ದುಬೈ ಏರ್ಪೋರ್ಟ್ ಸೇರಿ ಪ್ರಮುಖ ಸ್ಥಳಗಳ ಮೇಲೆ ಇರಾನ್ ಕ್ಷಿಪಣಿ ದಾಳಿ: ಆತಂಕದಲ್ಲಿ ಐಷಾರಾಮಿ ನಗರ
ದುಬೈ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ಇರಾನ್ ದಾಳಿ ಮಾಡಿದೆ.

Published : March 1, 2026 at 11:14 AM IST
ದುಬೈ(ಯುಎಇ): ಅಮೆರಿಕ, ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸುತ್ತಿರುವ ದಾಳಿ ಗಲ್ಫ್ ರಾಷ್ಟ್ರಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇದಕ್ಕೆ ಪ್ರತೀಕಾರವಾಗಿ ದುಬೈ ಸೇರಿ ಯುಎಇನ ಹಲವೆಡೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ಮಾಡಿದೆ. ಶನಿವಾರ ರಾತ್ರಿ ದುಬೈನಲ್ಲಿ ಸ್ಫೋಟದ ಶಬ್ಧಗಳು ಕೇಳಿ ಬಂದಿದ್ದು, ಜನರು ನಿದ್ದೆಯಲ್ಲಿದೇ ಭಯದಲ್ಲಿ ರಾತ್ರಿ ಕಳೆದಿದ್ದಾರೆ. ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಖಮೇನಿ ಹತ್ಯೆಗೀಡಾದ ಕಾರಣ ಭಾನುವಾರ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ.
ಇರಾನ್ ದಾಳಿಯಿಂದ ದುಬೈನ ಮಾನವ ನಿರ್ಮಿತ ದ್ವೀಪವಾದ ಪಾಮ್ ಜುಮೇರಾದಲ್ಲಿ ಸ್ಫೋಟ ಸಂಭವಿಸಿದೆ. ಡ್ರೋನ್ ದಾಳಿಯಿಂದ ಐಷಾರಾಮಿ ಹೋಟೆಲ್ ಬುರ್ಜ್ ಅಲ್ ಅರಬ್ ಅಲ್ಟ್ರಾದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಾಗೆಯೇ ಅಂತಾರಾಷ್ಟ್ರೀಯ ಸಂಚಾರಕ್ಕೆ ವಿಶ್ವದ ಅತ್ಯಂತ ಜನನಿಬಿಡ ದುಬೈ ವಿಮಾನ ನಿಲ್ದಾಣ ಮತ್ತು ಜೆಬೆಲ್ ಅಲಿ ಬಂದರು ಕೂಡ ದಾಳಿಯಿಂದ ಹಾನಿಗೊಳಗಾಗಿವೆ.
ವಿಶ್ವದ ಕೆಲವು ಶ್ರೀಮಂತರು ಆಸ್ತಿಗಳನ್ನು ಹೊಂದಿರುವ ಪಾಮ್ ಜುಮೇರಾದಲ್ಲಿನ ಸ್ಫೋಟದ ಶಬ್ದ ಕೇಳಿರುವುದಾಗಿ ಮತ್ತು ಪಂಚತಾರಾ ಹೋಟೆಲ್‌ನಿಂದ ಹೊಗೆ ಬರುತ್ತಿರುವುದು ನೋಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಮ್ ಜುಮೇರಾದಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ ದುಬೈ ಮಾಧ್ಯಮ ಕಚೇರಿ ದೃಢಪಡಿಸಿದೆ
137 ಕ್ಷಿಪಣಿ, 209 ಡ್ರೋನ್ ದಾಳಿ: ಇರಾನ್ ನಮ್ಮ ಪ್ರದೇಶಗಳನ್ನು ಗುರಿಯಾಗಿಸಿಕೊಂಡು 137 ಕ್ಷಿಪಣಿಗಳು ಮತ್ತು 209 ಡ್ರೋನ್‌ಗಳನ್ನು ಹಾರಿಸಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿದೆ. ಇವುಗಳಲ್ಲಿ ಬಹುಪಾಲು ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಯುಎಇ ತಿಳಿಸಿದೆ.
ತಡೆಹಿಡಿದ ಡ್ರೋನ್‌ನ ಅವಶೇಷಗಳು ವಿಶ್ವದ ಮೊದಲ ಸೆವೆನ್ ಸ್ಟಾರ್ ಹೋಟೆಲ್ ಎಂದು ಹೇಳಲಾಗುವ ಬುರ್ಜ್ ಅಲ್ ಅರಬ್‌ನ ತಳದಲ್ಲಿ ಅಗ್ನಿ ಅವಘಡಕ್ಕೆ ಕಾರಣವಾಗಿದೆ. "ಡ್ರೋನ್ ಅನ್ನು ತಡೆಹಿಡಿದೆವು ಮತ್ತು ಇದರ ಅವಶೇಷಗಳು ಬುರ್ಜ್ ಅಲ್ ಅರಬ್‌ನ ಹೊರ ಮುಂಭಾಗದಲ್ಲಿ ಸಣ್ಣ ಬೆಂಕಿಯನ್ನು ಉಂಟುಮಾಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ" ಎಂದು ದುಬೈ ಮಾಧ್ಯಮ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. "ನಾಗರಿಕ ರಕ್ಷಣಾ ತಂಡಗಳು ತಕ್ಷಣಕ್ಕೆ ಸ್ಪಂದಿಸಿ ಘಟನೆಯನ್ನು ನಿಯಂತ್ರಣಕ್ಕೆ ತಂದವು. ಯಾವುದೇ ಗಾಯಗಳು ವರದಿಯಾಗಿಲ್ಲ" ಎಂದು ತಿಳಿಸಿದೆ.
ದುಬೈ ವಿಮಾನ ನಿಲ್ದಾಣದಲ್ಲಿ ನಾಲ್ವರಿಗೆ ಗಾಯ: ದುಬೈ ವಿಮಾನ ನಿಲ್ದಾಣದ ಮೇಲೂ ದಾಳಿಯಾಗಿದ್ದು, ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ. ಯುಎಇ ಈಗಾಗಲೇ ತನ್ನ ವಾಯುಪ್ರದೇಶವನ್ನು ಬಂದ್ ಮಾಡಿದ್ದರಿಂದ ಹೆಚ್ಚಿನ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ತೊರೆದಿದ್ದರು.
ಅಬುಧಾಬಿಯಲ್ಲಿ ಓರ್ವ ಸಾವು: ಯುಎಇ ರಾಜಧಾನಿ ಅಬುಧಾಬಿಯ ಜಾಯೆದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಡ್ರೋನ್ ಅವಶೇಷಗಳಿಂದ ದುಬೈನ ಜೆಬೆಲ್ ಅಲಿ ಬಂದರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ಬಂದರಿನಲ್ಲಿ ಯುಎಸ್ ಯುದ್ಧನೌಕೆಗಳನ್ನು ಹೊಂದಿದೆ ಮತ್ತು ಈ ಬಂದರು ವಿಮಾನವಾಹಕ ನೌಕೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: ಅಮೆರಿಕ-ಇಸ್ರೇಲ್ ಭೀಕರ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ: 200ಕ್ಕೂ ಹೆಚ್ಚು ಸಾವು, ಇರಾನ್‌ನಲ್ಲಿ 40 ದಿನ ಶೋಕ

