ETV Bharat / health

ಹವಾಮಾನ ಬದಲಾವಣೆ ಹಿನ್ನೆಲೆ ಡೆಂಗ್ಯೂ, ಚಿಕೂನ್‌ಗುನ್ಯಾ ಪ್ರಕರಣಗಳ ಹೆಚ್ಚಳ: ತಡೆಗಟ್ಟಲು ವೈದ್ಯರು ನೀಡಿದ ಸಲಹೆಗಳೇನು?

ವೇಗವಾಗಿ ಹವಾಮಾನ ಬದಲಾವಣೆಯಾಗಿರುವ ಹಿನ್ನೆಲೆ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳ ಅಪಾಯ ಹೆಚ್ಚುತ್ತಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ಮೂಲಗಳನ್ನು ನಿವಾರಿಸಬೇಕು. ನೀರು ಎಲ್ಲೆಂದರಲ್ಲಿ ನಿಲ್ಲದಂತೆ ಗಮನಹರಿಸಬೇಕಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

Dengue  Chikungunya  Dengue cases increase  ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ
ಡೆಂಗ್ಯೂ, ಚಿಕೂನ್‌ಗುನ್ಯಾ ಪ್ರಕರಣಗಳ ಹೆಚ್ಚಳ- ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : November 7, 2025 at 6:02 PM IST

4 Min Read
Choose ETV Bharat

ಭಟಿಂಡಾ (ಪಂಜಾಬ್): ವೇಗವಾಗಿ ಹವಾಮಾನ ಬದಲಾಗುತ್ತಿರುವ ಹಿನ್ನೆಲೆ ಜನರು ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತಿದೆ. ಅದರಲ್ಲೂ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳು ವೇಗವಾಗಿ ಹರಡುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿವೆ.

ಡಾ. ಉಷಾ ಗೋಯಲ್ ಪ್ರತಿಕ್ರಿಯಿಸಿ, ''ಡೆಂಗ್ಯೂ ಇನ್ನು ಮುಂದೆ ಸಾಮಾನ್ಯ ರೋಗವಲ್ಲ, ಆರೋಗ್ಯ ಇಲಾಖೆಯು ಡೆಂಗ್ಯೂ ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದೆ. ಇದರೊಂದಿಗೆ ಮನೆಯ ಒಳಗೆ ಅಥವಾ ಹೊರಗೆ ಎಲ್ಲಿಯೂ ನೀರು ನಿಲ್ಲಲು ಬಿಡಬೇಡಿ ಎಂದು ಜನರಿಗೆ ಮನವಿ ಮಾಡಲಾಗುತ್ತಿದೆ. ಯಾವುದೇ ಪಾತ್ರೆಯಲ್ಲಿ ನೀರು ಇದ್ದರೆ ಆ ಪಾತ್ರೆಯನ್ನು ತೊಳೆದು ಚೆನ್ನಾಗಿ ಸ್ವಚ್ಛಗೊಳಿಸಿ. ಡೆಂಗ್ಯೂ ತಡೆಗಟ್ಟಲು ಆರೋಗ್ಯ ಇಲಾಖೆಯು ಸರ್ಕಾರಿ ಹಾಗೂ ಸರ್ಕಾರೇತರ ಕಟ್ಟಡಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದೆ. ಜೊತೆಗೆ ಕೊಳಗಳಲ್ಲಿ ಸೊಳ್ಳೆ ನಿವಾರಕ ಪೌಡರ್ ಸಿಂಪಡಣೆ ಮಾಡಲಾಗುತ್ತಿದೆ. ಡೆಂಗ್ಯೂ ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ.''

ಡೆಂಗ್ಯೂ, ಚಿಕೂನ್‌ಗುನ್ಯಾ ತಡೆಗಟ್ಟಲು ಟಿಪ್ಸ್: ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ತಪ್ಪಿಸಲು, ಸೊಳ್ಳೆಗಳ ಸಂತಾನೋತ್ಪತ್ತಿ ಮೂಲಗಳನ್ನು ನಿವಾರಿಸಬೇಕಾಗುತ್ತದೆ. ನೀರು ಎಲ್ಲೆಂದರಲ್ಲಿ ನಿಲ್ಲದಂತೆ ಗಮನಹರಿಸಬೇಕಾಗುತ್ತದೆ. ವಾಂತಿ ಅಥವಾ ಅತಿಸಾರ ಉಂಟಾದರೆ ORS ಬಳಸಿ. ಇದೀಗ ಆರೋಗ್ಯ ಇಲಾಖೆಯಿಂದ ORS ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಮನೆಯಲ್ಲಿ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಾಡಬೇಕಾಗುತ್ತದೆ. ಇದರೊಂದಿಗೆ, ತೆರೆದ ಸ್ಥಳಗಳಲ್ಲಿ ಮಲವಿಸರ್ಜನೆ ಮಾಡಲು ಹೋಗಬೇಡಿ ಮತ್ತು ಕುದಿಸಿದ ನೀರನ್ನು ಕುಡಿಯಿರಿ. ನೀರನ್ನು ಶುದ್ಧೀಕರಿಸಲು ಆರೋಗ್ಯ ಇಲಾಖೆಯಿಂದ ಕ್ಲೋರಿನ್ ಮಾತ್ರೆಗಳನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ.

ಡೆಂಗ್ಯೂ ಲಕ್ಷಣಗಳೇನು?: "ನೀರು ನಿಂತ ಸ್ಥಳಗಳಲ್ಲಿ ಸೊಳ್ಳೆ ನಿವಾರಕ ಪೌಡರ್ ಸಿಂಪಡಣೆ ಮಾಡಬೇಕು. ಒಬ್ಬ ವ್ಯಕ್ತಿಯು ತೀವ್ರ ಜ್ವರ, ತಲೆನೋವು, ಸ್ನಾಯು ನೋವು, ಕಣ್ಣುಗಳ ಹಿಂದೆ ನೋವು, ಚರ್ಮದ ಮೇಲೆ ದದ್ದುಗಳು ಇತ್ಯಾದಿ ಸೇರಿದಂತೆ ಡೆಂಗ್ಯೂ ಜ್ವರದ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಹಾಗೂ ಪರೀಕ್ಷೆ ಮಾಡಿಕೊಳ್ಳಿ. ನೀವು ಔಷಧ ತೆಗೆದುಕೊಳ್ಳಬೇಕಾದರೆ, ಪ್ಯಾರಸಿಟಮಾಲ್ ಅನ್ನು ಮಾತ್ರ ತೆಗೆದುಕೊಳ್ಳಿ. ಡೆಂಗ್ಯೂ ಅಥವಾ ಚಿಕೂನ್‌ಗುನ್ಯಾ ಇರುವುದು ದೃಢಪಟ್ಟ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರು ಸೂಚಿಸಿದ ಮಾತ್ರೆಗಳನ್ನು ತೆಗೆದುಕೊಳ್ಳಬೇಕು'' ಎಂದು ಡಾ. ಉಷಾ ತಿಳಿಸುತ್ತಾರೆ.

ಆರೋಗ್ಯ ಅಧಿಕಾರಿಯ ಸಲಹೆ: ಮಳೆಗಾಲದಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚುತ್ತಿದೆ. ಮನೆಗಳ ಛಾವಣಿಗಳ ಮೇಲೆ ಬಿದ್ದಿರುವ ಕಸ ಹಾಗೂ ಟೈರ್‌ಗಳಲ್ಲಿ ನೀರು ನಿಲ್ಲುವುದರಿಂದ ಡೆಂಗ್ಯೂ ಸೊಳ್ಳೆಗಳ ಸಂತಾನೋತ್ಪತ್ತಿಯ ಅಪಾಯ ಹೆಚ್ಚುತ್ತಿದೆ. ನಿಮ್ಮನ್ನು ನಿಮ್ಮ ಕುಟುಂಬವನ್ನು ಹಾಗೂ ಸಮಾಜವನ್ನು ಡೆಂಗ್ಯೂ ಜ್ವರದಿಂದ ರಕ್ಷಿಸಿಕೊಳ್ಳಲು, ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸೊಳ್ಳೆಗಳ ಸಂತಾನೋತ್ಪತ್ತಿಯ ಮೂಲಗಳನ್ನು ತೊಡೆದುಹಾಕುವುದು. ಪ್ರತಿ ಶುಕ್ರವಾರ ಸರ್ಕಾರಿ ಕಚೇರಿಗಳಲ್ಲಿ ಒಣ ದಿನವನ್ನು ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಈ ಸಮಯದಲ್ಲಿ ಮನೆಯಲ್ಲಿ ಇರುವ ಕೂಲರ್‌ಗಳು, ರೆಫ್ರಿಜರೇಟರ್ ಟ್ರೇಗಳು, ಪಕ್ಷಿಗಳಿಗಾಗಿ ಇರಿಸಲಾಗಿರುವ ನೀರಿನ ಬಟ್ಟಲುಗಳು ಇತ್ಯಾದಿಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಮನೆಯಲ್ಲಿರುವ ಹೆಚ್ಚುವರಿ ಕಸವನ್ನು ತೆಗೆದುಹಾಕಬೇಕು. ಇದರೊಂದಿಗೆ, ಸೊಳ್ಳೆ ಲಾರ್ವಾಗಳನ್ನು ನಿರ್ಮೂಲನೆ ಮಾಡಲು ಪ್ರತಿ ವಾರ ನಿಂತ ನೀರು ಮತ್ತು ಮನೆಯ ಸಮೀಪ ಇರುವ ಕೊಳಗಳಲ್ಲಿ ಕಪ್ಪು ಎಣ್ಣೆಯನ್ನು ಸಿಂಪಡಿಸಬೇಕು ಎಂದು ಭಟಿಂಡಾ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಉಷಾ ಗೋಯಲ್ ಸಲಹೆ ನೀಡಿದರು.

ಪಂಜಾಬ್‌ನಲ್ಲಿ ಡೆಂಗ್ಯೂ ಪ್ರಕರಣಗಳು & ಸಾವುಗಳ ಸಂಖ್ಯೆ: ರಾಷ್ಟ್ರೀಯ ಆರೋಗ್ಯ ಮಿಷನ್ ದತ್ತಾಂಶದ ಪ್ರಕಾರ, ಪಂಜಾಬ್‌ನಲ್ಲಿ ಡೆಂಗ್ಯೂ ಪ್ರಕರಣಗಳ ಬಗ್ಗೆ ತಿಳಿಯುವುದಾದರೆ, 2019ರಲ್ಲಿ 10,289 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದವು, 14 ಜನರು ಸಾವನ್ನಪ್ಪಿದ್ದಾರೆ, 2020ರಲ್ಲಿ 8,435 ಪಾಸಿಟಿವ್ ಪ್ರಕರಣಗಳು ಮತ್ತು 22 ಜನರು ಸಾವನ್ನಪ್ಪಿದ್ದಾರೆ, 2021ರಲ್ಲಿ 23,389 ಪಾಸಿಟಿವ್ ಪ್ರಕರಣಗಳು ಮತ್ತು 55 ಜನರು ಸಾವನ್ನಪ್ಪಿದ್ದಾರೆ. 2022ರಲ್ಲಿ 11,030 ಪಾಸಿಟಿವ್ ಪ್ರಕರಣಗಳು ಹಾಗೂ 41 ಜನರು ಸಾವನ್ನಪ್ಪಿದ್ದಾರೆ, 2023ರಲ್ಲಿ 13,687 ಪಾಸಿಟಿವ್ ಪ್ರಕರಣಗಳು ಹಾಗೂ 39 ಜನರು ಸಾವನ್ನಪ್ಪಿದ್ದಾರೆ. 2024 ರಲ್ಲಿ 6,260 ಪಾಸಿಟಿವ್ ಪ್ರಕರಣಗಳು ಹಾಗೂ 13 ಜನರು ಸಾವನ್ನಪ್ಪಿದ್ದಾರೆ. 2025ರಲ್ಲಿ 11,825 ಪಾಸಿಟಿವ್ ಪ್ರಕರಣಗಳು ಹಾಗೂ 7 ಜನರು ಸಾವನ್ನಪ್ಪಿದ್ದಾರೆ. ಈ ವರ್ಷ ನವೆಂಬರ್ 5 ರವರೆಗೆ ಪಂಜಾಬ್‌ನಲ್ಲಿ 2,625 ಡೆಂಗ್ಯೂ ಪ್ರಕರಣಗಳು ಮತ್ತು 37 ಚಿಕೂನ್‌ಗುನ್ಯಾ ಪ್ರಕರಣಗಳು ಹಾಗೂ 7 ಜನರು ಸಾವನ್ನಪ್ಪಿದ್ದಾರೆ. ಪಂಜಾಬ್‌ನ ಪಟಿಯಾಲ ಹಾಗೂ ಲುಧಿಯಾನದಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿ ಕಂಡು ಬರುತ್ತಿದೆ.

ಚಿಕೂನ್‌ಗುನ್ಯಾ ಪ್ರಕರಣಗಳು: ಚಿಕೂನ್‌ಗುನ್ಯಾ ಪ್ರಕರಣಗಳ ಬಗ್ಗೆ ಹೇಳುವುದಾದರೆ, 2018ರಲ್ಲಿ 25 ಪ್ರಕರಣಗಳು, 2019ರಲ್ಲಿ 11 ಪ್ರಕರಣಗಳು, 2020 ರಲ್ಲಿ 0 ಪ್ರಕರಣಗಳು, 2021ರಲ್ಲಿ 144 ಪ್ರಕರಣಗಳು, 2022 ರಲ್ಲಿ 469 ಪ್ರಕರಣಗಳು, 2023 ರಲ್ಲಿ 2072 ಪ್ರಕರಣಗಳು, 2024 ರಲ್ಲಿ 224 ಪ್ರಕರಣಗಳು ಮತ್ತು 2025 ರಲ್ಲಿ 37 ಪ್ರಕರಣಗಳು ವರದಿಯಾಗಿವೆ ಎಂಬುದು ತಿಳಿದಿದೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ: