ಪ್ರವಾಹಕ್ಕೆ ತುತ್ತಾಗಿರುವ ನೇಪಾಳ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಸಮಯ ಬೇಕಿದೆ; ನೇಪಾಳ ಸರ್ಕಾರದ ಮಾಜಿ ಸಲಹೆಗಾರ
ನೇಪಾಳ ಎದುರಿಸುತ್ತಿರುವ ಸವಾಲಿನ ಸಂದರ್ಭ ಮತ್ತು ಭಾರತದ ಸಹಾಯದ ಕುರಿತು ಈಟಿವಿ ಭಾರತ್ ಜೊತೆಗೆ ಓಲಿ ಅವರ ವಿದೇಶಾಂಗ ಸಲಹೆಗಾರರಾಗಿರುವ ರಾಜನ್ ಭಟ್ಟರಾಯ್ ಮಾತನಾಡಿದ್ದು, ಈ ಕುರಿತು ಸೌರಭ್ ಶುಕ್ಲಾ ವರದಿ ಇಲ್ಲಿದೆ.


Published : August 31, 2026 at 12:48 PM IST
ಭೀಕರ ವಿಕೋಪಕ್ಕೆ ಗುರಿಯಾಗಿರುವ ನೇಪಾಳದಲ್ಲಿ ರಸ್ತೆ, ಸುರಂಗಗಳು ಹಾಗೂ ಸಂಪರ್ಕ ಕಡಿತಗೊಂಡ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ರಕ್ಷಣೆಗೆ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮಳೆ, ಪ್ರವಾಹದಂತಹ ಪ್ರಕೃತಿ ವಿಕೋಪಗಳಿಂದ ನೇಪಾಳ ಎದುರಿಸುತ್ತಿರುವ ಸವಾಲುಗಳ ಕುರಿತು ನೇಪಾಳ ವಿಪಕ್ಷವಾಗಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯುಎಂಎಲ್)ನ ಕೇಂದ್ರ ಕಾರ್ಯದರ್ಶಿ ಹಾಗೂ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರರಾಗಿರುವ ರಾಜನ್ ಭಟ್ಟರಾಯ್ ಅವರು 'ಈಟಿವಿ ಭಾರತ'ದೊಂದಿಗಿನ ವಿಶೇಷ ಸಂದರ್ಶನದಲ್ಲಿ ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಸುಮಾರು 750 ಜನರು ಮೃತಪಟ್ಟಿದ್ದು, ಸುಮಾರು 2,500 ರಿಂದ 3,000 ಜನರು ನಾಪತ್ತೆಯಾಗಿದ್ದಾರೆ. ಈ ವಿಪತ್ತಿನಿಂದಾಗಿ ಸುಮಾರು 1,00,000 ದಿಂದ 1,10,000 ಜನರು ಬಾಧಿತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರವಾಹವು ನೇಪಾಳದ ವಿದ್ಯುತ್ ಮೂಲಸೌಕರ್ಯಕ್ಕೆ ಭಾರಿ ಹೊಡೆತ ನೀಡಿದ್ದು, ದೇಶದ ಒಟ್ಟು 3,500 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಪೈಕಿ ಸುಮಾರು 800 ಮೆಗಾವ್ಯಾಟ್‌ನಷ್ಟು ಸಾಮರ್ಥ್ಯ ನಷ್ಟವಾಗಿದೆ. ಬಿಕ್ಕಟ್ಟಿನ ವ್ಯಾಪ್ತಿ, ಭಾರತದ ಬೆಂಬಲ, ಜಾಗತಿಕ ಸವಾಲುಗಳು, ಚಳಿಗಾಲದಲ್ಲಿ ಎದುರಾಗಲಿರುವ ವಿದ್ಯುತ್ ಸಮಸ್ಯೆ ಹಾಗೂ ಬಲವಾದ ಪ್ರಾದೇಶಿಕ ಸಹಕಾರ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳ ತುರ್ತು ಅಗತ್ಯದ ಕುರಿತು ಅವರು ವಿವರಿಸಿದ್ದಾರೆ.
ಈಟಿವಿ ಭಾರತ್: ನೇಪಾಳದ ಪ್ರಸ್ತುತ ಪರಿಸ್ಥಿತಿಯನ್ನು ಹೇಗೆ ಮೌಲ್ಯಮಾಪನ ಮಾಡುತ್ತೀರಿ? ಈ ಹಂತದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಎಷ್ಟು ಸವಾಲಿನಿಂದ ಕೂಡಿವೆ?
