ಶಾಖದಲೆಗೆ ತತ್ತರಿಸಿದ ಯೂರೋಪ್: 1,300ಕ್ಕೂ ಹೆಚ್ಚು ಮಂದಿ ಸಾವು
ಯೂರೋಪ್‌ನಲ್ಲಿ ಬಿಸಿಲು ಅಕ್ಷರಶ: ಬೆಂಕಿಯಂತಿದೆ. ಶಾಖದಲೆಯ ತೀವ್ರತೆಗೆ ಈಗಾಗಲೇ 1,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ(WHO) ಉಷ್ಣ ಆರೋಗ್ಯ ಕ್ರಿಯಾ ಯೋಜನೆಯ ಅನುಷ್ಠಾನಕ್ಕೆ ಕರೆ ನೀಡಿದೆ.

Published : June 28, 2026 at 10:01 PM IST
ನವದೆಹಲಿ: ಯೂರೋಪ್‌ನಾದ್ಯಂತ ಈಗ ಸೂರ್ಯನ ಪ್ರಖರತೆಯದ್ದೇ ಸದ್ದುಗದ್ದಲ. ಬಿಸಿಲು ನೆತ್ತಿ ಸುಡುತ್ತಿರುವುದಷ್ಟೇ ಅಲ್ಲ, ಪ್ರಾಣವನ್ನೇ ತೆಗೆಯುತ್ತಿದೆ. ಶಾಖದಲೆಗಳು ಅಷ್ಟೊಂದು ತೀವ್ರವಾಗಿವೆ. ಈ ಪರಿಸ್ಥಿತಿಯನ್ನು ಸಹಿಸಲಾಗದೆ ಜೂನ್ 21ರಿಂದ ಇಲ್ಲಿಯವರೆಗೆ 1,300ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಾವಿನ ಪ್ರಮಾಣವನ್ನು ವಿಶ್ವ ಆರೋಗ್ಯ ಸಂಸ್ಥೆ(WHO) ದೃಢಪಡಿಸಿದೆ.
ಯೂರೋಪ್ ಖಂಡದೆಲ್ಲೆಡೆ ಲಕ್ಷಾಂತರ ಜನರು ಅಸಹನೀಯ ಶಾಖದಲ್ಲಿ ಬದುಕುತ್ತಿದ್ದಾರೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಶಾಲೆಗಳನ್ನು ಮುಚ್ಚಲಾಗಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಒಂದು ಪೀಳಿಗೆಯಲ್ಲಿ ಒಮ್ಮೆ ಬರುವ ಇಂಥ ಶಾಖದಲೆಯ ವಿದ್ಯಮಾನ ಈಗ ಬಹುತೇಕ ಪ್ರತಿ ವರ್ಷವೂ ಸಂಭವಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧನಾಮ್ ಅವರು ಎಕ್ಸ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
Europe is the fastest-warming continent on Earth, heating at twice the global average. Right now 150 million people are living under extreme heat, hundreds have died, schools are shut, grids are buckling.
— Tedros Adhanom Ghebreyesus (@DrTedros) June 28, 2026
Driven by climate change and global warming, the phenomenon of the…
ಇದರ ಪರಿಣಾಮ ಯುರೋಪ್ ಭೂಮಿಯ ಮೇಲೆ ವೇಗವಾಗಿ ಬೆಚ್ಚಗಾಗುತ್ತಿರುವ ಖಂಡವಾಗಿದೆ. ಜಾಗತಿಕ ಸರಾಸರಿಗಿಂತಲೂ ಎರಡು ಪಟ್ಟು ಹೆಚ್ಚು ಬಿಸಿಯಾಗುತ್ತಿದೆ. ಇಂಥ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸೂಕ್ತ ಸನ್ನದ್ಧತೆ, ತಡೆಗಟ್ಟುವಿಕೆ ಮತ್ತು ಬಲವಾದ ಆರೋಗ್ಯ ವ್ಯವಸ್ಥೆಯ ಪ್ರತಿಕ್ರಿಯೆಗಳು ಬೇಕು. ತೀವ್ರ ಶಾಖದಿಂದ ಉಂಟಾಗುವ ಆರೋಗ್ಯ ಬೆದರಿಕೆಗಳನ್ನು ಪರಿಹರಿಸಲು ಯೂರೋಪಿನ ತನ್ನ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡುತ್ತಿರುವುದಾಗಿ ಎಂದು WHO ಮುಖ್ಯಸ್ಥರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಸಾಮಾನ್ಯವಾಗಿ ಯುರೋಪಿನ ಮನೆಗಳು, ಕೆಲಸದ ಸ್ಥಳಗಳು ಮತ್ತು ಶಾಲೆಗಳನ್ನು ಇಂಥ ತಾಪವನ್ನು ಸಹಿಸಿಕೊಳ್ಳುವಂತೆ ನಿರ್ಮಿಸಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಶಾಖ ಆರೋಗ್ಯ ಕ್ರಿಯಾ ಯೋಜನೆಯ ಅನುಷ್ಠಾನಕ್ಕೆ WHO ಕರೆ: ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಆರೋಗ್ಯ ಕಾಪಾಡುವ ಪ್ರಯತ್ನದ ಭಾಗವಾಗಿ ಶಾಖ ಆರೋಗ್ಯ ಕ್ರಿಯಾ ಯೋಜನೆಗಳನ್ನು ಜಾರಿಗೆ ತರುವಂತೆಯೂ ಅವರು ಯುರೋಪ್‌ನ ದೇಶಗಳಿಗೆ ಕರೆ ಕೊಟ್ಟಿದ್ದಾರೆ.
ಭಾನುವಾರ ಬೆಳಗ್ಗೆ ಫ್ರೆಂಚ್ ಆರೋಗ್ಯ ಅಧಿಕಾರಿಗಳು ಸುದ್ದಿ ಮಾಧ್ಯಮಗಳಿಗೆ ತಿಳಿಸಿರುವ ಮಾಹಿತಿಯಂತೆ, ಬುಧವಾರದಿಂದ ಫ್ರಾನ್ಸ್‌ನಲ್ಲಿ ನಿರೀಕ್ಷೆಗಿಂತಲೂ ಸುಮಾರು 1,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ಹಿಂದೆಂದೂ ಕಂಡು ಕೇಳಿರದ ತಾಪಮಾನ: ಜರ್ಮನಿಯ ಕೆಲವೆಡೆ ಭಾನುವಾರ ರಾತ್ರಿಯ ತಾಪಮಾನವೇ ದಾಖಲೆಯ 29.4 ಡಿಗ್ರಿ ಸೆಲ್ಸಿಯಸ್ ಇತ್ತು. ಸ್ಯಾಕ್ಸೋನಿ-ಅನ್ಹಾಲ್ಟ್‌ನ ಮೋಕರ್ನ್-ಡ್ರೂವಿಟ್ಜ್‌ನಲ್ಲಿ ಹಗಲು ಹೊತ್ತು ಹಿಂದೆಂದೂ ಕಂಡರಿಯದ 41.5 C ತಾಪಮಾನ ದಾಖಲಾಗಿದೆ.

ಸ್ವೀಡನ್‌ನ ಥೀಮ್ ಪಾರ್ಕ್‌ನಲ್ಲಿ ಸಿಡಿಲು ಬಡಿದು ಹಲವರಿಗೆ ಗಾಯ: ಈ ಬಿಸಿಲಾಘಾತದ ಮಧ್ಯೆ ಸ್ವೀಡನ್‌ನ ಥೀಮ್ ಪಾರ್ಕ್‌ನಲ್ಲಿ ಸಿಡಿಲು ಬಡಿದು ಹಲವು ಮಂದಿ ಗಾಯಗೊಂಡಿದ್ದು, ಈ ಪೈಕಿ ಓರ್ವ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಜರ್ಮನಿಯ ಬರ್ಲಿನ್‌ನಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರನ್ನು ತಂಪಗಾಗಿಸಲು ಅಲ್ಲಿನ ಪೊಲೀಸರು ವಾಟರ್ ಕೆನಾನ್‌ಗಳನ್ನು ಸಿಂಪಡಿಸಿದ್ದಾರೆ.

ಅತಿ ಹೆಚ್ಚಿನ ತಾಪಮಾನದಿಂದಾಗಿ ಸಂಭವಿಸುವ ಅಗ್ನಿ ಅವಘಡಗಳ ಕುರಿತು ಗ್ರೀಸ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಡೆನ್ಮಾರ್ಕ್‌ನಲ್ಲಿ ಗುಡುಗು ಸಹಿತ ಮಳೆಯ ಅಬ್ಬರ ಜೋರಾಗಿದೆ.
ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಆತಂಕ: ಬಹ್ರೇನ್, ಕುವೈತ್ ಮೇಲೆ ಡ್ರೋನ್, ಕ್ಷಿಪಣಿ ದಾಳಿ ನಡೆಸಿದ ಇರಾನ್

