ಅಮೆರಿಕ, ಇಸ್ರೇಲ್ ದಾಳಿ ಬೆನ್ನಲ್ಲೇ ಮಧ್ಯಪ್ರಾಚ್ಯದಾದ್ಯಂತ ಇರಾನ್ ಪ್ರತೀಕಾರ; ಏರ್ ಇಂಡಿಯಾ, ಇಂಡಿಗೋ ವಿಮಾನ ರದ್ದು
ಯುಎಸ್, ಇಸ್ರೇಲ್ ಹಾಗೂ ಇರಾನ್ ನಡುವಿನ ದಾಳಿ, ಪ್ರತಿದಾಳಿಗಳ ಹಿನ್ನೆಲೆಯಲ್ಲಿ ಟೆಹ್ರಾನ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಆವರಿಸಿದೆ. ಜನರು ಎಚ್ಚರಿಕೆ ವಹಿಸುವಂತೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೇಶದ ಪ್ರಜೆಗಳಿಗೆ ತಿಳಿಸಿದೆ.

Published : February 28, 2026 at 1:43 PM IST
|Updated : February 28, 2026 at 5:01 PM IST
ನವದೆಹಲಿ: ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ರಾಜಧಾನಿ ಟೆಹ್ರಾನ್ ಮತ್ತು ದೇಶದ ಇತರ ನಗರಗಳನ್ನು ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರ ಸ್ವರೂಪ ಪಡೆದಿದೆ. ದಾಳಿಗೆ ಪ್ರತ್ಯುತ್ತರವಾಗಿ, ಇಸ್ರೇಲ್ ಮತ್ತು ಅಮೆರಿಕದ ನೆಲೆಗಳಿರುವ ಮಧ್ಯಪ್ರಾಚ್ಯದ ಹಲವಾರು ದೇಶಗಳ ಮೇಲೆ ಇರಾನ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಇದರೊಂದಿಗೆ ಮಧ್ಯಪ್ರಾಚ್ಯದಲ್ಲಿ ಭೀಕರ ಯುದ್ಧದ ಕಾರ್ಮೋಡ ಆವರಿಸಿದೆ.
ದಾಳಿ, ಪ್ರತಿದಾಳಿಗಳ ನಂತರ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ಸೇನೆಯು ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಘೋಷಿಸಿದ್ದಾರೆ. ಇರಾನ್ ಆಡಳಿತದಿಂದ ಸನ್ನಿಹಿತ ಬೆದರಿಕೆ ತೊಡೆದುಹಾಕುವ ಮೂಲಕ ಅಮೆರಿಕವನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ. ಇದನ್ನು ಬೃಹತ್ ಮಿಲಿಟರಿ ಕಾರ್ಯಾಚರಣೆ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಇದರಲ್ಲಿ ಅಮೆರಿಕನ್ನರೂ ಜೀವ ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ADVISORY as on 28 February 2026 pic.twitter.com/BqQv9AfNAl
— India in Iran (@India_in_Iran) February 28, 2026
ಅಮೆರಿಕದ ನೆಲೆಗಳ ಮೇಲೆ ಇರಾನ್ ಗುರಿ: ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನಾಲ್ಕು ನೆಲೆಗಳ ಮೇಲೆ ಗುರಿಯಿಟ್ಟಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಪ್ರತೀಕಾರವಾಗಿ ಮಧ್ಯಪ್ರಾಚ್ಯದಾದ್ಯಂತ ಇರಾನ್ ದಾಳಿ ನಡೆಸುತ್ತಿದೆ. ಕುವೈತ್, ಕತಾರ್, ಯುಎಇ, ಬಹ್ರೇನ್ ಮತ್ತು ಸೌದಿ ಅರೇಬಿಯಾಗಳಲ್ಲೂ ಕ್ಷಿಪಣಿಗಳು ಅಪ್ಪಳಿಸಿವೆ ಎಂದು ವರದಿಯಾಗಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅನ್ನು ಉಲ್ಲೇಖಿಸಿ, ಇರಾನ್ ನಗರಗಳ ಮೇಲೆ ಅಮೆರಿಕ ಮತ್ತು ಇಸ್ರೇಲಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಮಧ್ಯಪ್ರಾಚ್ಯದಲ್ಲಿರುವ ನಾಲ್ಕು ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಇರಾನ್‌ನ ಮಾಧ್ಯಮವೊಂದು ವರದಿ ಮಾಡಿದೆ.
