ಯುರೋಪ್‌ನಲ್ಲಿ ಹೆಚ್ಚುತ್ತಿರುವ ತಾಪಮಾನ: ಚಳಿ ತಡೆಯಲು ಕಟ್ಟಿದ ಕಟ್ಟಡಗಳಿಂದ ಮತ್ತಷ್ಟು ಧಗೆ, ಡಬ್ಲ್ಯೂಎಚ್ಒ ಅಲರ್ಟ್
ಯುರೋಪಿಯನ್ ರಾಷ್ಟ್ರಗಳು ತೀವ್ರ ಶಾಖದಿಂದ ಬಳಲುತ್ತಿರುವುದಕ್ಕೆ ಪ್ರಮುಖ ಕಾರಣಗಳು ಹವಾಮಾನ ಬದಲಾವಣೆ ಮತ್ತು ವಾತಾವರಣದಲ್ಲಿ ರೂಪುಗೊಳ್ಳುವ ಹೀಟ್ ಡೋಮ್ಸ್ ಮತ್ತು ಒಮೆಗಾ ಬ್ಲಾಕ್ಸ್ ಆಗಿದೆ.


Published : July 8, 2026 at 5:52 PM IST
ಹೈದರಾಬಾದ್: ತಂಪಾದ ಗಾಳಿ ಮತ್ತು ಶೀತ ಹವಾಮಾನಕ್ಕೆ ಹೆಸರುವಾಸಿಯಾದ ಯುರೋಪ್ ಇದೀಗ ಶಾಖದ ಅಲೆಯಿಂದ ನಲುಗುತ್ತಿದೆ. ಇಲ್ಲಿನ ಬಿಸಿಲ ತಾಪಮಾನವು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಬಿಸಿಲ ಝಳಕ್ಕೆ ಕರಗುತ್ತಿರುವ ರಸ್ತೆಗಳು, ಬಾಗಿದ ರೈಲ್ವೆ ಹಳಿಗಳು ಮತ್ತು ಸಂಚಾರ ದೀಪಗಳಿಗೆ ಸಾಕ್ಷಿಯಾಗಿದೆ. ಈ ಬಿಸಿಲ ತಾಪಕ್ಕೆ ಜೂನ್ 21 ರಿಂದ ಇಲ್ಲಿಯವರೆಗೆ 1,300 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಫ್ರಾನ್ಸ್‌ನಲ್ಲಿ ಶಾಖದ ಅಲೆ: ಈ ಬಾರಿ ಪ್ಯಾರಿಸ್ ಸಾಕಷ್ಟು ಬಿಸಿಲ ತಾಪಮಾನ ಎದುರಿಸುತ್ತಿದ್ದು, ಇಲ್ಲಿ ಗರಿಷ್ಠ 44.3ಡಿಗ್ರಿ ತಾಪಮಾನ ದಾಖಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಜಾಗತಿಕ ತಾಪಮಾನ ಏರಿಕೆಯ ಅತ್ಯಂತ ಕೆಟ್ಟ ಪರಿಣಾಮಗಳಿಗೆ ಯುರೋಪ್ ಸಾಕ್ಷಿಯಾಗುತ್ತಿದೆ. 2022ರ ಶಾಖಕ್ಕೆ 60,000ಕ್ಕೂ ಹೆಚ್ಚು ಜನರು ಮೃತಪಟ್ಟರೆ, 2023ರಲ್ಲಿ ಈ ಸಂಖ್ಯೆ 47,000ವನ್ನು ದಾಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ, 2050ರ ವೇಳೆಗೆ ಯುರೋಪ್‌ನಲ್ಲಿ ಶಾಖ ಸಂಬಂಧಿತ ಸಾವುಗಳು ವಾರ್ಷಿಕವಾಗಿ 1,20,000 ಮೀರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಶಾಖಕ್ಕೆ ಕಾರಣವೇನು?: ಯುರೋಪಿಯನ್ ರಾಷ್ಟ್ರಗಳು ತೀವ್ರ ಶಾಖದಿಂದ ಬಳಲುತ್ತಿರುವುದಕ್ಕೆ ಪ್ರಮುಖ ಕಾರಣ ಎಂದರೆ ಅದು ಹವಾಮಾನ ಬದಲಾವಣೆ. ವಾತಾವರಣದಲ್ಲಿ ರೂಪುಗೊಳ್ಳುವ ಹೀಟ್ ಡೋಮ್ಸ್ ಮತ್ತು ಒಮೆಗಾ ಬ್ಲಾಕ್ಸ್ ನಂತಹ ಹವಾಮಾನ ವ್ಯವಸ್ಥೆಗಳು ಕಾರಣ ಎಂದು ಕಂಡುಕೊಳ್ಳಲಾಗಿದೆ. ಪರಿಣಾಮವಾಗಿ ಯುರೋಪ್‌ನಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ತಾಪಮಾನ ಏರಿಕೆಯಾಗುತ್ತಿದೆ.
ಪ್ರತಿ ದಶಕದಲ್ಲೂ 0.5ಡಿಗ್ರಿ ತಾಪಮಾನ ಏರಿಕೆ: ವಿಶ್ವ ಹವಾಮಾನ ಸಂಸ್ಥೆ ಹೇಳುವ ಪ್ರಕಾರ, 1976ರರಲ್ಲಿ ಯುರೋಪಿಯನ್ ದೇಶಗಳಲ್ಲಿ ತಾಪಮಾನವು ಸುಮಾರು 2ಡಿಗ್ರಿ ಸೆಲ್ಸಿಯಲ್ಸ್ನಷ್ಟು ಏರಿಕೆಯಾಗಿದೆ. 1991ರಿಂದ ತಾಪಮಾನವು ಪ್ರತಿ ದಶಕಕ್ಕೆ ಸುಮಾರು 0.5ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿದೆ. ಇದು ಪ್ರತಿ ದಶಕಕ್ಕೆ ಜಾಗತಿಕ ಸರಾಸರಿ 0.2 ಡಿಗ್ರಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಪರಿಣಾಮವಾಗಿ, ಯುರೋಪ್ ಸಾಂಪ್ರದಾಯಿಕವಾಗಿ ಶೀತ ವಾತಾವರಣ ಹೊಂದಿರುವ ಪ್ರದೇಶ ಈಗ ಬಿಸಿಲಿನಿಂದ ಕೂಡಿದೆ.
ಯುರೋಪಿಯನ್ ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಕಾರ, 1950 ರಿಂದ ಯುರೋಪ್‌ನಲ್ಲಿ ಸಂಭವಿಸಿದ ಅತ್ಯಂತ ತೀವ್ರವಾದ 30 ಶಾಖದ ಅಲೆಗಳ ಪೈಕಿ 23 ಶಾಖದ ಅಲೆಗಳು 2000ನೇ ಇಸವಿಯ ನಂತರವೇ ಸಂಭವಿಸಿವೆ. ಇವುಗಳಲ್ಲಿ ಹಲವು ಇತ್ತೀಚಿನ ವರ್ಷಗಳಲ್ಲಿ ಕಂಡುಬಂದಿವೆ. ಹವಾಮಾನ ಬದಲಾವಣೆಯ ಕುರಿತಾದ ಅಂತರ್ ಸರ್ಕಾರಿ ಸಮಿತಿಯ ಪ್ರಕಾರ, ಹವಾಮಾನ ಬದಲಾವಣೆಯಿಂದಾಗಿ ಪದೇ ಪದೆ ತೀವ್ರತರವಾದ ಶಾಖದ ಅಲೆಗಳು ಸಂಭವಿಸುವ ಸಾಧ್ಯತೆಗಳು ಮುಂದುವರಿಯಲಿವೆ.
ಹವಾಮಾನ ಚಕ್ರ ಅಡ್ಡಿ: ಯುರೋಪ್ ಪ್ರಸ್ತುತ ತೀವ್ರ ಶಾಖದ ಅಲೆಗೆ ಕಾರಣ ಜಾಗತಿಕ ತಾಪಮಾನ ಏರಿಕೆಯಾಗಿದ್ದು, ಇದಕ್ಕೆ ಮಾನವರೇ ಕಾರಣ. ಪಳೆಯುಳಿಕೆ ಇಂಧನಗಳಿಂದ ಹೆಚ್ಚುತ್ತಿರುವ ಹೊರಸೂಸುವಿಕೆಯು ಇಂತಹ ತೀವ್ರವಾದ ಶಾಖದ ಅಲೆಗಳ ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. 1976ರ ತೀವ್ರ ಮೂಲ ತಾಪಮಾನವು ಈಗಾಗಲೇ ಬಹಳಷ್ಟು ಏರಿಕೆಯಾಗಿದೆ. ಕಲ್ಲಿದ್ದಲು, ತೈಲ ಮತ್ತು ಅನಿಲದ ಬಳಕೆಯಿಂದ ಉಂಟಾಗಿರುವ ಹವಾಮಾನ ಬಿಕ್ಕಟ್ಟು ಈ ತೀವ್ರ ಉಷ್ಣತೆಯನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ವಿಭಾಗದ ಮುಖ್ಯಸ್ಥ ಸೈಮನ್ ಸ್ಟೀಲ್ ತಿಳಿಸಿದ್ದಾರೆ
ಐಪಿಸಿಸಿ ಪ್ರಕಾರ, ಯುರೋಪ್‌ನ ಕಟ್ಟಡಗಳು ಮತ್ತು ನಗರಗಳು ಶಾಖದ ಅಲೆಗಳ ಸಮಯದಲ್ಲಿ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತವೆ. ವಾಸ್ತವವಾಗಿ, ಈ ಕಟ್ಟಡಗಳಲ್ಲಿ ಹೆಚ್ಚಿನವು ಚಳಿಗಾಲವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ದಪ್ಪ ಗೋಡೆಗಳು ಮತ್ತು ಶಾಖವನ್ನು ಉಳಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಪರಿಣಾಮಕಾರಿ ನಿರೋಧನವನ್ನು ಒಳಗೊಂಡಿವೆ.
ಈ ವಿನ್ಯಾಸವು ಬಿಸಿ ಗಾಳಿಯನ್ನು ಒಳಗೆ ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದಾಗಿ ರಾತ್ರಿಯಲ್ಲಿ ಮನೆಗಳನ್ನು ತಂಪಾಗಿಸಲು ಕಷ್ಟವಾಗುತ್ತಿದೆ ಕಾಂಕ್ರೀಟ್, ಡಾಂಬರು ಮತ್ತು ಗಾಢ ಬಣ್ಣದ ಛಾವಣಿಗಳಿಂದ ನಿರ್ಮಿಸಲಾದ ನಗರಗಳು ಹೆಚ್ಚಿನ ಪ್ರಮಾಣದ ಶಾಖವನ್ನು ಹೀರಿಕೊಳ್ಳುತ್ತವೆ. ಈ ವಿದ್ಯಮಾನವನ್ನು ನಗರ ಶಾಖ ದ್ವೀಪ ಪರಿಣಾಮ ಎಂದು ಕರೆಯಲಾಗುತ್ತದೆ. ಶಾಖವನ್ನು ಹೀರಿಕೊಂಡ ನಂತರ ಈ ವಸ್ತುಗಳು ಕ್ರಮೇಣ ಅದನ್ನು ಬಿಡುಗಡೆ ಮಾಡುತ್ತವೆ. ಇದರಿಂದಾಗಿ ನಗರ ಪ್ರದೇಶಗಳು ಗ್ರಾಮೀಣ ಪ್ರದೇಶಗಳಿಗಿಂತ ಗಮನಾರ್ಹವಾಗಿ ಬಿಸಿಯಾಗುತ್ತವೆ
ಫ್ರಾನ್ಸ್‌ನಲ್ಲಿ ದಾಖಲೆ ಮಟ್ಟದ ಉಷ್ಣಾಂಶ: ವಿಶ್ವ ಹವಾಮಾನ ಸಂಸ್ಥೆಯ ಪ್ರಕಾರ, ಜೂನ್ ತಿಂಗಳಲ್ಲಿ ಫ್ರಾನ್ಸ್‌ನಲ್ಲಿ ಹಗಲಿನ ಸಾಮಾನ್ಯ ತಾಪಮಾನವು ಸುಮಾರು 23–25 ಡಿಗ್ರೆ ಸೆಲ್ಸಿಯಸ್ ಇದೆ. ಶಾಖದ ಅಲೆ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ತಾಪಮಾನವು 44.3ಡಿಗ್ರಿ ಸೆಲ್ಸಿಯಸ್ವರೆಗೂ ತಲುಪಿದೆ. ಪ್ಯಾರಿಸ್‌ನಲ್ಲಿ ತಾಪಮಾನವು 40ಡಿಗ್ರಿ ಸೆ ಗಿಂತಲೂ ಹೆಚ್ಚಾಗಿದೆ. ಇದು ಆ ದೇಶದಲ್ಲಿ ದಾಖಲಾದ ಅತ್ಯಂತ ಬಿಸಿಯಾದ ದಿನವಾಗಿತ್ತು
ಜೂನ್ ತಿಂಗಳಲ್ಲಿ ಜರ್ಮನಿಯಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯವಾಗಿ 20 ಮತ್ತು 24ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಆದರೆ, ಶಾಖದ ಅಲೆ ಪರಿಣಾಮ ಪೂರ್ವ ಜರ್ಮನಿಯ ಕೋಶೆನ್ ಪ್ರದೇಶದಲ್ಲಿ 41.7ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಏರಿಕೆ ಕಂಡಿದೆ. ಒಟ್ಟು 46 ಹವಾಮಾನ ಕೇಂದ್ರಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.
ಯುಕೆ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲೂ ದಾಖಲೆಯ ಉಷ್ಣತೆ: ಜೂನ್‌ನಲ್ಲಿ ಯುಕೆಯಲ್ಲಿ ಸಾಮಾನ್ಯ ಹಗಲಿನ ಗರಿಷ್ಠ ತಾಪಮಾನವು 18ಡಿಗ್ರೆ ಸೆಲ್ಸಿಯಸ್ನಿಂದ 22ಡಿಗ್ರಿ ಇರುತ್ತದೆ. ಶಾಖದ ಅಲೆಯಿಂದಾಗಿ ತಾಪಮಾನವು 37.7ಡಿಗ್ರಿ ಸೆಲ್ಸಿಯಸ್ನ ಹೊಸ ದಾಖಲೆಯ ಗರಿಷ್ಠಕ್ಕೆ ಏರಿದೆ. ನೆದರ್‌ಲ್ಯಾಂಡ್ಸ್ ಜನವರಿಯಲ್ಲಿ ಸರಾಸರಿ ತಾಪಮಾನವು 2ಡಿಗ್ರಿ ಸೆ ಮತ್ತು ಜುಲೈನಲ್ಲಿ 19ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಆದರೆ, 2026ರ ಜೂನ್‌ನಲ್ಲಿ ಇಲ್ಲಿನ ಎಂಟು ಪ್ರಾಂತ್ಯಗಳಲ್ಲಿ 39.4ಡಿಗ್ರಿನ ಹೊಸ ರಾಷ್ಟ್ರೀಯ ದಾಖಲೆಯ ಗರಿಷ್ಠ ದಾಖಲಾಗಿದೆ.
ಸ್ವಿಟ್ಜರ್ಲೆಂಡ್‌ನಲ್ಲಿ ಹೊಸ ತಾಪಮಾನ ದಾಖಲೆ: ಸ್ವಿಟ್ಜರ್ಲೆಂಡ್‌ನಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಹಗಲಿನ ತಾಪಮಾನವು ಸಾಮಾನ್ಯವಾಗಿ 18ಡಿಗ್ರಿ ಸೆ ನಿಂದ 28 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರುತ್ತದೆ. ಆದರೆ, ಈ ಜೂನ್‌ನಲ್ಲಿ ಉತ್ತರದ ನಗರವಾದ ಬಾಸೆಲ್‌ನಲ್ಲಿ 39 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗಿದೆ. ಅದೇ ಸಮಯದಲ್ಲಿ, ಜೆಕ್ ಗಣರಾಜ್ಯದಲ್ಲಿ ಜೂನ್‌ನಲ್ಲಿ ಸಾಮಾನ್ಯ ತಾಪಮಾನವು ಸುಮಾರು 22–25ಡಿಗ್ರಿ ಕಂಡು ಬಂದರೆ, ಶಾಖದ ಅಲೆಯಿಂದಾಗಿ ಅದು 41.9 ಡಿಗ್ರಿಗೆ ಏರಿಕೆ ಕಂಡಿದೆ.
ಪೋಲೆಂಡ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ: ಪೋಲೆಂಡ್‌ನಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನವು 20–23ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುತ್ತದೆ. ಆದರೆ, ಈಗ ಅದು 40.5ಡಿಗ್ರಿ ಸೆಲ್ಸಿಯಸ್ನಷ್ಟು ಗರಿಷ್ಠ ಮಟ್ಟವನ್ನು ತಲುಪಿದೆ. ಹಂಗೇರಿಯಲ್ಲೂ ಸಾಮಾನ್ಯವಾಗಿ 24–27 ಡಿಗ್ರಿ ಸೆಲ್ಸಿಸ್ ತಾಪಮಾನ ಕಂಡು ಬಂದರೆ, ಬುಡಾಪೆಸ್ಟ್ ಬಳಿ ಜೂನ್ ತಿಂಗಳಿಗಾಗಿ 40.7ಡಿಗ್ರಿ ಸೆಲ್ಸಿಸ್ನಷ್ಟು ಹೊಸ ಗರಿಷ್ಠ ತಾಪಮಾನ ದಾಖಲಾಗಿದೆ.
ಜೀವಕ್ಕೆ ಬೆದರಿಕೆ: ಶಾಖವು ಯುರೋಪಿಯನ್ನರ ಆರೋಗ್ಯಕ್ಕೆ ಹಾನಿ ಮಾಡುತ್ತಿದ್ದು, ಜೀವಗಳನ್ನು ಬಲಿ ಪಡೆಯುತ್ತಿದೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ, ಯುರೋಪಿಯನ್ ದೇಶಗಳಲ್ಲಿ ರಾತ್ರಿಯ ಹೆಚ್ಚಿನ ತಾಪಮಾನದಿಂದಾಗಿ ಅನೇಕ ಜನರು ನಿದ್ರೆ ಮಾಡಲು ಕಷ್ಟಪಡುತ್ತಿದ್ದಾರೆ. ಆಸ್ಪತ್ರೆಯ ತುರ್ತು ವಾರ್ಡ್‌ಗಳು ಭರ್ತಿಯಾಗುತ್ತಿದ್ದು ಆಂಬ್ಯುಲೆನ್ಸ್ ಕರೆಗಳು ಹೆಚ್ಚಾಗಿವೆ.
ಡಬ್ಲ್ಯೂಎಚ್ಒ ಪ್ರಕಾರ, ಜೂನ್ 21ರಿಂದ 1,300 ಕ್ಕೂ ಹೆಚ್ಚು ಜನರು ಶಾಖದಿಂದಾಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ವೃದ್ಧರು ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸ್ಥಿತಿಗಳನ್ನು ಹೊಂದಿರುವವರು ಹೆಚ್ಚು ಪರಿಣಾಮ ಬೀರುತ್ತಾರೆ.
ಕಟ್ಟಡಗಳೇ ಸಮಸ್ಯೆ: ತೀವ್ರ ಚಳಿಯಿಂದಾಗಿ ಯುರೋಪ್‌ನಲ್ಲಿ ಕಟ್ಟಡಗಳು ಮತ್ತು ಮನೆಗಳನ್ನು ಚಳಿಗಾಲಿದ ರಕ್ಷಣೆಗೆ ವಿನ್ಯಾಸಗೊಳಿಸಲಾಗಿದೆ. ಇವು ಶಾಖವನ್ನು ಉಳಿಸಿಕೊಳ್ಳುತ್ತದೆ. ಆದರೆ, ಇದೀಗ ಅದೇ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಶಾಖದಿಂದಾಗಿ ಜನರು ಮನೆಯೊಳಗೆ ಇರುವುದು ಕಷ್ಟಕರವಾಗಿದೆ. ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳನ್ನು ಮುಚ್ಚಲಾಗಿದ್ದು, ಕೆಲಸದ ಸಮಯವನ್ನು ಕಡಿಮೆ ಮಾಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಯುರೋಪಿಯನ್ ದೇಶಗಳಲ್ಲಿ ಏರುತ್ತಿರುವ ತಾಪಮಾನವನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, 2050ರ ವೇಳೆಗೆ ಅತಿಯಾದ ಶಾಖದಿಂದಾಗಿ ವಾರ್ಷಿಕವಾಗಿ 1,20,000ಕ್ಕೂ ಹೆಚ್ಚು ಜನರು ಮೃತಪಡಬಹುದು. ಭವಿಷ್ಯದಲ್ಲಿ ಈ ಶಾಖವು ಮಾರಣಾಂತಿಕವಾಗಿ ಪರಿಣಮಿಸಬಹುದು.
ಇವುಗಳನ್ನೂ ಓದಿ:
ಅಮೆರಿಕದಲ್ಲಿ ಬಿಸಿಗಾಳಿಯ ಅಬ್ಬರ: 250ನೇ ಸ್ವಾತಂತ್ರ್ಯ ದಿನಾಚರಣೆ ವಿಳಂಬ

