕಲ್ಚರಲ್ ರೆವಲ್ಯೂಷನ್‌ನ ಅಬ್ದುಲ್ಹೊಸೇನ್ ಖೋಸ್ರೋಪನಾ ತಿಳಿಸಿದ್ದಾರೆ.
ಮಹಿಳೆಯರು ಮೋಟಾರ್ ಸೈಕಲ್ ಸವಾರಿ ಮಾಡುವುದು ಅನುಚಿತ ಮತ್ತು ಸಮಾಜದ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ ಎಂದು ಅಲ್ಟ್ರಾಕನ್ಸರ್ವೇಟಿವ್ ಶಾಸಕ ಮೊಹಮ್ಮದ್ ಸೆರಾಜ್ ವಾದಿಸಿದ್ದಾರೆ.
ವಿರೋಧಕ್ಕೆ ಕಾರಣವಿಲ್ಲ: ಮಹಿಳಾ ಸವಾರರಿಗೆ ಉಡುಪು ನಿರ್ಬಂಧಗಳು ಬಹಳ ಸವಾಲುಗಳನ್ನು ತಂದೊಡ್ಡುತ್ತಿವೆ. ಬೈಕರ್ಸ್ಗಳು ತಮ್ಮ ಲೆದರ್ ಸೂಟ್‌ಗಳ ಮೇಲೆ ಉದ್ದವಾದ ಮೇಲುಡುಪುಗಳನ್ನು ಧರಿಸಬೇಕಾಗಿತ್ತು. ಇದು ನಿಜವಾಗಿಯು ನಿರ್ಬಂಧಕ್ಕೆ ಕಾರಣವಾಗುವ ನಿಯಮವಾಗಿತ್ತು. ಆದರೆ, ಕಾಲಾನಂತರದಲ್ಲಿ ಈ ನಿಯಮ ಸಡಿಲಗೊಂಡಿದೆ. ಇದೀಗ ಪೊಲೀಸರು ಕೂಡ ಮೋಟಾರ್ ಬೈಕ್ಗಳನ್ನು ವಶಪಡಿಸಿಕೊಂಡಾಗಲೂ ಸುಲಭವಾಗಿ ಬಿಡುತ್ತಾರೆ ಎಂದು ಗೆಲಿಚ್ ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಇರಾನ್‌ನಲ್ಲಿ ಮಹಿಳೆಯರು ಕಡ್ಡಾಯ ಡ್ರೆಸ್ ಕೋಡ್ ಸೇರಿದಂತೆ ಇಸ್ಲಾಮಿಕ್ ಗಣರಾಜ್ಯದ ಕಠಿಣ ನಿಯಮಗಳನ್ನು ಹೆಚ್ಚಾಗಿ ಧಿಕ್ಕರಿಸುತ್ತಿದ್ದಾರೆ. ಹಿಜಾಬ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಮಹ್ಸಾ ಅಮಿನಿ 2022 ಸೆಪ್ಟೆಂಬರ್ನಲ್ಲಿ ಕಸ್ಟಡಿಯಲ್ಲಿ ಸಾವನ್ನಪ್ಪಿದ ನಂತರ ಈ ಪ್ರವೃತ್ತಿ ಹೆಚ್ಚಾಗಿದೆ.
ಪೊಲೀಸರು ಸಾಮಾನ್ಯವಾಗಿ ಮಹಿಳಾ ಸವಾರರ ಜೊತೆ ಕೆಟ್ಟದಾಗಿ ವರ್ತಿಸುವುದಿಲ್ಲ ಎಂದು ನಾನು ಸ್ನೇಹಿತರಿಂದ ಕೇಳಿದ್ದೆ, ಆದರೆ, ಅವರು ನಮ್ಮನ್ನು ಅವಮಾನಿಸಬಹುದು ಅಥವಾ ನಮ್ಮ ಬೈಕನ್ನು ಕಿತ್ತುಕೊಂಡು ಹೋಗಬಹುದು ಎಂಬ ಭಯ ನಮಗಿದೆ ಎಂದು 53 ವರ್ಷದ ನಯೆರೆಹ್ ಚಿಟ್ಸಾಜಿಯನ್ ತಿಳಿಸಿದ್ದಾರೆ.
ಪೊಲೀಸರು ಕೂಡ ತಮ್ಮನ್ನು ಸುಖಾಸುಮ್ಮನೆ ಆಕ್ಷೇಪಿಸಲು ಯಾವುದೇ ಕಾರಣವಿಲ್ಲ. ಮೋಟಾರ್ ಸೈಕಲ್‌ಗಳು ನೋಂದಾಯಿಸಲ್ಪಟ್ಟಿವೆ. ವಿಮೆ ಮಾಡಲ್ಪಟ್ಟಿವೆ, ಆದ್ದರಿಂದ ಅವರು ನಮ್ಮನ್ನು ತಡೆಯಲು ಯಾವುದೇ ಕಾರಣವಿಲ್ಲ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಬೈಕರ್ಸ್ ಕ್ರಿಸ್ಮಸ್ ರೈಡ್.. ಯೋಧರ ಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹ

