ಯುದ್ಧ ಮಾಡದೆ ದೇಶ ಗೆದ್ದ ಅಮೆರಿಕ: ಕೇವಲ ಅರ್ಧಗಂಟೆಯಲ್ಲಿ ವೆನಿಜುವೆಲಾ ಅಧ್ಯಕ್ಷ, ಪತ್ನಿ ಸೆರೆಯಾಗಿದ್ದೇಗೆ? ತಯಾರಿ ಹೇಗಿತ್ತು?
ವೆನಿಜುವೆಲಾದ ಮೇಲೆ ಅಮೆರಿಕದ ಸೇನಾಪಡೆಗಳು ದಾಳಿ ನಡೆಸಿ, ಅದರ ಅಧ್ಯಕ್ಷರನ್ನು ಹೇಗೆ ಬಂಧಿಸಿದವು. ಇದಕ್ಕೆ ನಡೆದ ಪೂರ್ವತಯಾರಿ ಹೇಗಿತ್ತು ಎಂಬುದರ ಕಂಪ್ಲೀಟ್ ರಿಪೋರ್ಟ್.

Published : January 4, 2026 at 4:43 PM IST
ವಾಷಿಂಗ್ಟನ್ ಡಿಸಿ(ಅಮೆರಿಕ): ಡ್ರಗ್ಸ್ ಮಾಫಿಯಾಕ್ಕೆ ಉತ್ತೇಜನ ನೀಡಿದ ಆರೋಪ ಮತ್ತು ನಿರಂಕುಶ ಆಡಳಿತದ ಪ್ರತಿಪಾದಕ ವೆನಿಜುವೆಲಾ ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಶನಿವಾರ ಬಂಧಿಸಿದೆ. ಯಾವುದೇ ಯುದ್ಧ ಮಾಡದೆ, ಇನ್ನೊಂದು ದೇಶದೊಳಗೆ ನುಗ್ಗಿ ಅರ್ಧಗಂಟೆಯಲ್ಲೇ ಅದರ ಅಧ್ಯಕ್ಷರನ್ನು ವಶಕ್ಕೆ ಪಡೆದ ಅಮೆರಿಕ ಸೇನೆಯ ಕ್ಷಿಪ್ರ ಕಾರ್ಯಾಚರಣೆ ವಿಶ್ವವೇ ಅಚ್ಚರಿ ಮತ್ತು ಆತಂಕಪಡುವಂತೆ ಮಾಡಿದೆ.
ಆದರೆ, ಅಮೆರಿಕ ಸೇನೆ ಇದಕ್ಕಾಗಿ ತಿಂಗಳುಗಟ್ಟಲೆ ಪೂರ್ವಾಭ್ಯಾಸ ಮಾಡಿತ್ತು ಎಂಬುದು ಈಗ ಬಯಲಾಗಿದೆ. ದಾಳಿಯ ರೂಪುರೇಷೆ, ಅಧ್ಯಕ್ಷರ ಬಂಧನ ಮತ್ತು ಆ ದೇಶವನ್ನು ವಶಪಡಿಸಿಕೊಳ್ಳುವ ಬಗ್ಗೆ ಮೊದಲೇ ಸ್ಕೆಚ್ ಹಾಕಲಾಗಿತ್ತು ಎಂಬುದನ್ನು ಸ್ವತಃ ಅಮೆರಿಕದ ಸೇನೆ ಹೇಳಿಕೊಂಡಿದೆ.
🚨BREAKING: Venezuela dictator Nicolas Maduro has just been PERP WALKED by federal agents through New York City DEA HQ. #NicolasMaduro Maduro is in CUSTODY! The Venezuelans are finally being freed. pic.twitter.com/fNfQTqXjuN
— AJ Huber (@Huberton) January 4, 2026
ರಕ್ಷಣಾ ಗೋಡೆ ಭೇದಿಸಿದ ಸೇನೆ: ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಮಡುರೊ ಬಂಧನಕ್ಕೂ ಮೊದಲು ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆತ ಡ್ರಗ್ಸ್ ಮಾಫಿಯಾವನ್ನು ಬೆಳೆಸುತ್ತಿದ್ದ. ಇದು ಅಮೆರಿಕಕ್ಕೆ ಕಂಟಕವಾಗಿತ್ತು. ಕ್ಯಾರಕಸ್‌ನಲ್ಲಿನ ಅಧ್ಯಕ್ಷರ ನಿವಾಸದಲ್ಲಿ ಮಡುರೊ ಬಿಗಿಭದ್ರತೆಯಲ್ಲಿ ಅಡಗಿ ಕುಳಿತಿದ್ದ. ಆತ ಅಲ್ಲಿನ ಸುರಕ್ಷಿತ ಕೋಣೆಯನ್ನು ತಲುಪುವ ಮೊದಲು ನಮ್ಮ ಸೇನೆ ನುಗ್ಗಿ ಬಂಧಿಸಿದೆ" ಎಂದು ತಿಳಿಸಿದ್ದಾರೆ.
"ಉಕ್ಕಿನಿಂದ ನಿರ್ಮಿಸಲಾಗಿದ್ದ ರಹಸ್ಯ ಕೋಣೆಯಲ್ಲಿ ಮಡುರೊ ಅಡಗಿದ್ದ. ಅಮೆರಿಕದ ಪಡೆಗಳು ಬೃಹತ್ ಬ್ಲೋ ಟಾರ್ಚ್‌ಗಳನ್ನು ಬಳಸಿ ಆ ಕೋಣೆಯ ಗೋಡೆಗಳನ್ನು ಕತ್ತರಿಸಿದರು. ಆತ ಪೂರ್ಣವಾಗಿ ಆ ಕೋಣೆಯೊಳಗೆ ಹೋಗುವ ಮೊದಲೇ ಆತನನ್ನು ಬಂಧಿಸಲಾಗಿದೆ. ಇಲ್ಲವಾದಲ್ಲಿ ಆತ ತಪ್ಪಿಸಿಕೊಳ್ಳುವ ಸಾಧ್ಯತೆ ಇತ್ತು" ಎಂದು ಹೇಳಿದ್ದಾರೆ.

"ಈ ಕಾರ್ಯಾಚರಣೆಯನ್ನು ನಾಲ್ಕು ದಿನಗಳ ಹಿಂದೆ ಮಾಡಲು ಯೋಜಿಸಿದ್ದೆವು. ಆದರೆ, ಹವಾಮಾನ ಉತ್ತಮವಾಗಿರಲಿಲ್ಲ. ಹೆಲಿಕಾಪ್ಟರ್, ಯುದ್ಧ ವಿಮಾನಗಳು ಅಲ್ಲಿಗೆ ಹಾರಲು ಸಾಧ್ಯವಾಗಿರಲಿಲ್ಲ. ಇದ್ದಕ್ಕಿದ್ದಂತೆ ಶನಿವಾರ ದಾಳಿ ನಡೆಸಲು ಸೇನಾಪಡೆಗಳು ನಿರ್ಧರಿಸಿದವು. ಇದಕ್ಕೆ ನಾನು ಅನುಮತಿ ನೀಡಿದೆ. ಪ್ರತಿಕೂಲ ಹವಾಮಾನದ ನಡುವೆಯೂ ವಿಶ್ವದ ಅತ್ಯಂತ ನುರಿತ ಸೈನಿಕರು ಇದನ್ನು ಸಲೀಸಾಗಿ ಮುಗಿಸಿದರು. ಇದು ಅಮೆರಿಕದ ಸೇನಾ ಸಾಮರ್ಥ್ಯದ ಪ್ರತೀಕ" ಎಂದು ಟ್ರಂಪ್ ಹೇಳಿದರು.
ಪೂರ್ವಾಭ್ಯಾಸ ಮಾಡಿದ್ದ ಸೇನೆ: ಅಮೆರಿಕದ ಸೇನಾ ಪಡೆಗಳ ಜಂಟಿ ಮುಖ್ಯಸ್ಥ ಜನರಲ್ ಡಾನ್ ಕೇನ್ ಮಾತನಾಡಿ, "ನಮ್ಮ ಪಡೆಗಳು ತಿಂಗಳುಗಳ ಕಾಲ ಪೂರ್ವಾಭ್ಯಾಸ ಮಾಡಿದ್ದವು. ಮಡುರೊ ಬಗ್ಗೆ ಎಲ್ಲವನ್ನೂ ಅರಿತಿದ್ದವು. ಅವರು ಎಲ್ಲಿದ್ದಾರೆ?, ದಿನಾಲೂ ಅವರು ಏನನ್ನು ತಿನ್ನುತ್ತಿದ್ದರು? ಎಂಬುದರ ಮೇಲೂ ನಿಗಾ ಇಟ್ಟಿತ್ತು. ನಿಖರವಾಗಿ ಯೋಜಿಸಿ, ತರಬೇತಿ ಪಡೆದು ಅಂದುಕೊಂಡಂತೆ ದಾಳಿ ಮಾಡಿ ಅಧ್ಯಕ್ಷನನ್ನು ಬಂಧಿಸಿದೆವು" ಎಂದು ಮಾಹಿತಿ ನೀಡಿದ್ದಾರೆ.

"ಅಧ್ಯಕ್ಷೀಯ ಕಟ್ಟಡದ ಪ್ರತಿಕೃತಿ ತಯಾರಿಸಿ, ಅದರೊಳಗೆ ಹೇಗೆ ನುಗ್ಗಬೇಕು?. ಮಡುರೊ ಇರುವ ಜಾಗ ಮತ್ತು ಭದ್ರತಾ ಕೋಣೆಯ ಬಗ್ಗೆ ಮಾಹಿತಿ, ಕತ್ತಲೆಯಲ್ಲಿ ಹೇಗೆ ದಾಳಿ ಮಾಡಬೇಕು ಎಂಬುದನ್ನು ಪೂರ್ವಾಭ್ಯಾಸ ಮಾಡಿದ್ದೆವು" ಎಂದು ಅವರು ವಿವರಿಸಿದ್ದಾರೆ.

ಅರ್ಧ ಗಂಟೆಯಲ್ಲಿ ಕಾರ್ಯಾಚರಣೆ ಅಂತ್ಯ: "ಮೊದಲು, ಕ್ಯಾರಕಾಸ್‌ನ ಮೇಲೆ ಏಳು ಬಾಂಬ್ಗಳನ್ನು ಸ್ಫೋಟಿಸಲಾಯಿತು. 30 ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಅಧ್ಯಕ್ಷರ ಮನೆಯೊಳಗೆ ನುಗ್ಗಿ ಮಡುರೊ ಮತ್ತು ಆತನ ಪತ್ನಿಯನ್ನು ಬಂಧಿಸಲಾಯಿತು" ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಿವರಿಸಿದರು.

"ಆಪರೇಷನ್ ಆಬ್ಸುಲ್ಯೂಟ್ ರಿಸಾಲ್ವ್ (Absolute Resolve) ಹೆಸರಿನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಎಫ್-18, ಎಫ್-22 ಮತ್ತು ಎಫ್-35 ಫೈಟರ್ ಜೆಟ್‌ಗಳು, ಬಿ-1 ಬಾಂಬರ್‌ಗಳು ಮತ್ತು ಡ್ರೋನ್‌ಗಳು ಸೇರಿದಂತೆ 150ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಬಳಸಲಾಗಿದೆ. ಶುಕ್ರವಾರ ರಾತ್ರಿ 10.46ಕ್ಕೆ ದಾಳಿಗೆ ಟ್ರಂಪ್ ಅನುಮತಿ ನೀಡಿದರು. ಮಧ್ಯರಾತ್ರಿ 1:01ಕ್ಕೆ ಮಡುರೊ ನಿವಾಸದೊಳಗೆ ಸೇನೆ ನುಗ್ಗಿತು. ನಸುಕಿನ ಜಾವ 3:29ಕ್ಕೆ ಆತನನ್ನು ಬಂಧಿಸಿ ಕರೆತರಲಾಯಿತು ಎಂದು ಮಾಹಿತಿ ನೀಡಿದರು.
ಇವುಗಳನ್ನೂ ಓದಿ:

