ETV Bharat / health

ಟೈಪ್ 2 ಮಧುಮೇಹ ಪೀಡಿತ ಮಹಿಳೆಯರಿಗೆ ಕಾಡುವ ಆರೋಗ್ಯ ಅಪಾಯಗಳೇನು? ತಡೆಯಲು ಆರೋಗ್ಯಕರ ಜೀವನಶೈಲಿ & ಆಹಾರ ಕ್ರಮಗಳೇನು? ವೈದ್ಯರ ಸಲಹೆಗಳೇನು?

ಟೈಪ್-2 ಮಧುಮೇಹ ಮಹಿಳೆಯರಿಗೆ ಎಷ್ಟು ಅಪಾಯಕಾರಿ? ಟೈಪ್-2 ಮಧುಮೇಹ ಹೊಂದಿರುವ ಮಹಿಳೆಯರಿಗೆ ಕಾಡುವ ಆರೋಗ್ಯದ ಸಮಸ್ಯೆಗಳೇನು, ಪರಿಹಾರ ಕ್ರಮಗಳೇನು ಎಂಬುದರ ಕುರಿತು 'ಈಟಿವಿ ಭಾರತ'ದ ಹುಚ್ಚೇಶ್ವರ ಅಣ್ಣಿಗೇರಿ ಅವರು ಬರೆದಿರುವ ಸ್ಟೋರಿ ಇಲ್ಲಿದೆ.

type 2 diabetes  How dangerous is diabetes for women  ಟೈಪ್ 2 ಮಧುಮೇಹ ಎಷ್ಟು ಅಪಾಯಕಾರಿ  How dangerous is type 2 diabetes
ಟೈಪ್ 2 ಮಧುಮೇಹ ಪೀಡಿತ ಮಹಿಳೆಯರಿಗೆ ಕಾಡುವ ಆರೋಗ್ಯ ಅಪಾಯಗಳೇನು?- ಸಾಂದರ್ಭಿಕ ಚಿತ್ರ (ETV Bharat, Getty Images)
author img

By ETV Bharat Health Team

Published : April 20, 2026 at 9:01 AM IST

6 Min Read
Choose ETV Bharat

ಪ್ರಪಂಚದಾದ್ಯಂತ ಕೋಟ್ಯಂತರ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದರಿಂದ ವಿವಿಧ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು. ಗ್ಲೈಕೇಟೆಡ್ ಹೀಮೊಗ್ಲೋಬಿನ್ (HbA1c) ಎಂಬುದು ಕಳೆದ 2 ರಿಂದ 3 ತಿಂಗಳುಗಳ ಸರಾಸರಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಳೆಯುವ ರಕ್ತ ಪರೀಕ್ಷೆಯಲ್ಲಿ ನಿರಂತರವಾಗಿ ಶೇ.6ಕ್ಕಿಂತ ಹೆಚ್ಚಿದ್ದರೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಮಧುಮೇಹ ಕಾಯಿಲೆಯು ಕೇವಲ ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟದಿಂದ ನಿರೂಪಿಸಲ್ಪಟ್ಟ ಸ್ಥಿತಿಯಲ್ಲ. ಡಯಾಬಿಟಿಸ್ ದೇಹದ ಇತರ ಹಲವಾರು ಅಂಗಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಟಂಟು ಮಾಡುತ್ತದೆ. ಈ ಕಾರಣಕ್ಕಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟದ ಕುರಿತಂತೆ ತಪಾಸಣೆಗೆ ಒಳಗಾಗ ಬೇಕಾಗುತ್ತದೆ. ಜೊತೆಗೆ ರಕ್ತದಲ್ಲಿವ ಶುಗರ್ ಲೆವಲ್​ ಅನ್ನು ನಿಯಂತ್ರಣಕ್ಕೆ ತರಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಹೆಚ್ಚುತ್ತಿರುವುದಕ್ಕೆ ಮೂಲಕ ಕಾರಣಗಳೇನು? ಟೈಪ್ 2 ಮಧುಮೇಹ ಮಹಿಳೆಯರಿಗೆ ಎಷ್ಟು ಅಪಾಯಕಾರಿಯಾಗಿದೆ? ಟೈಪ್ 2 ಮಧುಮೇಹ ಹೊಂದಿರುವ ಮಹಿಳೆಯರಿಗೆ ಕಾಡುವ ಪ್ರಮುಖ ಆರೋಗ್ಯದ ಸಮಸ್ಯೆಗಳು ಯಾವುವು? ಟೈಪ್ 2 ಮಧುಮೇಹ ಪೀಡಿತ ಮಹಿಳೆಯರಿಗೆ ಹೃದಯ ಸಂಬಂಧಿತ ಕಾಯಿಲೆ, ಸಂತಾನೋತ್ಪತ್ತಿ, ಲೈಂಗಿಕ ಆರೋಗ್ಯ ಸಮಸ್ಯೆ, ಮೂತ್ರಪಿಂಡದ ಹಾನಿ, ನರಗಳ ಹಾನಿ, ದೃಷ್ಟಿ ನಷ್ಟ, ಚರ್ಮ ಮತ್ತು ಬಾಯಿಯ ಆರೋಗ್ಯ, ಮಾನಸಿಕ ಆರೋಗ್ಯ, ಗರ್ಭಧಾರಣೆಯ ಅಪಾಯಗಳಿಗೆ ಕಾರಣವಾಗುತ್ತದೆಯೇ? ಟೈಪ್ 2 ಡಯಾಬಿಟಿಸ್ ಹೊಂದಿರುವ ಮಹಿಳೆಯರಿಗೆ ದೈನಂದಿನ ಜೀವನಶೈಲಿ ಹೇಗಿರಬೇಕು ಮತ್ತು ಅನುಸರಿಸಬೇಕಾದ ಆಹಾರ ಕ್ರಮಗಳು ಯಾವುವು? ಈ ಕುರಿತು ಧಾರವಾಡದ ಎಸ್​ಡಿಎಂ ಆಸ್ಪತ್ರೆಯ ಫಿಜಿಶಿಯನ್ ಹಾಗೂ ಹಿರಿಯ ವೈದ್ಯ ಡಾ.ಮೋಹನ್ ಬಿ. ಆಲೂರ್ ಅವರು ಈಟಿವಿ ಭಾರತದ ಜೊತೆಗೆ ಮಾತನಾಡಿದ್ದಾರೆ.

type 2 diabetes  How dangerous is diabetes for women  ಟೈಪ್ 2 ಮಧುಮೇಹ ಎಷ್ಟು ಅಪಾಯಕಾರಿ  How dangerous is type 2 diabetes
ಮಹಿಳೆಯರಲ್ಲಿ ಟೈಪ್ 2 ಮಧುಮೇಹ ಹೆಚ್ಚಳಕ್ಕೆ ಕಾರಣಗಳೇನು? (ETV Bharat)

ಏನಿದು ಟೈಪ್ 2 ಮಧುಮೇಹ?: ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸದಿದ್ದಾಗ, ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದಾಗ ಉಂಟಾಗುವ ದೀರ್ಘಕಾಲದ ಸ್ಥಿತಿಯನ್ನು ಟೈಪ್ 2 ಮಧುಮೇಹ ಎಂದು ಕರೆಯಲಾಗುತ್ತದೆ. ಜೀವಕೋಶಗಳು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ (ಇನ್ಸುಲಿನ್ ಪ್ರತಿರೋಧ) ಹಾಗೂ ಮೇದೋಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದಾಗ ಟೈಪ್ 2 ಮಧುಮೇಹ ಬರುತ್ತದೆ. ಟೈಪ್ 2 ಮಧುಮೇಹದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಳಕ್ಕೆ ಕಾರಣವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು 126mg/dL ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ, ಇದನ್ನು ಟೈಪ್ 2 ಮಧುಮೇಹ ಎಂದು ಪರಿಗಣಿಸಲಾಗುತ್ತದೆ. ಪ್ರಮುಖವಾಗಿ ತೂಕ ಹೆಚ್ಚಳ, ಅನಾರೋಗ್ಯಕರ ಆಹಾರ, ಕೆಟ್ಟ ಜೀವನಶೈಲಿಯಿಂದ ಉಂಟಾಗುತ್ತದೆ. ಪ್ರಮುಖ ಲಕ್ಷಣಗಳು ಅಂದರೆ, ದಣಿದ ಭಾವನೆ, ಪದೇ ಪದೇ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ, ಮಸುಕಾದ ದೃಷ್ಟಿ ಹಾಗೂ ಗಾಯಗಳು ಗುಣವಾಗಲು ದೀರ್ಘ ಸಮಯ ಬೇಕಾಗುತ್ತದೆ.

ಮಹಿಳೆಯರಲ್ಲಿ ಟೈಪ್​ 2 ಮಧುಮೇಹ ಹೆಚ್ಚಳಕ್ಕೆ ಕಾರಣವೇನು?: NIHನ ನ್ಯಾಷನಲ್ ಲೈಬ್ರರಿ ಮೆಡಿಷನ್ ಸಂಶೋಧನೆ ತಿಳಿಸುವ ಪ್ರಕಾರ, ಸಾಮಾನ್ಯವಾಗಿ ಪುರುಷರಲ್ಲಿ ಟೈಪ್ 2 ಮಧುಮೇಹ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ, ಮಹಿಳೆಯರಿಗೆ ತೀವ್ರ ತೊಡಕುಗಳು ಹಾಗೂ ಮರಣದ ಅಪಾಯ ಹೆಚ್ಚಿದೆ ಎಂದು ತಿಳಿಸುತ್ತದೆ. ಟೈಪ್​ 2 ಮಧುಮೇಹ ನಿರ್ದಿಷ್ಟವಾಗಿ ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವು ಮಹಿಳೆಗೆ ಮೂತ್ರನಾಳದ ಸೋಂಕುಗಳು ಬರುವ ಅಪಾಯ ಕೂಡ ಗಮನಾರ್ಹವಾಗಿ ಹೆಚ್ಚಾಗಬಹುದು. ಈ ಆರೋಗ್ಯದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ತಮ್ಮ ಆಹಾರ ಹಾಗೂ ಜೀವನಶೈಲಿಯಲ್ಲಿ ಕೆಲವು ಅಗತ್ಯ ಸುಧಾರಣೆಗಳನ್ನು ಮಾಡುವ ಮೂಲಕ ತಮ್ಮ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಬಹುದು ಎಂದು ವೈದ್ಯರು ತಿಳಿಸುತ್ತಾರೆ.

ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಹೆಚ್ಚಳಕ್ಕೆ ಪ್ರಮುಖವಾಗಿ ಅನಾರೋಗ್ಯಕರ ಜೀವನಶೈಲಿ, ಹೊಟ್ಟೆ ಸುತ್ತಲಿನ ಬೊಜ್ಜು, ಅತಿಯಾದ ಒತ್ತಡ, ದೈಹಿಕ ಚಟುವಟಿಕೆಯ ಕೊರತೆಯು ಕಾರಣವಾಗುತ್ತದೆ ಹಾಗೂ ಕುಟುಂಬದಲ್ಲಿ ಮಧುಮೇಹದ ಇತಿಹಾಸವಿದ್ದರೆ ಅಪಾಯ ಹೆಚ್ಚಿರುತ್ತದೆ. ಗರ್ಭಾವಸ್ಥೆಯ ಮಧುಮೇಹ, ಪಿಸಿಓಎಸ್, ಋತುಬಂಧದ ನಂತರದ ಹಾರ್ಮೋನ್ ಬದಲಾವಣೆಗಳು ಕೂಡ ಮಹಿಳೆಯರಲ್ಲಿ ಟೈಪ್​ 2 ಮಧುಮೇಹ ಬರುವ ಅಪಾಯ ಹೆಚ್ಚಿರುತ್ತದೆ.

