ನ್ಯುಮೋನಿಕ್ ಪ್ಲೇಗ್ ಕಾಯಿಲೆ: ಈ ಸೋಂಕಿನ ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?
ನ್ಯುಮೋನಿಕ್ ಪ್ಲೇಗ್ ಕಾಯಿಲೆ ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಶ್ವಾಸಕೋಶದ ಮೇಲಿನ ತೀವ್ರ ಸೋಂಕು ಇದಾಗಿದೆ. ಈ ಕಾಯಿಲೆಯ ಲಕ್ಷಣಗಳೇನು ಹಾಗೂ ತಡೆಗಟ್ಟುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.


Published : October 7, 2026 at 8:03 AM IST
ನ್ಯುಮೋನಿಕ್ ಪ್ಲೇಗ್ (Pneumonic Plague)ಕಾಯಿಲೆಯು ಯೆರ್ಸಿನಿಯಾ ಪೆಸ್ಟಿಸ್ ಬ್ಯಾಕ್ಟೀರಿಯಾದಿಂದ ಶ್ವಾಸಕೋಶದ ಮೇಲೆ ಉಂಟಾಗುವ ಅತ್ಯಂತ ಅಪಾಯಕಾರಿ ಹಾಗೂ ತೀವ್ರವಾದ ಸಾಂಕ್ರಾಮಿಕ ರೋಗವಾಗಿದೆ. ಈ ಕಾಯಿಲೆಯು ಸೋಂಕಿತ ಪ್ರಾಣಿಗಳ (ಮಾರ್ಮಟ್‌ಗಳು ಇತ್ಯಾದಿ) ಸಂಪರ್ಕದಿಂದ ಹಾಗೂ ಸೋಂಕಿತ ಚಿಗಟಗಳ ಕಡಿತದಿಂದ ತಗುಲುತ್ತದೆ. ಸೋಂಕಿತರು ಕೆಮ್ಮಿದಾಗ, ಸೀನಿದಾಗ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಅತಿವೇಗವಾಗಿ ಹರಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಇತ್ತೀಚೆಗೆ ರಷ್ಯಾದ ಸೈಬೀರಿಯಾದಲ್ಲಿರುವ ಪ್ಲೇಗ್ ಸಂಶೋಧನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಮಹಿಳಾ ಉದ್ಯೋಗಿಯೊಬ್ಬರು ಗುರುತಿಸಲಾಗದ ಸೋಂಕಿನಿಂದ ಮೃತಪಟ್ಟಿರುವುದು ವರದಿಯಾಗಿದೆ. ಅವರ ಸಾವಿಗೆ ನ್ಯುಮೋನಿಕ್ ಪ್ಲೇಗ್ ಕಾರಣವಾಗಿರಬಹುದು ಎಂದು ವರದಿಗಳು ತಿಳಿಸುತ್ತಿವೆ. ಆದರೆ, ಇದನ್ನು ಅಧಿಕೃತವಾಗಿ ದೃಢೀಕರಿಸಿಲ್ಲ.
ಸ್ವತಂತ್ರ ರಷ್ಯನ್ ಸುದ್ದಿ ಸಂಸ್ಥೆ ಲ್ಯುಡಿ ಬೈಕಲ್ ವರದಿ ತಿಳಿಸುವ ಪ್ರಕಾರ, ಸೆಪ್ಟಂಬರ್ 25ರಂದು ಪ್ರಯೋಗಾಲಯದ ತಂತ್ರಜ್ಞರೊಬ್ಬರ ಕೈಯಲ್ಲಿ ನ್ಯುಮೋನಿಕ್ ಪ್ಲೇಗ್ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಹೊಂದಿದ್ದ ಪರೀಕ್ಷಾ ಕೊಳವೆ ಒಡೆದಿತ್ತು. ಇದರ ಪರಿಣಾಮವಾಗಿ ಸೋಂಕು ಹರಡುವ ಸಾಧ್ಯತೆಯ ಕುರಿತು ಆತಂಕ ಮೂಡಿಸಿತ್ತು. ರಷ್ಯಾದ ಕೇಂದ್ರ ಆರೋಗ್ಯ ಸಂಸ್ಥೆಯು ನಂತರ, ಈ ವರದಿಯನ್ನು ತಳ್ಳಿಹಾಕಿತ್ತು. ಮಹಿಳೆಯ ಸಾವಿಗೆ ನಿಖರವಾದ ಕಾರಣ ದೃಢಪಟ್ಟಿಲ್ಲ.

ರಷ್ಯಾದ ಮಾಧ್ಯಮ ವರದಿಗಳು ನ್ಯುಮೋನಿಕ್ ಪ್ಲೇಗ್ದಿಂದ ಸಾವು ಸಂಭವಿಸಿದೆ ಎಂದು ಉಲ್ಲೇಖಿಸುತ್ತವೆ. ಆದರೆ, ಇದು ಪ್ಲೇಗ್‌ನಿಂದ ಉಂಟಾದ ನ್ಯುಮೋನಿಯಾವೇ ಅಥವಾ ಸಾಮಾನ್ಯ ನ್ಯುಮೋನಿಯಾವೇ ಎಂಬುದನ್ನು ನಿರ್ಧರಿಸಲು ತನಿಖೆ ಕೂಡ ನಡೆಯುತ್ತಿದೆ. ಇದೀಗ ನ್ಯುಮೋನಿಕ್ ಪ್ಲೇಗ್ ಕಾಯಿಲೆ, ಲಕ್ಷಣಗಳೇನು ಹಾಗೂ ತಡೆಗಟ್ಟುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
ಏನಿದು ನ್ಯುಮೋನಿಕ್ ಪ್ಲೇಗ್?: ನ್ಯುಮೋನಿಕ್ ಪ್ಲೇಗ್ (Pneumonic Plague) ಎಂಬುದು ಯೆರ್ಸಿನಿಯಾ ಪೆಸ್ಟಿಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಗಂಭೀರ, ಮಾರಣಾಂತಿಕ ಸೋಂಕು. ಇದು ಮುಖ್ಯವಾಗಿ ಸೋಂಕಿತ ಇಲಿಗಳು, ಅಳಿಲುಗಳು ಹಾಗೂ ಇತರೆ ಸಣ್ಣ ಪ್ರಾಣಿಗಳ ಮೇಲೆ ವಾಸಿಸುವ ಚಿಗಟಗಳ ಕಡಿತದ ಮೂಲಕ ಹರಡುತ್ತದೆ. ನ್ಯುಮೋನಿಕ್ ಪ್ಲೇಗ್ ಒಂದು ವಿಶಿಷ್ಟ ಮತ್ತು ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದೆ. ಇದು ಶ್ವಾಸಕೋಶಕ್ಕೆ ಸೋಂಕು ತಗುಲಿಸುತ್ತದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಹೊರಬರುವ ಉಸಿರಾಟದ ಹನಿಗಳ ಮೂಲಕ ಇತರರಿಗೆ ಹರಡುತ್ತದೆ.
ನ್ಯುಮೋನಿಕ್ ಪ್ಲೇಗ್ ಅತ್ಯಂತ ತೀವ್ರ ರೂಪ: ಪ್ಲೇಗ್‌ನ ಮೂರು ರೂಪಗಳಲ್ಲಿ ಇದು ಅತ್ಯಂತ ಮಾರಣಾಂತಿಕ ಮತ್ತು ವೇಗವಾಗಿ ಹರಡುವ ರೂಪವಾಗಿದೆ. ಉಳಿದ ಎರಡು ರೂಪಗಳೆಂದರೆ ಬ್ಯುಬೊನಿಕ್ ಹಾಗೂ ಸೆಪ್ಟಿಸೆಮಿಕ್. ಬುಬೊನಿಕ್ ಪ್ಲೇಗ್ ಪ್ರಾಥಮಿಕವಾಗಿ ದುಗ್ಧರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ನ್ಯುಮೋನಿಕ್ ಪ್ಲೇಗ್ ನೇರವಾಗಿ ಶ್ವಾಸಕೋಶಗಳಿಗೆ ಸೋಂಕು ತಗುಲಿ ಉಸಿರಾಟದ ತೊಂದರೆ ಉಂಟುಮಾಡುತ್ತದೆ. ಇನ್ನೂ ಸೆಪ್ಟಿಸೆಮಿಕ್ ಪ್ಲೇಗ್ ಅನ್ನು ರಕ್ತಪ್ರವಾಹದ ಸೋಂಕು ಎಂದು ಪರಿಗಣಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ರಕ್ತ ವಿಷ ಎಂದು ಹೇಳಲಾಗುತ್ತದೆ.
ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ: ಪ್ಲೇಗ್ ಒಂದು ಪ್ರಾಣಿಜನ್ಯ ಕಾಯಿಲೆಯಾಗಿದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಇದರ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಚಿಕ್ಕ ಕಾಡು ಪ್ರಾಣಿಗಳು ಮತ್ತು ಇವುಗಳನ್ನು ಮುತ್ತಿಕೊಳ್ಳುವ ಚಿಗಟಗಳಲ್ಲಿ ಕಂಡುಬರುತ್ತವೆ. ಸೈಬೀರಿಯಾದಲ್ಲಿ ಪ್ಲೇಗ್ ಬ್ಯಾಕ್ಟೀರಿಯಾ (ಯೆರ್ಸಿನಿಯಾ ಪೆಸ್ಟಿಸ್) ಸ್ಥಳೀಯ ಚಿಕ್ಕ ಕಾಡು ಪ್ರಾಣಿಗಳು ಮತ್ತು ಇವುಗಳ ಚಿಗಟಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. ಈ ರೋಗದ ಮಾನವ ಪ್ರಕರಣಗಳು ತುಂಬಾ ಅಪರೂಪವಾಗಿದೆ. ಆದರೆ, ನ್ಯುಮೋನಿಕ್ ಪ್ಲೇಗ್ ಕಳವಳಕ್ಕೆ ಒಂದು ನಿರ್ದಿಷ್ಟ ಕಾರಣವಾಗಿದೆ. ಇದು ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಮತ್ತು ಸೀನುವಾಗ ಬಿಡುಗಡೆಯಾಗುವ ಉಸಿರಾಟದ ಹನಿಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡಬಹುದು ಎಂದು ವೈದ್ಯರು ತಿಳಿಸುತ್ತಾರೆ. ಸೋಂಕಿತ ಸಾಕುಪ್ರಾಣಿಗಳು, ಕಾಡು ಸಸ್ತನಿಗಳ ಸಂಪರ್ಕದ ಮೂಲಕ ಹರಡುವ ಅಪಾಯವೂ ಕೂಡ ಇದೆ.
ನ್ಯುಮೋನಿಕ್ ಪ್ಲೇಗ್‌ನಿಂದ ಉಂಟಾಗುವ ತೊಡಕುಗಳು: ವೈದ್ಯಕೀಯ ವರದಿಗಳು ಸೂಚಿಸುವಂತೆ ನ್ಯುಮೋನಿಕ್ ಪ್ಲೇಗ್‌ನ ಲಕ್ಷಣಗಳು ಸೋಂಕಿಗೆ ಒಳಗಾದ 1 ರಿಂದ 4 ದಿನಗಳಲ್ಲಿ ವೇಗವಾಗಿ ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಪ್ರಮುಖವಾಗಿ ತೀವ್ರ ಜ್ವರ, ಶೀತ, ತಲೆನೋವು, ತೀವ್ರ ದೌರ್ಬಲ್ಯ, ಎದೆ ನೋವು ಹಾಗೂ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಕೆಲ ಸೋಂಕಿತ ವ್ಯಕ್ತಿಗಳು ನಿರಂತರ ಕೆಮ್ಮನ್ನು ಅನುಭವಿಸಬಹುದು, ರಕ್ತಸಿಕ್ತ ಕಫದೊಂದಿಗೆ ಕೆಮ್ಮಬಹುದು ಹಾಗೂ ರಕ್ತವನ್ನು ವಾಂತಿ ಮಾಡಿಕೊಳ್ಳಬಹುದು. ನ್ಯುಮೋನಿಕ್ ಪ್ಲೇಗ್ ಪ್ರಕರಣಗಳಲ್ಲಿ ಸೋಂಕಿನ ಮೊದಲ 24 ಗಂಟೆಗಳಲ್ಲಿ ಪ್ರತಿಜೀವಕ ಚಿಕಿತ್ಸೆಯನ್ನು ಆರಂಭಿಸುವುದರಿಂದ ರೋಗವು ತೀವ್ರವಾಗುವ ಅಪಾಯ ಕಡಿಮೆ ಮಾಡಬಹುದು. ಸೋಂಕಿತರಿಗೆ ಚಿಕಿತ್ಸೆ ನೀಡದೆ ಇದ್ದರೆ ಮಾರಕವಾಗಬಹುದು ಎಂದು ತಜ್ಞರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು (ಸಂಶೋಧನಾ ವರದಿಗಳು):
- https://www.sciencedirect.com/topics/pharmacology-toxicology-and-pharmaceutical-science/pneumonic-plague
- https://pmc.ncbi.nlm.nih.gov/articles/PMC7920731/
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ಮಕ್ಕಳು ಖುಷಿಯಾಗಿ ಆಹಾರ ಸೇವಿಸಬೇಕೆ?: ತಜ್ಞರು ಸೂಚಿಸುವ ಟಿಪ್ಸ್ ಇಲ್ಲಿವೆ
- ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುವ ಚಟದಿಂದ ಹದಗೆಡುತ್ತಿರುವ ಯುವಕರ ಆರೋಗ್ಯ: ನೂತನ ಅಧ್ಯಯನ
- ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ದಡಾರ ವೈರಸ್: ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
- ಕಬ್ಬಿಣಾಂಶದ ಕೊರತೆಯಾದರೆ ದೇಹದಲ್ಲಿ ಕಾಣಿಸುತ್ತವೆ ಈ ಚಿಹ್ನೆಗಳು: ಐರನ್ ಅಂಶ ಸಮೃದ್ಧವಾಗಿರುವ ಆಹಾರಗಳಿವು
- ಬೆಳಗ್ಗೆ ಎದ್ದ ತಕ್ಷಣ ನಡೆದಾಡಿದರೆ ತೀವ್ರವಾದ ಹಿಮ್ಮಡಿ ನೋವು ಕಾಣಿಸುತ್ತದೆಯೇ?: ವೈದ್ಯರು ಸೂಚಿಸುವ ಪರಿಹಾರ ಕ್ರಮಗಳೇನು?

