ಬೇಸಿಗೆಯಲ್ಲಿ ನಿರ್ಜಲೀಕರಣ, ಜೀರ್ಣಕ್ರಿಯೆ ಸಮಸ್ಯೆ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳನ್ನು ತಡೆಯಲು ಈ ಆಹಾರಗಳು ಬೆಸ್ಟ್
ಬೇಸಿಗೆಯಲ್ಲಿ ನಾವು ಸೇವನೆ ಮಾಡುವ ಕೆಲವು ಆಹಾರಗಳು ದೇಹದ ಉಷ್ಣತೆ ಹೆಚ್ಚಿಸುತ್ತವೆ. ಪರಿಣಾಮವಾಗಿ ನಿರ್ಜಲೀಕರಣ, ಅಜೀರ್ಣ ಸೇರಿದಂತೆ ವಿವಿಧ ಆರೋಗ್ಯದ ತೊಂದರೆಗಳಿಗೆ ಕಾರಣವಾಗುತ್ತದೆ. ಬೇಸಿಗೆಯಲ್ಲಿ ಯಾವೆಲ್ಲ ಆಹಾರಗಳಿಂದ ದೂರವಿರಬೇಕು ಎಂಬುದರ ಬಗ್ಗೆ ವೈದ್ಯರು ತಿಳಿಸುವುದೇನು?


Published : February 28, 2026 at 12:57 PM IST
ರಾಜ್ಯದ ವಿಜಯಪುರ, ರಾಯಚೂರು, ಕಲಬುರಗಿ, ಬಳ್ಳಾರಿ, ವಿಜಯನಗರ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಬೇಸಿಗೆಯ ಬಿಸಿಲಿನ ಅಬ್ಬರ ಶುರುವಾಗಿದೆ. ಬೇಸಿಗೆಯ ಸಮಯದಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುವುದು ತುಂಬಾ ಮುಖ್ಯವಾಗುತ್ತದೆ. ನಾವು ಸೇವಿಸುವ ಕೆಲವು ಆಹಾರಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ನಿರ್ಜಲೀಕರಣ, ಜೀರ್ಣಕ್ರಿಯೆಯ ಸಮಸ್ಯೆ, ಆಲಸ್ಯ ಸೇರಿದಂತೆ ವಿವಿಧ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದಾಗಿ ಬೇಸಿಗೆಯಲ್ಲಿ ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಬೇಸಿಗೆಯಲ್ಲಿ ನಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಆಗಬಾರದು ಅಂದರೆ, ಕೆಲವು ಆಹಾರಗಳಿಂದ ದೂರವಿರಬೇಕು ಎಂಬುದರ ಬಗ್ಗೆ ಈ ಸ್ಟೋರಿಯಲ್ಲಿ ಅರಿತುಕೊಳ್ಳೋಣ.
ಮಸಾಲೆಯುಕ್ತ ಪದಾರ್ಥಗಳು: ಬಹಳಷ್ಟು ಮಸಾಲೆಗಳನ್ನು ಹೊಂದಿರುವ ಆಹಾರವು ರುಚಿಕರವಾಗಿದ್ದರೂ, ಬೇಸಿಗೆಯಲ್ಲಿ ಅವು ದೇಹಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಅಧಿಕ ಖಾರವಿರುವ ಮತ್ತು ಮಸಾಲೆಯುಕ್ತ ಪದಾರ್ಥಗಳು ದೇಹದಲ್ಲಿ 'ಥರ್ಮೋಜೆನೆಸಿಸ್' (ಶಾಖ ಉತ್ಪಾದನೆ) ಪ್ರಕ್ರಿಯೆ ವೇಗಗೊಳಿಸುತ್ತವೆ. ಇದರಿಂದ ಅತಿಯಾದ ಬೆವರು, ಹೊಟ್ಟೆ ಉರಿ ಹಾಗೂ ಚರ್ಮದ ದದ್ದುಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸುತ್ತಾರೆ.

ತಂಪು ಪಾನೀಯಗಳು: ಬೇಸಿಗೆಯಲ್ಲಿ ಅನೇಕ ಜನರು ಕೂಲ್ ಡ್ರಿಂಕ್ಸ್, ಸೋಡಾಗಳು ಹಾಗೂ ಜ್ಯೂಸ್ ಕುಡಿಯುತ್ತಾರೆ. ಏಕೆಂದರೆ ಅವು ದೇಹವನ್ನು ತಂಪಾಗಿರಿಸುತ್ತವೆ ಎಂದು ಹಲವು ಜನರು ಭಾವಿಸುತ್ತಾರೆ. ಈ ತಂಪು ಪಾನೀಯಗಳಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶವಿರುತ್ತದೆ. ಬೇಸಿಗೆ ಸಮಯದಲ್ಲಿ ನಿತ್ಯ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ದೇಹದಲ್ಲಿನ ಚೈತನ್ಯವು ದೂರವಾಗಿ ನಿಮ್ಮನ್ನು ಆಲಸ್ಯ ಕಾಡಬಹುದು. ಅಧಿಕ ಬಿಸಿಲಿ ತಾಪಮಾನ ಇರುವ ಸಮಯದಲ್ಲಿ ಈ ರೀತಿಯ ಪಾನೀಯಗಳು ತಾತ್ಕಾಲಿಕವಾಗಿ ನಿಮ್ಮ ಬಾಯಾರಿಕೆಯನ್ನು ತಣಿಸಬಹುದು. ವಾಸ್ತವವಾಗಿ ದೇಹದಲ್ಲಿನ ನೀರಿನ ಸಂಗ್ರಹವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

ಡೈರಿ ಉತ್ಪನ್ನಗಳು: ಬೇಸಿಗೆಯ ಸಮಯದಲ್ಲಿ ಅನೇಕ ಜನರು ಮಿಲ್ಕ್‌ಶೇಕ್‌ಗಳನ್ನು ಸೇವನೆ ಮಾಡಲು ಇಷ್ಟಪಡುತ್ತಾರೆ. ಹಾಲಿನಿಂದ ಸಿದ್ಧಪಡಿಸಿವ ಇತರ ಜ್ಯೂಸ್‌ಗಳನ್ನು ಸೇವಿಸುತ್ತಾರೆ. ಹಾಲು, ಬೆಣ್ಣೆ ಅಥವಾ ಚೀಸ್‌ನಂತಹ ಡೈರಿ ಉತ್ಪನ್ನಗಳು ಜೀರ್ಣಿಸಿಕೊಳ್ಳಲು ಕಷ್ಟ. ಹೀಗಾಗಿ ಆದಷ್ಟು ಡೈರಿ ಉತ್ಪನ್ನಗಳನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ಹುರಿದ ಹಾಗೂ ಕರಿದ ಆಹಾರಗಳು: ಬೇಸಿಗೆ ಅವಧಿಯಲ್ಲಿ ಹುರಿದ ಹಾಗೂ ಕರಿದ ಆಹಾರಗಳಿಂದ ದೂರ ಇರುವುದು ತುಂಬಾ ಮುಖ್ಯವಾಗುತ್ತದೆ. ಪಕೋಡಾಗಳು, ಸಮೋಸಾಗಳು, ಫ್ರೆಂಚ್ ಫ್ರೈಸ್, ಬಜ್ಜಿ ಹಾಗೂ ಎಣ್ಣೆಯಲ್ಲಿ ಹುರಿದ ವಿವಿಧ ಪದಾರ್ಥಗಳಲ್ಲಿ ಹೆಚ್ಚಿನ ಎಣ್ಣೆಯ ಅಂಶವಿದೆ. ಇವು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಬೇಸಿಗೆಯಲ್ಲಿ ಹೆಚ್ಚು ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ಹೀಟ್ ಸ್ಟ್ರೋಕ್ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ತಿಳಿಸುತ್ತಾರೆ.

ಏಲಕ್ಕಿ, ದಾಲ್ಚಿನ್ನಿ, ಲವಂಗ ಮತ್ತು ಮೆಣಸಿನಕಾಯಿಯಂತಹ ಮಸಾಲೆಗಳನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬೇಸಿಗೆಯಲ್ಲಿ ಈ ಮಸಾಲೆ ಪದಾರ್ಥಗಳು ದೇಹಕ್ಕೆ ಅಷ್ಟು ಒಳ್ಳೆಯದಲ್ಲ. ಇವು ಅತಿಯಾದ ಶಾಖವನ್ನು ಉಂಟುಮಾಡುತ್ತವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಬೇಸಿಗೆಯಲ್ಲಿ ನಿರ್ಜಲೀಕರಣ, ಅಜೀರ್ಣ ಸಮಸ್ಯೆ ತಡೆಯುವುದು ಹೇಗೆ: ಬೇಸಿಗೆಯಲ್ಲಿ ದೇಹವನ್ನು ನಿರ್ಜಲೀಕರಣ, ಅಜೀರ್ಣ ಸಮಸ್ಯೆ ತಪ್ಪಿಸಲು ನೀರಿನಂಶ ಅಧಿಕವಿರುವ ಆಹಾರಗಳನ್ನು ಸೇವಿಸಬೇಕು. ಅದರಲ್ಲೂ ಪ್ರಮುಖವಾಗಿ ಸೌತೆಕಾಯಿ, ಕಲ್ಲಂಗಡಿ, ಕರ್ಬೂಜ, ಮೊಸರು, ಮಜ್ಜಿಗೆ, ಎಳನೀರು, ನಿಂಬೆ ಪಾನಕ, ದ್ರಾಕ್ಷಿ ಹಾಗೂ ಮಾವಿನ ಹಣ್ಣು, ದಾಳಿಂಬೆ ನಿಯಮಿತವಾಗಿ ಸೇವಿಸುವುದು ಉತ್ತಮವಾಗಿದೆ. ಟೊಮೆಟೊ, ವಿವಿಧ ಹಸಿರು ಸೊಪ್ಪುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುವುದರ ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ.

ಬೇಸಿಗೆಯಲ್ಲಿ ಸೇವಿಸಬೇಕಾದ ಆಹಾರಗಳು ಯಾವುವು?:
- ಅಧಿಕ ನೀರಿನಂಶದ ಹಣ್ಣುಗಳು: ಕಲ್ಲಂಗಡಿ, ಕರ್ಬೂಜ, ಮಾವಿನ ಹಣ್ಣು, ಪಪ್ಪಾಯಿ, ದ್ರಾಕ್ಷಿಗಳಲ್ಲಿ ನೀರಿನಂಶ ಅಧಿಕ ಪ್ರಮಾಣದಲ್ಲಿ ಇರುತ್ತದೆ. ದೇಹವನ್ನು ಹೈಡ್ರೇಟ್ ಆಗಿರಿಸುವಲ್ಲಿ ಮುಖ್ಯವಾಗಿವೆ.
- ಹಸಿರು ತರಕಾರಿಗಳು: ಸೌತೆಕಾಯಿ, ಟೊಮೆಟೊ, ಪಾಲಕ್ ಬ್ರೊಕೊಲಿ, ಎಲೆಕೋಸು ಹಾಗೂ ಹಸಿರು ಸೊಪ್ಪುಗಳನ್ನು ಸಲಾಡ್ ರೂಪದಲ್ಲಿ ತಿನ್ನುವುದು ಉತ್ತಮ.
- ಆರೋಗ್ಯಕರ ತಂಪು ಪಾನೀಯಗಳು: ಮಜ್ಜಿಗೆ, ಮೊಸರು, ಎಳನೀರು, ಸಬ್ಜಾ ಬೀಜದ ಪಾನೀಯಗಳು ಹಾಗೂ ನಿಂಬೆ ಪಾನಕ ದೇಹದ ಉಷ್ಣತೆ ತಗ್ಗಿಸಲು ಸಹಾಯ ಮಾಡುತ್ತದೆ.
- ಜ್ಯೂಸ್ಗಳು: ಅನಾನಸ್, ದಾಳಿಂಬೆ ರಸದಲ್ಲಿ ಹೇರಳವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಚರ್ಮದ ಆರೋಗ್ಯ ಕಾಪಾಡುತ್ತದೆ.
- ವಿವಿಧ ಪೋಷಕಾಂಶಗಳು ಅವಶ್ಯ: ವಿಟಮಿನ್ ಸಿ ಮತ್ತು ಲೈಕೋಪೀನ್ ಹೊಂದಿರುವ ಟೊಮೇಟೊ, ವಿಟಮಿನ್ ಎ ಹೊಂದಿರುವ ಆಮ್ಲಾ ಸೇವನೆ ಮಾಡುವುದು ಚರ್ಮದ ಕಾಂತಿ ಹೆಚ್ಚಿಸುತ್ತದೆ ಎಂಬುದು ಆರೋಗ್ಯ ತಜ್ಞರ ಸಲಹೆಯಾಗಿದೆ.
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:
- ನಿತ್ಯ ಶಿಶುಗಳಿಗೆ ಮಸಾಜ್ ಮಾಡುವುದರಿಂದ ಮೂಳೆಗಳು ಸದೃಢವಾಗುತ್ತವೆಯೇ? ಯಾವೆಲ್ಲಾ ಪ್ರಯೋಜನಗಳಿವೆ?: ವೈದ್ಯರು ತಿಳಿಸುವುದೇನು?
- ನಾರಿನ ಕೊರತೆಯಿಂದ ಶುಗರ್, ತೂಕ ಹೆಚ್ಚಳ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳು: ದೇಹಕ್ಕೆ ಪೂರಕವಾದ ಫೈಬರ್ ಪಡೆಯುವುದು ಹೇಗೆ?
- ಯಾವುದೇ ಚಿಹ್ನೆಗಳು ಕಾಣಿಸದೆ ಇದ್ದರೂ ಕೊಲೆಸ್ಟ್ರಾಲ್ ಮಟ್ಟಗಳು ಏರಿಕೆ: ಕೊಲೆಸ್ಟ್ರಾಲ್ ಲೆವಲ್ ಗುರುತಿಸುವುದು ಹೇಗೆ?
- ನಿಮ್ಮ ತ್ವಚೆ ಚಿಕ್ಕ ವಯಸ್ಸಿನಲ್ಲಿಯೇ ಸುಕ್ಕುಗಟ್ಟುತ್ತಿದೆಯೇ? ಇಲ್ಲಿವೆ ನೈಸರ್ಗಿಕ ಪರಿಹಾರಗಳು
- ತಾಪಮಾನ ಏರಿಕೆಯಿಂದ ಭಾರತ, ಆಫ್ರಿಕಾದಲ್ಲಿ ಗಂಡು ಮಕ್ಕಳ ಜನನ ಪ್ರಮಾಣ ಇಳಿಕೆ: ನೂತನ ಅಧ್ಯಯನದಿಂದ ಆಘಾತಕಾರಿ ಮಾಹಿತಿ

