ನೇಪಾಳದಲ್ಲಿ ಮತ್ತೆ ಪ್ರವಾಹ: 10 ಜನರು ನಾಪತ್ತೆ, ಕೊಚ್ಚಿಹೋದ ಮನೆ, ಸೇತುವೆಗಳು
ನೇಪಾಳದಲ್ಲಿ ಮಾರಣಾಂತಿಕ ವಿಪತ್ತಿನ ಕೆಲವೇ ತಿಂಗಳುಗಳ ನಂತರ ಸಂಭವಿಸಿದ ಹಠಾತ್ ಪ್ರವಾಹದಿಂದ ಮನೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ.

By PTI
Published : October 11, 2026 at 7:37 PM IST
ಕಠ್ಮಂಡು(ನೇಪಾಳ): ನೇಪಾಳದಲ್ಲಿ ಮತ್ತೆ ಪ್ರವಾಹ ಅಬ್ಬರಿಸಿದೆ. ಗೋಖಾ ಜಿಲ್ಲೆಯ ಬುಧಿ ಗಂಡಕಿ ನದಿಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಹಠಾತ್ ಪ್ರವಾಹದಿಂದ 12ಕ್ಕೂ ಹೆಚ್ಚು ಮನೆಗಳು ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದು, ಎರಡು ಜಲವಿದ್ಯುತ್ ಯೋಜನೆಗಳಿಗೆ ಹಾನಿ ಉಂಟಾಗಿದೆ. ಸುಮಾರು 50 ಜನರನ್ನು ರಕ್ಷಿಸಿದ್ದು, ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಅಲ್ಲದೆ, ಹಠಾತ್ ಪ್ರವಾಹದಲ್ಲಿ, ಕನಿಷ್ಠ 10 ಜನರು ನಾಪತ್ತೆಯಾಗಿದ್ದು, ಆದರೆ ಪ್ರಾಣಹಾನಿಯ ಬಗ್ಗೆ ತಕ್ಷಣದ ವರದಿಗಳು ಲಭ್ಯವಾಗಿಲ್ಲ.
ನದಿ ತೀರದಲ್ಲಿರುವ ಜನರು ಜಾಗರೂಕರಾಗಿರಬೇಕು ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಗೋಖಾ ಜಿಲ್ಲಾಡಳಿತದ ಅಧಿಕಾರಿಗಳು ಮನವಿ ಮಾಡಿದ್ದಾರೆ. ಈ ಪ್ರವಾಹವು ಸಲ್ಲೇರಿ, ಪೈಯುಕಾ ಮತ್ತು ಜಗತ್‌ನ ನದಿ ಪಾತ್ರದಲ್ಲಿರುವ ಮನೆಗಳನ್ನು ಹಾಗೂ ವಾರ್ಡ್‌ಗಳನ್ನು ಸಂಪರ್ಕಿಸುವ ತೂಗು ಸೇತುವೆಯನ್ನು ಕೊಚ್ಚಿಕೊಂಡು ಹೋಗಿದೆ ಎಂದು 'ಕಠ್ಮಂಡು ಪೋಸ್ಟ್' ವರದಿ ಮಾಡಿದೆ.
ಆಗಸ್ಟ್ 26, 2026ರಂದು ಭೋಟೇಕೋಷಿ ಮತ್ತು ತ್ರಿಶೂಲಿ ನದಿಗಳಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದ ಸುಮಾರು ಒಂದೂವರೆ ತಿಂಗಳ ಬಳಿಕ ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಈ ಪ್ರವಾಹ ಉಂಟಾಗಿದೆ.
ನೇಪಾಳ-ಚೀನಾ ಗಡಿಯ ಪರ್ವತ ಪ್ರದೇಶದಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದಿಂದಾಗಿ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಜನರು ನಾಪತ್ತೆಯಾಗಿದ್ದರು. ದೇಶವು ಇನ್ನೂ ಆ ದುರಂತದಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲೇ ಮತ್ತೊಂದು ದುರಂತ ಸಂಭವಿಸಿದೆ.
ಬುಧಿ ಗಂಡಕಿ ನದಿಯಲ್ಲಿ ನೀರಿನ ಮಟ್ಟ ಹಠಾತ್ ಏರಿಕೆಯಾಗಲು ನಿಖರ ಕಾರಣ ತಿಳಿದುಬಂದಿಲ್ಲ. ಚುಮ್ನುಬ್ರಿ-6 ರ ಲೋಕ್ಪಾ ಮತ್ತು ಚುಮ್ಲಿಂಗ್ ನಡುವೆ ಹರಿಯುವ ಬುಧಿ ಗಂಡಕಿಯ ಉಪನದಿಯಾದ 'ಸ್ಯಾರ್' ಹೊಳೆಯ ಹರಿವಿಗೆ ಅಡಚಣೆ ಉಂಟಾಗಿ ಪ್ರವಾಹ ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಗೋಖಾ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸಲು ನೇಪಾಳ ಸೇನೆಯ ಸಿಬ್ಬಂದಿ ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10 ರೈತರು ನಾಪತ್ತೆ: ನೇಪಾಳ ಸೇನೆಯು ಭಾನುವಾರ ಪ್ರವಾಹ ಪೀಡಿತ ಪ್ರದೇಶಗಳಿಂದ 48 ಜನರನ್ನು ರಕ್ಷಿಸಿದೆ. ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಹೆಲಿಕಾಪ್ಟರ್ಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ನಾಲ್ಕು ಹೆಲಿಕಾಪ್ಟರ್‌ಗಳು ಮತ್ತು ಭೂಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಗೋರ್ಖಾ ಜಿಲ್ಲಾಡಳಿತ ಕಚೇರಿಯ ಆಡಳಿತಾಧಿಕಾರಿಗಳ ಪ್ರಕಾರ, ಚುಮ್ನುಬ್ರಿಯಲ್ಲಿ ಒಂದು ಕಿಲೋಮೀಟರ್ ದೂರದವರೆಗೆ ಭೂಕುಸಿತ ಸಂಭವಿಸಿದೆ. ಈ ಭೂಕುಸಿತದಿಂದ ಐದು ದನದ ಕೊಟ್ಟಿಗೆಗಳು ಕೊಚ್ಚಿಕೊಂಡು ಹೋಗಿದ್ದು, ಕನಿಷ್ಠ 10 ರೈತರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ಚುಮ್ನುಬ್ರಿ-3 ರ ಸಲ್ಲೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ 341 ಮೆಗಾವ್ಯಾಟ್ ಸಾಮರ್ಥ್ಯದ ಬುಧಿ ಗಂಡಕಿ ಜಲವಿದ್ಯುತ್ ಯೋಜನೆಯ ನಿರ್ಮಾಣ ಶಿಬಿರ ಮತ್ತು ಕೆಲವು ಉಪಕರಣಗಳನ್ನು ಪ್ರವಾಹದ ನೀರು ಕೊಚ್ಚಿಕೊಂಡು ಹೋಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಜಿಲ್ಲೆಯ ಚುಮ್ನುಬ್ರಿ ಗ್ರಾಮೀಣ ಪುರಸಭೆಯಲ್ಲಿ ಪ್ರವಾಹವು ಸುಮಾರು ಮೂರು ಡಜನ್ ಮನೆಗಳನ್ನು ಕೊಚ್ಚಿಕೊಂಡು ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾನೆ 4 ಗಂಟೆ ಸುಮಾರಿಗೆ ಪ್ರವಾಹ ಅಪ್ಪಳಿಸಿತು. ಇದರಿಂದಾಗಿ ಸ್ಥಳೀಯರು ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಿದರು. ಪ್ರವಾಹದ ನೀರಿನಿಂದಾಗಿ ಚುಮ್ನುಬ್ರಿ ಗ್ರಾಮೀಣ ಪುರಸಭೆ-3ರ ಮಾರುಕಟ್ಟೆಗೆ ಭಾರಿ ಹಾನಿಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಂಜಾನೆ ಜೋರಾದ ಶಬ್ದ ಕೇಳಿದ ನಂತರ, ಚುಮ್ಲಿಂಗ್ ಮತ್ತು ಲೋಕ್ಪಾ ಸೇರಿದಂತೆ ನದಿಯ ದಡದಲ್ಲಿರುವ ವಸಾಹತುಗಳ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಓಡಿಹೋದರು. ಸ್ಥಳೀಯ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದ ಪ್ರವಾಸಿಗರು ಕೂಡ ಪಲಾಯನ ಮಾಡಿದರು ಎಂದು ನಿವಾಸಿಗಳು ತಿಳಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ಪ್ರವಾಸಿಗರು: ಮನಸ್ಲು ಚಾರಣಕ್ಕೆ ತೆರಳುತ್ತಿದ್ದ ಪ್ರವಾಸಿಗರು ಕೂಡ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲುದಾರಿ ಮತ್ತು ಸೇತುವೆ ಕೊಚ್ಚಿಕೊಂಡು ಹೋದ ಪರಿಣಾಮ, ಶನಿವಾರ ರಾತ್ರಿ ಪ್ರವಾಸಿಗರು ತಾವು ಉಳಿದುಕೊಂಡಿದ್ದ ಸ್ಥಳದಲ್ಲೇ ಸಿಲುಕಿಕೊಂಡಿದ್ದಾರೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸೌದಿ - ಹೌತಿ ಸಂಘರ್ಷ; ರಿಯಾದ್ ಏರ್ಪೋರ್ಟ್ ಮೇಲಿನ ದಾಳಿಯಲ್ಲಿ 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