type 2 diabetes  How dangerous is diabetes for women  ಟೈಪ್ 2 ಮಧುಮೇಹ ಎಷ್ಟು ಅಪಾಯಕಾರಿ  How dangerous is type 2 diabetes
ಟೈಪ್ 2 ಮಧುಮೇಹವಿರುವ ಮಹಿಳೆಯರಿಗೆ ಕಾಡುವ ಆರೋಗ್ಯದ ತೊಂದರೆಗಳು (ETV Bharat)

ಟೈಪ್ 2 ಮಧುಮೇಹದಿಂದ ಮಹಿಳೆಯರಿಗೆ ಕಾಡುವ ಆರೋಗ್ಯದ ಸಮಸ್ಯೆಗಳೇನು?:

ಮಹಿಳೆಯರ ಮುಟ್ಟಿನ ಮೇಲೆ ಪರಿಣಾಮ: ಹಾರ್ಮೋನುಗಳ ವ್ಯತ್ಯಾಸದಿಂದ ಮುಟ್ಟಿಗೂ ಮುನ್ನ ಹಾಗೂ ಸಮಯದಲ್ಲಿ ರಕ್ತದಲ್ಲಿನ ಶುಗರ್​ ಲೆವಲ್ ಹೆಚ್ಚಿರಬಹುದು. ಅಂದ್ರೆ, ಮುಟ್ಟಿನ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಯಿಂದ (ಪ್ರೊಜೆಸ್ಟರಾನ್ ಹೆಚ್ಚಳ) ಇನ್ಸುಲಿನ್ ಪ್ರತಿರೋಧ ಹೆಚ್ಚಾಗಬಹುದು, ಟೈಪ್ 2 ಮಧುಮೇಹ ಹೊಂದಿರುವ ಮಹಿಳೆಯರಲ್ಲಿ ಅಧಿಕ ರಕ್ತಸ್ರಾವ ಹಾಗೂ ದೀರ್ಘಕಾಲದ ಮುಟ್ಟಿನಂತಹ ಸಮಸ್ಯೆಗಳು ಕಾರಣವಾಗಬಹುದು. ಇಂತಹ ಸಮಸ್ಯೆಗಳಿಂದ ದೇಹದ ಇತರ ಅಂಗಗಳ ಆರೋಗ್ಯ, ಕಾರ್ಯನಿರ್ವಹಣೆಯ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರುವ ಅಪಾಯ ಸಹ ಹೊಂದಿವೆ. ಜೊತೆಗೆ ಋತುಬಂಧದ ಬಳಿಕ, ದೇಹವು ಈಸ್ಟ್ರೊಜೆನ್ ಹಾರ್ಮೋನ್ ಉತ್ಪಾದನೆಯು ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅನಿರೀಕ್ಷಿತ ಏರಿಳಿತಕ್ಕೂ ಕಾರಣವಾಗುವ ಸಾಧ್ಯತೆಯಿದೆ. ಇದರೊಂದಿಗೆ ದೇಹದ ತೂಕ ಹೆಚ್ಚಳವಾಗಬಹುದು. ಈ ಅವಧಿಯಲ್ಲಿ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ವಹಿಸುವುದರ ಜೊತೆಗೆ ನಿಯಮಿತ ಶುಗರ್ ಟೆಸ್ಟ್ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

ಮೂತ್ರನಾಳ, ಯೋನಿ ಸೋಂಕು: ಮಹಿಳೆಯರಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟವು ಹೆಚ್ಚಾದಾಗ ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಇದರಿಂದ ಪದೇ ಪದೇ ಯೋನಿ ಸೋಂಕು ಹಾಗೂ ಮೂತ್ರನಾಳದ ಸೋಂಕು (UTI) ಕಾಣಿಸಿಕೊಳ್ಳಬಹುದು. ಟೈಪ್​ 2 ಮಧುಮೇಹ ಬಳುತ್ತಿರುವ ಬಹುತೇಕ ಮಹಿಳೆಯರು ತಮ್ಮ ಜೀವನದ ಒಂದು ಹಂತದಲ್ಲಿ ಯುಟಿಐ ಅಪಾಯವನ್ನು ಹೊಂದಿರುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವು ನಿರಂತರವಾಗಿ ಹೆಚ್ಚಿದ್ದರೆ, ಯುಟಿಐ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಶೇ.50 ಕ್ಕಿಂತ ಹೆಚ್ಚು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಮೂತ್ರನಾಳದ ಸೋಂಕನ್ನು (ಯುಟಿಐ) ಅನುಭವಿಸುತ್ತಾರೆ. ಆದರೆ, ಟೈಮ್​ 2 ಮಧುಮೇಹ ಹೊಂದಿರುವ ಮಹಿಳೆಯರಲ್ಲಿ ಯುಟಿಐ ಅಪಾಯವನ್ನು ಪುನಾರಾವರ್ತಿತವಾಗುತ್ತದೆ. ಕೆಲವು ಮಹಿಳೆಯರಲ್ಲಿ ಮೂತ್ರಪಿಂಡದ ಆರೋಗ್ಯಕ್ಕೂ ಅಪಾಯ ಉಂಟಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

ಲೈಂಗಿಕ ಸಮಸ್ಯೆ & ಪಿಸಿಓಎಸ್: ಮಹಿಳೆಯರಲ್ಲಿ ಟೈಪ್​ 2 ಡಯಾಬಿಟಿಸ್‌ನಿಂದ ನರಗಳು ಹಾನಿಗೊಳಗಾಗಬಹುದು. ಇದು ಯೋನಿಯ ಭಾಗದಲ್ಲಿ ಶುಷ್ಕತೆ ಹಾಗೂ ಸಂವೇದನೆ ಕಡಿಮೆಯಾಗಲು ಕಾರಣವಾಗುತ್ತದೆ. ಇದರಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಹಾಗೂ ಮಿಲನದ ವೇಳೆ ತೀವ್ರ ನೋವು ಕಾಣಿಸಬಹುದು. ಹಾರ್ಮೋನ್​ಗಳ ಬದಲಾವಣೆಯಾಗುವುದರಿಂದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಇರುವ ಮಹಿಳೆಯರಲ್ಲಿ ಇನ್ಸುಲಿನ್ ಪ್ರತಿರೋಧ ಹೆಚ್ಚಿರುತ್ತದೆ. ಇದರ ಪರಿಣಾಮವಾಗಿ ಟೈಪ್ 2 ಮಧುಮೇಹದ ಅಪಾಯ ಹೆಚ್ಚಿಸುವುದಲ್ಲದೆ ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಟೈಪ್​ 2 ಮಧುಮೇಹ ಹೊಂದಿರುವ ಮಹಿಳೆಯರಲ್ಲಿ ಗರ್ಭಪಾತದ ಅಪಾಯ, ಹುಟ್ಟುವ ಮಗುವಿನಲ್ಲಿ ಜನ್ಮಜಾತ ದೋಷಗಳಿರುವ ಸಾಧ್ಯತೆ ಹೆಚ್ಚಿರುತ್ತದೆ. ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಂಭವವು ಕೂಡ ಇರುತ್ತದೆ. ಮಧುಮೇಹದಿಂದ ಬಳಲುವ ಮಹಿಳೆಯರಲ್ಲಿ ಮಾನಸಿಕ ಒತ್ತಡ, ಖಿನ್ನತೆಯ ಅಪಾಯ ಹೆಚ್ಚಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಅಸ್ಥಿರಂಧ್ರತೆ ಅಪಾಯವನ್ನು ಹೆಚ್ಚಿಸಬಹುದು. ಸಣ್ಣ ಪುಟ್ಟ ಗಾಯಗಳು ಅಥವಾ ಹುಣ್ಣುಗಳು ಬೇಗನೆ ವಾಸಿಯಾಗದೆ ಹರಡುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಹೃದಯ ಸಂಬಂಧಿ ಕಾಯಿಲೆಗಳ ಅಪಾಯ: ಟೈಪ್​ 2 ಮಧುಮೇಹ ಹೊಂದಿರುವ ಮಹಿಳೆಯರಿಗೆ ಪುರುಷರಿಗಿಂತ ಹೃದಯಾಘಾತ ಅಥವಾ ಪಾರ್ಶ್ವವಾಯು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಮಧುಮೇಹ ಯುಕೆ ವೃತ್ತಿಪರ ಸಮ್ಮೇಳನದಲ್ಲಿ (DUKPC) ಪ್ರಸ್ತುತಪಡಿಸಲಾದ ಅಧ್ಯಯನವು, ಮಹಿಳೆಯರು ಹೃದಯರಕ್ತನಾಳದ ತೊಂದರೆಗಳನ್ನು ಬೆಳೆಸುವ ಅಪಾಯ ಶೇ.20ರಷ್ಟು ಹೆಚ್ಚಿಸಬಹುದು ಎಂದು ತಿಳಿಸುತ್ತದೆ.

ಮ್ಯಾಂಚೆಸ್ಟರ್ ರಾಯಲ್ ಆಸ್ಪತ್ರೆಯಲ್ಲಿ ಕೈಗೊಂಡ ಅಧ್ಯಯನದಲ್ಲಿ ಪಾಲ್ಗೊಂಡ ಪ್ರೊ.ಮಾರ್ಟಿನ್ ರಟ್ಟರ್ ಮಾತನಾಡಿದ ಅವರು, ಪುರುಷರಿಗಿಂತ ಟೈಪ್ 2 ಮಧುಮೇಹ ಹೊಂದಿರುವ ಮಹಿಳೆಯರು ಅಧಿಕ ತೂಕ ಹೊಂದುವ ಹೆಚ್ಚಿನ ಅಪಾಯ ಎದುರಿಸುತ್ತಾರೆ. ಸರಾಸರಿಯಾಗಿ ಅಧ್ಯಯನದಲ್ಲಿ ಭಾಗವಹಿಸುವ ಮಹಿಳೆಯರು ಪುರುಷರಿಗಿಂತ ಹೆಚ್ಚು ತೂಕ ಹೊಂದಿದ್ದಾರೆ. ಬೊಜ್ಜು, ಮಧುಮೇಹದೊಂದಿಗೆ ತೊಡಕುಗಳು ಮತ್ತಷ್ಟು ಉಲ್ಬಣವಾಗಬಹುದು. ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಅಪಾಯ ಹೆಚ್ಚಿಸುತ್ತದೆ. ಇವೆರಡೂ ಕಾಲಾನಂತರದಲ್ಲಿ ಹೃದಯದ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ.

type 2 diabetes  How dangerous is diabetes for women  ಟೈಪ್ 2 ಮಧುಮೇಹ ಎಷ್ಟು ಅಪಾಯಕಾರಿ  How dangerous is type 2 diabetes
ಟೈಪ್ 2 ಮಧುಮೇಹವಿರುವ ಮಹಿಳೆಯರು ವಹಿಸಬೇಕಾದ ಮುಚ್ಚರಿಕೆಗಳೇನು? (ETV Bharat)

ಟೈಪ್​ 2 ಡಯಾಬಿಟಿಸ್ ಹೊಂದಿರುವ ಮಹಿಳೆಯರಿಗೆ ಅನುಸರಿಸಬೇಕಾದ ಕ್ರಮಗಳೇನು?: ಡಾ.ಮೋಹನ್ ಬಿ. ಆಲೂರ್ ಅವರು ತಿಳಿಸುವ ಪ್ರಕಾರ, ಮಹಿಳೆಯರು ಟೈಪ್​ 2 ಮಧುಮೇಹ ನಿಯಂತ್ರಣದಲ್ಲಿಡಲು ಆರೋಗ್ಯಕರ ಜೀವನಶೈಲಿ ಹಾಗೂ ಸರಿಯಾದ ಆಹಾರ ಕ್ರಮ ಮತ್ತು ವೈದ್ಯರು ಸೂಚಿಸಿದ ಔಷಧಿಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ. ಮತ್ತಷ್ಟು ಮಹತ್ವದ ಸಲಹೆಗಳನ್ನು ಇಲ್ಲಿ ನೀಡಿದ್ದಾರೆ.

ವೈದ್ಯರು ಸೂಚಿಸುವ ಆರೋಗ್ಯಕರ ಆಹಾರ ಕ್ರಮಗಳು:

  1. ಪಾಲಕ್, ಬ್ರೊಕೊಲಿ, ಸೌತೆಕಾಯಿ, ಹಾಗಲಕಾಯಿ ಸೇರಿದಂತೆ ಅರ್ಧ ಪ್ಲೇಟ್ ಪಿಷ್ಟರಹಿತ ತರಕಾರಿಗಳನ್ನು ಸೇವಿಸಿ.
  2. ಸಿರಿಧಾನ್ಯಗಳಾದ ಬಿಳಿ ಅಕ್ಕಿಯ ಬದಲಿಗೆ ಕಂದು ಅಕ್ಕಿ ಸೇವಿಸಬೇಕು, ರಾಗಿ, ಜೋಳ, ಓಟ್ಸ್, ಕ್ವಿನೋವಾ ಬಳಕೆ ಮಾಡಬೇಕು.
  3. ಪ್ರೋಟೀನ್ ಮೂಲಗಳಾದ ಬೇಳೆಕಾಳುಗಳು, ಮೊಳಕೆ ಕಾಳುಗಳು, ಮೊಟ್ಟೆ, ಮೀನು, ಚಿಕನ್ ಸೇವಿಸಬೆಕಾಗುತ್ತದೆ.
  4. ಮೈದಾ, ಬಿಳಿ ಬ್ರೆಡ್, ಆಲೂಗಡ್ಡೆ, ಸಕ್ಕರೆ, ಸಿಹಿತಿಂಡಿಗಳನ್ನು ಕಟ್ಟುನಿಟ್ಟಾಗಿ ತೀರಾ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಾತ್ತದೆ.
  5. ಸೇಬು, ಪೇರಲ, ಪಪ್ಪಾಯಿ, ಬೆರಿಹಣ್ಣುಗಳನ್ನು ಮಿತವಾಗಿ ಸೇವಿಸಿ.
  6. ಬಾದಾಮಿ, ವಾಲ್ನಟ್ಸ್, ಚಿಯಾ ಬೀಜಗಳು, ಫ್ಲಾಕ್ಸ್ ಸೀಡ್ಸ್ (ಅಗಸೆ ಬೀಜ) ಡಯಟ್​ನಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ.
  7. ನಿತ್ಯ ಕನಿಷ್ಠ 2ರಿಂದ 3 ಲೀಟರ್ ನೀರು ಕುಡಿಯಬೇಕಾಗುತ್ತದೆ, ಸಕ್ಕರೆ ಸಹಿತ ಪಾನೀಯಗಳನ್ನು ತಪ್ಪಿಸಬೇಕಾಗುತ್ತದೆ.
type 2 diabetes  How dangerous is diabetes for women  ಟೈಪ್ 2 ಮಧುಮೇಹ ಎಷ್ಟು ಅಪಾಯಕಾರಿ  How dangerous is type 2 diabetes
ಟೈಪ್ 2 ಡಯಾಬಿಟಿಸ್ ಹೊಂದಿರುವ ಮಹಿಳೆಯರಿಗೆ ಜೀವನಶೈಲಿ & ಆಹಾರ ಕ್ರಮ ಹೇಗಿರಬೇಕು? (ETV Bharat)

ವೈದ್ಯರು ನೀಡಿರುವ ವ್ಯಾಯಾಮದ ನಿಯಮಗಳು:

  1. ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಮಾಡಬೇಕು
  2. ವಾರಕ್ಕೆ 2ರಿಂದ 3 ಬಾರಿ ಶಕ್ತಿವರ್ಧಕ ವ್ಯಾಯಾಮ ಮಾಡಬೇಕು
  3. ಯೋಗ ಮತ್ತು ಪೈಲೇಟ್ಸ್ ಕೂಡ ಉಪಯುಕ್ತ
  4. ರಕ್ತ ಪರಿಚಲನೆ ಮತ್ತು ಹೃದಯದ ಆರೋಗ್ಯಕ್ಕೆ ಉತ್ತಮವಾದ ಏರೋಬಿಕ್ ವ್ಯಾಯಾಮ
  5. ವೇಗದ ವಾಕಿಂಗ್ ಪ್ರತಿದಿನ 30 ನಿಮಿಷಗಳು
  6. ಕೀಲುಗಳ ಮೇಲೆ ಕಡಿಮೆ ಒತ್ತಡ ಬೀಳುವಂತಹ ಈಜು ಮತ್ತು ಜಲ ಕ್ರೀಡೆಗಳು
  7. ಸೈಕ್ಲಿಂಗ್ ಹಾಗೂ ನೃತ್ಯ ಅಥವಾ ಏರೋಬಿಕ್ಸ್ ತರಗತಿಗಳು
  8. ತೂಕ ಎತ್ತುವಿಕೆ ವ್ಯಾಯಾಮ
  9. ರೆಸಿಸ್ಟೆನ್ಸ್ ಬ್ಯಾಂಡ್ಸ್ ವ್ಯಾಯಾಮ
  10. ಪುಶ್-ಅಪ್ಸ್, ಲಂಜೆಸ್, ಮತ್ತು ಸ್ಕ್ವಾಟ್ಸ್ ಮಾಡಬಹುದು
  11. ನಮ್ಯತೆ ಮತ್ತು ಸಮತೋಲನ ವ್ಯಾಯಾಮ

ಸಂಶೋಧನಾ ವರದಿಗಳು:

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಚಿಕ್ಕ ಮಕ್ಕಳಲ್ಲಿ ಕೂಡ ಸಂಧಿವಾತ ಬರಬಹುದೇ? ಜುವೆನೈಲ್ ಇಡಿಯೋಪಥಿಕ್ ಆರ್ಥರೈಟಿಸ್ ಎಂದರೇನು & ಇದರ ಚಿಹ್ನೆಗಳೇನು?
  2. ಏರ್​ ಕೂಲರ್ ಆನ್​ ಮಾಡಿದರೆ ನಿಮ್ಮ ಕೋಣೆಯಲ್ಲಿ ಆರ್ದ್ರತೆ, ಜಿಗುಟುತನ ಹೆಚ್ಚಾಗುತ್ತದೆಯೇ? ಇಲ್ಲಿವೆ ನೋಡಿ ಸರಳ ಟಿಪ್ಸ್
  3. ಬೇಸಿಗೆಯಲ್ಲಿ ಕಾಡುವ ಚರ್ಮದ ಸಮಸ್ಯೆಗಳು ಯಾವುವು? ತ್ವಚೆಯ ರಕ್ಷಣೆ ಹೇಗೆ?
  4. ದೇಹದ ಈ 6 ಭಾಗಗಳಲ್ಲಿ ಮೊದಲು ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು: WHO ವರದಿ ತಿಳಿಸುವುದೇನು?
  5. ಹಠಾತ್ ಬೀಳುವಿಕೆ, ದೇಹದ ಸಮತೋಲನ ಕಳೆದುಕೊಳ್ಳುವುದು 'ಸಾರ್ಕೊಪೆನಿಯಾ' ಲಕ್ಷಣವೇ? ತಜ್ಞರು ಏನಂತಾರೆ?