ರಾಜನ್ ಭಟ್ಟರಾಯ್: ಪರಿಸ್ಥಿತಿಯು ಇನ್ನೂ ಅತ್ಯಂತ ಕಠಿಣ ಮತ್ತು ಜಟಿಲವಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿವೆಯಾದರೂ, ಇನ್ನೂ ಹೆಚ್ಚಿನ ಸಂಖ್ಯೆಯ ಜನರು ನಾಪತ್ತೆಯಾಗಿದ್ದಾರೆ. ಅನೇಕ ಜನರು ಸುರಂಗಗಳ ಒಳಗೂ ಸಿಕ್ಕಿಹಾಕಿಕೊಂಡಿರಬಹುದು.
ಪ್ರವಾಹ ಬಾಧಿತ ಪ್ರದೇಶದಲ್ಲಿ ಸುಮಾರು 11-12 ಜಲವಿದ್ಯುತ್ ಯೋಜನೆಗಳಿವೆ. ಇವುಗಳಲ್ಲಿ ಕೆಲವು ಕಾರ್ಯನಿರ್ವಹಿಸುತ್ತಿದ್ದು, ಮತ್ತೆ ಕೆಲವು ನಿರ್ಮಾಣ ಹಂತದಲ್ಲಿದ್ದವು. ಸುರಂಗಗಳ ಒಳಗೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಹಾಗೂ ಉದ್ಯೋಗಿಗಳಿದ್ದು, ಅವರು ಅಲ್ಲಿ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆಯಾದರೂ, ನಮಗೆ ಇನ್ನೂ ಸಂಪೂರ್ಣ ಯಶಸ್ಸು ಕಾಣಲು ಸಾಧ್ಯವಾಗಿಲ್ಲ.
ಅಪಾರ ಸಾವುನೋವುಗಳು ಮತ್ತು ಲಭ್ಯವಿರುವ ಸೀಮಿತ ಸ್ಥಳಾವಕಾಶದಿಂದಾಗಿ, ಮೃತಪಟ್ಟವರ ಮೃತದೇಹಗಳನ್ನು ನಿರ್ವಹಿಸುವುದು ಕೂಡ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಚಿತ್ವಾನ್ ಜಿಲ್ಲೆ ಸೇರಿದಂತೆ ಕೆಲವು ಕಡೆಗಳಲ್ಲಿ, ಮೃತದೇಹಗಳನ್ನು ಗುರುತಿಸುವ ಮೊದಲೇ ಅಧಿಕಾರಿಗಳು ಅವುಗಳನ್ನು ಒಟ್ಟಾಗಿ ಹೂಳಲು ಪ್ರಾರಂಭಿಸಿದ್ದಾರೆ.
ರಕ್ಷಣೆಗೆ ಪರಿಹಾರ ಸಾಮಗ್ರಿಗಳ ಕೊರತೆಯೂ ಇದೆ. ಪ್ರವಾಹ ಸಂತ್ರಸ್ತರಿಗೆ ಆಹಾರ ಮತ್ತು ಆಶ್ರಯದಂತಹ ಮೂಲಭೂತ ನೆರವಿನ ತೀವ್ರ ಅಗತ್ಯವಿದೆ. ರಕ್ಷಣೆಗೆ ಹವಾಮಾನವು ಪರಿಸ್ಥಿತಿ ಸವಾಲುದಾಯಕವಾಗಿದೆ. ನಿನ್ನೆ ರಾತ್ರಿ ಮತ್ತೆ ಪ್ರವಾಹ ಉಂಟಾಗಿದೆ. ಕಠ್ಮಂಡುವನ್ನು ಇತರೆ ಪ್ರದೇಶಗಳೊಂದಿಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳಲ್ಲಿ ಒಂದಕ್ಕೂ ತೀವ್ರ ಹಾನಿಯಾಗಿದೆ. ಇವೆಲ್ಲವೂ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಹೆಚ್ಚು ಸಂಕೀರ್ಣಗೊಳಿಸುತ್ತಿವೆ.

