ETV Bharat / international

ವಿಶ್ವದ ಹಲವೆಡೆ ನಡೆದ ಗಲಭೆಗಳಲ್ಲಿ ಹೋರಾಡಿ ಮಡಿದವರಲ್ಲಿ ಭಾರತೀಯ 'ಶಾಂತಿಪಾಲಕರೇ' ಹೆಚ್ಚು!

ವಿಶ್ವದ ಹಲವೆಡೆ ಗಲಭೆ ನಡೆದಲ್ಲಿ ಅದನ್ನು ತಣಿಸಲು ವಿಶ್ವಸಂಸ್ಥೆಯು ಶಾಂತಿಪಾಲನಾ ಪಡೆಯನ್ನು ಹೊಂದಿದೆ. ಅದರಲ್ಲಿ ಭಾರತೀಯ ಯೋಧರು ಅಧಿಕವಾಗಿದ್ದಾರೆ.

UN PEACEKEEPING FORCE
ವಿಶ್ವಸಂಸ್ಥೆಯ ಧ್ವಜ (Getty Images)
author img

By ETV Bharat Karnataka Team

Published : May 30, 2026 at 3:23 PM IST

2 Min Read
Choose ETV Bharat

ವಿಶ್ವಸಂಸ್ಥೆ: ವಿಶ್ವದ ಹಲವೆಡೆ ನಡೆದ ಗಲಭೆಗಳಲ್ಲಿ ಹೋರಾಡಿ ಪ್ರಾಣತ್ಯಾಗ ಮಾಡಿದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ವೀರ ಯೋಧರಿಗೆ ಶುಕ್ರವಾರ ಗೌರವ ನಮನ ಸಲ್ಲಿಸಲಾಯಿತು. ಪ್ರತಿ ವರ್ಷ ಮೇ 29 ಶಾಂತಿಪಾಲಕರ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ವಿಶ್ವಸಂಸ್ಥೆ ಶಾಂತಿಪಾಲಕರ ದಿನದ ಅಂಗವಾಗಿ, ಹುತಾತ್ಮ ಯೋಧರ ಉನ್ನತ ತ್ಯಾಗವನ್ನು ಸ್ಮರಿಸಲು ವಿಶ್ವಸಂಸ್ಥೆಯ ಭಾರತ ಮತ್ತು ಆಸ್ಟ್ರಿಯಾದ ಖಾಯಂ ನಿಯೋಗಗಳು ಜಂಟಿಯಾಗಿ ಶುಕ್ರವಾರ ಈ ಗೌರವ ವಂದನೆ ಕಾರ್ಯಕ್ರಮ ಆಯೋಜಿಸಿದ್ದವು.

ಇದೇ ವೇಳೆ ಮಾತನಾಡಿದ, ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ ಅವರು, "ವಿಶ್ವದ ವಿವಿಧೆಡೆ ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿಪಾಲನಾ ಪಡೆ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ದಣಿವರಿಯದೆ ಶ್ರಮಿಸಿ ಶಾಂತಿ ಮತ್ತು ಸ್ಥಿರತೆಯನ್ನು ತರುತ್ತಿರುವ ವಿಶ್ವಸಂಸ್ಥೆಯ ಶಾಂತಿಪಾಲಕರಿಗೆ ನನ್ನ ಸೆಲ್ಯೂಟ್. ಶಾಂತಿ ಸ್ಥಾಪನೆಯಲ್ಲಿ ಭಾರತದ್ದು ಎಂದಿಗೂ ಅಚಲ ನಿರ್ಧಾರ. ಈ ಉದಾತ್ತ ಧ್ಯೇಯವನ್ನು ಸಾಕಾರಗೊಳಿಸುವ ಪ್ರಯತ್ನಗಳಲ್ಲಿ ದೇಶ ಎಂದಿಗೂ ಭಾಗಿಯಾಗಿರಲಿದೆ ಎಂದು ತಿಳಿಸಿದರು.