ಬಹ್ರೇನ್‌ನಲ್ಲಿರುವ ಯುಎಸ್ ಐದನೇ ಫ್ಲೀಟ್ ಬೇಸ್, ಕತಾರ್‌ನಲ್ಲಿರುವ ಅಲ್ ಉದೈದ್ ಏರ್ ಬೇಸ್, ಯುಎಇಯ ಅಲ್ ಧಾಫ್ರಾ ಏರ್ ಬೇಸ್ ಮತ್ತು ಕುವೈತ್‌ನಲ್ಲಿರುವ ಅಲ್ ಸೇಲಂ ಏರ್ ಬೇಸ್ ಗುರಿಯಾಗಿಸಿ ಇರಾನಿನ ಕ್ಷಿಪಣಿ ದಾಳಿಗಳು ನಡೆದಿವೆ. ಶನಿವಾರ ದೋಹಾದಾದ್ಯಂತ ಸ್ಫೋಟಗಳು ಕೇಳಿಬಂದಿವೆ. ಕತಾರ್‌ನ ರಕ್ಷಣಾ ಸಚಿವಾಲಯವು ಗಲ್ಫ್ ರಾಜ್ಯವನ್ನು ಗುರಿಯಾಗಿಸಿಕೊಂಡು ಮಾಡಿದ್ದ ಹಲವಾರು ಕ್ಷಿಪಣಿ ದಾಳಿಗಳನ್ನು ತಡೆಹಿಡಿದಿದೆ ಎಂದು ಹೇಳಿದೆ. ಮಧ್ಯ ದೋಹಾದಲ್ಲಿ ಮತ್ತು ಈ ಪ್ರದೇಶದ ಅತಿದೊಡ್ಡ ಯುಎಸ್ ಮಿಲಿಟರಿ ಅಲ್-ಉದೈದ್ ಮಿಲಿಟರಿ ನೆಲೆ ಬಳಿ ಸ್ಫೋಟಗಳು ಕೇಳಿಬಂದಿವೆ. ಹಲವಾರು ದಾಳಿಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಕತಾರ್ ರಕ್ಷಣಾ ಸಚಿವಾಲಯವು ಹೇಳಿಕೆ ನೀಡಿದೆ.
ಅಲ್ಲದೆ, ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿಯೂ ಸಹ ಜೋರಾದ ಸ್ಫೋಟಗಳು ಕೇಳಿಬಂದಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡ ಇರಾನಿನ ಕ್ಷಿಪಣಿಗಳನ್ನು ತಡೆಹಿಡಿದಿದೆ ಮತ್ತು ದಾಳಿಗಳಿಗೆ ಪ್ರತಿಕ್ರಿಯಿಸುವ ಹಕ್ಕನ್ನು ಕಾಯ್ದಿರಿಸಿದೆ ಎಂದು ಹೇಳಿದೆ. ಕುವೈತ್ನಲ್ಲೂ ಕೂಡ ದಾಳಿಗಳು ವರದಿಯಾಗಿವೆ.
Travel Advisory
— IndiGo (@IndiGo6E) February 28, 2026
In view of evolving airspace restrictions around Iran and Middle East, all flights to and from Middle East are cancelled till 0000hrs.
These measures have been instituted as the safety and security of our customers and crew is our highest priority. Our teams are…
ಸುರಕ್ಷತಾ ಸಲಹೆ ನೀಡಿದ ಭಾರತೀಯ ರಾಯಭಾರ ಕಚೇರಿ: ಜಂಟಿ ಮಿಲಿಟರಿ ದಾಳಿ ಹಿನ್ನೆಲೆಯಲ್ಲಿ, ಅನಗತ್ಯ ಬೆಳವಣಿಗೆ ತಪ್ಪಿಸಲು ಮತ್ತು ಅತ್ಯಂತ ಎಚ್ಚರಿಕೆಯಿಂದ ವರ್ತಿಸುವಂತೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಪ್ರಜೆಗಳಿಗೆ ತಿಳಿಸಿದೆ. ರಾಯಭಾರ ಕಚೇರಿಯು ತುರ್ತು ಸಂಪರ್ಕ ವಿವರಗಳನ್ನು ಸಹ ನೀಡಲಾಗಿದ್ದು, ಸುದ್ದಿಗಳನ್ನು ಮೇಲ್ವಿಚಾರಣೆ ಮಾಡುತ್ತ, ಪರಿಸ್ಥಿತಿಯ ಅರಿತುಕೊಳ್ಳುವಂತೆ ಭಾರತೀಯರಿಗೆ ಕರೆ ನೀಡಿದೆ.
