ಮಧ್ಯಪ್ರಾಚ್ಯ ಸಂಘರ್ಷದಿಂದ ವಾಯು, ಜಲಮಾರ್ಗ ಬಂದ್: ತೈಲ, ಇತರ ಸರಕು ಸಾಗಣೆಯಲ್ಲಿ ಭಾರೀ ವ್ಯತ್ಯಯ
ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಾಯು, ಜಲಮಾರ್ಗಗಳನ್ನು ಮುಚ್ಚಲಾಗಿದೆ. ಇದರಿಂದ ತೈಲದ ಜೊತೆಗೆ ಇತರ ಸರಕು ಸಾಗಣೆಯೂ ನಿಂತು ಹೋಗುವ ಸಾಧ್ಯತೆ ಇದೆ.

Published : March 4, 2026 at 1:24 PM IST
ನ್ಯೂಯಾರ್ಕ್(ಯುಎಸ್ಎ): ಇರಾನ್-ಇಸ್ರೇಲ್-ಅಮೆರಿಕದ ಸಂಘರ್ಷದಿಂದಾಗಿ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಈಗಾಗಲೇ ಬಂದ್ ಮಾಡಲಾಗಿದೆ. ಅದೇ ರೀತಿ ಮಧ್ಯಪ್ರಾಚ್ಯದ ಹಲವು ದೇಶಗಳು ದಾಳಿ ಹಿನ್ನೆಲೆಯಲ್ಲಿ ತಮ್ಮ ವಾಯುಮಾರ್ಗವನ್ನು ಮುಚ್ಚಿವೆ. ಇದರಿಂದ ಜಲ ಮತ್ತು ವಾಯು ಮಾರ್ಗ ಬಂದ್ ಆಗಿ ನಾಗರಿಕ ಮತ್ತು ವಾಣಿಜ್ಯ ಸಂಚಾರ ಸ್ಥಗಿತಗೊಂಡಿದೆ.
ಇರಾನ್ ಜಲಸಂಧಿಯನ್ನು ಬಂದ್ ಮಾಡುವ ಮೂಲಕ ತೈಲ ಹೊತ್ತ ಹಡಗುಗಳು ಸಾಗದಂತೆ ನಿರ್ಬಂಧ ಹೇರಿದೆ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಇತ್ತ ಭಾರತದ ಔಷಧಗಳು, ಏಷ್ಯಾದ ವಸ್ತುಗಳು ಮತ್ತು ಮಧ್ಯಪ್ರಾಚ್ಯದಿಂದ ಬರುವ ರಸಗೊಬ್ಬರ ಉತ್ಪನ್ನಗಳ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಲಿದೆ.
ಸರಕು ಸಾಗಣೆಯ ಹಡಗುಗಳು ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ ಅಥವಾ ಆಫ್ರಿಕಾದ ದಕ್ಷಿಣ ತುದಿಯನ್ನು ಸುತ್ತು ಹಾಕಿ ದೀರ್ಘ ಸಂಚಾರ ನಡೆಸುತ್ತಿವೆ. ಈ ಯುದ್ಧವು ಹೆಚ್ಚು ಕಾಲ ಮುಂದುವರಿದರೆ, ಸರಕುಗಳ ಕೊರತೆ ಮತ್ತು ಬೆಲೆ ಏರಿಕೆಯಾಗುವುದು ಖಂಡಿತ.
ಸಮುದ್ರದಲ್ಲಿ ಲಂಗರು ಹಾಕಿದ ಹಡಗುಗಳು: ಸುಮಾರು 3,200 ಹಡಗುಗಳು ಪರ್ಷಿಯನ್ ಕೊಲ್ಲಿಯೊಳಗೆ ಲಂಗರು ಹಾಕಿವೆ. ಇದರಲ್ಲಿ ಸುಮಾರು 1,231 ಹಡಗುಗಳು ಗಲ್ಫ್ ರಾಷ್ಟ್ರಗಳೊಳಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಜಾಗತಿಕ ಸಂಚಾರ ನಡೆಸುವ ಸುಮಾರು 500 ಹಡಗುಗಳು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್ ಕರಾವಳಿಯ ಬಂದರುಗಳಲ್ಲಿ ಬೀಡುಬಿಟ್ಟಿವೆ.
ಹಾರ್ಮುಜ್ ಜಲಮಾರ್ಗವನ್ನು ಮತ್ತೆ ಸಂಚಾರಕ್ಕೆ ತೆರೆಯುವಂತೆ ಕ್ರಮ ವಹಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಾಗೊಂದು ವೇಳೆ ಅಸ್ಥಿರತೆ ಮುಂದುವರಿದಲ್ಲಿ ಅಮೆರಿಕದ ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್‌ಗಳಿಗೆ ಬೆಂಗಾವಲು ನೀಡುತ್ತದೆ ಎಂದು ಅವರು ಹೇಳಿದರು.
ನೌಕಾಪಡೆಯು ಈ ಪ್ರದೇಶದಲ್ಲಿ ಎಂಟು ದೊಡ್ಡ ನೌಕೆಗಳು ಮತ್ತು ಮೂರು ಸಣ್ಣ ಯುದ್ಧ ಹಡಗುಗಳನ್ನು ಹೊಂದಿದೆ. ಈ ಹಡಗುಗಳನ್ನು ಈ ಹಿಂದೆ ವ್ಯಾಪಾರಿ ಹಡಗುಗಳ ಬೆಂಗಾವಲನ್ನಾಗಿ ಬಳಸಲಾಗುತ್ತಿತ್ತು.
ಕಂಪ್ಯೂಟರ್ ಚಿಪ್ಸ್, ಔಷಧಗಳ ಪೂರೈಕೆ ಕೊರತೆ: ಮಧ್ಯಪ್ರಾಚ್ಯ ಪ್ರದೇಶದಿಂದ ವಿಶ್ವದ ವಿವಿಧ ರಾಷ್ಟ್ರಗಳಿಗೆ ಸರಬರಜಾಗುವ ತೈಲವು ಶೇ.20ರಷ್ಟಿದೆ. ಪ್ಲಾಸ್ಟಿಕ್ ಮತ್ತು ರಬ್ಬರ್ ತಯಾರಿಸಲು ಬಳಸುವ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್, ನೈಸರ್ಗಿಕ ಅನಿಲದಿಂದ ತಯಾರಿಸಿದ ಉತ್ಪನ್ನಗಳು, ಸಾರಜನಕ ಗೊಬ್ಬರವು ಮಧ್ಯಪ್ರಾಚ್ಯದಿಂದ ಬರುತ್ತವೆ. ಭಾರತದಿಂದ ರಫ್ತು ಮಾಡಲಾದ ಔಷಧಗಳು ಮತ್ತು ಏಷ್ಯಾದಿಂದ ಪ್ರಪಂಚದ ಉಳಿದ ಭಾಗಗಳಿಗೆ ರಫ್ತು ಮಾಡಲಾದ ಅರೆವಾಹಕಗಳು ಮತ್ತು ಬ್ಯಾಟರಿಗಳು ಈ ಪ್ರದೇಶದ ಮೂಲಕ ಸಾಗಿಸಲ್ಪಡುತ್ತವೆ. ಜಲಮಾರ್ಗ ಮುಚ್ಚುವಿಕೆಯಿಂದ ವಿಳಂಬ ಎದುರಿಸಬೇಕಾಗುತ್ತದೆ.
ಒತ್ತಡದಲ್ಲಿ ಏರ್ ಕಾರ್ಗೋ: ವಾಯು ಮಾರ್ಗದ ಮೂಲಕ ಸರಕುಗಳನ್ನು ಸಾಗಿಸುವುದನ್ನೂ ನಿರ್ಬಂಧಿಸಲಾಗಿದೆ. ಯುಎಇ, ಕತಾರ್, ಬಹ್ರೇನ್, ಕುವೈತ್, ಇರಾಕ್ ಮತ್ತು ಇರಾನ್ ಸೇರಿದಂತೆ ವಿವಿಧ ದೇಶಗಳು ತಮ್ಮ ವಾಯುಪ್ರದೇಶ ಮತ್ತು ವಿಮಾನ ನಿಲ್ದಾಣಗಳನ್ನು ಮುಚ್ಚಿವೆ.
ಔಷಧಗಳು, ಎಲೆಕ್ಟ್ರಾನಿಕ್ಸ್ ಮತ್ತು ಇತರ ಉತ್ಪನ್ನಗಳು ಸೇರಿ ವಿಶ್ವದ ಶೇ.35ರಷ್ಟು ಸರಬರಾಜು ವಾಯುಮಾರ್ಗದ ಮೂಲಕವೇ ನಡೆಯುತ್ತದೆ. ಮಧ್ಯಪ್ರಾಚ್ಯದಲ್ಲಿನ ವಿಮಾನ ನಿಲ್ದಾಣಗಳು ಹೆಚ್ಚು ಕಾಲ ಮುಚ್ಚಲ್ಪಟ್ಟರೆ, ಸಾಗಣೆ ನಿಂತರೆ ಅಥವಾ ಅವುಗಳನ್ನು ಬೇರೆಡೆಯಿಂದ ಸಾಗಿಸಿದರೆ, ದೊಡ್ಡ ಆರ್ಥಿಕ ಹೊರೆ ಬೀಳಲಿದೆ.
ಇವುಗಳನ್ನೂ ಓದಿ:

