ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುವ ಚಟದಿಂದ ಹದಗೆಡುತ್ತಿರುವ ಯುವಕರ ಆರೋಗ್ಯ: ನೂತನ ಅಧ್ಯಯನ
ಅತಿಯಾದ ಆನ್‌ಲೈನ್ ಬಳಕೆಯಿಂದ ಒತ್ತಡ, ಉದ್ವೇಗ ಹಾಗೂ ಆತಂಕದಂತಹ ಸಾಮಾನ್ಯ ಮಾನಸಿಕ ಆರೋಗ್ಯದ ಸಮಸ್ಯೆಗಳು ಕಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಸಂಶೋಧನೆ ತಿಳಿಸುತ್ತದೆ.


Published : October 6, 2026 at 8:12 PM IST
ಇಂದಿನ ವಾತಾವರಣದಲ್ಲಿ ನಮ್ಮ ಹೆಚ್ಚಿನ ಸಮಯವನ್ನು ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಹಾಗೂ ಅದರಲ್ಲಿ ಅಪ್ಲಿಕೇಶನ್‌ಗಳು ನಿರ್ಧರಿಸುತ್ತವೆ. ಮಧ್ಯರಾತ್ರಿ ಕಳೆದರೂ ಮೊಬೈಲ್ ಪರದೆಯತ್ತ ಕಣ್ಣು ಹಾಯಿಸುವುದು, ನಿದ್ದೆ ಕಳೆದುಕೊಳ್ಳುವುದು, ಯಾವಾಗ ಬೇಕಾದರೂ ರೀಲ್ಸ್, ವಿಡಿಯೋಗಳಲ್ಲಿ ಮುಳುಗಿ ಹೋಗುವುದು ಇಂದಿನ ಮಕ್ಕಳ ಹಾಗೂ ಯುವಕರ ಸಾಮಾನ್ಯ ಜೀವನವಾಗಿದೆ.
ತಮ್ಮ ಸಮಯ ಕಳೆಯಲು ನೋಡುತ್ತಿದ್ದಾರೆ, ಅದರಿಂದ ದೊಡ್ಡ ಅಪಾಯ ಏನು? ನಾವು ಇದನ್ನು ಊಹಿಸಲು ಕೂಡ ಸಾಧ್ಯವಿಲ್ಲ ಅಂತಹ ಆರೋಗ್ಯದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವೈದ್ಯಕೀಯ ಜರ್ನಲ್ 'ದಿ ಲ್ಯಾನ್ಸೆಟ್'ನಲ್ಲಿ 13 ಜಾಗತಿಕ ತಜ್ಞರು ಪ್ರಕಟಿಸಿದ ಹೊಸ ಅಧ್ಯಯನವು ನಮ್ಮ ಡಿಜಿಟಲ್ ಅಭ್ಯಾಸಗಳು ಯುವಜನರ ಮಾನಸಿಕ ಆರೋಗ್ಯ, ಯೋಗಕ್ಷೇಮದ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎಂಬುದನ್ನು ಅಂಕಿ - ಅಂಶಗಳೊಂದಿಗೆ ಬೆಳಕಿಗೆ ತಂದಿದೆ. ಅಂತಾರಾಷ್ಟ್ರೀಯ ಅಧ್ಯಯನ, ವೈದ್ಯರು ಮತ್ತು ಸಂಶೋಧಕರ ಅಭಿಪ್ರಾಯಗಳೊಂದಿಗೆ ಯುವಜನರ ಮೇಲೆ ಡಿಜಿಟಲ್ ಮಾಧ್ಯಮದ ಪರಿಣಾಮಗಳು ಮತ್ತು ಅವುಗಳ ಪರಿಹಾರಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಗಮನ ಸೆಳೆಯುವ ಅಪ್ಲಿಕೇಶನ್‌ಗಳು: ಇಂದಿನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಹಾಗೂ ಅಪ್ಲಿಕೇಶನ್‌ಗಳು ವಿಶೇಷವಾಗಿ ಯುವಜನರ ಆರೋಗ್ಯವನ್ನು ರಕ್ಷಿಸಲು ರಚಿಸಲಾಗಿಲ್ಲ, ಅವರ ಗಮನ, ಸಮಯ ಮತ್ತು ಡೇಟಾ ಸಂಪೂರ್ಣವಾಗಿ ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಈ ಕುರಿತು ಮಾತನಾಡಿರುವ ಡಿಜಿಟಲ್ ಟ್ರಾನ್ಸ್ ಫಾರ್ಮೇಷನ್ ಫಾರ್ ಹೆಲ್ತ್ ಲ್ಯಾಬ್ (ಡಿಟಿಎಚ್-ಲ್ಯಾಬ್) ಮುಖ್ಯಸ್ಥ ಪ್ರೊಫೆಸರ್ ಇಲೋನಾ ಕಿಕ್‌ಬುಶ್ ಪ್ರತಿಕ್ರಿಯಿಸಿ, 'ಬಾಲ್ಯ ಹಾಗೂ ಯೌವನದ ದೈನಂದಿನ ಜೀವನದೊಂದಿಗೆ ಡಿಜಿಟಲ್ ಮಾಧ್ಯಮವು ಬೇರ್ಪಡಿಸಲಾಗದಂತೆ ಬೆಸೆದುಕೊಂಡಿದೆ. ಸರ್ಕಾರಗಳು ತಮ್ಮದೇ ಆದ ನಿಯಮಗಳನ್ನು ಅನುಸರಿಸಲು ಟೆಕ್ ಕಂಪನಿಗಳಿಗೆ ಬಿಟ್ಟಿವೆ. ಇದರ ಪರಿಣಾಮವಾಗಿ ಅವರ ಆರೋಗ್ಯದ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಯುವಕರ ಗಮನವನ್ನು ಸೆಳೆಯುವ ಏಕೈಕ ಉದ್ದೇಶದಿಂದ ಅನೇಕ ವ್ಯವಹಾರ ಮಾದರಿಗಳನ್ನು ರಚಿಸಲಾಗಿದೆ' ಎಂದು ತಿಳಿಸುತ್ತಾರೆ.

ಕೆನಡಾದ ಟೊರೊಂಟೊ ವಿಶ್ವವಿದ್ಯಾನಿಲಯದ ಡಾ.ಜೈ ಶಾ ಅವರು ಮಾತನಾಡಿ, 'ನೀವು ಸ್ಕ್ರಾಲ್ ಮಾಡುತ್ತಲೇ ಇದ್ದರೆ ವಿಡಿಯೋಗಳು ಬರುತ್ತಲೇ ಇರುವ ಅನಂತ ಸ್ಕ್ರಾಲ್, ನಂತರದ ವೀಡಿಯೊಗಳು ಸ್ವಯಂಚಾಲಿತವಾಗಿ ರನ್ ಆಗುವ ಆಟೋಪ್ಲೇ ಹಾಗೂ ಬಳಕೆದಾರರ ಆದ್ಯತೆಗಳಿಗೆ ಅನುಗುಣವಾಗಿ ವಿಡಿಯೋಗಳನ್ನು ಶಿಫಾರಸು ಮಾಡುವ ವೈಶಿಷ್ಟ್ಯಗಳು ಕಂಪನಿಗಳು ಮಾಡಿದ ವಿನ್ಯಾಸ ಆಯ್ಕೆಗಳಾಗಿವೆ. ಇದು ಕೇವಲ ವೈಯಕ್ತಿಕ ಸ್ವಯಂ ನಿಯಂತ್ರಣದ ವಿಷಯವಲ್ಲ. ಆದರೆ, ಈ ನಿರ್ದಿಷ್ಟ ತಾಂತ್ರಿಕ ವೈಶಿಷ್ಟ್ಯಗಳು ಜನರ ಬಳಕೆಯ ಮಾದರಿಗಳನ್ನು ಹೇಗೆ ಬದಲಾಯಿಸುತ್ತವೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿದೆ ಎಂದು ಹೇಳುತ್ತಾರೆ.
90 ಲಕ್ಷ ಜನರ ಮೇಲೆ ಅಧ್ಯಯನ, ಆರೋಗ್ಯದ ಪರಿಣಾಮಗಳೇನು?: 25 ವರ್ಷದೊಳಗಿನ 90 ಲಕ್ಷ ಯುವಜನರನ್ನು ಒಳಗೊಂಡ 121 ವಿಭಿನ್ನ ಅಧ್ಯಯನಗಳ ಸಂಗ್ರಹವನ್ನು 'ದಿ ಲ್ಯಾನ್ಸೆಟ್' ಜರ್ನಲ್‌ಗಾಗಿ ಪರಿಶೀಲಿಸಲಾಗಿದೆ. ಇದರಲ್ಲಿ ಡಿಜಿಟಲ್ ಮಾಧ್ಯಮದ ಅತಿಯಾದ ಇಲ್ಲವೇ ವ್ಯಸನಕಾರಿ ಬಳಕೆಯು ಯುವ ಜನರ ಆರೋಗ್ಯದ ಮೇಲೆ ನಿರಂತರ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ದೃಢಪಡಿಸಲಾಗಿದೆ.
ಮಾನಸಿಕ ಆರೋಗ್ಯದ ಪರಿಣಾಮ: ಅತಿಯಾದ ಆನ್‌ಲೈನ್ ಬಳಕೆಯು ಒತ್ತಡ, ಉದ್ವೇಗ ಮತ್ತು ಆತಂಕದಂತಹ ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಹೆಚ್ಚಿಸುತ್ತದೆ.

ನಿದ್ರಾಹೀನತೆ, ದೈಹಿಕ ಚಟುವಟಿಕೆಯ ಕೊರತೆ: ಮಧ್ಯರಾತ್ರಿಯವರೆಗೆ ಮೊಬೈಲ್ ವೀಕ್ಷಣೆಯು ನಿದ್ರೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ವ್ಯಾಯಾಮ ಮತ್ತು ಹೊರಾಂಗಣ ಕ್ರೀಡೆಗಳಂತಹ ದೈಹಿಕ ಚಟುವಟಿಕೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಆರೋಗ್ಯಕರ ಜೀವನದ ಪರಿಣಾಮ: ಜಾಗತಿಕವಾಗಿ ಸಂಶೋಧಕರು ಅಂದಾಜಿನ ಪ್ರಕಾರ ದಿನಕ್ಕೆ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಪರದೆಯ ಸಮಯವು ಸರಿಸುಮಾರು 2.8 ಮಿಲಿಯನ್ ಆರೋಗ್ಯಕರ ಜೀವನ ವರ್ಷಗಳನ್ನು ಒತ್ತಡದಿಂದ ಕಳೆದುಕೊಳ್ಳಬಹುದು. 2.4 ಮಿಲಿಯನ್ ಆರೋಗ್ಯಕರ ಜೀವನ ವರ್ಷಗಳು ಸ್ಥೂಲಕಾಯತೆಗೆ ಕಾರಣವಾಗಬಹುದು. ಮಧ್ಯಮ ಡಿಜಿಟಲ್ ಬಳಕೆ ಹಾಗೂ ವ್ಯಾಯಾಮ ಉತ್ತೇಜಿಸುವ ವಿಡಿಯೋ ಆಟಗಳು ಕೆಲವು ಪ್ರದೇಶಗಳಲ್ಲಿ ಮಾನಸಿಕ ಆರೋಗ್ಯ, ದೈಹಿಕ ಚಟುವಟಿಕೆಯ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂದು ಅಧ್ಯಯನವು ಸೂಚಿಸುತ್ತದೆ.
ರಾಷ್ಟ್ರಗಳ ಜವಾಬ್ದಾರಿಗಳು: ತಂಬಾಕು ಮತ್ತು ಇಂಧನ ಕಂಪನಿಗಳು ತಮ್ಮ ಉತ್ಪನ್ನಗಳ ದುಷ್ಪರಿಣಾಮಗಳನ್ನು ಮರೆಮಾಚಲು ಪ್ರಯತ್ನಿಸಿದಂತೆಯೇ, ದೊಡ್ಡ ಟೆಕ್ ಕಂಪನಿಗಳು ಇದೇ ರೀತಿಯ ತಂತ್ರಗಳನ್ನು ಬಳಸುತ್ತಿವೆ ಎಂದು ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಾರ್ಬರಾ ಬ್ರೈನ್ಸಾಕ್ ಎಚ್ಚರಿಕೆ ನೀಡುತ್ತಾರೆ.
'ಟೆಕ್ ಕಂಪನಿಗಳು ತಮ್ಮ ವಿರುದ್ಧದ ಟೀಕೆಗಳನ್ನು ಅಪಖ್ಯಾತಿಗೊಳಿಸಲು ಪ್ರಯತ್ನಿಸುತ್ತಿವೆ. ಅವರು ಸರ್ಕಾರದ ನಿರ್ಬಂಧಗಳನ್ನು ಸ್ವಾತಂತ್ರ್ಯಕ್ಕೆ ಬೆದರಿಕೆ ಎಂದು ಬಿಂಬಿಸುತ್ತಾರೆ. ಆದರೆ, ಸರಿಯಾದ ಸರ್ಕಾರದ ನಿಯಂತ್ರಣವು ನಾವೀನ್ಯತೆಗೆ ವಿರೋಧಿಯಲ್ಲ, ಇದು ಸುರಕ್ಷಿತ ತಂತ್ರಜ್ಞಾನದ ಸೃಷ್ಟಿಗೆ ಕಾರಣವಾಗುವ ಅಂಶವಾಗಿದೆ' ಎಂದು ತಿಳಿಸುತ್ತಾರೆ.
ಭಾರತದ ಯುವ ತಜ್ಞ ಡಾ.ಸಲ್ಮಾನ್ ಫಿತ್ರತ್ ಖಾನ್ ಪ್ರತಿಕ್ರಿಯಿಸಿ, 'ಡಿಜಿಟಲ್ ವ್ಯವಸ್ಥೆಗಳಿಂದ ಉಂಟಾಗುವ ಆರೋಗ್ಯ ಅಪಾಯಗಳನ್ನು ತಡೆಯಬಹುದು. ನಿರ್ಬಂಧಗಳನ್ನು ಪರಿಚಯಿಸಲು ಸರ್ಕಾರಗಳು ಪರಿಪೂರ್ಣ ಸಾಕ್ಷ್ಯಕ್ಕಾಗಿ ಕಾಯಬಾರದು. ಯುವಕರನ್ನು ಒಳಗೊಂಡ ಸುರಕ್ಷಿತ ಆನ್‌ಲೈನ್ ಜಗತ್ತನ್ನು ರಚಿಸಲು ಈಗಲೇ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.
ಪರಿಹಾರ ಕ್ರಮಗಳೇನು?: ವಯಸ್ಸಿನ ನಿರ್ಬಂಧಗಳಂತಹ ಪ್ರತ್ಯೇಕ ತಾತ್ಕಾಲಿಕ ಕ್ರಮಗಳು ಮಾತ್ರ ಈ ಸಮಸ್ಯೆಗೆ ಸಂಪೂರ್ಣ ಪರಿಹಾರವಾಗುವುದಿಲ್ಲ ಎಂದು ತಜ್ಞರು ನಂಬುತ್ತಾರೆ.
- ಯಾವುದೇ ಹೊಸ ಅಪ್ಲಿಕೇಶನ್ ಅಥವಾ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವ ಮೊದಲು, ತಂತ್ರಜ್ಞಾನ ಕಂಪನಿಗಳು ಅದು ಬಳಕೆದಾರರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಪರೀಕ್ಷಿಸಬೇಕು.
- ಆ್ಯಪ್‌ಗಳು ಜನರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಕಂಪನಿಗಳು ಸಾರ್ವಜನಿಕ ಆರೋಗ್ಯ ಸಂಶೋಧಕರೊಂದಿಗೆ ಕಾನೂನುಬದ್ಧವಾಗಿ ಡೇಟಾವನ್ನು ಹಂಚಿಕೊಳ್ಳಬೇಕು.
- ಕಂಪನಿಗಳು ಒಂದು ದೇಶದಲ್ಲಿನ ಕಾನೂನು ದೌರ್ಬಲ್ಯಗಳನ್ನು ಬಳಸಿಕೊಂಡು ತಪ್ಪಿಸಿಕೊಳ್ಳುವುದನ್ನು ತಡೆಯಲು ವಿಶ್ವ ಆರೋಗ್ಯ ಸಂಸ್ಥೆ (WHO) ಮೂಲಕ ಅಂತಾರಾಷ್ಟ್ರೀಯ ನಿಯಂತ್ರಕ ಚೌಕಟ್ಟುಗಳನ್ನು ಅಭಿವೃದ್ಧಿಪಡಿಸಬೇಕು.
- ಕಂಪನಿಗಳನ್ನು ಪ್ರಶ್ನಿಸಲು, ಇವುಗಳ ಆಂತರಿಕ ದಾಖಲೆಗಳನ್ನು ಹೊರತರಲು ಕಾನೂನು ಹೋರಾಟಗಳು ಉತ್ತಮ ಮಾರ್ಗವಾಗಿ ಹೊರಹೊಮ್ಮುತ್ತಿವೆ ಎಂದು ತಜ್ಞರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಅನ್ನು ವೀಕ್ಷಿಸಬಹುದು:
ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ದಡಾರ ವೈರಸ್: ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
- ಕಬ್ಬಿಣಾಂಶದ ಕೊರತೆಯಾದರೆ ದೇಹದಲ್ಲಿ ಕಾಣಿಸುತ್ತವೆ ಈ ಚಿಹ್ನೆಗಳು: ಐರನ್ ಅಂಶ ಸಮೃದ್ಧವಾಗಿರುವ ಆಹಾರಗಳಿವು
- ಬೆಳಗ್ಗೆ ಎದ್ದ ತಕ್ಷಣ ನಡೆದಾಡಿದರೆ ತೀವ್ರವಾದ ಹಿಮ್ಮಡಿ ನೋವು ಕಾಣಿಸುತ್ತದೆಯೇ?: ವೈದ್ಯರು ಸೂಚಿಸುವ ಪರಿಹಾರ ಕ್ರಮಗಳೇನು?
- ಹೊರಗೆ ಕಾಣುವ ದೊಡ್ಡ ಹೊಟ್ಟೆಗಿಂತ ಒಳಾಂಗಗಳಲ್ಲಿರುವ ಶೇಖರವಾಗುವ ಕೊಬ್ಬು ತುಂಬಾ ಅಪಾಯಕಾರಿ: ವೈದ್ಯರ ಎಚ್ಚರಿಕೆ
- ಪುರುಷರಿಗಿಂತ ಮಹಿಳೆಯರಲ್ಲಿ ಮೆದುಳಿನ ಅನ್ಯೂರಿಜಮ್ ಉಂಟಾಗುವ ಸಾಧ್ಯತೆ ಹೆಚ್ಚು: ಏನಿದು ಆರೋಗ್ಯದ ಸಮಸ್ಯೆ?
- ಡಯಟ್ ಮಾಡುವಾಗ ಬೇಡದ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆಯಾಗುವುದೇಕೆ? ನಿಯಂತ್ರಿಸುವುದು ಹೇಗೆ ಗೊತ್ತೇ?