ದಾಳಿ ಭೀತಿಯಿರುವ ನಗರ ತೊರೆಯಲು ಜನರಿಗೆ ಸೂಚನೆ: ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯು, ದಾಳಿಯ ಕುರಿತಾದ ತನ್ನ ಮೊದಲ ಹೇಳಿಕೆಯಲ್ಲಿ, ಟೆಹ್ರಾನ್ ಮತ್ತು ಇತರ ಕೆಲವು ನಗರಗಳಲ್ಲಿ ದಾಳಿಗಳು ಮುಂದುವರೆಯುವ ನಿರೀಕ್ಷೆಯಿದೆ. ಹೀಗಾಗಿ, ಈ ಪ್ರದೇಶಗಳ ನಾಗರಿಕರು ಸುರಕ್ಷಿತವಾಗಿರಲು ಇತರ ನಗರಗಳು, ಪ್ರದೇಶಗಳಿಗೆ ತೆರಳಬೇಕು ಎಂದು ತಿಳಿಸಿದೆ.
ಏರ್ ಇಂಡಿಯಾ, ಇಂಡಿಗೋ ವಿಮಾನ ಸ್ಥಗಿತ: ದಾಳಿಗಳ ಹಿನ್ನೆಲೆಯಲ್ಲಿ, ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮಧ್ಯಪ್ರಾಚ್ಯದ ಎಲ್ಲಾ ಸ್ಥಳಗಳಿಗೆ ತನ್ನ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಶನಿವಾರ ತಿಳಿಸಿದೆ. "ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ನಮ್ಮ ವಿಮಾನ ಕಾರ್ಯಾಚರಣೆಗಳಿಗೆ ಸುರಕ್ಷತೆ ಮತ್ತು ಭದ್ರತಾ ವಾತಾವರಣದ ಬಗ್ಗೆ ನಿರ್ಣಯಿಸಲಾಗುವುದು. ಅಗತ್ಯ ವಿಮಾನ ಕಾರ್ಯಾಚರಣೆಗಳನ್ನು ಪೂರ್ವಭಾವಿಯಾಗಿ ಹೊಂದಿಸಲಾಗುವುದು. ನಮ್ಮ ತಂಡಗಳು ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಬೆಂಬಲ ನೀಡಲಿವೆ" ಎಂದು ಏರ್ ಇಂಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.
"ಇರಾನ್ ಮತ್ತು ಮಧ್ಯಪ್ರಾಚ್ಯದ ಸುತ್ತಲೂ ವಾಯುಪ್ರದೇಶ ನಿರ್ಬಂಧದ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯಕ್ಕೆ ಮತ್ತು ಅಲ್ಲಿಂದ ಬರುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಇಂಡಿಗೋ ಕೂಡ ಹೇಳಿದೆ.
ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ಇಸ್ರೇಲ್ ಶನಿವಾರ ಬೆಳಗ್ಗೆ ಇರಾನ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿದೆ. ರಾಜಧಾನಿ ಟೆಹ್ರಾನ್‌ನಲ್ಲಿ ತೀವ್ರ ಸ್ಫೋಟಗಳು ಸಂಭವಿಸಿದ್ದವು. ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ, ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಬಳಿ ಈ ದಾಳಿ ನಡೆದಿದ್ದು, ನಗರದ ಮಧ್ಯಭಾಗದಲ್ಲಿ ಮುಗಿಲೆತ್ತರಕ್ಕೆ ಹೊಗೆ ಆವರಿಸಿತ್ತು.
ಅಮೆರಿಕದೊಂದಿಗೆ ಉದ್ವಿಗ್ನತೆ ಹೆಚ್ಚಾದ ಬೆನ್ನಲ್ಲೇ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಪರಮಾಣು ಯೋಜನೆ ಸಂಬಂಧ ಇರಾನ್ ಮೇಲೆ ಒತ್ತಡ ಹೇರಲು ಮುಂದಾಗಿರುವ ಅಮೆರಿಕ, ಫೈಟರ್ ಜೆಟ್‌ಗಳು ಮತ್ತು ಯುದ್ಧನೌಕೆಗಳ ಬೃಹತ್ ಪಡೆಯನ್ನು ಸಜ್ಜುಗೊಳಿಸಿರುವ ಬೆನ್ನಲ್ಲೇ ಇಸ್ರೇಲ್ ಈ ದಾಳಿ ನಡೆಸಿವೆ.
ಬೆದರಿಕೆಗಳನ್ನು ತೊಡೆದುಹಾಕಲು ಈ ದಾಳಿ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದರು. ಆದರೆ, ಅವರು ಹೆಚ್ಚಿನ ವಿವರಣೆ ನೀಡಿಲ್ಲ. ಟೆಹ್ರಾನ್‌ನಲ್ಲಿ ಹೆಚ್ಚು ಸ್ಫೋಟಗಳು ವರದಿಯಾಗಿವೆ. ಈ ಬಗ್ಗೆ ಇರಾನ್‌ನ ಸರ್ಕಾರಿ ದೂರದರ್ಶನವು ಸ್ಫೋಟದ ಬಗ್ಗೆ ವರದಿ ಮಾಡಿದೆ.
ತುರ್ತು ಪರಿಸ್ಥಿತಿ ಘೋಷಣೆ: ಇಸ್ರೇಲ್ ದಾಳಿ ನಡೆಸಿದ ಬಳಿಕ ಇರಾನ್ ತನ್ನ ವಾಯುಪ್ರದೇಶವನ್ನು ಬಂದ್ ಮಾಡಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಾದ್ಯಂತ ಸ್ಫೋಟಗಳು ಕೇಳಿಬರುತ್ತಿದ್ದಂತೆ, ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ವಿಮಾನದ ಪೈಲಟ್‌ಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಇದೇ ಸಂದರ್ಭದಲ್ಲಿ ಇಸ್ರೇಲ್‌ನಾದ್ಯಂತ ಕೆಲ ನಿಮಿಷಗಳ ಕಾಲ ಸೈರನ್‌ಗಳು ಮೊಳಗಿಸಲಾಯಿತು. ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಹಾರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪೂರ್ವಭಾವಿ ಎಚ್ಚರಿಕೆ ನೀಡಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. ದಾಳಿ ವೇಳೆ ಎಲ್ಲಾ ನಾಗರಿಕರು ಸಂರಕ್ಷಿತ ಸ್ಥಳಗಳ ಬಳಿ ಇರುವಂತೆ ರಾಷ್ಟ್ರೀಯ ಎಚ್ಚರಿಕೆ ರವಾನಿಸಲಾಗಿದೆ ಎಂದು ಐಡಿಎಫ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿತ್ತು.
ಟೆಲ್ ಅವಿವ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಗತ್ಯ ವಲಯಗಳನ್ನು ಹೊರತುಪಡಿಸಿ ಶೈಕ್ಷಣಿಕ ಚಟುವಟಿಕೆಗಳು, ಸಭೆಗಳು ಮತ್ತು ಕೆಲಸದ ಸ್ಥಳಗಳನ್ನು ಬಂದ್ ಮಾಡುವುದು, ಇಲ್ಲವೇ ನಿಷೇಧಿಸುವಂತೆ ಘೋಷಣೆ ಮಾಡಲಾಯಿತು. ಸಾರ್ವಜನಿಕರು ಅಧಿಕೃತ ಹೋಮ್ ಫ್ರಂಟ್ ಕಮಾಂಡ್ ಚಾನೆಲ್‌ಗಳಲ್ಲಿ ಪ್ರಕಟವಾದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಸಂಪೂರ್ಣ ಮಾರ್ಗಸೂಚಿಗಳನ್ನು ರಾಷ್ಟ್ರೀಯ ತುರ್ತು ಪೋರ್ಟಲ್ ಮತ್ತು ಹೋಮ್ ಫ್ರಂಟ್ ಕಮಾಂಡ್ ಅಪ್ಲಿಕೇಶನ್‌ನಲ್ಲಿ ನವೀಕರಿಸಲಾಗುತ್ತದೆ ಎಂದು ಐಡಿಎಫ್ ಮತ್ತೊಂದು ಪೋಸ್ಟ್‌ನಲ್ಲಿ ವಿವರಿಸಿತ್ತು.
ಇದನ್ನೂ ಓದಿ: ಅಫ್ಘಾನಿಸ್ತಾನದ ವಿರುದ್ಧದ ಯುದ್ದದಲ್ಲಿ ಪಾಕಿಸ್ತಾನ ಬೆಂಬಲಿಸಿದ ಅಮೆರಿಕ