4 ಸಾವಿರಕ್ಕೂ ಅಧಿಕ ಶಾಂತಿಪಾಲಕರು ಹುತಾತ್ಮ: ಭಾರತೀಯ ನಿಯೋಗ ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್​ನಲ್ಲಿ, ಈವರೆಗೂ ವಿಶ್ವದ ವಿವಿಧೆಡೆಯ ಗಲಭೆಗಳನ್ನು ಮಣಿಸಲು ಹೋರಾಟ ನಡೆಸಿ 4 ಸಾವಿರಕ್ಕೂ ಅಧಿಕ ಶಾಂತಿ ಪಾಲಕರು ಹುತಾತ್ಮರಾಗಿದ್ದಾರೆ. ಅವರಿಗೆ ನಮ್ಮ ಶ್ರದ್ಧಾಂಜಲಿ ಎಂದು ಬರೆದುಕೊಂಡಿದೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಅತಿ ಹೆಚ್ಚು ಸೈನಿಕರನ್ನು ಕೊಡುಗೆಯಾಗಿ ನೀಡುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. 1948 ರಿಂದ ಈವರೆಗೆ 50ಕ್ಕೂ ಹೆಚ್ಚು ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸುಮಾರು 3 ಲಕ್ಷ ಸೈನಿಕರನ್ನು ನಿಯೋಜಿಸಿದೆ. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ರಕ್ಷಣೆಗಾಗಿ ಹೋರಾಡಿ 184 ಭಾರತೀಯ ಶಾಂತಿಪಾಲಕರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ನಿಯೋಗ ಮಾಹಿತಿ ನೀಡಿದೆ.

ವೀರ ಯೋಧರಿಗೆ ಮರಣೋತ್ತರ ಗೌರವ: ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಜೂನ್ 5 ರಂದು ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಅಂದು ಯುಎನ್​ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ವಿಶ್ವಸಂಸ್ಥೆಯ ಶಾಂತಿಪಾಲನ ಪಡೆಯಲ್ಲಿ ಸೇವೆ ಸಲ್ಲಿಸಿ ಪ್ರಾಣ ಕಳೆದುಕೊಂಡ ವೀರರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ಕರ್ತವ್ಯದ ಅವಧಿಯಲ್ಲಿ ಹುತಾತ್ಮರಾದ 68 ಮಿಲಿಟರಿ, ಪೊಲೀಸ್ ಮತ್ತು ನಾಗರಿಕ ಶಾಂತಿಪಾಲಕರಿಗೆ ಮರಣೋತ್ತರವಾಗಿ 'ಡಾಗ್ ಹ್ಯಾಮರ್ಸ್ಕ್‌ಜೋಲ್ಡ್ ಪದಕ'ವನ್ನು ಪ್ರದಾನ ಮಾಡಲಿದ್ದಾರೆ.

ಭಾರತೀಯರಿಗೆ ಗೌರವ ಪದಕ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆದ ಗಲಭೆಯಲ್ಲಿ ಹೋರಾಡಿದ್ದ ಭಾರತದ ಲ್ಯಾನ್ಸ್ ಹವಿಲ್ದಾರ್ ಹರ್ಭಜನ್ ಸಿಂಗ್ ಮತ್ತು ದಕ್ಷಿಣ ಸುಡಾನ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಯ್ಬ್ ಸುಬೇದಾರ್ ಸುಜಿತ್ ಕುಮಾರ್ ಪ್ರಧಾನ್ ಅವರು ಪ್ರಾಣ ಕಳೆದುಕೊಂಡಿದ್ದರು. ಇಬ್ಬರ ತ್ಯಾಗಕ್ಕಾಗಿ ಗುಟೆರೆಸ್ ಅವರು ಮರಣೋತ್ತರ ಗೌರವ ಪದಕ ಪ್ರದಾನ ಮಾಡಲಿದ್ದಾರೆ.

ಇದರ ಜೊತೆಗೆ, ಲೆಬನಾನ್‌ನಲ್ಲಿನ ವಿಶ್ವಸಂಸ್ಥೆಯ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತದ ಮೇಜರ್ ಅಭಿಲಾಷಾ ಬರಾಕ್ ಅವರಿಗೆ '2025ರ ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್' ಪ್ರಶಸ್ತಿ ಸಿಗಲಿದೆ. ಬರಾಕ್ ಅವರು UNIFIL ನಲ್ಲಿ ಮಹಿಳಾ ಎಂಗೇಜ್‌ಮೆಂಟ್ ತಂಡದ (FET) ಕಮಾಂಡರ್ ಆಗಿ ಭಾರತೀಯ ಬೆಟಾಲಿಯನ್‌ನೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸೇನೆಯ ಮೊದಲ ಮಹಿಳಾ ಯುದ್ಧ ಹೆಲಿಕಾಪ್ಟರ್ ಪೈಲಟ್ ಕೂಡ ಆಗಿದ್ದಾರೆ.

ಇವುಗಳನ್ನೂ ಓದಿ: