ETV Bharat / health

ಪುರುಷರಿಗಿಂತಲೂ ಮಹಿಳೆಯರಿಗೇ ಹೆಚ್ಚು ದೈಹಿಕ ನೋವು: ಅಧ್ಯಯನದಿಂದ ಮಹತ್ವದ ವಿಷಯಗಳು ಬಹಿರಂಗ

ವಿಶ್ವದ ಜನಸಂಖ್ಯೆಯ ಸುಮಾರು ಶೇ.40ರಷ್ಟು ಜನರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ದೇಹದ ಅಧಿಕ ತೂಕವು ನೇರವಾಗಿ ಪಾದದ ಕೀಲುಗಳು ಮತ್ತು ಪಾದಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಸಂಶೋಧನೆ ತಿಳಿಸುತ್ತದೆ.

WHY WOMEN FEEL MORE PAIN  women physical pain  women feel more pain  ಮಹಿಳೆಯರಿಗೆ ಹೆಚ್ಚು ದೈಹಿಕ ನೋವು
ತಲೆ ಹಾಗೂ ಹೊಟ್ಟೆ ನೋವು- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : October 10, 2026 at 6:15 PM IST

3 Min Read
Choose ETV Bharat

ಮೈ-ಕೈ ನೋವು, ತಲೆನೋವು ಅಥವಾ ಸೊಂಟದ ನೋವಿನ ಕುರಿತು ಬಹುತೇಕ ಮಹಿಳೆಯರು ಮಾಡುವ ದೂರುಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಈ ದೂರುಗಳ ಹಿಂದೆ ಸ್ಪಷ್ಟವಾದ ವೈಜ್ಞಾನಿಕ ಕಾರಣವಿದೆ ಎಂಬುದು ಇದೀಗ ಸಾಬೀತಾಗಿದೆ. ಪುರುಷರಿಗಿಂತ ಮಹಿಳೆಯರು ತಮ್ಮ ಜೀವನದುದ್ದಕ್ಕೂ ತೀವ್ರವಾದ ದೈಹಿಕ ನೋವನ್ನು ಹೆಚ್ಚು ಬಾರಿ ಅನುಭವಿಸುತ್ತಾರೆ ಎಂದು ಜಾಗತಿಕ ಅಧ್ಯಯನ ಬಹಿರಂಗಪಡಿಸಿದೆ.

ಅಂತಾರಾಷ್ಟ್ರೀಯ ಜರ್ನಲ್ 'ನೇಚರ್ ಮೆಡಿಸಿನ್'ನಲ್ಲಿ ಪ್ರಕಟವಾದ ಈ ಸಂಶೋಧನೆಯಲ್ಲಿ 118 ದೇಶಗಳ 5 ರಿಂದ 100 ವರ್ಷಕ್ಕಿಂತ ಮೇಲ್ಪಟ್ಟ 6.1 ದಶಲಕ್ಷಕ್ಕೂ (61 ಲಕ್ಷ) ಹೆಚ್ಚು ಜನರ ಸ್ವಯಂ ವರದಿ ಮಾಡಿದ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಕೇವಲ ಆಸ್ಪತ್ರೆಯ ದಾಖಲೆಗಳನ್ನು ಅವಲಂಬಿಸುವ ಬದಲು ಸಾರ್ವಜನಿಕರಿಂದ ನೇರವಾಗಿ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಸಂಶೋಧಕರು ದೈಹಿಕ ನೋವಿನ ನಿಖರವಾದ ವರದಿಯನ್ನು ಸಿದ್ಧಪಡಿಸಿದ್ದಾರೆ.

WHY WOMEN FEEL MORE PAIN  women physical pain  women feel more pain  ಮಹಿಳೆಯರಿಗೆ ಹೆಚ್ಚು ದೈಹಿಕ ನೋವು
ಹೊಟ್ಟೆ ನೋವು- ಸಾಂದರ್ಭಿಕ ಚಿತ್ರ (Getty Images)

ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುವ ದೈಹಿಕ ನೋವು: ಈ ಅಧ್ಯಯನವು ತಲೆ, ಮುಖ, ಕುತ್ತಿಗೆ, ಬೆನ್ನು, ಹೊಟ್ಟೆ, ಸೊಂಟ ಹಾಗೂ ಮೊಣಕಾಲು ಸೇರಿದಂತೆ ದೇಹದ 11 ಭಾಗಗಳಲ್ಲಿನ ನೋವನ್ನು ಪರಿಶೀಲಿಸಿದೆ. ಈ ಎಲ್ಲಾ ಭಾಗಗಳಲ್ಲಿ ಪುರುಷರಿಗಿಂತ ಮಹಿಳೆಯರ ಮೇಲೆ ನೋವಿನ ಪರಿಣಾಮವು ಹೆಚ್ಚಿರುವುದು ಕಂಡುಬಂದಿದೆ.

ಮುಖದ ನೋವು: ಪುರುಷರಿಗೆ ಹೋಲಿಸಿದರೆ ಮಹಿಳೆಯರು ಮುಖದ ಭಾಗಗಳಲ್ಲಿ ನೋವನ್ನು ಅನುಭವಿಸುವ ಸಾಧ್ಯತೆ ಶೇಕಡಾ 83ರಷ್ಟು ಹೆಚ್ಚಿದೆ.

ತಲೆನೋವು: ಮಹಿಳೆಯರು ತಲೆನೋವಿನಿಂದ ಬಳಲುವ ಪ್ರಮಾಣವು ಶೇಕಡಾ 74ರಷ್ಟು ಹೆಚ್ಚಾಗಿದೆ.

ಹೊಟ್ಟೆ ನೋವು: ಮಹಿಳೆಯರು ಹೊಟ್ಟೆ ನೋವನ್ನು ಶೇಕಡಾ 60 ರಷ್ಟು ಹೆಚ್ಚು ಬಾರಿ ಅನುಭವಿಸುತ್ತಾರೆ. ಈ ಸಮಸ್ಯೆಗಳ ತೀವ್ರತೆಯ ಹೊರತಾಗಿಯೂ, ಅಧ್ಯಯನವು ಒಂದು ಪ್ರಮುಖ ವಿಷಯದ ಬಹಿರಂಗಪಡಿಸಿದೆ. ಮಹಿಳೆಯರಿಗೆ ಆಗಾಗ್ಗೆ ಸೂಕ್ತ ಸಮಯದಲ್ಲಿ ನೋವು ನಿವಾರಕ ಚಿಕಿತ್ಸೆಗಳು ಸಿಗುವುದಿಲ್ಲ. ಇವರ ನೋವು ಅನೇಕ ಬಾರಿ ಗಮನಕ್ಕೆ ಬಾರದೇ ಹೋಗುತ್ತದೆ.

WHY WOMEN FEEL MORE PAIN  women physical pain  women feel more pain  ಮಹಿಳೆಯರಿಗೆ ಹೆಚ್ಚು ದೈಹಿಕ ನೋವು
ಹೊಟ್ಟೆ ನೋವು- ಸಾಂದರ್ಭಿಕ ಚಿತ್ರ (Getty Images)

ವಯಸ್ಸಾದಂತೆ ದೈಹಿಕ ನೋವು ಕ್ರಮೇಣ ಹೆಚ್ಚಾಗುತ್ತದೆ ಎಂಬ ಸಾಮಾನ್ಯ ನಂಬಿಕೆ ಇದೆ. ಹೆಚ್ಚಿನ ರೀತಿಯ ದೈಹಿಕ ನೋವುಗಳು 55ನೇ ವಯಸ್ಸಿನ ಮೊದಲು ವೇಗವಾಗಿ ಹೆಚ್ಚಾಗುತ್ತವೆ. ಮಧ್ಯವಯಸ್ಸಿನಲ್ಲಿ ಉತ್ತುಂಗಕ್ಕೇರುತ್ತವೆ ಎಂದು ಅಧ್ಯಯನ ತಿಳಿಸುತ್ತದೆ.

ಜೀವನದ ವಿವಿಧ ಹಂತಗಳಲ್ಲಿ ದೇಹದ ವಿವಿಧ ಭಾಗಗಳಲ್ಲಿ ಉಂಟಾಗುವ ನೋವು:

ಹೊಟ್ಟೆ ನೋವು, ತಲೆನೋವು: ಹೊಟ್ಟೆ ನೋವು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನಿರ್ದಿಷ್ಟವಾಗಿ 23ನೇ ವಯಸ್ಸಿನಲ್ಲಿ ತೀವ್ರವಾಗಿರುತ್ತದೆ. ತಲೆನೋವು 34ನೇ ವಯಸ್ಸಿನಲ್ಲಿ ಉತ್ತುಂಗಕ್ಕೇರುತ್ತದೆ.

