ETV Bharat / international

ಇರಾನ್​ ನಾಯಕ ಖಮೇನಿ ಅಂತ್ಯಕ್ರಿಯೆ ಆರಂಭ: ಹತ್ಯೆಯಾದ ಸ್ಥಳಕ್ಕೆ ಶವಪೆಟ್ಟಿಗೆ ರವಾನೆ

ಫೆ. 28ರಂದು ಇಸ್ರೇಲ್​ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಜಗತ್ತಿನ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ.

Ayatollah Khamenei's coffin taken to the site of assassination: Iranian media
ಅಯತೊಲ್ಲಾ ಅಲಿ ಖಮೇನಿ (ANI)
author img

By ANI

Published : July 3, 2026 at 10:34 AM IST

2 Min Read
Choose ETV Bharat

ಟೆಹ್ರಾನ್​(ಇರಾನ್​): ಇರಾನ್‌ನ ಮಾಜಿ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಇಂದು ಆರಂಭವಾಗಿರುವ ಈ ಕಾರ್ಯದಲ್ಲಿ ಅವರ ಮೃತದೇಹದ ಶವಪೆಟ್ಟಿಗೆಯನ್ನು ಹತ್ಯೆಗೊಂಡ ಸ್ಥಳಕ್ಕೆ ಕೊಂಡೊಯ್ಯಲಾಯಿತು ಎಂದು ಇರಾನ್‌ನ ರಾಜ್ಯ ಮಾಧ್ಯಮ ತಿಳಿಸಿದೆ.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (ಐಆರ್​ಐಬಿ) ಪ್ರಕಾರ, ಪೂರ್ವಘೋಷಣೆಯಿಲ್ಲದ ಕಾರ್ಯಕ್ರಮವೊಂದರಲ್ಲಿ, ಹುತಾತ್ಮ ನಾಯಕ ಅಯತೊಲ್ಲಾ ಖಮೇನಿ ಅವರ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆಯನ್ನು ಅವರು ಹುತಾತ್ಮರಾದ ಸ್ಥಳಕ್ಕೆ ತರಲಾಯಿತು.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್​ಜಿಸಿ) ಪ್ರಕಾರ, ರಾಜಧಾನಿಯಲ್ಲಿ ಜುಲೈ 4 ಮತ್ತು 5ರಂದು ಸಾರ್ವಜನಿಕ ವಿದಾಯ ಕಾರ್ಯಕ್ರಮಗಳು ನಡೆಯಲಿದ್ದು, ದಾಖಲೆಯ 2 ಕೋಟಿ ಜನರು ಆಗಮಿಸುವ ನಿರೀಕ್ಷೆಯಿದೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂತಾಪ ಸೂಚಿಸಿದ್ದಾರೆ ಎಂದು ಇರಾನ್ ಸರ್ಕಾರ ತಿಳಿಸಿದೆ.

ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರು ಇರಾನ್​ ಸರ್ಕಾರ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರೊಂದಿಗೆ ದೂರವಾಣಿ ಕರೆ ಮಾಡಿ, ಖಮೇನಿ ಹುತಾತ್ಮರಾಗಿದ್ದಕ್ಕೆ ಸಂತಾಪ ಸೂಚಿಸಿದರು. ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳು, ಹಾರ್ಮುಜ್ ಜಲಸಂಧಿ, ಲೆಬನಾನ್ ಕದನ ವಿರಾಮ ಮತ್ತು ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಚರ್ಚಿಸಿದರು ಎಂದು ತಿಳಿಸಲಾಗಿದೆ.

ಭದ್ರತಾ ಕಾರಣಗಳಿಂದಾಗಿ ಇರಾನ್‌ನ ಸರ್ವೋಚ್ಛ ನಾಯಕ ಮೊಜತಬಾ ಖಮೇನಿ ಅವರು ತಮ್ಮ ತಂದೆ ಹಾಗೂ ಮಾಜಿ ಸರ್ವೋಚ್ಛ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ ಎಂಬುದನ್ನು ಭಾರತದಲ್ಲಿನ ಪ್ರಸ್ತುತ ನಾಯಕರ ಪ್ರತಿನಿಧಿಯಾದ ಅಯತೊಲ್ಲಾ ಹಕೀಮ್ ಇಲಾಹಿ ತಿಳಿಸಿದ್ದಾರೆ.

ಇಸ್ರೇಲಿ ಬೆದರಿಕೆಗಳು ಮತ್ತು ಸಾರ್ವಜನಿಕ ಹಾಜರಾತಿ ಅಪಾಯ ತಂದೊಡ್ಡುವ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ. ಜೂನ್ 27ರಂದು, ಇರಾನ್‌ನ ರಾಜ್ಯ ಮಾಧ್ಯಮ ಪ್ರೆಸ್ ಟಿವಿ ವರದಿ ಮಾಡಿದ್ದು, ಇಸ್ಲಾಮಿಕ್ ಗಣರಾಜ್ಯದ ಅಧಿಕಾರಿಗಳು ದಿವಂಗತ ನಾಯಕನ ಎರಡು ದಿನಗಳ ಸಾರ್ವಜನಿಕ ವಿದಾಯ ಮತ್ತು ಅಂತ್ಯಕ್ರಿಯೆ ಸಮಾರಂಭಗಳಿಗೆ ವಿವರವಾದ ವ್ಯವಸ್ಥೆಗಳನ್ನು ಮಾಡಿದ್ದು, ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಸಾರ್ವಜನಿಕ ಸಭೆ ಇದಾಗಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ.

ಜುಲೈ 4 ಮತ್ತು 5 ರಂದು ಸಮಾರಂಭಗಳು ನಡೆಯಲಿದ್ದು, ಸಾರ್ವಜನಿಕ ವಿದಾಯ ಕಾರ್ಯಕ್ರಮಗಳು, ಅಂತ್ಯಕ್ರಿಯೆಯ ಪ್ರಾರ್ಥನೆಗಳು ಮತ್ತು ಅಂತ್ಯಕ್ರಿಯೆಯ ಮೆರವಣಿಗೆಯನ್ನು ಒಳಗೊಂಡಿರುತ್ತದೆ ಎಂದು ಐಆರ್​ಜಿಸಿ ಟೆಹ್ರಾನ್ ಕಮಾಂಡ್‌ನ ಕಮಾಂಡರ್, ಅಂತ್ಯಕ್ರಿಯೆಯ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುವ ಪ್ರಧಾನ ಕಚೇರಿಯ ಮುಖ್ಯಸ್ಥರೂ ಆಗಿರುವ ಬ್ರಿಗೇಡಿಯರ್ ಜನರಲ್ ಹಸನ್ ತಿಳಿಸಿದ್ದಾರೆ.

ಟೆಹ್ರಾನ್‌ನಲ್ಲಿ ಎರಡು ಪ್ರಮುಖ ಸಮಾರಂಭಗಳನ್ನು ಯೋಜಿಸಲಾಗಿದೆ. ಮೊದಲನೆಯದು ಇಮಾಮ್ ಖಮೇನಿ ಗ್ರ್ಯಾಂಡ್ ಪ್ರಾರ್ಥನಾ ಮೈದಾನದಲ್ಲಿ ಸಾರ್ವಜನಿಕ ವಿದಾಯ ಮತ್ತು ಅಂತ್ಯಕ್ರಿಯೆಯ ಪ್ರಾರ್ಥನೆ ಮತ್ತು ಎರಡನೇ ಪ್ರತ್ಯೇಕ ಸ್ಥಳದಲ್ಲಿ ಅಂತ್ಯಕ್ರಿಯೆ ಮೆರವಣಿಗೆ ನಡೆಯಲಿದೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ.

ಭಾರತದಿಂದ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು, ಬಿಹಾರದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ ಇರಾನ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇವುಗಳನ್ನೂ ಒದಿ:

ಜುಲೈನಲ್ಲಿ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆ; ಬಿಹಾರ ರಾಜ್ಯಪಾಲರು, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರು ದೇಶದ ಪರ ಭಾಗಿ!

ಖಮೇನಿ ಅಂತ್ಯಕ್ರಿಯೆ: ಮೆಹಬೂಬಾ ಮುಫ್ತಿ ಸೇರಿದಂತೆ ಐವರು ಶಿಯಾ ನಾಯಕರಿಗೆ ಆಹ್ವಾನ