ETV Bharat / international

ರಷ್ಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟ 12 ಮಂದಿಯಲ್ಲಿ ಭಾರತೀಯರೊಬ್ಬರು ಸೇರಿದ್ದಾರೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ಉಕ್ರೇನ್ ಮೇಲೆ ರಷ್ಯಾ ಇತ್ತೀಚಿಗೆ ನಡೆಸಿದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿತಿಳಿಸಿದ್ದಾರೆ.

VOLODYMYR ZELENSKYY
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ (AP)
author img

By ETV Bharat Karnataka Team

Published : September 1, 2026 at 6:55 PM IST

3 Min Read
Choose ETV Bharat

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಇತ್ತೀಚಿಗೆ ನಡೆಸಿದ ದಾಳಿಯಲ್ಲಿ ಮೃತಪಟ್ಟ 12 ಮಂದಿಯಲ್ಲಿ ಭಾರತೀಯ ಪ್ರಜೆಯೊಬ್ಬರೂ ಸೇರಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಸೋಮವಾರ ಸಂಜೆಯಿಂದ ರಷ್ಯಾದಿಂದ ಒಡೆಸಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಮಾರ್ಗದರ್ಶಿತ ವೈಮಾನಿಕ ಬಾಂಬ್‌ಗಳು ಹಾಗೂ ಡ್ರೋನ್‌ಗಳ ದಾಳಿ ಮುಂದುವರಿದಿದೆ. ಒಟ್ಟಾರೆ 12 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬರು ಭಾರತೀಯ ಪ್ರಜೆ. ಈ ದಾಳಿಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೂ ಹೊರತಾಗಿ, ಉಕ್ರೇನ್‌ನ ರಾಜಧಾನಿ ಕೀವ್ ಪ್ರದೇಶದ ಮೇಲೆ ರಷ್ಯಾ ನಡೆಸಿದ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಭಾರಿ ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಅವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ.

ರಷ್ಯಾ ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ದಾಳಿ ಆರಂಭಿಸಿತು ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ. ಈ ದಾಳಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು, ರಾಡಾರ್ ವಿರೋಧಿ ಕ್ಷಿಪಣಿಗಳು ಸೇರಿದಂತೆ 218 ಡ್ರೋನ್‌ಗಳನ್ನು ಬಳಸಲಾಗಿದೆ. ಇವುಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಡ್ರೋನ್‌ಗಳು ಜೆಟ್ ಎಂಜಿನ್‌ಗಳಿಂದ ಚಾಲಿತವಾಗಿದ್ದವು ಎಂದು ವರದಿಯಾಗಿದೆ. ಕೀವ್ ಮತ್ತು ಒಡೆಸಾ ಪ್ರದೇಶಗಳು ದಾಳಿಯ ಪ್ರಮುಖ ಗುರಿಗಳಾಗಿದ್ದವು ಎಂದು ವಾಯುಪಡೆ ಟೆಲಿಗ್ರಾಂನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾದ ಈ ರಾತ್ರಿ ದಾಳಿಯು ಕೀವ್ ಮೇಲೆ ಸತತ ಆರನೇ ದಿನ ನಡೆದ ದಾಳಿಯಾಗಿದೆ. ಕಳೆದ ವಾರ ಆರಂಭವಾದ, ಅಭೂತಪೂರ್ವ ರೀತಿಯಲ್ಲಿ ದೀರ್ಘಕಾಲ ಮುಂದುವರಿದ ವಾಯುದಾಳಿ ಎಚ್ಚರಿಕೆಗಳ ನಂತರ ಈ ದಾಳಿ ನಡೆದಿದೆ.

ವಾರದ ಉಳಿದ ಅವಧಿಯಲ್ಲೂ ವಾಯುದಾಳಿ ಎಚ್ಚರಿಕೆಗಳು ಬಹುತೇಕ ನಿರಂತರವಾಗಿ ಮುಂದುವರಿದಿದ್ದವು. ಇದರಿಂದ ಹಲವು ದಿನಗಳ ಕಾಲ ನಡೆದ ಭಾರೀ ದಾಳಿಯ ಸರಣಿ ರೂಪುಗೊಂಡಿದ್ದು, ಇತ್ತೀಚೆಗೆ ವೇಗವಾಗಿ ಚಲಿಸುವ ಜೆಟ್ ಚಾಲಿತ ಡ್ರೋನ್‌ಗಳ ಬಳಕೆ ಹೆಚ್ಚಾಗಿದೆ. ಹಗಲು ಮತ್ತು ರಾತ್ರಿ ಎರಡೂ ಸಮಯಗಳಲ್ಲಿ ದಾಳಿಗಳು ನಡೆಯುತ್ತಿರುವುದರಿಂದ ಕೀವ್ ನಗರ ಮತ್ತು ಅಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ.

ಇತ್ತೀಚಿನ ದಾಳಿಯಲ್ಲಿ ಕೀವ್‌ನ ಹಲವು ಜಿಲ್ಲೆಗಳಲ್ಲಿರುವ ನಾಗರಿಕ ಮೂಲಸೌಕರ್ಯಗಳು ಮತ್ತು ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. ನಗರದಲ್ಲೇ ಎಂಟು ಮಂದಿ ಮೃತಪಟ್ಟಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನೂ ಮೂವರು ಮೃತಪಟ್ಟಿದ್ದಾರೆ.

ರಾಜಧಾನಿಯ ಡಾರ್ನಿಟ್ಸ್ಕಿ ಜಿಲ್ಲೆಯಲ್ಲಿ ರಷ್ಯಾದ ದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುರ್ತು ಸೇವಾ ಇಲಾಖೆ ತಿಳಿಸಿದೆ. ಇದೇ ಜಿಲ್ಲೆಯ ಮತ್ತೊಂದು ಸ್ಥಳದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮಗುವೂ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.

ವ್ಯಕ್ತಿಯೊಬ್ಬ ಹೋಲೋಸಿವ್‌ಸ್ಕಿ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಅಲ್ಲಿ ವಸತಿಯೇತರ ಕಟ್ಟಡವೊಂದಕ್ಕೆ ದಾಳಿ ತಗುಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ತುರ್ತು ಸೇವಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಸೊಲೊಮಿಯಾನ್ಸ್‌ಕಿ ಜಿಲ್ಲೆಯಲ್ಲಿ ಡ್ರೋನ್ ದಾಳಿಯಿಂದ ವಸತಿ ಕಟ್ಟಡವೊಂದು ಹಾನಿಗೊಳಗಾಗಿದೆ. ತುರ್ತು ಸೇವಾ ಸಿಬ್ಬಂದಿ ಒಬ್ಬ ವ್ಯಕ್ತಿಯನ್ನು ರಕ್ಷಿಸಿದ್ದು, ಅವಶೇಷಗಳಡಿ ಸಿಲುಕಿದ್ದ ಮಹಿಳೆಯೊಬ್ಬರನ್ನೂ ಹೊರತೆಗೆದಿದ್ದಾರೆ. ಕೀವ್ ನಗರದ ಹೊರಭಾಗದಲ್ಲಿರುವ ಕೀವ್ ಪ್ರದೇಶದ ವಿವಿಧ ಸ್ಥಳಗಳಲ್ಲಿ ಉಳಿದ ಮೂವರು ಮೃತಪಟ್ಟಿದ್ದಾರೆ. ಅಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಬೊರಿಸ್ಪಿಲ್‌ನಲ್ಲಿ ಮೂರು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ತುರ್ತು ಸೇವಾ ಸಿಬ್ಬಂದಿ 48 ಮಂದಿಯನ್ನು ಸ್ಥಳಾಂತರಿಸಿದ್ದು, ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಒಟ್ಟು ಎಂಟು ಮಂದಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಬೊರಿಸ್ಪಿಲ್‌ನಲ್ಲೇ ಮತ್ತೊಂದು ಮೂಲಸೌಕರ್ಯ ಕೇಂದ್ರದಲ್ಲಿದ್ದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕಟ್ಟಡಕ್ಕೂ ಹಾನಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ತುರ್ತು ಸೇವಾ ಇಲಾಖೆ ತಿಳಿಸಿದೆ. ಬೊರಿಸ್ಪಿಲ್‌ನಲ್ಲಿರುವ ಸರ್ವಿಸ್ ಸ್ಟೇಷನ್‌ಗೂ ಹಾನಿಯಾಗಿದ್ದು, ಅಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಒಡೆಸಾ ಪ್ರದೇಶದ ಮೇಲೂ ರಷ್ಯಾ ರಾತ್ರಿ ವೇಳೆ ಭಾರೀ ದಾಳಿ ನಡೆಸಿದೆ. ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಮುಖ್ಯಸ್ಥ ಒಲೆಹ್ ಕಿಪರ್ ತಿಳಿಸಿದ್ದಾರೆ. ಎರಡು ವಸತಿ ಕಟ್ಟಡಗಳು ಹಾನಿಗೊಳಗಾಗಿದ್ದು, ಹೊಲಿಗೆ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೊಮೇನಿಯಾ ಗಡಿಯಲ್ಲಿರುವ ಓರ್ಲಿವ್ಕಾ ಅಂತಾರಾಷ್ಟ್ರೀಯ ದೋಣಿ ಸಂಪರ್ಕ ಕೇಂದ್ರದ ಮೇಲೂ ರಷ್ಯಾ ಪಡೆಗಳು ದಾಳಿ ನಡೆಸಿವೆ ಎಂದು ಅವರು ಹೇಳಿದ್ದಾರೆ.

ಐದು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 187 ಡ್ರೋನ್‌ಗಳು ಸೇರಿದಂತೆ ಒಟ್ಟು 199 ವೈಮಾನಿಕ ಗುರಿಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.

ಇವುಗಳನ್ನೂ ಓದಿ: