ETV Bharat / international

ಜಿನೀವಾ ಮಾತುಕತೆಗೂ ಮುನ್ನ ಟ್ರಂಪ್ 'ದೊಡ್ಡ ಸುಳ್ಳು' ಹೇಳಿದ್ದಾರೆ: ಇರಾನ್​ ಆರೋಪ; ಇಂದಿನಿಂದ ಅಮೆರಿಕ - ಇರಾನ್​ 3ನೇ ಸುತ್ತಿನ ಮಾತುಕತೆ!

ಇತ್ತೀಚಿನ ದಶಕಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಅತಿದೊಡ್ಡ ಮಿಲಿಟರಿ ನಿಯೋಜನೆ ಮಾಡಿದೆ. ಈ ನಡುವೆ ಮಾತುಕತೆಗೆ ಒಂದು ದಿನ ಮೊದಲು ಇಬ್ಬರು ಇರಾನಿನ ಅಧಿಕಾರಿಗಳು ಮಾತನಾಡಿದ್ದಾರೆ.

Iran Accuses Trump Of 'Big Lies' Ahead of Geneva Talks
ಜಿನೀವಾ ಮಾತುಕತೆಗೂ ಮುನ್ನ ಟ್ರಂಪ್ 'ದೊಡ್ಡ ಸುಳ್ಳು' ಹೇಳಿದ್ದಾರೆ: ಇರಾನ್​ ಆರೋಪ (AP)
author img

By ETV Bharat Karnataka Team

Published : February 26, 2026 at 9:08 AM IST

4 Min Read
Choose ETV Bharat

ದುಬೈ: ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಜಿನೀವಾದಲ್ಲಿ ನಿರ್ಣಾಯಕ ಮಾತುಕತೆಗೆ ಮುನ್ನ ಅಮೆರಿಕದ ಅಧ್ಯಕ್ಷರು ಒತ್ತಡ ತಂತ್ರವನ್ನು ಮಾಡಿದ್ದಾರೆ. ಆದರೆ, ಡೊನಾಲ್ಡ್ ಟ್ರಂಪ್ ಅವರ ಒತ್ತಡ ತಂತ್ರಗಳಿಗೆ ಇರಾನ್​ ಬಗ್ಗಿಲ್ಲ. ಅವರ ಹೇಳಿಕೆಗಳನ್ನು ದೊಡ್ಡ ಸುಳ್ಳು ಎಂದು ಇರಾನ್​​ ಹೇಳಿದೆ. ಮಾತುಕತೆಗಳು ಗೌರವಾನ್ವಿತ ರಾಜತಾಂತ್ರಿಕತೆ ಮೂಲಕ ಮಾತ್ರವೇ ಒಪ್ಪಂದಕ್ಕೆ ಬರಲು ಸಾಧ್ಯ ಎಂದು ಇರಾನ್​ ತಿರುಗೇಟು ನೀಡಿದೆ.

ಮಾತುಕತೆಗೆ ಒಂದು ದಿನ ಮೊದಲು ಇಬ್ಬರು ಇರಾನಿನ ಅಧಿಕಾರಿಗಳಿಂದ ಈ ಹೇಳಿಕೆಗಳು ಬಂದಿವೆ. ದಶಕಗಳ ನಂತರ ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಅತಿದೊಡ್ಡ ವಿಮಾನ ಮತ್ತು ಯುದ್ಧನೌಕೆಗಳನ್ನು ನಿಯೋಜನೆ ಮಾಡಿದೆ. ಕಳೆದ ತಿಂಗಳು ಇರಾನ್​ ನಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಂತರ, ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ನಿರ್ಬಂಧಿಸಲು ಒಪ್ಪಂದಕ್ಕೆ ಬರುವಂತೆ ಮಾಡಲು ಟ್ರಂಪ್​ ಇರಾನ್​ ಮೇಲೆ ತೀವ್ರ ಒತ್ತಡ ಹೇರುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ.

ಮಾತುಕತೆಗಳು ವಿಫಲವಾದರೆ ಇರಾನ್ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಪದೇ ಪದೆ ಬೆದರಿಕೆ ಹಾಕಿದ್ದಾರೆ. ವರ್ಷಗಳ ಕಾಲ ನಡೆದ ಇಸ್ರೇಲ್ - ಹಮಾಸ್ ಯುದ್ಧದ ಬೆಂಕಿ ಇನ್ನೂ ಹೊಗೆಯಾಡುತ್ತಿರುವುದರಿಂದ ದಾಳಿಯು ಹೊಸ ಪ್ರಾದೇಶಿಕ ಯುದ್ಧವಾಗಿ ಪರಿಣಮಿಸಬಹುದು ಎಂದು ಮಧ್ಯಪ್ರಾಚ್ಯ ರಾಷ್ಟ್ರಗಳು ಭಯಪಡುತ್ತಿವೆ. ಅತ್ತ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಎಲ್ಲ ಮಿಲಿಟರಿ ನೆಲೆಗಳನ್ನು ಕಾನೂನುಬದ್ಧ ಗುರಿಗಳೆಂದು ಪರಿಗಣಿಸಲಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಪ್ಲಾನೆಟ್ ಲ್ಯಾಬ್ಸ್ ಪಿಬಿಸಿ ಮಂಗಳವಾರ ತೆಗೆದ ಮತ್ತು ಅಸೋಸಿಯೇಟೆಡ್ ಪ್ರೆಸ್ ವಿಶ್ಲೇಷಿಸಿದ ಉಪಗ್ರಹ ಫೋಟೋಗಳು ಅಮೆರಿಕ ನೌಕಾಪಡೆಯ 5 ನೇ ನೆಲೆಯಾದ ಬಹ್ರೇನ್‌ನಲ್ಲಿ ಹಡಗುಗಳು ಲಂಗರು ಹಾಕಿರುವುದನ್ನು ತೋರಿಸಿವೆ. ಆದರೆ, ಈ ಬಗ್ಗೆ ಪ್ರತಿಯಿಸಲು ಅದು ಪ್ರತಿಕ್ರಿಯಿಸಲು ನಿರಾಕರಿಸಿತು. ಜೂನ್‌ನಲ್ಲಿ ಕತಾರ್ ಮೇಲೆ ಇರಾನ್ ದಾಳಿ ಮಾಡುವ ಮೊದಲು, ಸಂಭಾವ್ಯ ದಾಳಿಯಿಂದ ರಕ್ಷಿಸಿಕೊಳ್ಳಲು 5 ನೇ ನೌಕಾಪಡೆಯು ಸಮುದ್ರದಲ್ಲಿ ತನ್ನ ಹಡಗುಗಳನ್ನು ಚದುರಿಸಿತ್ತು.

ಟ್ರಂಪ್ ಮಂಗಳವಾರ ತಡರಾತ್ರಿ ವಾಷಿಂಗ್ಟನ್‌ನಲ್ಲಿ ತಮ್ಮ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಇರಾನ್ ಮತ್ತು ಪರಮಾಣು ಮಾತುಕತೆಗಳ ಬಗ್ಗೆ ಪ್ರಸ್ತಾಪಿಸಿದ್ದರು.

ಇರಾನ್​ ಈಗಾಗಲೇ ಯುರೋಪ್ ಮತ್ತು ವಿದೇಶಗಳಲ್ಲಿರುವ ನಮ್ಮ ನೆಲೆಗಳ ಮೇಲೆ ಬೆದರಿಕೆ ಹಾಕುವ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಶೀಘ್ರದಲ್ಲೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವನ್ನು ತಲುಪುವ ಕ್ಷಿಪಣಿಗಳನ್ನು ನಿರ್ಮಿಸಲು ಅವರು ಕೆಲಸ ಮಾಡುತ್ತಿದ್ದಾರೆ ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದ್ದರು. ಅವರಿಗೆ ತಮ್ಮ ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು, ವಿಶೇಷವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪುನರ್ನಿರ್ಮಿಸುವ ಯಾವುದೇ ಪ್ರಯತ್ನಗಳನ್ನು ಮಾಡಬೇಡಿ ಎಂದು ಎಚ್ಚರಿಕೆ ನೀಡಲಾಯಿತು. ಆದರೆ ಅವರು ಆ ಎಲ್ಲ ಎಚ್ಚರಿಕೆಗಳನ್ನು ನಿರ್ಲಕ್ಷ್ಯ ಮಾಡಿ ಮುಂದುವರೆಯುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದರು.

ಈ ಹಿಂದೆ AP ವಿಶ್ಲೇಷಿಸಿದ ಉಪಗ್ರಹ ಫೋಟೋಗಳು, ಇರಾನ್ ತನ್ನ ಕ್ಷಿಪಣಿ ಉತ್ಪಾದನಾ ತಾಣಗಳನ್ನು ಪುನರ್ನಿರ್ಮಿಸಲು ಪ್ರಾರಂಭಿಸುತ್ತಿರುವುದನ್ನು ಮತ್ತು ಜೂನ್‌ನಲ್ಲಿ ಅಮೆರಿಕ ದಾಳಿ ಮಾಡಿದ ಮೂರು ಪರಮಾಣು ನೆಲೆಗಳಲ್ಲಿ ಕೆಲಸಗಳನ್ನು ಮಾಡುತ್ತಿರುವುದನ್ನು ತೋರಿಸಿವೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವು ಶಾಂತಿಯುತವಾಗಿದೆ ಎಂದು ಬಹಳ ಹಿಂದಿನಿಂದಲೂ ಹೇಳಿಕೊಂಡಿವೆ.

ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಯಾವಾಗಲೂ ಅಂಶಗಳನ್ನು ಪುನರ್ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಬುಧವಾರ ವರದಿಗಾರರಿಗೆ ತಿಳಿಸಿದರು. ಟೆಹ್ರಾನ್ ಈಗ ಯುರೇನಿಯಂ ಅನ್ನು ಸಮೃದ್ಧಗೊಳಿಸುತ್ತಿಲ್ಲ. ಆದರೆ, ಅವರು ಅಂತಿಮವಾಗಿ ಸಾಧ್ಯವಾಗುವ ಹಂತಕ್ಕೆ ತಲುಪಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪಶ್ಚಿಮ ಮತ್ತು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ 2003 ರವರೆಗೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ಹೊಂದಿತ್ತು ಎಂದು ಹೇಳುತ್ತದೆ. ಜೂನ್ ದಾಳಿಯ ಮೊದಲು, ಅದು ಶೇ 60 ಶುದ್ಧತೆಯವರೆಗೆ ಯುರೇನಿಯಂ ಸಮೃದ್ಧಗೊಳಿಸುತ್ತಿತ್ತು ಇದು ಶೇ 90ರಷ್ಟು ಶಸ್ತ್ರಾಸ್ತ್ರ - ದರ್ಜೆಯ ಮಟ್ಟದಿಂದ ಒಂದು ಸಣ್ಣ ತಾಂತ್ರಿಕ ಹೆಜ್ಜೆ ಎಂದು ಹೇಳಲಾಗುತ್ತಿದೆ.

ಟ್ರಂಪ್‌ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್​ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ, ಟ್ರಂಪ್ ಅವರನ್ನು ಅಡಾಲ್ಫ್ ಹಿಟ್ಲರನ ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್‌ಗೆ ಹೋಲಿಸಲು ಪ್ರಯತ್ನಿಸಿದರು. ಟ್ರಂಪ್ ಮತ್ತು ಅವರ ಆಡಳಿತವು ಇರಾನ್ ವಿರುದ್ಧ ತಪ್ಪು ಮಾಹಿತಿ ಅಭಿಯಾನ" ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಇರಾನ್‌ನ ಪರಮಾಣು ಕಾರ್ಯಕ್ರಮ, ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಜನವರಿಯ ಅಶಾಂತಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆಯ ಬಗ್ಗೆ ಅವರು ಏನೇ ಆರೋಪಿಸುತ್ತಿದ್ದರೂ ಅದು ದೊಡ್ಡ ಸುಳ್ಳುಗಳ ಪುನರಾವರ್ತನೆಯಾಗಿದೆ ಎಂದು ತಮ್ಮ ಎಕ್ಸ್​ ಪೋಸ್ಟ್​ ನಲ್ಲಿ ಬರೆದಿದ್ದಾರೆ.

ಇರಾನ್​ ನಲ್ಲಿ ಕಳೆದ ತಿಂಗಳು ನಡೆದ ಪ್ರತಿಭಟನೆಗಳಲ್ಲಿ ಕನಿಷ್ಠ 32,000 ಜನರು ಸಾವನ್ನಪ್ಪಿದ್ದಾರೆ ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತ ಸುದ್ದಿ ಸಂಸ್ಥೆ ಇಲ್ಲಿಯವರೆಗೆ 7,000 ಕ್ಕೂ ಹೆಚ್ಚು ಜನರು ಸತ್ತಿದ್ದಾರೆ ಎಂದು ಹೇಳಿದೆ. ನಿಜವಾದ ಅಂಕಿ ಅಂಶವು ತುಂಬಾ ಹೆಚ್ಚಾಗಿದೆ ಎಂದೂ ಅದು ನಂಬುತ್ತದೆ. ಆದರೆ ಇರಾನ್​ ಸರ್ಕಾರ ಜನವರಿ 21 ರಂದು ನೀಡಿದ ಅಧಿಕೃತ ಹೇಳಿಕೆಯಲ್ಲಿ 3,117 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಇರಾನ್‌ನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲಿಬಾಫ್ ಟ್ರಂಪ್​ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಅಮೆರಿಕ ರಾಜತಾಂತ್ರಿಕತೆಗೆ ಪ್ರಯತ್ನಿಸಬಹುದು ಅಥವಾ ಇರಾನ್‌ನ ಕೋಪವನ್ನು ಎದುರಿಸಬಹುದು ಎಂದು ನೇರ ಎಚ್ಚರಿಕೆ ರವಾನಿಸಿದ್ದಾರೆ.

ನೀವು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಿದರೆ ನಾವು ಸಹ ಇರಾನ್ ರಾಷ್ಟ್ರದ ಘನತೆ ಮತ್ತು ಪರಸ್ಪರ ಹಿತಾಸಕ್ತಿಗಳನ್ನು ಗೌರವಿಸುವ ರಾಜತಾಂತ್ರಿಕ ಮಾರ್ಗವನ್ನು ಅನುಸರಿಸುತ್ತೇವೆ. ಆದರೆ, ನೀವು ವಂಚನೆ, ಸುಳ್ಳುಗಳು ಹಾಗೂ ದೋಷಪೂರಿತ ವಿಶ್ಲೇಷಣೆ ಮತ್ತು ಸುಳ್ಳು ಮಾಹಿತಿಯ ಮೂಲಕ ಹಿಂದಿನ ಅನುಭವಗಳನ್ನು ಪುನರಾವರ್ತಿಸಲು ಮತ್ತು ಮಾತುಕತೆಗಳ ಮಧ್ಯೆ ದಾಳಿಯನ್ನು ಪ್ರಾರಂಭಿಸಲು ನಿರ್ಧರಿಸಿದರೆ ನಿಸ್ಸಂದೇಹವಾಗಿ ಇರಾನ್ ರಾಷ್ಟ್ರ ಮತ್ತು ದೇಶದ ರಕ್ಷಣಾತ್ಮಕ ಪಡೆಗಳ ಪ್ರತಿದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಖಲಿಬಾಫ್ ಖಡಕ್​ ಸಂದೇಶ ನೀಡಿದ್ದಾರೆ.

ಟೆಹ್ರಾನ್ ಮತ್ತು ಪಶ್ಚಿಮ ರಾಷ್ಟ್ರಗಳ ನಡುವೆ ದೀರ್ಘಕಾಲದಿಂದ ಸಂವಾದಕನಾಗಿರುವ ಒಮಾನ್‌ನ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಅಮೆರಿಕ ಇಂದು ತಮ್ಮ ಮೂರನೇ ಸುತ್ತಿನ ಮಾತುಕತೆಗಾಗಿ ಭೇಟಿಯಾಗಲಿವೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಮತ್ತು ಅವರ ತಂಡವನ್ನು ಹೊತ್ತ ವಿಮಾನವು ಬುಧವಾರ ಜಿನೀವಾಕ್ಕೆ ಆಗಮಿಸಿದೆ. ಅಲ್ಲಿ ಅವರು ವಿಶೇಷ ಯುಎಸ್ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ ನೇತೃತ್ವದ ಅಮೆರಿಕನ್​ ಅಧಿಕಾರಿಗಳ ತಂಡವನ್ನು ಭೇಟಿಯಾಗುತ್ತಾರೆ.

ಇವುಗಳನ್ನೂ ಓದಿ:

ಇರಾನ್ ನಾಗರಿಕರಿಗೆ ಅಮೆರಿಕದ CIA ಗಾಳ: ಗುಪ್ತಚರ ಮಾಹಿತಿ ನೀಡಲು ಕೋರಿದ ತನಿಖಾ ಸಂಸ್ಥೆ

ರಷ್ಯಾ-ಉಕ್ರೇನ್​ ಯುದ್ಧಕ್ಕೆ 4 ವರ್ಷ: ಗುರಿ ಸಾಧಿಸುವಲ್ಲಿ ಪುಟಿನ್ ವಿಫಲ​ ಎಂದ ಝೆಲನ್ಸ್ಕಿ

ಇರಾನ್ ದಾಳಿಯ ಅಪಾಯಗಳ ಬಗ್ಗೆ ಅಮೆರಿಕದ ಉನ್ನತ ಅಧಿಕಾರಿ ಎಚ್ಚರಿಕೆ ವಿಚಾರ ನಿರಾಕರಿಸಿದ ಟ್ರಂಪ್​!