ದೀಪು ಚಂದ್ರ ದಾಸ್ ಕೊಲೆ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಹತ್ಯೆ
ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಹತ್ಯೆಯಾಗಿದೆ. ಇದು ಆ ದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.

Published : December 26, 2025 at 8:06 AM IST
ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ದೀಪು ಚಂದ್ರ ದಾಸ್ ಹತ್ಯೆ ನಡೆದ ಕೆಲವೇ ದಿನಗಳಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಇಲ್ಲಿನ ರಾಜ್‌ಬರಿ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ನಡೆದ ಗುಂಪು ದಾಳಿಯಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದು ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಿಸಿದೆ.
ಕೊಲೆಯಾದ ವ್ಯಕ್ತಿಯನ್ನು ಅಮೃತ್ ಮೊಂಡಲ್ (ಸಾಮ್ರಾಟ್) ಎಂದು ಗುರುತಿಸಲಾಗಿದೆ. ಸುಲಿಗೆ ಆರೋಪದ ಮೇಲೆ ಪಂಗ್ಶಾ ಉಪಜಿಲ್ಲಾದ ಹೊಸೆಂಡಂಗಾ ಗ್ರಾಮಸ್ಥರು ಥಳಿಸಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಮಾಹಿತಿ ಬಂದ ನಂತರ ರಾತ್ರಿ 11:00 ಗಂಟೆ ಸುಮಾರಿಗೆ ಪೊಲೀಸರು ಸ್ಥಳಕ್ಕೆ ತಲುಪಿದಾಗ ಮೊಂಡಲ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಅವರನ್ನು ಪಂಗ್ಶಾ ಉಪಜಿಲ್ಲಾ ಆರೋಗ್ಯ ಸಂಕೀರ್ಣಕ್ಕೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ 2:00 ಗಂಟೆ ಮೃತಪಟ್ಟಿರುವುದಾಗಿ ವೈದ್ಯರು ಎಂದು ಘೋಷಿಸಿದರು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದೇಬ್ರತಾ ಸರ್ಕಾರ್ ತಿಳಿಸಿದ್ದಾರೆ.
ಅಮೃತ್ ಮೊಂಡಲ್ ಮೃತದೇಹವನ್ನು ಶವಪರೀಕ್ಷೆಗಾಗಿ ರಾಜ್‌ಬರಿ ಸದರ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಎಎಸ್‌ಪಿ ಮಾಹಿತಿ ನೀಡಿದ್ದಾರೆ.
ಅಮೃತ್ ಮೊಂಡಲ್ ವಿರುದ್ಧ ಪಂಗ್ಶಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಸೇರಿದಂತೆ ಕನಿಷ್ಠ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಅಮೃತ್ ಮೊಂಡಲ್ ಕ್ರಿಮಿನಲ್ ಗ್ಯಾಂಗ್ ಕಟ್ಟಿದ್ದ ಮತ್ತು ದೀರ್ಘಕಾಲದಿಂದ ಸುಲಿಗೆ ಮತ್ತು ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಭಾರತದಲ್ಲಿ ದೀರ್ಘಕಾಲ ತಲೆಮರೆಸಿಕೊಂಡಿದ್ದ ನಂತರ, ಇತ್ತೀಚೆಗೆ ಮನೆಗೆ ಮರಳಿದ್ದ ಅವನು ಗ್ರಾಮದ ನಿವಾಸಿ ಬಳಿ ಸುಲಿಗೆಗೆ ಹಣ ಕೇಳಿದ್ದಾನೆ ಎನ್ನಲಾಗಿದೆ.
ನಿನ್ನೆ ರಾತ್ರಿ, ಅಮೃತ್ ಮೊಂಡಲ್ ಮತ್ತು ಅವನ ಗುಂಪಿನ ಸದಸ್ಯರು ಹಣವನ್ನು ಸಂಗ್ರಹಿಸಲು ಹೋಗಿದ್ದರು. ಆಗ ನಿವಾಸಿಗಳು "ದರೋಡೆಕೋರರು" ಎಂದು ಕೂಗಿದಾಗ, ಸ್ಥಳೀಯರು ಸೇರಿಕೊಂಡು ಥಳಿಸಿದ್ದಾರೆ. ಅಮೃತ್ ಸಹಚರರು ಪರಾರಿಯಾಗಿದ್ದಾರೆ. ಆದರೆ ಓರ್ವ ಶಸ್ತ್ರಾಸ್ತ್ರಗಳೊಂದಿಗೆ ಸಿಕ್ಕಿಬಿದ್ದಿದ್ದಾನೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು, ಭಾರತವು ಒಂದು ವಾರದಲ್ಲಿ ಎರಡನೇ ಬಾರಿಗೆ ಬಾಂಗ್ಲಾದೇಶ ಹೈಕಮಿಷನರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ದೀಪು ಚಂದ್ರ ದಾಸ್ ಅವರನ್ನು ಗುಂಪು ಥಳಿಸಿ ಹತ್ಯೆ ಮಾಡಿದ ನಂತರ ಈ ಸಮನ್ಸ್ ಜಾರಿಯಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ, ಭಾರತದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
ಇದನ್ನೂ ಓದಿ: ಬಾಂಗ್ಲಾದಲ್ಲಿ ಒಂದು ಭಾರತೀಯ ವೀಸಾ ಕೇಂದ್ರ ಬಂದ್; ಹೈಕಮಿಷನ್ ಕಚೇರಿಗೆ ಭದ್ರತೆ ಹೆಚ್ಚಳ

