ಅಮೆರಿಕ ದಾಳಿಗೆ 40 ಮಂದಿ ಸಾವು: ವೆನಿಜುವೆಲಾ ಅಧಿಕಾರಿಯ ಮಾಹಿತಿ
ಅಮೆರಿಕ ಶನಿವಾರ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ನಲ್ವತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ವೆನಿಜುವೆಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Published : January 5, 2026 at 10:21 AM IST
ಕ್ಯಾರಕಸ್(ವೆನಿಜುವೆಲಾ): ವೆನಿಜುವೆಲಾ ದೇಶದ ರಾಜಧಾನಿ ಕ್ಯಾರಕಸ್ ಮೇಲೆ ಶನಿವಾರ ನಡೆದ ದಾಳಿಯಲ್ಲಿ ಯೋಧರು ಮತ್ತು ನಾಗರಿಕರು ಸೇರಿದಂತೆ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ವೆನಿಜುವೆಲಾ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ದಿನಪತ್ರಿಕೆ ವರದಿ ಮಾಡಿದೆ.
ಅಮೆರಿಕ ಸೇನಾಪಡೆಗಳು ವೆನಿಜುವೆಲಾ ನಗರದ ಮೇಲೆ ದೊಡ್ಡ ಪ್ರಮಾಣದಲ್ಲಿ ಬಾಂಬ್‌ಗಳನ್ನು ಹಾಕಿ ಆಕ್ರಮಣಕಾರಿ ದಾಳಿ ಮಾಡಿವೆ. ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ದೇಶ ತೊರೆಯುವ ಸಂದರ್ಭದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಅಮೆರಿಕ ಹೇಳಿದೆ.
ಈ ದಾಳಿಯ ಬಳಿಕ ಫಾಕ್ಸ್ ನ್ಯೂಸ್ಗೆ ಮಾತನಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಕ್ಕೆ ಯಾವುದೇ ಹಾನಿಯಾಗಿಲ್ಲ. ಕಾರ್ಯಾಚರಣೆಯಲ್ಲಿ ಕೆಲವರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಇದು ಸಂಕೀರ್ಣ ಯೋಜನೆಯೊಂದಿಗೆ ನಡೆಸಿದ ಕಾರ್ಯಾಚರಣೆ ಎಂದಿರುವ ಅವರು, ಅಮೆರಿಕದ ಸಶಸ್ತ್ರ ಪಡೆಗಳ ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ.
ಇದು ಸಂಪೂರ್ಣವಾಗಿ ವೃತ್ತಿಪರತೆಯಿಂದ ನಡೆದ ಕಾರ್ಯಾಚರಣೆ. ಲ್ಯಾಂಡಿಂಗ್, ವಿಮಾನಗಳ ಸಂಖ್ಯೆ, ಹೆಲಿಕಾಪ್ಟರ್‌ಗಳು, ವಿವಿಧ ರೀತಿಯ ಫೈಟರ್ ಜೆಟ್‌ಗಳ ಮೂಲಕ ನಿಜವಾಗಿಯೂ ಒಳಗೆ ನುಗ್ಗಲು ಸಾಧ್ಯವಾಗದ ಸ್ಥಳಗಳಿಗೆ ಅವರು ನುಗ್ಗಿದರು ಎಂದರು.
ವೆನಿಜುವೆಲಾದಲ್ಲಿ ಅಮೆರಿಕದಿಂದಲೇ ಆಡಳಿತ: ದಕ್ಷಿಣ ಅಮೆರಿಕ ದೇಶದ ಜನರಿಗೆ ಸ್ವಾತಂತ್ರ್ಯ ನೀಡಲು ಅಮೆರಿಕ ಬಯಸುತ್ತದೆ. ಸುರಕ್ಷಿತ, ಸರಿಯಾದ ಮತ್ತು ವಿವೇಚನಾಯುಕ್ತ ಪರಿವರ್ತನೆಯನ್ನು ಮಾಡಲು ಸಾಧ್ಯವಾಗುವವರೆಗೆ ಆ ದೇಶವನ್ನು ನಾವು ಮುನ್ನಡೆಸುತ್ತೇವೆ. ಕಾನೂನುಬಾಹಿರ ಸರ್ವಾಧಿಕಾರಿ ನಿಕೋಲಸ್ ಮಡುರೊ ಅವರನ್ನು ಕಟಕಟೆಗೆ ತರುವುದು ನಮ್ಮ ಗುರಿ ಎಂದು ಹೇಳಿದ್ದರು.
ಗುಪ್ತಚರ ಸಂಸ್ಥೆಗಳು ಮತ್ತು ಅಮೆರಿಕದ ಕಾನೂನು ಜಾರಿ ಸಂಸ್ಥೆಗಳನ್ನು ಒಳಗೊಂಡ ಜಂಟಿ ಕಾರ್ಯಾಚರಣೆಯಲ್ಲಿ ಮಡುರೊ ಮತ್ತು ಪತ್ನಿಯನ್ನು ಕ್ಯಾರಕಾಸ್‌ನಲ್ಲಿ ಸೆರೆಹಿಡಿಯಲಾಗಿತ್ತು. ಮಾದಕವಸ್ತು ಕಳ್ಳಸಾಗಣೆ ಮತ್ತು ಮಾದಕವಸ್ತು ಭಯೋತ್ಪಾದನಾ ಪಿತೂರಿಗಳ ಆರೋಪದ ಮೇಲೆ ಈ ದಂಪತಿ ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಯಲ್ಲಿ ವಿಚಾರಣೆ ಎದುರಿಸಲಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕ ನಡೆಗೆ ವಿವಿಧ ದೇಶಗಳ ಖಂಡನೆ: ವೆನಿಜುವೆಲಾದ ಮೇಲೆ ಅಮೆರಿಕ ಸೇನೆಯ ದಾಳಿ ಮತ್ತು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿರುವುದಕ್ಕೆ ಭಾರತ, ಚೀನಾ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಟೀಕಿಸಿವೆ. ಆದರೆ, ಇಸ್ರೇಲ್, ಫ್ರಾನ್ಸ್, ಅರ್ಜೆಂಟೀನಾ ಅಮೆರಿಕದ ಕ್ರಮವನ್ನು ಬೆಂಬಲಿಸಿವೆ.
ಇವುಗಳನ್ನೂ ಓದಿ:

