ಮಾನ್ಸೂನ್ನಲ್ಲಿ ಕೀಲು ನೋವು ಏಕೆ ಹೆಚ್ಚಾಗುತ್ತದೆ? ಈ ಸಮಸ್ಯೆಗೆ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ವೈದ್ಯರ ಸಲಹೆ
ಮಳೆಗಾಲದಲ್ಲಿ ಕೀಲು ನೋವು ಉಲ್ಬಣವಾಗಲು ಕಾರಣಗಳೇನು? ಆರಂಭವಾದ ತಕ್ಷಣ ಅನೇಕರಿಗೆ ಮೊಣಕಾಲು ನೋವು ಶುರುವಾಗುತ್ತದೆ? ಇದನ್ನು ತಡೆಗಟ್ಟುವ ಕ್ರಮಗಳೇನು ಎಂಬುದನ್ನು ತಿಳಿಯೋಣ. ಹುಚ್ಚೇಶ್ವರ ಅಣ್ಣಿಗೇರಿ ಬರೆದಿರುವ ಈ ಕುರಿತು ಸ್ಟೋರಿ ಇಲ್ಲಿದೆ.


Published : July 4, 2026 at 5:07 PM IST
Joint Pain Increase In Monsoon: ಮಳೆಗಾಲದಲ್ಲಿ ಕೀಲು ನೋವು ಕಾಣಿಸಲು ವಾಯುಮಂಡಲದ ಒತ್ತಡದಲ್ಲಿನ ಇಳಿಕೆ, ಗಾಳಿಯಲ್ಲಿನ ಅತಿಯಾದ ತೇವಾಂಶ ಹಾಗೂ ತಂಪಾದ ವಾತಾವರಣ ಪ್ರಮುಖ ಕಾರಣಗಳಾಗಿವೆ. ಹವಾಮಾನ ಬದಲಾವಣೆಗಳು ದೇಹದ ಕೀಲುಗಳು, ಇವುಗಳ ಸುತ್ತಲಿನ ಸ್ನಾಯುಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಮಳೆ ಬರುವ ಮುನ್ನ ವಾತಾವರಣದಲ್ಲಿ ಬ್ಯಾರೊಮೆಟ್ರಿಕ್ (ವಾಯುಮಂಡಲದ) ಒತ್ತಡ ಕಡಿಮೆಯಾಗುತ್ತದೆ. ಇದರಿಂದಾಗಿ ಕೀಲುಗಳ ಸುತ್ತಲಿನ ಮೃದು ಅಂಗಾಂಶಗಳು ಮತ್ತು ಸೈನೋವಿಯಲ್ ದ್ರವವು ಸ್ವಲ್ಪ ವಿಸ್ತರಣೆಗೊಂಡು, ನರಗಳ ಮೇಲೆ ಒತ್ತಡ ಹೇರುವುದರಿಂದ ನೋವು ಉಂಟಾಗುತ್ತದೆ.
ಗಾಳಿಯಲ್ಲಿ ತೇವಾಂಶ ಹೆಚ್ಚಾದಾಗ ಕೀಲುಗಳಲ್ಲಿನ ದ್ರವವು ದಪ್ಪಗಾಗಬಹುದು ಇಲ್ಲವೇ ಕೀಲುಗಳ ಒಳಭಾಗದಲ್ಲಿ ಸೂಕ್ಷ್ಮವಾದ ಊತ ಕಾಣಿಸಿಕೊಳ್ಳಬಹುದು. ಇದು ಕೀಲುಗಳ ಚಲನೆಯನ್ನು ಬಿಗಿಗೊಳಿಸುತ್ತದೆ. ಮಳೆಗಾಲದ ತಂಪು ಗಾಳಿಯು ದೇಹದ ಸ್ನಾಯುಗಳು ಮತ್ತು ರಕ್ತನಾಳಗಳು ಸಂಕುಚಿತಗೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ರಕ್ತ ಪರಿಚಲನೆ ಕಡಿಮೆಯಾಗಿ ಕೀಲುಗಳಲ್ಲಿ ಜಡತ್ವ ಹಾಗೂ ಬಿಗಿತ ಕೂಡ ಹೆಚ್ಚಾಗುತ್ತದೆ.
ನಿರಂತರ ಮಳೆಯಿಂದಾಗಿ ಜನರು ಹೆಚ್ಚಾಗಿ ಮನೆಗಳಲ್ಲೇ ಉಳಿಯುತ್ತಾರೆ. ವಾಕಿಂಗ್ ಮತ್ತು ವ್ಯಾಯಾಮದ ಕೊರತೆಯಿಂದ ಕೀಲುಗಳು ಸರಿಯಾಗಿ ಚಲಿಸದೆ ನೋವು ಮತ್ತು ಬಿಗಿತ ತೀವ್ರಗೊಳ್ಳುತ್ತದೆ. ಈಗಾಗಲೇ ಸಂಧಿವಾತ (ಆರ್ಥರೈಟಿಸ್) ಇರುವವರಿಗೆ ಅಥವಾ ಹಳೆಯ ಮೂಳೆ ಗಾಯಗಳಾದವರಿಗೆ ಹವಾಮಾನದ ಈ ಸಣ್ಣ ಬದಲಾವಣೆಗಳು ಬೇಗನೆ ತಟ್ಟುತ್ತವೆ.

ಮಾನ್ಸೂನ್ ಸಮಯದಲ್ಲಿ ತಂಪು ಅಧಿಕವಾಗಿರುವ ಸಂದರ್ಭದಲ್ಲಿ ತಕ್ಷಣ ಮೊಣಕಾಲುಗಳು, ಭುಜಗಳು, ಕೆಳ ಬೆನ್ನು ಮತ್ತು ಕಣಕಾಲುಗಳಲ್ಲಿ ನೋವು ಅಥವಾ ಬಿಗಿತ ಪ್ರಾರಂಭವಾಗುತ್ತದೆ. ಗಮನಾರ್ಹವಾಗಿ ಈ ಸಮಸ್ಯೆ ಸಂಧಿವಾತ ರೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅನೇಕ ಆರೋಗ್ಯವಂತ ವ್ಯಕ್ತಿಗಳಿಗೆ ಕೂಡ ಮಳೆಗಾಲದಲ್ಲಿ ಕೀಲು ನೋವಿನ ಸಮಸ್ಯೆ ಕಾಡಬಹುದು.
ಮಳೆಗಾಲದಲ್ಲಿ ಈ ನೋವಿಗೆ ಹಲವಾರು ಅಂಶಗಳು ಕಾರಣವಾಗಬಹುದು, ಈ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಈ ಸಮಯದಲ್ಲಿ ಕೀಲು ನೋವು ಏಕೆ ಹೆಚ್ಚಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಹಾಗೂ ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂಬುದರ ಬಗ್ಗೆ ಶೃಂಗೇರಿಯ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆರ್ಥೋಪೆಡಿಕ್ ಡಾ.ಅಭಿಷೇಕ್ (ಎಂಬಿಬಿಎಸ್ ಎಂಎಸ್- ಆರ್ಥೋ, ಎಂಆರ್‌ಸಿಎಸ್, ಗ್ಲಾಸ್ಕೊ, ಯು.ಕೆ) ವಿವರಿಸಿದ್ದಾರೆ.
ಮಳೆಗಾಲದಲ್ಲಿ ಕೀಲು ನೋವು ಏಕೆ ಹೆಚ್ಚಾಗುತ್ತದೆ ಗೊತ್ತೇ?
ವಾತಾವರಣದ ಒತ್ತಡದಲ್ಲಿ ಬದಲಾವಣೆಗಳು: ಮಳೆಗಾಲದಲ್ಲಿ ವಾತಾವರಣದ ಒತ್ತಡ ಕಡಿಮೆಯಾಗುತ್ತದೆ, ಕೀಲುಗಳ ಸುತ್ತಲಿನ ಅಂಗಾಂಶಗಳ ಮತ್ತು ಸೈನೋವಿಯಲ್ ದ್ರವವು ಸ್ವಲ್ಪ ವಿಸ್ತರಣೆಗೊಂಡು ಒತ್ತಡ ಉಂಟಾಗಲು ಕಾರಣವಾಗುತ್ತದೆ. ಇದರಿಂದಾಗಿ ಕೀಲುಗಳ ಸುತ್ತಲಿನ ಮೃದು ಅಂಗಾಂಶಗಳು ನರಗಳ ಮೇಲೆ ಒತ್ತಡ ಹೇರುವುದರಿಂದ ನೋವು ಹೆಚ್ಚಾಗುತ್ತದೆ. ಇದು ಮೊಣಕಾಲುಗಳು ಮತ್ತು ಇತರೆ ಕೀಲುಗಳಲ್ಲಿ ನೋವು ಮತ್ತು ಬಿಗಿತ ಅಧಿಕ ಕಾಣಿಸುತ್ತದೆ.
ಹೆಚ್ಚಿದ ಆರ್ದ್ರತೆಯ ಪರಿಣಾಮ: ಗಾಳಿಯಲ್ಲಿ ತೇವಾಂಶ ಹೆಚ್ಚಾದಾಗ ಕೀಲುಗಳಲ್ಲಿನ ದ್ರವವು ದಪ್ಪಗಾಗಬಹುದು ಇಲ್ಲವೇ ಕೀಲುಗಳ ಒಳಭಾಗದಲ್ಲಿ ಸೂಕ್ಷ್ಮವಾದ ಊತ ಉಂಟಾಗಬಹುದು. ಇದು ಕೀಲುಗಳ ಚಲನೆಯನ್ನು ಬಿಗಿಗೊಳಿಸುತ್ತದೆ. ಮಾನ್ಸೂನ್ ಸಮಯದಲ್ಲಿ ಗಾಳಿಯಲ್ಲಿನ ಆರ್ದ್ರತೆಯ ಮಟ್ಟವು ಸ್ನಾಯುಗಳು, ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಬಿಗಿತ ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

ಕಡಿಮೆ ದೈಹಿಕ ಚಟುವಟಿಕೆ: ನಿರಂತರ ಮಳೆಯಿಂದಾಗಿ ಜನರು ಹೆಚ್ಚಾಗಿ ಮನೆಗಳಲ್ಲೇ ಉಳಿಯಬೇಕಾಗುತ್ತದೆ. ಇದರಿಂದ ಶಾರೀರಿಕ ಚಟುವಟಿಕೆಗಳ ಕೊರತೆಗೆ ಕಾರಣವಾಗುತ್ತದೆ. ವಾಕಿಂಗ್ ಸೇರಿದಂತೆ ವ್ಯಾಯಾಮದ ಕೊರತೆಯಿಂದಾಗಿ ಕೀಲುಗಳು ಸರಿಯಾಗಿ ಚಲಿಸದೆ ಇರುವುದು ನೋವಿನ ಜೊತೆಗೆ ಬಿಗಿತ ತೀವ್ರಗೊಳ್ಳುತ್ತದೆ. ಜನರು ಮಳೆಯ ಸಮಯದಲ್ಲಿ ಓಡಾಡುವುದು ತುಂಬಾ ವಿರಳವಾಗಿರುತ್ತದೆ. ದೇಹಕ್ಕೆ ನಿಯಮಿತ ಪ್ರಮಾಣದ ಚಲನೆಯು ಕಡಿಮೆಯಾಗುತ್ತದೆ. ದೀರ್ಘಕಾಲದವರೆಗೆ ಒಂದೇ ಕಡೆಯಲ್ಲಿ ಕುಳಿತುಕೊಳ್ಳುವುದು ಕೀಲು ನೋವನ್ನು ಉಲ್ಬಣಗೊಳಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಹಳೆಯ ಗಾಯಗಳ ಪರಿಣಾಮ: ಈಗಾಗಲೇ ಸಂಧಿವಾತ (ಆರ್ಥರೈಟಿಸ್) ಸಮಸ್ಯೆಯಿಂದ ಬಳುತ್ತಿರುವವರು ಇಲ್ಲವೇ ಹಳೆಯ ಮೂಳೆ ಗಾಯಗಳಾದವರಿಗೆ ಹವಾಮಾನದ ಈ ಸಣ್ಣ ಬದಲಾವಣೆಗಳ ಪರಿಣಾಮವು ಬೇಗನೇ ತಟ್ಟುತ್ತವೆ. ಮೊಣಕಾಲು, ಬೆನ್ನು ಹಾಗೂ ವಿವಿಧ ಕೀಲು ಗಾಯಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹವಾಮಾನ ಬದಲಾದಾಗ ತೀವ್ರ ನೋವು ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹವಾಮಾನ ಏರಿಳಿತಗಳ ಸಮಸಯದಲ್ಲಿ ಹಳೆಯ ಗಾಯಗಳು ಹೆಚ್ಚು ಸೂಕ್ಷ್ಮವಾಗುತ್ತವೆ. ಶೀತ ಮತ್ತು ಆರ್ದ್ರ ವಾತಾವರಣವು ಸ್ನಾಯುಗಳು ಗಟ್ಟಿಯಾಗಲು ಕಾರಣವಾಗುತ್ತದೆ. ಇದು ಕೀಲುಗಳ ಮೇಲೆ ಹೆಚ್ಚುವರಿ ಒತ್ತಡ ಉಂಟು ಮಾಡುತ್ತದೆ ಮತ್ತು ನೋವಿನ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಯಾವ ವಯಸ್ಸಿಯನಲ್ಲಿ ಹೆಚ್ಚು ಸಂಧಿವಾತ ಕಾಣಿಸುತ್ತದೆ: ಮಳೆಗಾಲದಲ್ಲಿ ಸಾಮಾನ್ಯವಾಗಿ ಕೆಮ್ಮು ಮತ್ತು ಶೀತದ ಸಮಸ್ಯೆ ಕಾಣಿಸುತ್ತದೆ. ಆದರೆ, ಎಲ್ಲರ ಮೇಲೆ ಮೂಳೆ ಮತ್ತು ಕೀಲು ನೋವು ಕಾಣಿಸುವುದಿಲ್ಲ. ಈಗಾಗಲೇ ಕೀಲು (ಸಂಧಿವಾತ) ನೋವು ಹಾಗೂ ಮೂಳೆ ದುರ್ಬಲತೆ, ಮೂಳೆ ಸವೆತದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೆಲವು ಲಕ್ಷಣಗಳು ಕಾಣಿಸುತ್ತದೆ. ಈ ಸಂಧಿವಾತವು ವಯಸ್ಸಾದವರಲ್ಲಿ ಕಾಣಿಸುವ ಸಾಮಾನ್ಯ ಸಮಸ್ಯೆಯಾಗಿದೆ. 40 ವರ್ಷ ಮೇಲ್ಪಟ್ಟ ಮಹಿಳೆಯಲ್ಲಿ ಹಾಗೂ 60 ಮೇಲ್ಪಟ್ಟ ಪುರಿಷರಲ್ಲಿ ಅಸ್ಥಿಸಂಧಿವಾತ (Osteoarthritis) ಕಾಣಿಸುತ್ತದೆ. ಕೀಲುಗಳಲ್ಲಿ ಸವೆತ ಶುರುವಾಗುವುದರಿಂದ ಅಥವಾ ಮಂಡಿ ಮೇಲೆ ಹೆಚ್ಚು ಒತ್ತಡ ಉಂಟು ಮಾಡುವ ಕಾರ್ಯಗಳಿಂದ ಹೆಚ್ಚು ಪರಿಣಾಮ ಬೀರುತ್ತದೆ. ಅಸ್ಥಿಸಂಧಿವಾತವು ಕೀಲುಗಳಲ್ಲಿನ ಕಾರ್ಟಿಲೆಜ್ ಸವೆತದಿಂದ ಉಂಟಾಗುತ್ತದೆ. ರುಮಟಾಯ್ಡ್ ಸಂಧಿವಾತವು ದೇಹದ ರೋಗನಿರೋಧಕ ವ್ಯವಸ್ಥೆಯು ಕೀಲುಗಳ ಮೇಲೆ ದಾಳಿ ಮಾಡುವುದರಿಂದ ಉಂಟಾಗುವ ಆಟೋಇಮ್ಯೂನ್ ಕಾಯಿಲೆಯಾಗಿದೆ. ಇದಕ್ಕೆ ಸಾಮಾನ್ಯ ಪರಿಹಾರವೆಂದರೆ, ಮನೆಯಲ್ಲಿ ಶಾಖ ಚಿಕಿತ್ಸೆ ನೀಡುವುದು ಉತ್ತಮ. ಪ್ರಮುಖವಾಗಿ ಬಿಸಿನೀರಿನ ಸ್ನಾನ ಮಾಡುವುದು, ಹಾಟ್ ಬ್ಯಾಗ್ ಬಳಕೆ ಮಾಡುವುದು ಒಳ್ಳೆಯದು. ಕೀಲು ನೋವು ಅಥವಾ ಸಂಧಿವಾತ ಅಧಿಕವಾಗಿದ್ದರೆ, ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ, ಅವರು ಸಮಸ್ಯೆ ತೀವ್ರತೆ ಗಮನಿಸಿ, ನೋವು ನಿವಾರಕಗಳು ಮಾತ್ರೆಗಳು, ಫಿಸಿಯೋಥೆರಪಿ ಮತ್ತು ತೀವ್ರತರವಾದ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡುತ್ತಾರೆ.
ಡಾ.ಅಭಿಷೇಕ್, ಖ್ಯಾತ ಆರ್ಥೋಪೆಡಿಕ್ ತಜ್ಞ, ಶೃಂಗೇರಿಯ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಕೀಲು ನೋವು ನಿವಾರಣೆಗಾಗಿ ಪರಿಹಾರ ಕ್ರಮಗಳೇನು?
- ತಣ್ಣನೆಯ ಗಾಳಿಗೆ ಒಡ್ಡಿಕೊಳ್ಳಬಾರದು. ಕೀಲುಗಳ ಭಾಗಕ್ಕೆ ಸಾಕ್ಸ್ ಅಥವಾ ಉಣ್ಣೆಯ ಬಟ್ಟೆಗಳನ್ನು ಧರಿಸುವ ಮೂಲಕ ಬೆಚ್ಚಗಿಡಬೇಕು.
- ಕೀಲುಗಳ ಬಿಗಿತವನ್ನು ತಡೆಯಲು ಮನೆಯೊಳಗೇ ಮಾಡಬಹುದಾದ ಲಘು ಸ್ಟ್ರೆಚಿಂಗ್ ಹಾಗೂ ಯೋಗಾಸನಗಳನ್ನು ಮಾಡಬೇಕಾಗುತ್ತದೆ.
- ನೋವಿರುವ ಕೀಲುಗಳ ಮೇಲೆ ಬಿಸಿ ನೀರಿನ ಬ್ಯಾಗ್ ಇಲ್ಲವೇ ಹೀಟಿಂಗ್ ಪ್ಯಾಡ್ ಬಳಸಿ ಶಾಖ ಕೊಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಹಾಗೂ ನೋವು ಕಡಿಮೆಯಾಗುತ್ತದೆ.
- ಸಾಕಷ್ಟು ನೀರು ಕುಡಿಯಿರಿ ಹಾಗೂ ಒಮೆಗಾ-3 ಕೊಬ್ಬಿನಾಮ್ಲಗಳು ಹೆಚ್ಚಿರುವ ಆಹಾರಗಳನ್ನು ಸೇವಿಸಿ ಉರಿಯೂತ ನಿಯಂತ್ರಿಸಬೇಕಾಗುತ್ತದೆ.
- ದೀರ್ಘಕಾಲ ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ.
- ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.
- ಕ್ಯಾಲ್ಸಿಯಂ, ವಿಟಮಿನ್ ಡಿ ಹಾಗೂ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.
- ಸಾಕಷ್ಟು ನೀರು ಕುಡಿಯುವ ಮೂಲಕ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಿ.
- ಕೀಲು ನೋವು ಯಾವ ಭಾಗದಲ್ಲಿ (ಮೊಣಕಾಲು, ಬೆನ್ನು ಅಥವಾ ಕೈ ಬೆರಳುಗಳು) ಹೆಚ್ಚಾಗಿ ಕಾಣಿಸಿದರೆ, ವೈದ್ಯರ ಸಲಹೆ ಪಡೆದುಕೊಳ್ಳಲು ಹಿಂದೇಟು ಹಾಕಬಾರದು.
ಈ ಚಿಹ್ನೆಗಳು ಕಾಣಿಸಿದರೆ ವೈದ್ಯರನ್ನು ಭೇಟಿ ಮಾಡಿ: ಕೀಲು ನೋವು ಹಲವಾರು ದಿನಗಳವರೆಗೆ ಮುಂದುವರಿದರೆ, ಊತ ಹೆಚ್ಚಾದರೆ, ಚಲನಶೀಲತೆಗೆ ತುಂಬಾ ಕಷ್ಟವಾದರೆ ಕೀಲುಗಳು ಕೆಂಪಾಗಿದ್ದರೆ ಅಥವಾ ಬಿಸಿಯಾಗಿದ್ದರೆ, ಜ್ವರದಿಂದ ತೀವ್ರವಾದ ನೋವು ಕಾಣಿಸಿಕೊಂಡರೆ ಇಲ್ಲವೇ ನೋವು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗಲು ಪ್ರಾರಂಭಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಕಾಲಿಕ ಚಿಕಿತ್ಸೆಯು ಮುಂದೆ ಎದುರಾಗಲಿರುವ ಗಂಭೀರ ತೊಡಕುಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಆರ್ಥೋಪೆಡಿಕ್ ಡಾ.ಅಭಿಷೇಕ್ ಸಲಹೆ ನೀಡುತ್ತಾರೆ.
ಉತ್ತಮ ಆಹಾರ ಕ್ರಮದೊಂದಿಗೆ ಕಡ್ಡಾಯ ವ್ಯಾಯಾಮ: ಕೀಲು ಸಮಸ್ಯೆ ಪರಿಹಾರಕ್ಕಾಗಿ ಪ್ರಮುಖವಾಗಿ ಅಧಿಕ ಪ್ರೋಟೀನ್ ಇರುವ ಆಹಾರಗಳಾದ, ಅದರಲ್ಲೂ ಸಸ್ಯಾಹಾರಿಗಳು ಮಸೂರ್, ಕಡಲೆ ಬೇಳೆ, ತೊಗರಿ ಬೇಳೆ ಸೇರಿದಂತೆ ವಿವಿಧ ಬೇಳೆ ಮತ್ತು ಕಾಳುಗಳನ್ನು ಸೇವನೆ ಮಾಡಬೇಕಾಗುತ್ತದೆ. ಮಾಂಸಾಹಾರಿಗಳು ಮುಖ್ಯವಾಗಿ ಮೊಟ್ಟೆ, ಚಿಕನ್, ಮೀನು ಹಾಗೂ ವಿವಿಧ ಹಸಿರು ಸೊಪ್ಪು ಹಾಗೂ ವಿವಿಧ ತರಕಾರಿಗಳು ಜೊತೆಗೆ ಸೇಬು, ಕಿತ್ತಳೆ, ದಾಳಿಂಬೆ ಸೇರಿದಂತೆ ವಿವಿಧ ಹಣ್ಣು ಸೇವಿಸಬೇಕಾಗುತ್ತದೆ. ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಅಧಿಕವಿರುವ ನಿಮ್ಮ ಆಹಾರ ಕ್ರಮದಲ್ಲಿ ಸೇವನೆ ಮಾಡಬೇಕಾಗುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಾದ ತುಪ್ಪ, ಮೊಸರು, ಬೆಣ್ಣೆಯನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ, ಇದಕ್ಕಾಗಿ ಸಾಕಷ್ಟು ನೀರನ್ನು ಕುಡಿಯಬೇಕಾಗುತ್ತದೆ. ಜೊತೆಗೆ ಅತಿ ಎಣ್ಣೆಯುಕ್ತ ಪದಾರ್ಥಗಳು ಹಾಗೂ ಸಂಸ್ಕರಿಸಿದ ಆಹಾರಗಳು ಹಾಗೂ ಫಾಸ್ಟ್ ಫುಡ್ನ್ನು ತ್ಯಜಿಸಬೇಕಾಗುತ್ತದೆ. ಪ್ರತಿದಿನ ಕಡ್ಡಾಯವಾಗಿ 30 ನಿಮಿಷಗಳವರೆಗೆ ವ್ಯಾಯಾಮ ಮಾಡುವುದು ಕಡ್ಡಾಯವಾಗಿರುತ್ತದೆ. ಸಮತ್ತಟ್ಟಾದ ನೆಲದ ಮೇಲೆ ವಾಕಿಂಗ್ ಮಾಡಬಹುದು. ಸ್ಟ್ರೆಚ್ಚಿಂಗ್ ವ್ಯಾಯಾಮ ಹಾಗೂ ಯೋಗಾಭ್ಯಾಸವನ್ನು ಮಾಡುವುದು ಸಂಧಿವಾತಕ್ಕೆ ಉತ್ತಮ ಪರಿಹಾರವಾಗಿದೆ. ನಿತ್ಯ ಕನಿಷ್ಠ 30 ನಿಮಿಷಗಳವರೆಗೆ ಸೂರ್ಯ ಕಿರಣಗಳಿಗೆ ಒಡ್ಡಿಕೊಳ್ಳುವುದು ಒಳ್ಳೆಯದು.
-ಡಾ.ಅಭಿಷೇಕ್, ಖ್ಯಾತ ಆರ್ಥೋಪೆಡಿಕ್ ತಜ್ಞ, ಶೃಂಗೇರಿಯ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- 1,400ಕ್ಕೂ ಅಧಿಕ ಜನರಿಗೆ ಎಬೋಲಾ ಸೋಂಕು, 400ಕ್ಕೂ ಹೆಚ್ಚು ಮಂದಿ ಸಾವು: ವೈರಸ್ ಪತ್ತೆಗಾಗಿ ನಿರ್ದಿಷ್ಟ ಪರೀಕ್ಷೆಗೆ ಅನುಮೋದಿಸಿದ WHO
- ನಿತ್ಯ ಶೌಚಾಲಯದಲ್ಲಿ 15 ನಿಮಿಷಕ್ಕಿಂತ ಹೆಚ್ಚು ಕಾಲ ಕುಳಿತುಕೊತ್ತೀರಾ?: ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯ: ವೈದ್ಯರ ಎಚ್ಚರಿಕೆ
- ಕ್ರೂಸ್ ಹಡಗಿನಲ್ಲಿ ಹ್ಯಾಂಟವೈರಸ್ ಪ್ರಕರಣಗಳ ಹರಡುವಿಕೆಯಲ್ಲಿ ತಗ್ಗಿದೆ: WHO ಘೋಷಣೆ
- ನಿಮ್ಮ ಕಿವಿಯೊಳಗೆ ಯಾವುದೇ ಕೀಟ ಪ್ರವೇಶಿಸಿದಾಗ ಏನು ಮಾಡಬೇಕು ಗೊತ್ತೇ? ತಜ್ಞರು ಸೂಚಿಸುವ ಸಲಹೆಗಳೇನು?
- ತಂದೆಯ ಮದ್ಯಪಾನ ಸೇವನೆಯಿಂದ ಮಗುವಿನಲ್ಲಿ ಜನ್ಮ ದೋಷಗಳ ಅಪಾಯ ಹೆಚ್ಚು: ಸಂಶೋಧನೆಗಳ ಎಚ್ಚರಿಕೆ
- ಮಳೆಗಾಲದಲ್ಲಿ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತದೆಯೇ? ಇಮ್ಯೂನಿಟಿ ಪವರ್ ವೃದ್ಧಿಸುವ ಮನೆ ಮದ್ದುಗಳಿವು!