ಈಟಿವಿ ಭಾರತ್: ಪ್ರಾಣ ಕಳೆದುಕೊಂಡವರು, ನಾಪತ್ತೆಯಾದವರು ಅಥವಾ ಬಾಧಿತರಾದವರ ಬಗ್ಗೆ ಏನಾದರೂ ಮಾಹಿತಿ ಲಭ್ಯವಾಗಿದೆಯಾ? ಪ್ರಸ್ತುತ ಬಾಧಿತರಾದವರಲ್ಲಿ ಭಾರತೀಯರು ಸೇರಿದಂತೆ ವಿದೇಶಿ ಪ್ರವಾಸಿಗರೂ ಇದ್ದಾರೆಯೇ?
ರಾಜನ್ ಭಟ್ಟರಾಯ್: ಸುಮಾರು 23 ದೇಶಗಳ ಜನರು ಈ ಘಟನೆಯಿಂದ ಬಾಧಿತರಾಗಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಇವರಲ್ಲಿ ಗಣನೀಯ ಸಂಖ್ಯೆಯ ಭಾರತೀಯರೂ ಸೇರಿದ್ದಾರೆ. ಮಾನಸ ಸರೋವರಕ್ಕೆ ಪ್ರಯಾಣಿಸುವವರಿಗೆ ಇದು ಒಂದು ಪ್ರಮುಖ ಯಾತ್ರಾ ಮಾರ್ಗವಾಗಿದ್ದು, ಅನೇಕ ಭಾರತೀಯ ಪ್ರವಾಸಿಗರು ಮತ್ತು ಅನಿವಾಸಿ ಭಾರತೀಯರು ಈ ಮಾರ್ಗವನ್ನು ಬಳಸುತ್ತಾರೆ. ಗೋಸೈನ್‌ಕುಂಡವು ಬೇಸಿಗೆಯ ಅವಧಿಯಲ್ಲಿ, ವಿಶೇಷವಾಗಿ ರಕ್ಷಾಬಂಧನದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುವ ಮತ್ತೊಂದು ಪವಿತ್ರ ಸ್ಥಳವಾಗಿದೆ. ಹೀಗಾಗಿ, ಆ ಸಮಯದಲ್ಲಿ ಅನೇಕ ಮಂದಿ ಪ್ರಯಾಣಿಸುತ್ತಿದ್ದು, ಕೆಲವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ.
ಅಂದಾಜಿನ ಪ್ರಕಾರ, ಸಾವಿನ ಸಂಖ್ಯೆ ಸುಮಾರು 750 ರಷ್ಟಿದೆ. ನೇಪಾಳದಲ್ಲಿ ಇನ್ನೂ ಸುಮಾರು 2,500 ರಿಂದ 3,000 ಜನರು ನಾಪತ್ತೆಯಾಗಿದ್ದಾರೆ. ಸುಮಾರು 1,00,000 ರಿಂದ 1,10,000 ಜನರು ಸಂತ್ರಸ್ತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಈಟಿವಿ ಭಾರತ್: ವಿಪತ್ತಿನ ಪ್ರಮಾಣ? ಬಾಧಿತ ಪ್ರದೇಶಗಳು ಕಠ್ಮಂಡುವಿನಿಂದ ಎಷ್ಟು ದೂರದಲ್ಲಿವೆ?
ರಾಜನ್ ಭಟ್ಟರಾಯ್: ವಿಪತ್ತಿನಿಂದ ಬಾಧಿತವಾದ ಅತ್ಯಂತ ಸಮೀಪದ ಪ್ರದೇಶವು ಕಠ್ಮಂಡುವಿನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದ್ದು, ಕೇಂದ್ರಬಿಂದುವು 100 ಕಿಲೋಮೀಟರ್ಗಿಂತ ಕಡಿಮೆ ದೂರದಲ್ಲಿದೆ. ನೇಪಾಳದ ಒಟ್ಟು ಭೂಪ್ರದೇಶದ ಎಷ್ಟು ಶೇಕಡಾವಾರು ಭಾಗವು ಬಾಧಿತವಾಗಿದೆ ಎಂಬುದನ್ನು ಈ ಹಂತದಲ್ಲಿ ನಿಖರವಾಗಿ ಹೇಳುವುದು ಕಷ್ಟ. ಆದರೆ, ಬಾಧಿತವಾದ ಜಿಲ್ಲೆಗಳು ಮತ್ತು ಜನರ ಸಂಖ್ಯೆಯ ಬಗ್ಗೆ ನಾವು ಹೆಚ್ಚು ಸ್ಪಷ್ಟವಾಗಿದೆ.
ಬಾಧಿತ ಪ್ರದೇಶಗಳು ನದಿಯ ಉದ್ದಕ್ಕೂ ಚಿತ್ವಾನ್‌ನತ್ತ ವ್ಯಾಪಿಸಿವೆ. ರೇಶ್ವರ್, ನುವಾಕೋಟ್, ದಾದಿಂಗ್, ಚಿತ್ವಾನ್, ತನಹುನ್ ಮತ್ತು ನವಾಲ್‌ಪರಸಿ ಸೇರಿದಂತೆ ಹಲವಾರು ಜಿಲ್ಲೆಗಳು ಬಾಧಿತವಾಗಿವೆ.
ಈಟಿವಿ ಭಾರತ್: ರಕ್ಷಣಾ ತಂಡಗಳು ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳು ಯಾವುವು?
ರಾಜನ್ ಭಟ್ಟರಾಯ್: ಮೊದಲನೆಯದು ಭೂಪ್ರದೇಶದ ಸ್ವರೂಪ. ಇಲ್ಲಿನ ಭೂಪ್ರದೇಶವು ಅತ್ಯಂತ ದುರ್ಗಮವಾಗಿದ್ದು, ಅನೇಕ ರಸ್ತೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಕೆಲವು ಜಿಲ್ಲೆಗಳನ್ನು ತಲುಪುವುದು ಅಸಾಧ್ಯವೆಂಬಂತಾಗಿದೆ. ಪರ್ಯಾಯ ರಸ್ತೆ ಮಾರ್ಗಗಳನ್ನು ಕಂಡುಕೊಂಡು ಮತ್ತೆ ಸಂಪರ್ಕಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ರಸ್ತೆ ಮಾರ್ಗದ ಮೂಲಕ ರೇಶ್ವರ್ ಜಿಲ್ಲೆಯ ಕೆಲವು ಭಾಗಗಳನ್ನು ತಲುಪಲು ಸಾಧ್ಯವಾಗುತ್ತಿದೆ.
ಎರಡನೆಯ ಸವಾಲೆಂದರೆ, ನಿರಂತರ ಮಳೆ ಮತ್ತು ಮುಂದುವರಿದಿರುವ ಪ್ರವಾಹ ಪರಿಸ್ಥಿತಿ ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿದೆ. ಮೂರನೆಯ ಸವಾಲೆಂದರೆ ನಮ್ಮ ಸೀಮಿತ ರಕ್ಷಣಾ ಸಾಮರ್ಥ್ಯ. ಇದೇ ಕಾರಣಕ್ಕಾಗಿ ನಾವು ಭಾರತ, ಚೀನಾ ಮತ್ತು ಇತರೆ ದೇಶಗಳಿಂದ ನೆರವನ್ನು ಪಡೆಯುತ್ತಿದ್ದೇವೆ. ಭಾರತೀಯ ರಕ್ಷಣಾ ತಂಡಗಳು ಈಗಾಗಲೇ ಆಗಮಿಸಿವೆ. ಚೀನಾದ ತಂಡಗಳು ಕೂಡ ಶನಿವಾರ ಆಗಮಿಸಿವೆ. ಸುರಂಗಗಳ ಒಳಗೆ ಸಿಕ್ಕಿಬಿದ್ದಿರಬಹುದು ಎಂದು ಶಂಕಿಸಲಾದ ಜನರನ್ನು ರಕ್ಷಿಸುವತ್ತ ಅವರು ವಿಶೇಷ ಗಮನಹರಿಸುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ಸೀಮಿತ ಸಂಖ್ಯೆಯ ಹಾಸಿಗೆಗಳಷ್ಟೇ ಇರುವುದರಿಂದ, ಸಮಯೋಚಿತ ಹಾಗೂ ಸೂಕ್ತ ಚಿಕಿತ್ಸೆ ನೀಡುವುದು ಕಷ್ಟಕರವಾಗುತ್ತಿದೆ. ದೀರ್ಘಾವಧಿಯ ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾರ್ಯವು ಅತ್ಯಂತ ಬೃಹತ್ ಸವಾಲಾಗಿರಲಿದೆ; ಏಕೆಂದರೆ ಆಸ್ತಿಪಾಸ್ತಿ ಹಾಗೂ ಮೂಲಸೌಕರ್ಯಗಳಿಗೆ ಅಪಾರ ಹಾನಿಯಾಗಿದೆ.
ಈಟಿವಿ ಭಾರತ್: ನೇಪಾಳದ ಜಲವಿದ್ಯುತ್ ವಲಯವು ಎಷ್ಟು ತೀವ್ರವಾಗಿ ಬಾಧಿತವಾಗಿದೆ ಮತ್ತು ಇದು ವಿದ್ಯುತ್ ಕೊರತೆಗೆ ಕಾರಣವಾಗಬಹುದೇ?
ರಾಜನ್ ಭಟ್ಟರಾಯ್: ಬೇಸಿಗೆಯಲ್ಲಿ ನೇಪಾಳದಲ್ಲಿ ಸಾಮಾನ್ಯವಾಗಿ ವಿದ್ಯುತ್ ಉತ್ಪಾದನೆಯು ಹೆಚ್ಚುವರಿಯಾಗಿರುವುದರಿಂದ ಸದ್ಯಕ್ಕೆ ನಾವು ಪರಿಸ್ಥಿತಿಯನ್ನು ನಿಭಾಯಿಸಬಲ್ಲೆವು. ಆದರೆ ಚಳಿಗಾಲವು ಹೆಚ್ಚು ಕಷ್ಟಕರವಾಗಿರುತ್ತದೆ. ಮುಂಬರುವ ಚಳಿಗಾಲದಲ್ಲಿ ನಾವು ವಿದ್ಯುತ್ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ.
ನೇಪಾಳವು ಸಾಮಾನ್ಯವಾಗಿ ಚಳಿಗಾಲದಲ್ಲಿ ವಿದ್ಯುತ್ ಕೊರತೆಯನ್ನು ಎದುರಿಸುತ್ತದೆ. ಭಾರತದಿಂದ ವಿದ್ಯುತ್ ಆಮದು ಮಾಡಿಕೊಳ್ಳುತ್ತದೆ. ಬೇಸಿಗೆಯಲ್ಲಿ ವಿದ್ಯುತ್ ಹೆಚ್ಚುವರಿ ಲಭ್ಯವಿದ್ದಾಗ, ನಾವು ಭಾರತಕ್ಕೆ ವಿದ್ಯುತ್ ಪೂರೈಸುತ್ತೇವೆ. ಈ ಎರಡು ದೇಶಗಳ ನಡುವೆ ಈಗಾಗಲೇ ವಿದ್ಯುತ್ ವಾಣಿಜ್ಯ ಸಹಕಾರವಿದೆ. ಬಹುಶಃ ಈ ಚಳಿಗಾಲದಲ್ಲಿ ನೇಪಾಳವು ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದ ವಿದ್ಯುತ್ ಆಮದು ಮಾಡಿಕೊಳ್ಳಬೇಕಾಗಬಹುದು.
ಜಲವಿದ್ಯುತ್ ಯೋಜನೆಗಳಿಗೆ ಆಗಿರುವ ಹಾನಿಯ ಸಂಪೂರ್ಣ ಪ್ರಮಾಣ ನಮಗೆ ಇನ್ನೂ ತಿಳಿದಿಲ್ಲ. ಇದರ ಸರಿಯಾದ ಮೌಲ್ಯಮಾಪನ ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಯೋಜನೆಗಳನ್ನು ಕೇವಲ ದುರಸ್ತಿ ಮಾಡಿದರೆ ಸಾಕೆ ಅಥವಾ ಅವುಗಳನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡಬೇಕೇ ಎಂಬುದು ನಮಗೆ ತಿಳಿದಿಲ್ಲ.
ಇಲ್ಲಿಯವರೆಗೆ ಖಾಸಗಿ ಮತ್ತು ಸರ್ಕಾರಿ ಒಡೆತನದ ಸುಮಾರು 800 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದು ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇ 20 -25 ರಷ್ಟಿದೆ.
ಈಟಿವಿ ಭಾರತ್: ಭಾರತ ಮತ್ತು ಇತರೆ ನೆರೆಯ ದೇಶಗಳು ನೇಪಾಳಕ್ಕೆ ಸಹಾಯ ಮಾಡುತ್ತಿವೆ. ಭಾರತ ಬೆಂಬಲವನ್ನು ನೀಡಿದ್ದು, ಇನ್ನೂ ಏನೆಲ್ಲಾ ಅಗತ್ಯವಿದೆ?
ರಾಜನ್ ಭಟ್ಟರಾಯ್: ಭಾರತವು ಅತ್ಯಂತ ನಿಕಟ ನೆರೆಯ ರಾಷ್ಟ್ರವಾಗಿದೆ ಮತ್ತು ನೇಪಾಳವು ಸಂಕಷ್ಟದ ಸಮಯವನ್ನು ಎದುರಿಸಿದಾಗಲೆಲ್ಲಾ ಉದಾರವಾದ ಬೆಂಬಲವನ್ನು ನೀಡಿದೆ. 2015ರ ಭೂಕಂಪದ ನಂತರದ ಪುನರ್ನಿರ್ಮಾಣದ ಸಂದರ್ಭ ಹಾಗೂ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ನೆರವು ನೀಡಿದೆ.
ಈ ಬಾರಿಯೂ ಕೂಡ, ಸ್ಪಂದಿಸಿದ ಮೊದಲ ದೇಶಗಳಲ್ಲಿ ಭಾರತ ಒಂದಾಗಿದೆ. ನಾವು ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ಕೃತಜ್ಞರಾಗಿದ್ದೇವೆ. ಸಂಕಷ್ಟದ ಸಮಯದಲ್ಲಿ ಸಹಜವಾಗಿಯೇ ನೆರೆಯ ದೇಶದತ್ತ ದೃಷ್ಟಿ ಹಾಯಿಸುತ್ತೇವೆ; ನೇಪಾಳವು ಈಗ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದೆ. ರಕ್ಷಣಾ ತಂಡಗಳು, ತಂತ್ರಜ್ಞಾನ, ಪರಿಹಾರ ಸಾಮಗ್ರಿಗಳು ಮತ್ತು ವೈದ್ಯಕೀಯ ನೆರವು ಸೇರಿದಂತೆ ಅಗತ್ಯವಿರುವ ಎಲ್ಲವನ್ನೂ ಭಾರತ ಒದಗಿಸುತ್ತಿದೆ.
ಸದ್ಯಕ್ಕೆ ಇಲ್ಲಿ ಸಂಪರ್ಕ ವ್ಯವಸ್ಥೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ವಾಹನ ಸಂಚಾರಕ್ಕೆ ಯೋಗ್ಯವಾದ ಸುಮಾರು ಹದಿನೆಂಟು ಸೇತುವೆಗಳು ನಾಶಗೊಂಡಿದ್ದು, ಇದರಿಂದಾಗಿ ಹಲವು ಪ್ರದೇಶಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಸಂಪರ್ಕವನ್ನು ಮರುಸ್ಥಾಪಿಸಲು ಮತ್ತು ಬಾಧಿತ ಪ್ರದೇಶಗಳಲ್ಲಿ ಜನಜೀವನವನ್ನು ಸಹಜ ಸ್ಥಿತಿಗೆ ತರಲು ತುರ್ತಾಗಿ ಬೇಲಿ ಸೇತುವೆಗಳ ಅಗತ್ಯವಿದ್ದು, ಭಾರತ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸೇತುವೆಗಳನ್ನು ಒದಗಿಸುತ್ತಿದೆ ಎಂದರು.
ಈಟಿವಿ ಭಾರತ್: ಇಂತಹ ವಿಪತ್ತುಗಳನ್ನು ಮೊದಲೇ ನಿರೀಕ್ಷಿಸಬೇಕಿತ್ತು ಎಂದು ಕೆಲ ತಜ್ಞರು ಹೇಳುತ್ತಾರೆ. ಈ ಘಟನೆಗೆ ಮುನ್ನ ಏನಾದರೂ ಎಚ್ಚರಿಕೆಗಳು ಇದ್ದವೇ ಮತ್ತು ಇದರ ಸಂಭಾವ್ಯ ಕಾರಣಗಳ ಬಗ್ಗೆ ನಮಗೆ ಏನು ತಿಳಿದಿದೆ?
ರಾಜನ್ ಭಟ್ಟರಾಯ್: ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞರಿಂದ ನಾನು ಕೇಳಿರುವ ಪ್ರಕಾರ, ಈ ಬಾರಿ ಸಂಭವಿಸಿದ ಘಟನೆ ವಿಭಿನ್ನವಾಗಿರುವಂತೆ ತೋರುತ್ತಿದೆ. ಇದು ಕೇವಲ ಹಿಮಪಾತವಲ್ಲ. ಹಿಮದೊಂದಿಗೆ ದೊಡ್ಡ ಬಂಡೆಗಳೂ ಕೂಡ ಕೆಳಗೆ ಬಿದ್ದಿದ್ದವು.
ಅಷ್ಟೊಂದು ಬೃಹತ್ ಬಂಡೆಗಳು ಹಿಮದೊಂದಿಗೆ ಬೇರ್ಪಟ್ಟು ಏಕೆ ಕೆಳಗೆ ಬಿದ್ದವು ಎಂಬುದು ಪ್ರಶ್ನೆ. ನಿಖರವಾಗಿ ಏನಾಯಿತು ಮತ್ತು ಇದನ್ನು ಏಕೆ ಮುನ್ಸೂಚಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ತಜ್ಞರು ಇನ್ನೂ ಪ್ರಯತ್ನಿಸುತ್ತಿದ್ದಾರೆ.
ಆ ಪ್ರದೇಶದಲ್ಲಿ ಹಿಮನದಿ ಸರೋವರಗಳಿದ್ದು, ಅವು ಉಕ್ಕಿ ಹರಿಯುವುದರಿಂದ ಅಥವಾ ಒಡೆದುಹೋಗುವುದರಿಂದ ಪ್ರವಾಹ ಹಾಗೂ ಹಾನಿ ಉಂಟಾಗುವ ಸಾಧ್ಯತೆಯಿತ್ತು ಎಂಬುದು ನಮಗೆ ತಿಳಿದಿತ್ತು. ಆ ಅಪಾಯಕ್ಕೆ ಸಂಬಂಧಿಸಿದಂತೆ ಕೆಲವು ಅಧ್ಯಯನಗಳೂ ನಡೆದಿದ್ದವು.
ಆದರೆ ಈ ಬಾರಿ ನಡೆದದ್ದು ಭಿನ್ನವಾಗಿತ್ತು, ಏಕೆಂದರೆ ಹಿಮದೊಂದಿಗೆ ಬೃಹತ್ ಬಂಡೆಗಳು ಕೂಡ ಕೆಳಗೆ ಬಿದ್ದಿದ್ದವು. ಅದು ಎಷ್ಟು ಪ್ರಬಲವಾಗಿತ್ತೆಂದರೆ, ಭೂವೈಜ್ಞಾನಿಕ ಸಂಸ್ಥೆಯೊಂದು ಭೂಕಂಪನ ಚಲನೆಯನ್ನು ಪತ್ತೆಹಚ್ಚಿತು. ಆದರೆ ವಾಸ್ತವವಾಗಿ ಅದು ಭೂಕಂಪವಾಗಿರಲಿಲ್ಲ; ಬದಲಿಗೆ, ಬಂಡೆಗಳು ಮತ್ತು ಹಿಮ ಕೆಳಗೆ ಬಿದ್ದಾಗ ಉಂಟಾದ ಪ್ರಭಾವ.
ಇದು ನಿರಂತರವಾಗಿ ನಡೆಯುವ ವಿದ್ಯಮಾನವಾಗಬಹುದೇ ಅಥವಾ ಒಮ್ಮೆ ಮಾತ್ರ ಸಂಭವಿಸಿದ ಅಸಾಮಾನ್ಯ ಘಟನೆಯೇ ಎಂಬುದನ್ನು ಈ ಹಂತದಲ್ಲಿ ಯಾರೂ ಹೇಳಲಾಗುವುದಿಲ್ಲ. ಇದಕ್ಕೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ.
ಈಟಿವಿ ಭಾರತ್: ಹಿಮಾಲಯದ ಪ್ರದೇಶದ ಮೇಲೆ ಹವಾಮಾನ ಬದಲಾವಣೆಯು ಬೀರುತ್ತಿರುವ ಹೆಚ್ಚುತ್ತಿರುವ ಪ್ರಭಾವವನ್ನೂ ಈ ದುರಂತವು ಎತ್ತಿ ತೋರಿಸುತ್ತದೆಯೇ? ಈ ಪ್ರದೇಶದಲ್ಲಿರುವ ದೇಶಗಳು ಈಗ ಏನು ಮಾಡಬೇಕು?
ರಾಜನ್ ಭಟ್ಟರಾಯ್: ಹಿಮಾಲಯ ಪ್ರದೇಶದ ಮೇಲೆ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಉಂಟಾಗುತ್ತಿದೆ ಎಂಬುದು ಸ್ಪಷ್ಟ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಕರಾವಳಿ ಪ್ರದೇಶಗಳು ಮತ್ತು ಸಮುದ್ರ ಮಟ್ಟದ ಏರಿಕೆಯತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಆದರೆ, ಹಿಮಾಲಯ ಪ್ರದೇಶದ ಕಡೆಗೂ ಹೆಚ್ಚಿನ ಗಮನ ನೀಡಬೇಕೆಂದು ನಾವು ಕಳೆದ 15-20 ವರ್ಷಗಳಿಂದ ಹೇಳುತ್ತಲೇ ಬಂದಿದ್ದೇವೆ. ಈಗ ಇದೊಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
ಈ ಕುರಿತು ಹೆಚ್ಚಿನ ಅಧ್ಯಯನಗಳನ್ನು ನಡೆಸಲು ಮತ್ತು ವಾಸ್ತವವಾಗಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಉತ್ತಮ ಸಹಕಾರದ ಅಗತ್ಯವಿದೆ. ಎರಡನೆಯದಾಗಿ, ನಮಗೆ ಉತ್ತಮ ಮುನ್ನೆಚ್ಚರಿಕೆ ವ್ಯವಸ್ಥೆಗಳ ಅಗತ್ಯವಿದೆ.
ನೇಪಾಳ, ಭಾರತ ಮತ್ತು ಚೀನಾವು ಮ್ಯಾನ್ಮಾರ್, ಭೂತಾನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಈ ಪ್ರದೇಶದ ಇತರೆ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು. ಕಾರ್ಯತಂತ್ರ ಅಥವಾ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿರಬಹುದು; ಆದರೆ ಇಂತಹ ಸಾಮಾನ್ಯ ಬೆದರಿಕೆಯ ವಿಷಯದಲ್ಲಿ, ನಾವು ಆ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡಿ ಕೆಲಸ ಮಾಡಬೇಕಿದೆ. ಪರಿಸ್ಥಿತಿಯು ಇದನ್ನೇ ಬಯಸುತ್ತದೆ.
ಈಟಿವಿ ಭಾರತ್: ತಕ್ಷಣದ ರಕ್ಷಣಾ ಕಾರ್ಯಾಚರಣೆಗಳು ಮುಗಿದ ನಂತರ ನೇಪಾಳ ಎದುರಿಸಲಿರುವ ಪ್ರಮುಖ ಸವಾಲುಗಳು ಯಾವುವು?
ರಾಜನ್ ಭಟ್ಟರಾಯ್: ವಿಪತ್ತಿನ ನಂತರ ಅನೇಕ ಸವಾಲುಗಳು ಎದುರಾಗಲಿವೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ. ಅನೇಕರು ತಮ್ಮ ಮನೆ, ಆಸ್ತಿ ಮತ್ತು ಜೀವನಪೂರ್ತಿ ಕೂಡಿಟ್ಟಿದ್ದ ಸಂಪತ್ತನ್ನು ಕಳೆದುಕೊಂಡಿದ್ದಾರೆ.
ಮುಂಬರುವ ದಿನಗಳಲ್ಲಿ ನಾವು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಈಗ ನಾವು ಇಂತಹ ಪರಿಸ್ಥಿತಿಯಲ್ಲಿದ್ದೇವೆ. ಇದನ್ನು ನಾವು ಮೆಟ್ಟಿ ನಿಲ್ಲಲೇಬೇಕು. ನಾವು ಧೈರ್ಯದಿಂದಿದ್ದು, ಇಂದಿನಿಂದಲೇ ಪುನರ್ನಿರ್ಮಾಣ ಕಾರ್ಯವನ್ನು ಆರಂಭಿಸಬೇಕಾಗಿದೆ.
ಇವುಗಳನ್ನೂ ಓದಿ:
ನೇಪಾಳ ಪ್ರವಾಹ: ಸಾವಿನ ಸಂಖ್ಯೆ 788ಕ್ಕೆ ಏರಿಕೆ: 140 ಭಾರತೀಯರ ಸ್ಥಳಾಂತರ
ನೇಪಾಳ ಪ್ರವಾಹ: ಸಾವಿನ ಸಂಖ್ಯೆ 734ಕ್ಕೆ ಏರಿಕೆ; ತಮಿಳುನಾಡಿನ 219 ಜನ ಸುರಕ್ಷಿತ, ನಾಳೆ ತವರಿಗೆ

