ಚಿಕ್ಕಮಕ್ಕಳಲ್ಲಿ ಹೃದಯಾಘಾತವಾಗಲು ಕಾರಣಗಳೇನು? ತಡೆಯುವುದು ಹೇಗೆ?: ಹೃದ್ರೋಗ ತಜ್ಞರು ತಿಳಿಸುವುದೇನು?
How to prevent heart attack: ಇತ್ತೀಚಿನ ದಿನಗಳಲ್ಲಿ ಮಕ್ಕಳ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಮೂಲ ಕಾರಣಗಳೇನು? ಮಕ್ಕಳಲ್ಲಿ ಹೃದಯಾಘಾತದ ಅಪಾಯ ಗುರುತಿಸುವುದು ಹೇಗೆ ಎಂಬುದರ ಬಗ್ಗೆ ವೈದ್ಯರು ತಿಳಿಸಿರುವ ಮಾಹಿತಿ ಇಲ್ಲಿದೆ ನೋಡಿ.


Published : February 23, 2026 at 12:56 PM IST
- ಹುಚ್ಚೇಶ್ವರ ಅಣ್ಣಿಗೇರಿ
ಹೃದಯ ರೋಗವು ವಿಶ್ವಾದ್ಯಂತ ಗಂಭೀರ ಆರೋಗ್ಯ ಅಪಾಯವಾಗಿದೆ. ಕಳೆದ ಒಂದು ದಶಕದ ದತ್ತಾಂಶವು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವು ತುಂಬಾ ವೇಗವಾಗಿ ಹೆಚ್ಚಿರುವುದು ಕಂಡುಬಂದಿದೆ. ಚಿಕ್ಕವಯಸ್ಸಿನ ಜನರು ಸಹ ಸಾವಿಗೀಡಾಗುತ್ತಿದ್ದಾರೆ. ಚಿಕ್ಕ ಮಕ್ಕಳು, ಹದಿಹರೆಯದವರು, ಯುವ ಜನರು, ವೃದ್ಧರು ಹೀಗೆ ಎಲ್ಲಾ ವಯಸ್ಸಿನವರಲ್ಲಿ ಹೃದಯಾಘಾತ ಹಾಗೂ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗಲು ಕಾರಣಗಳೇನು ಎಂಬುದರ ಬಗ್ಗೆ ವೈದ್ಯರು ವಿವರವಾಗಿ ತಿಳಿಸಿದ್ದಾರೆ.
ಇತ್ತೀಚಿನ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದಾಗ, ವಯಸ್ಸಾಗುವುದು, ಅಧಿಕ ಕೊಲೆಸ್ಟ್ರಾಲ್ ಅಥವಾ ದೀರ್ಘಕಾಲದ ಕಾಯಿಲೆಗಳನ್ನು ಹೃದಯಾಘಾತಕ್ಕೆ ಪ್ರಾಥಮಿಕ ಕಾರಣಗಳು ಎಂದು ತಿಳಿದು ಬರುತ್ತಿದೆ ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡ ಚಿಕ್ಕ ವಯಸ್ಸಿನಲ್ಲಿಯೇ ಹೃದಯ ದುರ್ಬಲಗೊಳಿಸುತ್ತಿವೆ ಎಂದು ಹಲವು ಅಧ್ಯಯನಗಳು ಬಹಿರಂಗ ಪಡಿಸಿವೆ. ಚಿಕ್ಕಮಕ್ಕಳಲ್ಲಿ ಹೃದಯಾಘಾತದ ಅಪಾಯವನ್ನು ಗುರುತಿಸುವುದು ಹಾಗೂ ತಡೆಯುವುದು ಹೇಗೆ ಎಂಬುದರ ಕುರಿತು ಹಾಸನದ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ಹಾಗೂ ಕಾಲೇಜಿನ (ಕೌಮಾರಭೃತ್ಯ ವಿಭಾಗ) ಚಿಕ್ಕಮಕ್ಕಳ ತಜ್ಞ ಪ್ರೊ. ಡಾ. ಅಕ್ಷಯ್ ಗುರವ್ ಅವರು ಈಟಿವಿ ಭಾರತದ ಜೊತೆಗೆ ಮಾತನಾಡಿದ್ದಾರೆ.
ಹೆಚ್ಚುತ್ತಿರುವ ಹೃದಯಾಘಾತದ ಪ್ರಕರಣಗಳು: 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ. ಕಳಪೆ ಜೀವನಶೈಲಿ, ತಪ್ಪಾದ ಆಹಾರ ಕ್ರಮವು ಇದಕ್ಕೆ ಪ್ರಮುಖ ಕಾರಣವಾಗಿದೆ. ಸಂಸ್ಕರಿತ ಆಹಾರಗಳು, ಹೆಚ್ಚುವರಿ ಉಪ್ಪು, ಟ್ರಾನ್ಸ್ ಕೊಬ್ಬು ಹಾಗೂ ಸಕ್ಕರೆ ಸಮೃದ್ಧವಾಗಿರುವ ಆಹಾರಗಳು ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗಲು ಮೂಲ ಕಾರಣವಾಗುತ್ತದೆ. ಇದರಿಂದ ರಕ್ತ ಪರಿಚಲನೆ ದುರ್ಬಲಗೊಳಿಸುತ್ತದೆ, ಹೃದಯಾಘಾತ ಅಪಾಯ ಹೆಚ್ಚಾಗಲು ಕಾರಣವಾಗುತ್ತದೆ. ಜೊತೆಗೆ ಕಚೇರಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು, ವ್ಯಾಯಾಮದ ಕೊರತೆ, ಅಧಿಕ ರಕ್ತದೊತ್ತಡ, ಬೊಜ್ಜು ಹಾಗೂ ಇನ್ಸುಲಿನ್ ಪ್ರತಿರೋಧದಂತಹ ಪರಿಸ್ಥಿತಿಗಳು ಹೃದಯಾಘಾತದ ಅಪಾಯವನ್ನು ಎರಡು ಪಟ್ಟು ಹೆಚ್ಚಿಸುತ್ತವೆ. ದೀರ್ಘಕಾಲದ ಒತ್ತಡವು ದೇಹದಲ್ಲಿ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡದ ಜೊತೆಗೆ ಹೃದಯಾಘಾತಕ್ಕೂ ಕಾರಣವಾಗಬಹುದು ಎಂದು ಹೃದ್ರೋಗ ತಜ್ಞರು ವಿವರಿಸುತ್ತಾರೆ.

ಹತ್ತು ವರ್ಷದೊಳಗಿನ ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವೇನು?: ಚಿಕ್ಕಮಕ್ಕಳ ತಜ್ಞ ಪ್ರೊ. ಡಾ. ಅಕ್ಷಯ್ ಗುರವ್ ಅವರು ತಿಳಿಸುವ ಪ್ರಕಾರ, 1 ರಿಂದ 3 ವರ್ಷ ವಯಸ್ಸಿನ ಮಕ್ಕಳಿಗೆ ಸಾಮಾನ್ಯವಾಗಿ ಹೃದಯಾಘಾತದ ಅಪಾಯ ಬಹಳ ಕಡಿಮೆ ಇರುತ್ತದೆ. ಈ ವಯಸ್ಸಿನ ಮಕ್ಕಳಲ್ಲಿ ಹೃದಯಾಘಾತ ಪ್ರಕರಣಗಳು ತುಂಬಾ ವಿರಳವಾಗಿ ಕಂಡುಬರುತ್ತವೆ. ಈ ವಯಸ್ಸಿನಲ್ಲಿ ಮಕ್ಕಳು ತುಂಬಾ ಆ್ಯಕ್ಟಿವ್ ಆಗಿ ಇರುತ್ತಾರೆ. ಪ್ರಿಸ್ಕೂಲ್ ಮಕ್ಕಳು (3-5 ವರ್ಷ ವಯಸ್ಸಿನವರು) ಅಂದ್ರೆ, ಆಧುನಿಕ ಜೀವನಶೈಲಿಯ ಪ್ರಮುಖ ಬದಲಾವಣೆಗಳಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಇದರ ಪರಿಣಾಮದಿಂದ ಹೃದಯಾಘಾತಕ್ಕೆ ಒಳಗಾಗುವುದು ಕೂಡ ಅಪರೂಪವಾಗಿದೆ. ಕೆಲವು ಮಕ್ಕಳು ಹೃದಯ ಕಾಯಿಲೆ, ಜನ್ಮಜಾತ ಹೃದಯ ಕಾಯಿಲೆ, ಹೃದಯ ದೋಷಗಳು, ಆನುವಂಶಿಕ ಹೃದಯ ಸಮಸ್ಯೆಗಳು ಇಲ್ಲವೇ ಕವಾಸಕಿ ಕಾಯಿಲೆಯಂತಹ ಅಪರೂಪದ ಕಾಯಿಲೆಗಳಿಂದಾಗಿ ಮಕ್ಕಳಿಗೆ ತೊಂದರೆ ಎದುರಾಗಬಹುದು. ಇಂತಹ ಮಕ್ಕಳು ತ್ವರಿತ ಉಸಿರಾಟ, ಅತಿಯಾದ ಆಯಾಸ, ಕಿರಿಕಿರಿ ಮತ್ತು ಅನಿಯಮಿತ ಹೃದಯ ಬಡಿತಗಳಿಗೆ ಅಪಾಯ ಹೊಂದಿರಬಹುದು, ನಿರ್ಲಕ್ಷಿಸಿದರೆ ಕೆಲವು ಸಂದರ್ಭಗಳಲ್ಲಿ ಜೀವಕ್ಕೂ ಕುತ್ತು ಬರಬಹುದು ಎಂದು ಎಚ್ಚರಿಕೆ ನೀಡುತ್ತಾರೆ.

ಮಕ್ಕಳಲ್ಲಿ ಹೃದಯಾಘಾತ ಅಪಾಯ ಗುರುತಿಸುವುದು ಹೇಗೆ?: ವಯಸ್ಕರಲ್ಲಿ ಹೃದಯಾಘಾತಕ್ಕಿಂತಲೂ ಭಿನ್ನವಾಗಿ ಮಕ್ಕಳಲ್ಲಿ ಜೀವನಶೈಲಿ ಸಂಬಂಧಿತ ಹೃದಯಾಘಾತಗಳು ಅಪರೂಪಕ್ಕೆ ಕಂಡುಬರುತ್ತವೆ. ಜನ್ಮಜಾತ ಹೃದಯ ಕಾಯಿಲೆ ಇಲ್ಲವೇ ಕವಾಸಕಿ ಕಾಯಿಲೆಯಂತಹ ಕಾಯಿಲೆಗಳು ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತವೆ, ಹೃದಯಕ್ಕೆ ರಕ್ತದ ಹರಿವನ್ನು ಅಡ್ಡಿಪಡಿಸುತ್ತವೆ. ನಿಮ್ಮ ಮಗುವಿಗೆ ಜನ್ಮಜಾತ ಹೃದಯ ಕಾಯಿಲೆ ಹೊಂದಿದ್ದರೆ ಕೆಲವು ಲಕ್ಷಣಳು ಕಂಡುಬಂದರೆ ವಿಶೇಷವಾಗಿ ಗಮನ ಹರಿಸಬೇಕಾಗುತ್ತದೆ.

- ಮಕ್ಕಳಲ್ಲಿ ಎದೆ ನೋವು ಕಾಣಿಸುತ್ತದೆ. ನಡೆಯುವಾಗ, ಓಡುವಾಗ ಇಲ್ಲವೇ ಶ್ರಮವಹಿಸಿ ಕೆಲಸ ಮಾಡುವ ಸಮಯದಲ್ಲಿ ಎದೆಯಲ್ಲಿ ನೋವು ಕಾಣಿಸಿದರೆ, ಎಚ್ಚರಿಕೆಯ ಚಿಹ್ನೆಗಳಾಗಿರಬಹುದು.
- ಹಠಾತ್ ಕುಸಿತ ಬೀಳುವುದು, ವಿವರಿಸಲಾಗದ ಮೂರ್ಛೆ ಹೋಗುವುದು ಕೂಡ ಹೃದಯ ಕಾಯಿಲೆಯ ಲಕ್ಷಣವಾಗಿದೆ.
- ಉಸಿರಾಟದ ತೊಂದರೆಗಳು ಮುಂದುವರಿದರೆ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.
- ವೇಗ ಇಲ್ಲವೇ ಅನಿಯಮಿತ ಹೃದಯ ಬಡಿತವು ಹೃದಯ ಸಮಸ್ಯೆಯಾಗಿರಬಹುದು.
- ಉಸಿರಾಟದ ವೇಳೆ ತೀವ್ರ ತೊಂದರೆ
- ಮಕ್ಕಳಲ್ಲಿ ಅಸಮರ್ಪಕ ಬೆಳವಣಿಗೆ
- ಇದ್ದಕ್ಕಿದ್ದಂತೆ ತಲೆ ಸುತ್ತು ಬರುವುದು
- ಚರ್ಮದ ಮಸುಕಾದ ಇಲ್ಲವೇ ನೀಲಿ ಬಣ್ಣ (ಸೈನೋಸಿಸ್) ಅನ್ನು ಹೃದಯ ಆರೋಗ್ಯದ ಎಚ್ಚರಿಕೆಯ ಚಿಹ್ನೆಯಾಗಿದೆ.

ಮಕ್ಕಳಲ್ಲಿ ಹೈಬಿಪಿ ಹೆಚ್ಚುತ್ತಿರುವ ಅಪಾಯ: ಮಕ್ಕಳಲ್ಲಿ ಹೃದ್ರೋಗದ ಅಪಾಯ ಹೆಚ್ಚಾಗಲು ಹೈಬಿಪಿ ಪ್ರಮುಖ ಅಪಾಯಕಾರಿ ಅಂಶವಾಗಿದೆ. ದಿ ಲ್ಯಾನ್ಸೆಟ್ ಚೈಲ್ಡ್ ಮತ್ತು ಅಡೋಲಸೆಂಟ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಜಾಗತಿಕ ವಿಶ್ಲೇಷಣೆಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ಅಧಿಕ ರಕ್ತದೊತ್ತಡದ ಪ್ರಕರಣಗಳು ದುಪ್ಪಟ್ಟು ಆಗಿದೆ. ಇದು 2000 ವರ್ಷದಲ್ಲಿ ಶೇ.3.2ರಷ್ಟು ಇತ್ತು, 2020ರಲ್ಲಿ ಶೇ.6ಕ್ಕೆ ಏರಿಕೆಯಾಗಿದೆ. ಈ ಗಂಭೀರ ಆರೋಗ್ಯದ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸದಿದ್ದರೆ ಅಧಿಕ ರಕ್ತದೊತ್ತಡವು ಹೃದಯರಕ್ತನಾಳದ ಕಾಯಿಲೆ, ಹೃದಯಾಘಾತ ಹಾಗೂ ಮೂತ್ರಪಿಂಡ ಕಾಯಿಲೆಯ ಅಪಾಯ ಗಮನಾರ್ಹವಾಗಿ ಏರಿಕೆಯಾಗುತ್ತದೆ.

ಹೃದಯಾಘಾತದ ಅಪಾಯ ತಡೆಯುವುದು ಹೇಗೆ?:
- ಹೃದಯಾಘಾತದ ಚಿಹ್ನೆಗಳು ಕಾಣಿಸಿದರೆ, ಮಕ್ಕಳಲ್ಲಿ ಎಲ್ಲ ಹೃದಯ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ.
- ಮಕ್ಕಳಿಗೆ ಜಂಕ್ ಫುಡ್ ಸೇವಿಸುವುದನ್ನು ತಡೆಯಬೇಕಾಗುತ್ತದೆ.
- ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ.
- ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕಾಗುತ್ತದೆ.
- ಮಕ್ಕಳ ಕೆಟ್ಟ ಅಭ್ಯಾಸಗಳ ಬಗ್ಗೆ ಪೋಷಕರು ವಿಶೇಷ ಗಮನ ಹರಿಸಿ, ಅವುಗಳಿಂದ ಬರಬರುವಂತೆ ಜಾಗೃತಿ ವಹಿಸಬೇಕಾಗುತ್ತದೆ.
- ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಇಲ್ಲವೇ ಯಾವುದಾದರೂ ವಿಷಯದ ಕುರಿತು ಮಕ್ಕಳು ಒತ್ತಡಕ್ಕೊಳಗಾಗಿದ್ದರೆ ಪೋಷಕರು ಮನಸ್ಸು ಬಿಚ್ಚಿ ಮಾತನಾಡಬೇಕಾಗುತ್ತದೆ. ಇದನ್ನು ಪರಿಹರಿಸಲು ಪ್ರಯತ್ನ ಮಾಡಬೇಕಾಗುತ್ತದೆ ಎಂದು ಚಿಕ್ಕಮಕ್ಕಳ ತಜ್ಞ ಪ್ರೊ. ಡಾ. ಅಕ್ಷಯ್ ಗುರವ್ ತಿಳಿಸುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನು ಓದಿ:
- ಕಿಡ್ನಿ ಕಸಿ ನಂತರವೂ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ
- ಸ್ಥಳೀಯ ಹಾವುಗಳ ವಿಷದಿಂದ 'ವಿಷ ನಿರೋಧಕ ಔಷಧ' ತಯಾರಿಸಿದ ಗುಜರಾತ್; ಶೀಘ್ರ ಬಿಡುಗಡೆ, ಮಾನವ ಸಾವು ತಗ್ಗುವ ನಿರೀಕ್ಷೆ
- ಮಾನಸಿಕ ಸಮಸ್ಯೆಗಳಿಗೆ ಮನೋಚಿಕಿತ್ಸೆಯೇ ಮದ್ದು: ಇದು ಯಾರಿಗೆಲ್ಲ ಪ್ರಯೋಜನ?
- ವಿಟಮಿನ್ ಕೆ ಕೊರತೆಯಾ? ಈ ಲಕ್ಷಣಗಳು ಕಂಡುಬಂದರೆ ಎಚ್ಚರವಹಿಸಿ
- CT, MRI ಸ್ಕ್ಯಾನ್ ಸೇವೆ ಸ್ಥಗಿತ: ಧಾರವಾಡ - ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಪರದಾಟ

