30 ವರ್ಷದೊಳಗಿನವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಲು ಕಾರಣವೇನು? ನರರೋಗ ತಜ್ಞರು ತಿಳಿಸುವುದೇನು?
ಹಿಂದೆ ನೆನಪಿನ ಶಕ್ತಿ ಹಾಗೂ ಗ್ರಹಿಕೆ ಸಾಮರ್ಥ್ಯದ ಕುಸಿತವು ಕೇವಲ ವಯಸ್ಸಾದವರಲ್ಲಿ ನಿರ್ದಿಷ್ಟವಾಗಿ 60 ಅಥವಾ 65 ವರ್ಷಗಳ ನಂತರ ಮಾತ್ರ ಕಂಡುಬರುತ್ತದೆ. ಯುವಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಲು ಕಾರಣವೇನು ಎಂಬುದನ್ನು ತಿಳಿಯೋಣ.


Published : October 10, 2026 at 4:36 PM IST
ಇಂದಿನ ಜಗತ್ತಿನಲ್ಲಿ ಮಾನಸಿಕ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದು ಅತ್ಯಗತ್ಯ. ದೈಹಿಕ ಕಾಯಿಲೆಗಳಿಗಾಗಿ ಜನರು ತಕ್ಷಣ ವೈದ್ಯರನ್ನು ಸಂಪರ್ಕಿಸಿದರೂ ಸಣ್ಣಪುಟ್ಟ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು (ಉದಾಹರಣೆಗೆ ನಿರಂತರ ದುಃಖ, ಅತಿಯಾದ ಆತಂಕ ಅಥವಾ ನಿದ್ರಾಹೀನತೆ) ನಿರ್ಲಕ್ಷಿಸುವ ಪ್ರವೃತ್ತಿ ಹೊಂದಿರುತ್ತಾರೆ. ಇವೇ ಸಮಸ್ಯೆಗಳು ಮುಂದೆ ಗಂಭೀರ ಮಾನಸಿಕ ಆರೋಗ್ಯ ಸ್ಥಿತಿಗಳಾಗಿ ಉಲ್ಬಣಗೊಳ್ಳಬಹುದು.
30 ವರ್ಷದೊಳಗಿನವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದೇಕೆ?: ಆಧುನಿಕ ಜೀವನಶೈಲಿಗೆ ಸಂಬಂಧಿಸಿದ ಅತಿಯಾದ ಒತ್ತಡ, ಪರದೆಯ ಮುಂದೆ ಕಳೆಯುವ ಸಮಯ ಹಾಗೂ ಡಿಜಿಟಲ್ ಅತಿಯಾದ ಬಳಕೆ ಇವು 30ರ ವಯಸ್ಸಿನ ಸುಮಾರಿಗೆ ಮೆದುಳಿನ ಆರೋಗ್ಯ ಕುಸಿಯಲು ಪ್ರಮುಖ ಕಾರಣಗಳಾಗಿವೆ.
ವೈದ್ಯಕೀಯ ಪರಿಭಾಷೆಯಲ್ಲಿ ಈ ಸ್ಥಿತಿಗಳನ್ನು 'ಡಿಜಿಟಲ್ ಸ್ಯೂಡೋ-ಡಿಮೆನ್ಶಿಯಾ' (digital pseudo-dementia) ಇಲ್ಲವೇ 'ಬ್ರೈನ್ ಫಾಗ್' (brain fog ಅಸ್ಪಷ್ಟ ಚಿಂತನೆ ಅಥವಾ ಮಂದಗತಿಯ ಆಲೋಚನೆ) ಎಂದು ಕರೆಯಲಾಗುತ್ತದೆ. ಹಿಂದೆ, ನೆನಪಿನ ಶಕ್ತಿ ಹಾಗೂ ಗ್ರಹಿಕೆ ಸಾಮರ್ಥ್ಯದ ಕುಸಿತವು ಕೇವಲ ವಯಸ್ಸಾದವರಲ್ಲಿ ನಿರ್ದಿಷ್ಟವಾಗಿ 60 ಇಲ್ಲವೇ 65 ವರ್ಷಗಳ ಬಳಿಕ ಮಾತ್ರ ಕಂಡುಬರುತ್ತದೆ ಎಂದು ನಂಬಲಾಗಿತ್ತು. ಇದೀಗ 30ರ ವಯಸ್ಸಿನ ಯುವಕ, ಯುವತಿಯರಲ್ಲೂ ಮೆದುಳಿನ ಕಾರ್ಯಕ್ಷಮತೆಯ ಕುಸಿತ ಕಂಡುಬರುತ್ತಿದೆ.
ಜೈಪುರದ ಸಿ.ಕೆ. ಬಿರ್ಲಾ ಆಸ್ಪತ್ರೆಗಳ ಹಿರಿಯ ಸಲಹೆಗಾರ ನರರೋಗ ತಜ್ಞರಾದ ಡಾ.ಕಪಿಲ್ ಖಂಡೇಲ್ವಾಲ್ ಅವರು ತಿಳಿಸುವ ಪ್ರಕಾರ, ತಲೆನೋವು, ಏಕಾಗ್ರತೆಯ ಕೊರತೆ, ನಿದ್ರಾಹೀನತೆ, ನೆನಪಿನ ಶಕ್ತಿಯ ಕುಸಿತ, ಆತಂಕ ಹಾಗೂ ಮಾನಸಿಕ ಆಯಾಸದಂತಹ ಸಮಸ್ಯೆಗಳು ಇತ್ತೀಚೆಗೆ 30ರ ವಯಸ್ಸಿನವರಲ್ಲಿ ಸಾಮಾನ್ಯವಾಗುತ್ತಿವೆ. ಆಧುನಿಕ ಜೀವನಶೈಲಿ, ಡಿಜಿಟಲ್ ಅಭ್ಯಾಸಗಳು ಹಾಗೂ ಅತಿಯಾದ ಮಾನಸಿಕ ಒತ್ತಡವು ನಮ್ಮ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ನೇರ ಪರಿಣಾಮ ಬೀರುತ್ತಿವೆ. ಈ ಸ್ಥಿತಿಯು ಶಾಶ್ವತ ಕಾಯಿಲೆಯಲ್ಲ, ಬದಲಿಗೆ ನಿಮ್ಮ ಮೆದುಳಿಗೆ ವಿಶ್ರಾಂತಿ ಹಾಗೂ ಸೂಕ್ತ ಆರೈಕೆಯ ಅಗತ್ಯವಿದೆ ಎಂಬುದನ್ನು ಸೂಚಿಸುವ ಎಚ್ಚರಿಕೆಯ ಸಂಕೇತವಾಗಿದೆ.
ಯುವಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳಿವು: ಇಂದಿನ ಯುವ ಪೀಳಿಗೆಯು ಕಂಪ್ಯೂಟರ್ಗಳು, ಮೊಬೈಲ್ ಫೋನ್ಗಳು ಹಾಗೂ ಟೆಲಿವಿಷನ್ಗಳ ಮುಂದೆ ಗಂಟೆಗಟ್ಟಲೆ ಸಮಯ ಕಳೆಯುತ್ತದೆ. ಅವರಿಗೆ ನಿರ್ದಿಷ್ಟ ನಿದ್ರೆಯ ವೇಳಾಪಟ್ಟಿ ಇರುವುದಿಲ್ಲ. ಇದರ ಪರಿಣಾಮವಾಗಿ ತೀವ್ರ ಮಟ್ಟದ ಆತಂಕವನ್ನು ಎದುರಿಸುತ್ತಾರೆ. ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಅಪರೂಪವಾಗಿ ಭಾಗವಹಿಸುತ್ತಾರೆ, ಕಳಪೆ ಆಹಾರ ಪದ್ಧತಿಯನ್ನು ಹೊಂದಿರುತ್ತಾರೆ. ಕೆಲವರು ಅತಿಯಾದ ಪ್ರಮಾಣದಲ್ಲಿ ತಂಬಾಕು ಅಥವಾ ಮದ್ಯಪಾನ ಸೇವಿಸುತ್ತಾರೆ. ಒಟ್ಟಾರೆಯಾಗಿ ಈ ಅಂಶಗಳು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಒಂದು ಚಕ್ರವನ್ನು ಸೃಷ್ಟಿಸುತ್ತವೆ. ಇಂತಹ ಪರಿಸ್ಥಿತಿಗಳು ನಿದ್ರೆ, ಭಾವನೆಗಳು, ಏಕಾಗ್ರತೆಯ ಸಾಮರ್ಥ್ಯ ಹಾಗೂ ಗ್ರಹಿಕೆ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು ಎಂದು ಡಾ.ಕಪಿಲ್ ಖಂಡೇಲ್ವಾಲ್ ತಿಳಿಸುತ್ತಾರೆ.
ನರಮಂಡಲದ ಆರೋಗ್ಯ: ಮೆದುಳಿನ ಆರೋಗ್ಯವು ಕೇವಲ ವೃದ್ಧಾಪ್ಯ ಅಥವಾ 60 ವರ್ಷದ ನಂತರದ ವಯಸ್ಸಿಗೆ ಮಾತ್ರ ಸೀಮಿತವಾದ ವಿಷಯವಲ್ಲ. ಬದಲಾಗಿ ಇದು ಜೀವನಪರ್ಯಂತ ಮಾಡಬೇಕಾದ ಗಮನಹರಿಸಬೇಕಾದ ವಿಷಯವಾಗಿದೆ. ಯೌವನ ಹಾಗೂ ಮಧ್ಯವಯಸ್ಸಿನಲ್ಲಿ ನಾವು ಅಳವಡಿಸಿಕೊಳ್ಳುವ ಜೀವನಶೈಲಿಯು, ವಯಸ್ಸಾದಂತೆ ನಮ್ಮ ಮೆದುಳು ಎಷ್ಟು ಕ್ರಿಯಾಶೀಲವಾಗಿ, ಆರೋಗ್ಯಕರವಾಗಿ ಉಳಿಯುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಕ್ರಿಯಾಶೀಲರಾಗಿರುವುದು, ನಿಯಮಿತ ನಿದ್ರೆಯ ಕ್ರಮ ಪಾಲಿಸುವುದು, ಆರೋಗ್ಯಕರ ಆಹಾರ ಸೇವನೆ, ಪ್ರೀತಿಪಾತ್ರರೊಂದಿಗಿನ ಸಂಬಂಧಗಳನ್ನು ಉತ್ತಮವಾಗಿರಿಸಿಕೊಳ್ಳುವುದು, ಒತ್ತಡವನ್ನು ನಿರ್ವಹಿಸುವುದು, ಇವೆಲ್ಲವೂ ಕಾಲಕ್ರಮೇಣ ನಮ್ಮ ಅರಿವಿನ ಹಾಗೂ ನರಮಂಡಲದ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಾರ್ಗಗಳಾಗಿವೆ.
ವೈದ್ಯರ ಮಾತು: ಮೂವತ್ತರ ಹರೆಯದವರು ನಿರಂತರ ತಲೆನೋವು, ನೆನಪಿನ ಶಕ್ತಿ ಅಥವಾ ಏಕಾಗ್ರತೆಯಲ್ಲಿನ ತೊಂದರೆಗಳು, ದೌರ್ಬಲ್ಯ ಅಥವಾ ಮೈ-ಕೈ ಮರಗಟ್ಟುವಿಕೆ, ಅಪಸ್ಮಾರದಂತಹ ಲಕ್ಷಣಗಳು, ವರ್ತನೆಯಲ್ಲಿನ ಗಮನಾರ್ಹ ಬದಲಾವಣೆಗಳು ಅಥವಾ ಮಾತನಾಡುವಲ್ಲಿನ ತೊಂದರೆಗಳಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು, ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಡಾ.ಕಪಿಲ್ ಖಂಡೇಲ್ವಾಲ್ ಸಲಹೆ ನೀಡುತ್ತಾರೆ.
ಇದರರ್ಥ ಎಲ್ಲಾ ಯುವಕರು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಆತಂಕಪಡಬೇಕು ಎಂದಲ್ಲ, ಬದಲಾಗಿ ಇದು ಸೂಕ್ತ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿಹೇಳುತ್ತದೆ. 30 ವರ್ಷದೊಳಗಿನವರಲ್ಲಿ ನಮ್ಮ ಮೆದುಳಿನ ಕುರಿತು ಸೂಕ್ತ ಕಾಳಜಿ ವಹಿಸುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು, ವೃದ್ಧಾಪ್ಯದಲ್ಲಿ ಉತ್ತಮ ಅರಿವಿನ ಹಾಗೂ ನರಮಂಡಲದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಬಹುದು ಎಂದು ಡಾ. ಕಪಿಲ್ ಖಂಡೇಲ್ವಾಲ್ ಸಲಹೆ ನೀಡುತ್ತಾರೆ.
ಇವುಗಳನ್ನೂ ಓದಿ:
- ಇದೊಂದು ಚಿಕ್ಕ ಕಾರ್ಯದಿಂದ ಹಲವು ಪ್ರಕಾರದ ಕ್ಯಾನ್ಸರ್ ಅಪಾಯ ತಗ್ಗಿಸಲು ಸಾಧ್ಯ: ಸಂಶೋಧನೆ
- ಮಧುಮೇಹ ಹಾಗೂ ದೇಹದ ತೂಕ ನಿಯಂತ್ರಿಸಲು ಐದು ನಿಮಿಷಗಳ ಚಿಕ್ಕ ನಡಿಗೆ ಅತ್ಯುತ್ತಮವೇ? ಏನಿದು ಮೈಕ್ರೋ ವಾಕಿಂಗ್?
- ಕೆಲವು ದೈನಂದಿನ ಅಭ್ಯಾಸಗಳಿಂದ ಕಣ್ಣಿನ ದೃಷ್ಟಿಗೆ ನಿಧಾನವಾಗಿ ಹಾನಿ: ತಜ್ಞರು ತಿಳಿಸುವುದೇನು?
- ನಾನಾ ಪಾಟೇಕರ್, ಸಿದ್ಧಾರ್ಥ್ ಶುಕ್ಲಾ, ಸತೀಶ್ ಕೌಶಿಕ್ ಸೇರಿ ಅನೇಕ ಪ್ರಸಿದ್ಧ ವ್ಯಕ್ತಿಗಳು ಹೃದಯ ಸ್ತಂಭನದಿಂದ ಸಾವು: ತಡೆಯುವುದು ಹೇಗೆ?
- ಕೂದಲು ಉದುರುವಿಕೆ ತಡೆಗಟ್ಟಲು, ದಟ್ಟವಾಗಿ ಬೆಳೆಯಲು ಈ ಆಹಾರ ಕ್ರಮ ಬೆಸ್ಟ್: ತಜ್ಞರ ಸಲಹೆ