ದೇಹದ ಮೇಲ್ಭಾಗ ಮತ್ತು ಕೆಳಭಾಗದ ಪ್ರದೇಶಗಳು: ಕುತ್ತಿಗೆ, ಭುಜಗಳು ಮತ್ತು ಮೊಣಕೈಗಳಂತಹ ದೇಹದ ಭಾರವನ್ನು ಹೊರದ ಮೇಲ್ಭಾಗದ ಪ್ರದೇಶಗಳಲ್ಲಿನ ನೋವು 59 ಮತ್ತು 62ನೇ ವಯಸ್ಸಿನ ನಡುವೆ ಉತ್ತುಂಗಕ್ಕೇರಿ, ನಂತರ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಸೊಂಟ, ಮೊಣಕಾಲು ಮತ್ತು ಬೆನ್ನಿನಂತಹ ದೇಹದ ಭಾರವನ್ನು ಹೊರವ ಪ್ರದೇಶಗಳಲ್ಲಿನ ನೋವು ವಯಸ್ಸಾದಂತೆ ಹೆಚ್ಚುತ್ತಾ ಹೋಗುತ್ತದೆ. 75ನೇ ವಯಸ್ಸಿನ ನಂತರವಷ್ಟೇ ಗರಿಷ್ಠ ಮಟ್ಟವನ್ನು ತಲುಪುತ್ತದೆ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನೋವಿನ ಸಮಸ್ಯೆ: ನೋವಿಗೆ ಸಂಬಂಧಿಸಿದ ಸಮಸ್ಯೆಗಳು ಶ್ರೀಮಂತ, ಹೆಚ್ಚಿನ ಆದಾಯವಿರುವ ರಾಷ್ಟ್ರಗಳಲ್ಲಿಯೇ ಹೆಚ್ಚು ಕಂಡುಬರುತ್ತವೆ ಎಂಬ ಹಿಂದಿನ ಊಹೆಗಳನ್ನು ಈ ಅಧ್ಯಯನವು ತಳ್ಳಿಹಾಕುತ್ತದೆ. ಕಡಿಮೆ ಆದಾಯದ, ಅಭಿವೃದ್ಧಿಶೀಲ ದೇಶಗಳ ಜನರು ತಮ್ಮ ಜೀವನದ ನಂತರದ ಹಂತಗಳಲ್ಲಿ ತೀವ್ರ ದೈಹಿಕ ನೋವಿನಿಂದ ಬಳಲುತ್ತಿದ್ದಾರೆ. ಗಮನಾರ್ಹವಾಗಿ ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೆ ಬಡ ರಾಷ್ಟ್ರಗಳಲ್ಲಿ ಬೆನ್ನಿನ ಕೆಳಭಾಗದ ನೋವಿನ ಸಮಸ್ಯೆ ಎರಡು ಪಟ್ಟು ಹೆಚ್ಚಾಗಿ ಕಂಡುಬರುತ್ತದೆ.

WHY WOMEN FEEL MORE PAIN  women physical pain  women feel more pain  ಮಹಿಳೆಯರಿಗೆ ಹೆಚ್ಚು ದೈಹಿಕ ನೋವು
ತಲೆ ನೋವು- ಸಾಂದರ್ಭಿಕ ಚಿತ್ರ (Getty Images)

ಉತ್ತರ ಅಮೆರಿಕ, ಯುರೋಪ್‌ನಲ್ಲಿ ಧೂಮಪಾನ, ಬೊಜ್ಜು ಮತ್ತು ಕಡಿಮೆ ಆದಾಯದಂತಹ ಅಂಶಗಳು ನೋವಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಶೇಕಡಾ 27ರಷ್ಟು ಪಾಲು ಹೊಂದಿವೆ. ಬಡ ರಾಷ್ಟ್ರಗಳಲ್ಲಿ ಇಂತಹ ಪ್ರಕರಣಗಳಿಗೆ ಈ ಅಂಶಗಳು ಕೇವಲ ಶೇಕಡಾ 12ರಷ್ಟು ಕಾರಣವಾಗಿವೆ. ಬದಲಾಗಿ ಕಠಿಣ ದೈಹಿಕ ಶ್ರಮ, ಸಾಂಕ್ರಾಮಿಕ ರೋಗಗಳು, ಸೂಕ್ತ ವೈದ್ಯಕೀಯ ಸೌಲಭ್ಯಗಳ ಕೊರತೆಯು ಅಲ್ಲಿನ ಜನರು ಅನುಭವಿಸುವ ತೀವ್ರ ನೋವಿಗೆ ಪ್ರಮುಖ ಕಾರಣಗಳಾಗಿವೆ.

