ETV Bharat / international

'ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ': ಮಾತುಕತೆ ಕುದುರುವ ಸುಳಿವು ನೀಡಿದ ಟ್ರಂಪ್

ಭಾರತದ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಅದರ ಮಾತುಕತೆಗಳು ನಡೆಯುತ್ತಿದೆ ಎಂದು ಹೇಳುವ ಮೂಲಕ ವ್ಯಾಪಾರ ಚರ್ಚೆ ಫಲಪ್ರದವಾಗುವ ಸುಳಿವನ್ನು ಡೊನಾಲ್ಡ್​ ಟ್ರಂಪ್ ನೀಡಿದ್ದಾರೆ.

INDIA US TRADE TALK
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (AP)
author img

By ETV Bharat Karnataka Team

Published : October 29, 2025 at 7:41 PM IST

2 Min Read
Choose ETV Bharat

ಸಿಯೋಲ್(ದಕ್ಷಿಣ ಕೊರಿಯಾ): ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಯುತ್ತಿದೆ. ಅಮೆರಿಕವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಈ ಮೂಲಕ ನಡೆಯುತ್ತಿರುವ ಚರ್ಚೆ ಕುದುರುವ ಸಾಧ್ಯತೆಯನ್ನು ಬಹಿರಂಗಪಡಿಸಿದ್ದಾರೆ.

ದಕ್ಷಿಣ ಕೊರಿಯಾದ ಜಿಯೊಂಗ್ಜುನಲ್ಲಿ ಇಂದು ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ಸಿಇಒ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗೆ ಅಪಾರ ಗೌರವ ಮತ್ತು ಪ್ರೀತಿ ಇದೆ ಎಂದು ಹೇಳಿದರು.

ನೀವು ಭಾರತ ಮತ್ತು ಪಾಕಿಸ್ತಾನವನ್ನು ನೋಡಿ. ನಾನು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇನೆ. ನಿಮಗೆ ತಿಳಿದಿರುವಂತೆ, ಆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರೊಂದಿಗೆ ನಮಗೆ ಉತ್ತಮ ಸಂಬಂಧವಿದೆ ಎಂದರು.

ವ್ಯಾಪಾರ ಒಪ್ಪಂದದ ಬಗ್ಗೆ ಹೆಚ್ಚಿನ ವಿವರಣೆ ನೀಡಲಿಲ್ಲವಾದರೂ, ನಡೆಯುತ್ತಿರುವ ಮಾತುಕತೆಗಳು ಫಲಪ್ರದವಾಗುವ ಸಾಧ್ಯತೆ ಇದೆ ಎಂಬುದರ ಸುಳಿವು ನೀಡಿದರು.

ಸಂಘರ್ಷ ನಿಲ್ಲಿಸಿದ್ದು ನಾನೇ: ಇದೇ ವೇಳೆ, ತಾವು ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಘರ್ಷವನ್ನು ನಿಲ್ಲಿಸಿದೆ ಎಂದು 54ನೇ ಸಲ ಹೇಳಿದರು. ಮೇ ಆರಂಭದಲ್ಲಿ ಎರಡು ರಾಷ್ಟ್ರಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅದನ್ನು ವ್ಯಾಪಾರದ ಮೂಲಕ ಬಗೆಹರಿಸಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು.

ಟ್ರಂಪ್​ ಭಾರತದ ವಸ್ತುಗಳ ಮೇಲೆ ಶೇಕಡಾ 50ರಷ್ಟು ಸುಂಕ ವಿಧಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಯ ಮೇಲೆ ಶೇಕಡಾ 25 ರಷ್ಟು ಹೆಚ್ಚುವರಿ ಶುಲ್ಕವೂ ಇದರಲ್ಲಿ ಸೇರಿದೆ. ಶೇಕಡಾ 50ರಷ್ಟು ಸುಂಕ ವಿಧಿಸಿದ್ದನ್ನು ಭಾರತವು ಖಂಡಿಸಿದೆ. ಇದು ಅನ್ಯಾಯ, ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ ತೆಿಿರಿಗೆ ಎಂದು ಟೀಕಿಸಿದೆ.

ನಿರಂತರ ವ್ಯಾಪಾರ ಮಾತುಕತೆ: ಕೌಲಾಲಂಪುರದಲ್ಲಿ ಮಂಗಳವಾರ ನಡೆದ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್) ವಾರ್ಷಿಕ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ವ್ಯಾಪಾರ ಒಪ್ಪಂದದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ರಷ್ಯಾದಿಂದಿ ಇಂಧನ ಖರೀದಿಸುತ್ತಿರುವುದರ ಮೇಲೆ ವಿಧಿಸಲಾದ ಶೇ. 25 ರಷ್ಟು ಸುಂಕವನ್ನು ತೆಗೆದುಹಾಕುವುದಾಗಿ ಅಮೆರಿಕ ಕಡೆಯಿಂದ ಭಾರತಕ್ಕೆ ಯಾವುದೇ ಭರವಸೆ ಸಿಕ್ಕಿಲ್ಲ.

ಭಾರತವು ರಷ್ಯಾದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಟ್ರಂಪ್ ಅವರ ಈ ಹೇಳಿಕೆಯನ್ನು ನಿರಾಕರಿಸಿದ್ದ ಭಾರತ, ಅಂತಹ ಯಾವುದೇ ಸಂಭಾಷಣೆ ನಾಯಕರ ಮಧ್ಯೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಭಾರತೀಯರ ಹಿತಾಸಕ್ತಿಗ ರಕ್ಷಿಸುವ ಉದ್ದೇಶದಿಂದ ಭಾರತವು ರಷ್ಯಾದಿಂದ ಇಂಧನ ಖರೀದಿಸುತ್ತಿದೆ. ಇಂಧನ ಬೆಲೆಯಲ್ಲಿ ಸ್ಥಿರತೆ ಮತ್ತು ಸುರಕ್ಷಿತ ಪೂರೈಕೆಗಳನ್ನು ಖಚಿತಪಡಿಸುವುದು ನಮ್ಮ ಆದ್ಯತೆಯಾಗಿದೆ. ಅಮೆರಿಕದಿಂದಲೂ ಮುಂದಿನ ದಿನಗಳಲ್ಲಿ ಹೆಚ್ಚಿನ ಇಂಧನ ಖರೀದಿ ಮಾಡಲಾಗುವುದು ಎಂದು ಭಾರತ ಹೇಳಿದೆ.

ಅಧಿಕಾರಿಯೊಬ್ಬರ ಪ್ರಕಾರ, ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಮುಕ್ತಾಯದ ಅಚಿನಲ್ಲಿದೆ. ಒಪ್ಪಂದಕ್ಕೆ ಸಂಬಂಧಿಸಿದಂತೆ ನಾವು ತುಂಬಾ ಹತ್ತಿರದಲ್ಲಿದ್ದೇವೆ" ಎಂದು ತಿಳಿಸಿದ್ದಾರೆ.

ಇವುಗಳನ್ನೂ ಓದಿ: ಲಡಾಖ್​ ಗಡಿಯಲ್ಲಿ ಶಾಂತಿ ಸ್ಥಾಪನೆ ಕುರಿತು ಭಾರತ - ಚೀನಾ 23ನೇ ಸುತ್ತಿನ ಮಾತುಕತೆ

ಭಾರತ - ಪಾಕ್​ ಸಂಘರ್ಷದಲ್ಲಿ 7 ವಿಮಾನ ಪತನ; ಡೊನಾಲ್ಡ್​ ಟ್ರಂಪ್​