ETV Bharat / international

ನೇಪಾಳ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 579ಕ್ಕೆ ಏರಿಕೆ : 1400 ಜನರು ಕಾಣೆ ; 84 ಭಾರತೀಯರ ರಕ್ಷಣೆ

ಜಿಲ್ಲಾ ಆಡಳಿತ ಕಚೇರಿ ಮತ್ತು ಜಿಲ್ಲಾ ಮತ್ತು ರಾಷ್ಟ್ರೀಯ ತುರ್ತು ಕಾರ್ಯಾಚರಣೆ ಕೇಂದ್ರಗಳಿಂದ ಪಡೆದ ವಿವರಗಳ ಆಧಾರದ ಮೇಲೆ ಈ ಅಂಕಿ- ಅಂಶಗಳನ್ನು ಸಂಗ್ರಹಿಸಲಾಗಿದೆ.

Death toll reaches 389 in Nepal's Bhote Koshi flood, 977 people missing
ನೇಪಾಳ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 389ಕ್ಕೆ ಏರಿಕೆ: 977 ಜನರು ಕಾಣೆ ; 83 ಭಾರತೀಯರ ರಕ್ಷಣೆ (ANI)
author img

By ANI

Published : August 28, 2026 at 6:58 AM IST

|

Updated : August 28, 2026 at 10:41 PM IST

3 Min Read
Choose ETV Bharat

ಕಠ್ಮಂಡು, ನೇಪಾಳ: ನೇಪಾಳದ ರಸುವಾ ಜಿಲ್ಲೆಯ ಭೋಟೆ ಕೋಶಿ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 579ಕ್ಕೆ ಏರಿಕೆ ಆಗಿದೆ. ಸಾವಿರಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ NDRRMA ಗುರುವಾರ ಬಿಡುಗಡೆ ಮಾಡಿದ ತನ್ನ ಇತ್ತೀಚಿನ ಸ್ಥಿತಿ ವರದಿಯಲ್ಲಿ ತಿಳಿಸಿದೆ.

ಜಿಲ್ಲಾ ಆಡಳಿತ ಕಚೇರಿ ಮತ್ತು ಜಿಲ್ಲಾ ಮತ್ತು ರಾಷ್ಟ್ರೀಯ ತುರ್ತು ಕಾರ್ಯಾಚರಣೆ ಕೇಂದ್ರಗಳಿಂದ ಪಡೆದ ವಿವರಗಳ ಆಧಾರದ ಮೇಲೆ ಈ ಅಂಕಿ- ಅಂಶಗಳನ್ನು ಸಂಗ್ರಹಿಸಲಾಗಿದೆ. ಗುರುವಾರ X ಖಾತೆಯಲ್ಲಿ ಪೋಸ್ಟ್​ ಮಾಡಿರುವ NDRRMA, ಪ್ರವಾಹದಿಂದ ಆಗಿರುವ ಅನಾಹುತಗಳ ಬಗ್ಗೆ ತನ್ನ ಆರನೇ ವರದಿಯನ್ನು ಬಿಡುಗಡೆ ಮಾಡಿದೆ.

ಕಾಣೆಯಾದ ಸಾವಿರಾರು ಜನರಲ್ಲಿ 28 ನೇಪಾಳ ಪೊಲೀಸ್ ಸಿಬ್ಬಂದಿ, 45 ನೇಪಾಳ ಸೇನಾ ಸಿಬ್ಬಂದಿ, 13 ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ, 15 ಕಸ್ಟಮ್ಸ್ ಕಚೇರಿ ಸಿಬ್ಬಂದಿ ಮತ್ತು ನಾಲ್ವರು ವಲಸೆ ಕಚೇರಿ ಸಿಬ್ಬಂದಿ ಸೇರಿದ್ದಾರೆ ಎಂದು ಎನ್​ ಡಿಆರ್​ ಆರ್​ ಎಂಎ ತಿಳಿಸಿದೆ. ಕಾಣೆಯಾದವರಲ್ಲಿ 517 ವಿದೇಶಿ ಪ್ರಜೆಗಳು ಮತ್ತು ನೇಪಾಳಕ್ಕೆ ಭೇಟಿ ನೀಡಲು ಬಂದಿದ್ದ ವಿದೇಶಗಳಲ್ಲಿ ವಾಸಿಸುವ 127 ನೇಪಾಳಿ ನಾಗರಿಕರು ಸೇರಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರವಾಹದಲ್ಲಿ 73 ಜನರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

7,250 ನೇಪಾಳ ಪೊಲೀಸ್ ಸಿಬ್ಬಂದಿ, 4,200 ನೇಪಾಳ ಸೇನಾ ಸಿಬ್ಬಂದಿ ಮತ್ತು 1,845 ಸಶಸ್ತ್ರ ಪೊಲೀಸ್ ಪಡೆ ನೇಪಾಳ ಸಿಬ್ಬಂದಿ ಸೇರಿದಂತೆ 13,295 ಭದ್ರತಾ ಸಿಬ್ಬಂದಿಯನ್ನು ಶೋಧ, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗಿದೆ. ನೇಪಾಳ ಸೇನೆಯ ಆರು ಮತ್ತು ಖಾಸಗಿ ವಲಯದ ಒಂಬತ್ತು ಸೇರಿದಂತೆ ಹದಿನೈದು ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.

ಹೆಲಿಕಾಪ್ಟರ್ ಕಾರ್ಯಾಚರಣೆಗಳ ಮೂಲಕ ಸುಮಾರು 1,976 ಜನರನ್ನು ರಕ್ಷಿಸಲಾಗಿದೆ ಎಂದು NDRRMA ತಿಳಿಸಿದೆ. ಶೋಧ ಮತ್ತು ರಕ್ಷಣಾ, ತುರ್ತು ಆರೋಗ್ಯ ಸೇವೆಗಳು, ಸಂವಹನ, ವಿದ್ಯುತ್ ಪುನಃಸ್ಥಾಪನೆ, ರಸ್ತೆ ಜಾಲ ಕಾರ್ಯಾಚರಣೆ, ಪರಿಹಾರ ವಿತರಣೆ, ಅಂತಾರಾಷ್ಟ್ರೀಯ ನೆರವು ಮತ್ತು ಮಾಹಿತಿ ನಿರ್ವಹಣೆಯನ್ನು ಸುಗಮಗೊಳಿಸಲು 12 ವಿಷಯಾಧಾರಿತ ತುರ್ತು ಸಮನ್ವಯ ತಂಡಗಳನ್ನು ರಚಿಸಲಾಗಿದೆ ಮತ್ತು ಸಜ್ಜುಗೊಳಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ರಸ್ತೆ ತೆರವು ಕಾರ್ಯಾಚರಣೆಗಳು ಸಹ ಭರದಿಂದ ಸಾಗಿವೆ. ದೇವಿಘಾಟ್‌ನಲ್ಲಿನ ರಸ್ತೆ ಅಡಚಣೆಗಳನ್ನು ತೆರವುಗೊಳಿಸಲಾಗಿದೆ ಮತ್ತು ಗಾಲ್ಚಿ-ಬಿದೂರ್-ತ್ರಿಶೂಲಿ ಮತ್ತು ಬೈರೇನಿ-ಮುಗ್ಲಿನ್ ರಸ್ತೆ ವಿಭಾಗಗಳಲ್ಲಿನ ಅಡೆತಡೆಗಳನ್ನು ತೆರವುಗೊಳಿಸಲು ಉಪಕರಣಗಳನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

ಬುಧವಾರ ಬೆಳಗ್ಗೆ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ ನೇಪಾಳವು ಭಾರಿ ಸಂಕಷ್ಟದಲ್ಲಿದೆ. ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಭಾರಿ ಪ್ರಮಾಣದ ನೀರಿನೊಂದಿಗೆ ಕೆಸರು ಮತ್ತು ಬಂಡೆಗಳ ಪ್ರಬಲ ಅಲೆಯೇ ಸೃಷ್ಟಿಯಾಗಿತ್ತು. ಪ್ರವಾಹ ಪೀಡಿತ ನುವಾಕೋಟ್‌ಗೆ ನೇಪಾಳದ ಪ್ರಧಾನಿ ಬಾಲೆನ್​ ಶಾ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪರಿಸ್ಥಿತಿ ಭಯಂಕರವಾಗಿದ್ದು ಸವಾಲಿನಿಂದ ಕೂಡಿದೆ. ಎಲ್ಲವನ್ನು ಸಹಜ ಸ್ಥಿತಿಗೆ ತರುವಂತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಯೊಬ್ಬ ನಾಗರಿಕರ ಜೀವಗಳನ್ನು ಉಳಿಸುವುದು, ಕಾಣೆಯಾದವರನ್ನು ಹುಡುಕಿ ರಕ್ಷಿಸುವುದು, ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಮತ್ತು ಪೀಡಿತ ಕುಟುಂಬಗಳಿಗೆ ತಕ್ಷಣದ ಪರಿಹಾರವನ್ನು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಶಾ ಫೇಸ್‌ಬುಕ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿನಾಶಕಾರಿ ಹಠಾತ್ ಪ್ರವಾಹದ ನಡುವೆ ನೇಪಾಳದ ತ್ರಿಶೂಲಿ-I ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 63 ಭಾರತೀಯ ಪ್ರಜೆಗಳ ಹೆಸರುಗಳನ್ನು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದೆ. ಗುರುವಾರ X ಪೋಸ್ಟ್ ಮಾಡಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ನೇಪಾಳದಲ್ಲಿ ರಕ್ಷಿಸಲ್ಪಟ್ಟ ಭಾರತೀಯ ಪ್ರಜೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 84 ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಪರ್ಕಕ್ಕೆ ಸಿಗದ ಭಾರತೀಯ ಪ್ರಜೆಗಳ ಸ್ಥಳವನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ಮುಂದುವರೆದಿವೆ ಎಂದೂ ಹೇಳಿದ್ದಾರೆ.

ಇವುಗಳನ್ನೂ ಓದಿ:

ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 389ಕ್ಕೆ ಏರಿಕೆ; 290 ಭಾರತೀಯರು ನಾಪತ್ತೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ನೇಪಾಳ ಪ್ರವಾಹದ ಬೆನ್ನಲ್ಲೇ ಉತ್ತರಾಖಂಡದ ಗಡಿ ಜಿಲ್ಲೆಗಳಲ್ಲಿ ತೀವ್ರ ನಿಗಾ!

Last Updated : August 28, 2026 at 10:41 PM IST