ಯುವಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣಗಳೇನು? ಚಿಹ್ನೆಗಳನ್ನು ಪತ್ತೆ ಮಾಡುವುದು ಹೇಗೆ?
ಹೃದಯಾಘಾತದ ಪ್ರಕರಣಗಳು ಯುವಜನರಲ್ಲಿ ಹೆಚ್ಚಾಗಲು ಪ್ರಮುಖ ಕಾರಣಗಳೇನು? ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸುವುದು ಹೇಗೆ? ಈ ಸಮಯದಲ್ಲಿ ಕಾಣಿಸುವ ಲಕ್ಷಣಗಳೇನು? ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?

Published : October 7, 2026 at 12:12 PM IST
ಹೃದಯಾಘಾತ ಹಾಗೂ ಹೃದಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ ಅನೇಕ ಕಾರಣಗಳಿವೆ. ಹೆಚ್ಚಿದ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟ, ಬೊಜ್ಜು ಹಾಗೂ ಧೂಮಪಾನದಂತಹ ಅಂಶಗಳು ಯುವಜನರಲ್ಲಿ ಹೃದಯ ಸಮಸ್ಯೆಗಳಿಗೆ ಮೂಲ ಕಾರಣವಾಗಿವೆ. ಈ ಆರೋಗ್ಯದ ಸ್ಥಿತಿಗಳು ಹಲವು ವರ್ಷಗಳವರೆಗೆ ಪತ್ತೆಯಾಗದೆ ಉಳಿಯುವುದರಿಂದ ರಕ್ತನಾಳಗಳು ಹಾಗೂ ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. 30 ವರ್ಷ ವಯಸ್ಸನ್ನು ತಲುಪುವ ಮುನ್ನವೇ ಪ್ರತಿಯೊಬ್ಬರೂ ಹೃದಯದ ಆರೋಗ್ಯದ ಬಗ್ಗೆ ವಿಶೇಷವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಯುವಜನರಲ್ಲಿ ಹೃದಯಾಘಾತ ಹಾಗೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಆರಂಭಿಕ ಹಂತದಲ್ಲೇ ಜಾಗರೂಕರಾಗಿರುವುದು, ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಅವಶ್ಯಕ ವೈದ್ಯರು ತಿಳಿಸುವಂತಹ ಸಲಹೆಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

30 ವರ್ಷದವರಲ್ಲಿ ಕಾಣಿಸುವ ಹೃದಯ ಸಮಸ್ಯೆಗಳು: 30ರ ಹರೆಯದವರಿಗೆ ಹೃದಯ ಸಮಸ್ಯೆಗಳು ಬಾಧಿಸುವುದಿಲ್ಲ ಅಂದುಕೊಳ್ಳುವುದು ತಪ್ಪು. ಯುವಜನರು ತಮ್ಮ ಆರೋಗ್ಯದ ಬಗ್ಗೆ ಆರಂಭದಿಂದಲೇ ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಬೇಕಾಗುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದು, ದೇಹವು ಆಗಾಗ್ಗೆ ನೀಡುವಂತಹ ಚಿಹ್ನೆಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಕೂಡ ಮುಖ್ಯವಾಗುತ್ತದೆ. ಆರಂಭಿಕ ಹಂತದಲ್ಲೇ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಭವಿಷ್ಯದ ತೊಡಕುಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.

30ರ ಹರೆಯದವರು ಗಮನಿಸಬೇಕಾದ ಪ್ರಮುಖ ವಿಷಯಗಳೇನು?
ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟಗಳು: ಮೇಲ್ನೋಟಕ್ಕೆ ಆರೋಗ್ಯವಾಗಿದ್ದೀರಿ ಎಂದು ಭಾವಿಸಿದರೂ, ದೇಹದೊಳಗೆ ಏನಾಗುತ್ತಿದೆ ಎಂಬುದು ತಿಳಿದಿರುವುದಿಲ್ಲ. ಅಧಿಕ ಕೊಲೆಸ್ಟ್ರಾಲ್ ಕೇವಲ ಅಧಿಕ ತೂಕವಿರುವ ವ್ಯಕ್ತಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಬೇಡಿ. ತೆಳ್ಳಗಿನ ಹಾಗೂ ಆರೋಗ್ಯವಂತರಂತೆ ಕಾಣುವವರಲ್ಲೂ ಕೊಲೆಸ್ಟ್ರಾಲ್ ಮಟ್ಟ ಹೆಚ್ಚು ಇರಬಹುದು. ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ಲಕ್ಷಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ನಿಂದಾಗಿ ಅಪಧಮನಿಗಳಲ್ಲಿ ಪ್ಲೇಕ್ ಅಂದರೆ, ಕೊಬ್ಬಿನ ಪದರ ನಿರ್ಮಾಣವಾಗಬಹುದು. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳುವುದು ತುಂಬಾ ಸೂಕ್ತವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಅಧಿಕ ರಕ್ತದೊತ್ತಡ: ಅಧಿಕ ರಕ್ತದೊತ್ತಡವು ಹೃದಯ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡವು ಯಾವಾಗಲೂ ಸ್ಪಷ್ಟ ಲಕ್ಷಣಗಳನ್ನು ತೋರಿಸದಿರಬಹುದು. ಇದು ದೀರ್ಘಕಾಲೀನ ಹೃದಯ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ. ರಕ್ತದೊತ್ತಡ ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದು ಹಾಗೂ ಮಟ್ಟ ಹೆಚ್ಚಾಗಿದ್ದರೆ ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಧೂಮಪಾನ & ದೈಹಿಕ ಚಟುವಟಿಕೆಯ ಕೊರತೆ: ಧೂಮಪಾನ, ತಂಬಾಕು ಸೇವನೆಯು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಹೃದಯ ರೋಗದ ಅಪಾಯ ಹೆಚ್ಚಿಸುತ್ತದೆ. ಕಳಪೆ ಆಹಾರ ಪದ್ಧತಿ, ಚಟುವಟಿಕೆಯಿಲ್ಲದ ಜೀವನಶೈಲಿ, ಸಂಸ್ಕರಿಸಿದ ಆಹಾರಗಳು, ಉಪ್ಪು, ಅನಾರೋಗ್ಯಕರ ಕೊಬ್ಬಿನ ಸೇವನೆಯು ಚಯಾಪಚಯ ಸಂಬಂಧಿತ ಅಪಾಯಗಳನ್ನು ಹೆಚ್ಚಿಸಲು ಕಾರಣವಾಗುತ್ತವೆ ಎಂದು ವೈದ್ಯರು ವಿವರಿಸುತ್ತಾರೆ.
ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ: ಪ್ರೀ ಡಯಾಬಿಟಿಸ್ (ಮಧುಮೇಹ ಪೂರ್ವ ಸ್ಥಿತಿ) ಹಾಗೂ ಮಧುಮೇಹ ಕಾಯಿಲೆ ಹೊಂದಿರುವವರು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತವೆ. ಮಧುಮೇಹವು ಕೇವಲ ಹೃದಯ ಸಂಬಂಧಿ ಸಮಸ್ಯೆಗಳಲ್ಲದೆ, ಇತರೆ ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡಬೇಕಾಗುತ್ತದೆ. ಹೊಟ್ಟೆಯ ಭಾಗದಲ್ಲಿನ ಅಧಿಕ ಪ್ರಮಾಣದ ಬೊಜ್ಜು ಸಂಗ್ರಹವಾಗದಂತೆ ಗಮನಹರಿಸಬೇಕು. ದೇಹದ ಅಂಗಗಳ ಸುತ್ತಲೂ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಶೇಖರಣೆಯಾಗುವುದು ಇನ್ಸುಲಿನ್ ಪ್ರತಿರೋಧ ಹಾಗೂ ಇತರೆ ಚಯಾಪಚಯ ಸಂಬಂಧಿತ ಅಪಾಯಕಾರಿ ಅಂಶಗಳೊಂದಿಗೆ ಸಂಬಂಧ ಹೊಂದಿದೆ. ಹೊಟ್ಟೆಯ ಬೊಜ್ಜಿನಂತಹ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಹೃದಯ ಸಂಬಂಧಿತ ಕಾಯಿಲೆ ತಡೆಗಟ್ಟುವುದು ಹೇಗೆ? ಯುವಕರು ತಮಗೆ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ ಎಂದು ಭಾವಿಸಬೇಡಿ. ಇದರ ಬದಲಾಗಿ ತಮ್ಮ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಹಾಗೂ ಲಿಪಿಡ್ ಪ್ರೊಫೈಲ್ ಪರೀಕ್ಷೆಯನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳಬೇಕು. ಕುಟುಂಬದಲ್ಲಿ ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುವ ಹೃದಯ ರೋಗ, ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ, ತಂಬಾಕು ಸೇವನೆಯ ಇತಿಹಾಸವಿದ್ದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತವಾಗಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು (ಸಂಶೋಧನಾ ವರದಿಗಳು):
- https://pmc.ncbi.nlm.nih.gov/articles/PMC4971280/
- https://www.sciencedirect.com/science/article/pii/S0021915023051936
- https://pmc.ncbi.nlm.nih.gov/articles/PMC10936711/
ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ನ್ಯುಮೋನಿಕ್ ಪ್ಲೇಗ್ ಕಾಯಿಲೆ: ಈ ಸೋಂಕಿನ ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?
- ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುವ ಚಟದಿಂದ ಹದಗೆಡುತ್ತಿರುವ ಯುವಕರ ಆರೋಗ್ಯ: ನೂತನ ಅಧ್ಯಯನ
- ಮಕ್ಕಳು ಖುಷಿಯಾಗಿ ಆಹಾರ ಸೇವಿಸಬೇಕೆ?: ತಜ್ಞರು ಸೂಚಿಸುವ ಟಿಪ್ಸ್ ಇಲ್ಲಿವೆ
- ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ದಡಾರ ವೈರಸ್: ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
- ಜನಪ್ರಿಯ ಕಂಪನಿಯೊಂದರ ಜೀರಿಗೆ ಪುಡಿ ನಿರ್ಬಂಧಿಸಿದ್ದು ಏಕೆ?: ಮನೆಯಲ್ಲಿಯೇ ಜೀರಿಗೆ ಪುಡಿ ತಯಾರಿಸುವುದು ಹೇಗೆ?