ಬೆನ್ನು ನೋವು, ಬೊಜ್ಜಿನ ಪ್ರಭಾವ: ಬೆನ್ನು ನೋವು ಜಾಗತಿಕವಾಗಿ ವ್ಯಾಪಕ ಸಮಸ್ಯೆಯಾಗಿ ಹೊರಹೊಮ್ಮಿದ್ದು, ವಿಶ್ವದ ಜನಸಂಖ್ಯೆಯ ಸುಮಾರು ಶೇಕಡಾ 40ರಷ್ಟು ಜನರ ಮೇಲೆ ಪರಿಣಾಮ ಬೀರುತ್ತಿದೆ. ದೇಹದ ಅಧಿಕ ತೂಕವು ನೇರವಾಗಿ ಪಾದದ ಕೀಲುಗಳು, ಪಾದಗಳ ಮೇಲೆ ಪರಿಣಾಮ ಬೀರುತ್ತದೆ. ಬೊಜ್ಜು ಹೊಂದಿರುವ ವ್ಯಕ್ತಿಗಳು ತಮ್ಮ ಕಾಲುಗಳು, ಪಾದಗಳಲ್ಲಿ ನೋವನ್ನು ಅನುಭವಿಸುವ ಅಪಾಯವನ್ನು ಎರಡು ಪಟ್ಟು ಹೆಚ್ಚಾಗಿ ಎದುರಿಸುತ್ತಾರೆ. ದೈಹಿಕ ನೋವು ಕೆಲಸ ಮಾಡುವ ವಯಸ್ಸಿನ ಜನಸಂಖ್ಯೆಯ ಮೇಲೆ ವಿಶೇಷವಾಗಿ ಮಹಿಳೆಯರ ಮೇಲೆ ಹಾಗೂ ಪ್ರಪಂಚದಾದ್ಯಂತ ಕಡಿಮೆ ಆದಾಯದ ದೇಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸುತ್ತದೆ.

ಮಹಿಳೆಯರ ಆರೋಗ್ಯ ಸಂಬಂಧಿತ ದೂರುಗಳನ್ನು ಕಡೆಗಣಿಸದೆ ಇವುಗಳ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಸೂಕ್ತ ಗಮನದೊಂದಿಗೆ ಅವುಗಳನ್ನು ಪರಿಹರಿಸುವುದು ಅತ್ಯಗತ್ಯ.

ಹೆಚ್ಚಿನ ಮಾಹಿತಿ ಈ ವೆಬ್​ಸೈಟ್​ ಅನ್ನು ವೀಕ್ಷಿಸಬಹುದು:

https://www.nature.com/articles/s41591-026-04696-w

ಇವುಗಳನ್ನೂ ಓದಿ:

  1. 30 ವರ್ಷದೊಳಗಿನವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಲು ಕಾರಣವೇನು? ನರರೋಗ ತಜ್ಞರು ತಿಳಿಸುವುದೇನು?
  2. ಇದೊಂದು ಚಿಕ್ಕ ಕಾರ್ಯದಿಂದ ಹಲವು ಪ್ರಕಾರದ ಕ್ಯಾನ್ಸರ್ ಅಪಾಯ ತಗ್ಗಿಸಲು ಸಾಧ್ಯ: ಸಂಶೋಧನೆ
  3. ಮಧುಮೇಹ ಹಾಗೂ ದೇಹದ ತೂಕ ನಿಯಂತ್ರಿಸಲು ಐದು ನಿಮಿಷಗಳ ಚಿಕ್ಕ ನಡಿಗೆ ಅತ್ಯುತ್ತಮವೇ? ಏನಿದು ಮೈಕ್ರೋ ವಾಕಿಂಗ್?
  4. ಕೆಲವು ದೈನಂದಿನ ಅಭ್ಯಾಸಗಳಿಂದ ಕಣ್ಣಿನ ದೃಷ್ಟಿಗೆ ನಿಧಾನವಾಗಿ ಹಾನಿ: ತಜ್ಞರು ತಿಳಿಸುವುದೇನು?
  5. ನಾನಾ ಪಾಟೇಕರ್, ಸಿದ್ಧಾರ್ಥ್ ಶುಕ್ಲಾ, ಸತೀಶ್ ಕೌಶಿಕ್ ಸೇರಿ ಅನೇಕ ಪ್ರಸಿದ್ಧ ವ್ಯಕ್ತಿಗಳು ಹೃದಯ ಸ್ತಂಭನದಿಂದ ಸಾವು: ತಡೆಯುವುದು ಹೇಗೆ?