ETV Bharat / international

5ನೇ ದಿನಕ್ಕೆ ಕಾಲಿಟ್ಟ ಯುದ್ಧ: ಇಸ್ರೇಲ್ ಮೇಲೆ ಇರಾನ್, ಲೆಬನಾನ್ ಮೇಲೆ ಇಸ್ರೇಲ್ ದಾಳಿ; ಹಾರ್ಮುಜ್ ಜಲಮಾರ್ಗದ ಕುರಿತು IRGC ವಾರ್ನಿಂಗ್

ಹಾರ್ಮುಜ್ ಜಲಮಾರ್ಗದ ಮೂಲಕ ಹಾದುಹೋಗಲು ಬಯಸುವ ಯಾವುದೇ ಹಡಗು ಕ್ಷಿಪಣಿ ಅಥವಾ ಡ್ರೋನ್‌ಗಳ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ನ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ (ಐಆರ್​ಜಿಸಿ) ಎಚ್ಚರಿಕೆ ನೀಡಿದೆ.

Iran's Revolutionary Guards said they control the Strait of Hormu
ಪಶ್ಚಿಮ ಏಷ್ಯಾ ಸಂಘರ್ಷ (AP)
author img

By ETV Bharat Karnataka Team

Published : March 4, 2026 at 12:06 PM IST

2 Min Read
Choose ETV Bharat

ಟೆಹ್ರಾನ್(ಇರಾನ್​): ಇರಾನ್​-ಇಸ್ರೇಲ್​ ನಡುವಿನ ಮಿಲಿಟರಿ ಸಂಘರ್ಷ 5ನೇ ದಿನಕ್ಕೆ ಕಾಲಿಟ್ಟಿದೆ. ಪೂರ್ವ ಲೆಬನಾನ್‌ನ ಬಾಲ್‌ಬೆಕ್ ನಗರದ ಮೇಲೆ ಇಸ್ರೇಲ್ ವಾಯುಸೇನೆ ದಾಳಿ ನಡೆಸಿದೆ.

ಹಿಜ್ಬುಲ್ಲಾ ಪ್ರಾಬಲ್ಯದ ಪ್ರದೇಶವಾದ ಬಾಲ್‌ಬೆಕ್‌ನಲ್ಲಿರುವ ವಸತಿ ಸಂಕೀರ್ಣದೊಳಗೆ ನಾಲ್ಕು ಅಂತಸ್ತಿನ ಕಟ್ಟಡವನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಪರಿಣಾಮ, ನಾಲ್ವರು ಸಾವನ್ನಪ್ಪಿದ್ದು, ಹಲವು ಕುಟುಂಬಗಳು ಅವಶೇಷದಡಿ ಸಿಲುಕಿವೆ. ರಕ್ಷಣಾ ಕಾರ್ಯ ಸಾಗಿದೆ.

ಇದರ ಹೊರತಾಗಿ, ಲೆಬನಾನ್​ನ ಬೈರುತ್‌ನ ಹೋಟೆಲ್ ಮೇಲೆ ಇಸ್ರೇಲ್ ವಾಯುದಾಳಿ ಮಾಡಿದೆ ಎಂದು ಲೆಬನಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮುಂದುವರೆಸಿದ ಇರಾನ್​: ಇರಾನ್ ಸೇನೆ​ ಇಸ್ರೇಲ್​ ಮೇಲೆ ಇಂದು ಮುಂಜಾನೆ ಎರಡನೇ ಬಾರಿಗೆ ಕ್ಷಿಪಣಿಗಳನ್ನು ಹಾರಿಸಿದ್ದು, ಅವುಗಳನ್ನು ಇಸ್ರೇಲ್ ವಾಯು ರಕ್ಷಣಾ ಪಡೆ ಯಶಸ್ವಿಯಾಗಿ ತಡೆದಿದೆ ಎಂದು ಇಸ್ರೇಲ್​ ಹೇಳಿದೆ.

ಅಲ್ಲದೇ, ಇರಾನ್​ನ ಇಸ್ಲಾಮಿಕ್​ ರೆವಲ್ಯೂಷನ್​ ಗಾರ್ಡ್ಸ್​ ಕಾರ್ಪ್ಸ್(IRGC)​, ಅಮೆರಿಕಚಾಲಿತ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಗುರಿಯಾಗಿಸಿ ದಾಳಿ ನಡೆಸಿ, ತಟಸ್ಥಗೊಳಿಸಿದೆ ಎಂದು ಇರಾನ್ ಪ್ರಸ್​ ಟಿವಿ ತಿಳಿಸಿದೆ.

ಇರಾನ್​ನ ಕ್ಷಿಪಣಿ ವಿರೋಧಿ ವ್ಯವಸ್ಥೆಯು ಅಮೆರಿಕ ರಕ್ಷಣಾ ವ್ಯವಸ್ಥೆಯ ಮೇಲೆ ನಿಖರ, ನಿರ್ದೇಶಿತ ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಅದನ್ನು ಹೊಡೆದುರುಳಿಸಿದೆ. ಯಾವ ಸ್ಥಳದಲ್ಲಿ ಈ ದಾಳಿ ನಡೆಸಲಾಗಿದೆ ಎಂಬ ಕುರಿತು ವರದಿಯಾಗಿಲ್ಲ. ಈ ದಾಳಿಯ ಕುರಿತು ಯುಎಸ್​ ಸೆಂಟ್ರಲ್​ ಕಮಾಂಡ್​ ಯಾವುದೇ ಹೇಳಿಕೆ ನೀಡಿಲ್ಲ.

ಹಾರ್ಮುಜ್​ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸಿದ ಇರಾನ್​: ಜಗತ್ತಿನ ಇತರೆ ಭಾಗಗಳಿಗೆ ತೈಲ ಮತ್ತು ಅನಿಲಕ್ಕೆ ಪ್ರಮುಖ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ನಾವು ನಿಯಂತ್ರಿಸುತ್ತಿದ್ದೇವೆ. ಈ ಜಲಮಾರ್ಗದ ಮೂಲಕ ಹಾದು ಹೋಗಲು ಬಯಸುವ ಯಾವುದೇ ಹಡಗುಗಳು ಕ್ಷಿಪಣಿ ಅಥವಾ ಡ್ರೋನ್‌ಗಳ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ನ IRGC ಎಚ್ಚರಿಕೆ ನೀಡಿದೆ.

ವಿಶ್ವದ ತೈಲ ಪೂರೈಕೆ ಮಾರ್ಗವಾಗಿರುವ ಈ ಜಲಸಂಧಿ ಮೇಲೆ ಇರಾನ್​ ಹಿಡಿತ ಸಾಧಿಸಿರುವುದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಜಾಗತಿಕ ತೈಲ ಬೆಲೆಗಳು ಏರಿಕೆಯಾಗಿವೆ.

ಅಮೆರಿಕ ಮಹತ್ವದ ಹೇಳಿಕೆ: ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಅವಶ್ಯಕತೆ ಬಿದ್ದರೆ ಅಮೆರಿಕದ ನೌಕಾಪಡೆ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳಿಗೆ ಬೆಂಗಾವಲು ನೀಡಲಿದೆ ಎಂದು ತಿಳಿಸಿದೆ.

ಇವುಗಳನ್ನೂ ಓದಿ: