ಮಳೆಗಾಲದಲ್ಲಿ ಹಾವುಗಳು ಮನೆಯೊಳಗೆ ಬರದಂತೆ ತಡೆಯುವುದು ಅತಿ ಮುಖ್ಯ: ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಜ್ಞರ ಸಲಹೆಗಳು
ಮಳೆಗಾಲದಲ್ಲಿ ಹಾವುಗಳು ಮನೆಯೊಳಗೆ ಬರದಂತೆ ತಡೆಯುವುದು ಅತಿ ಮುಖ್ಯ. ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ ಎನ್ನುತ್ತಾರೆ ತಜ್ಞರು.

Published : July 6, 2026 at 3:18 PM IST
ಮಳೆಗಾಲದಲ್ಲಿ ಬಿಲದಿಂದ ಹೊರಬರುವ ಹಾವುಗಳು ಒಣಗಿದ ಮತ್ತು ಸುರಕ್ಷಿತವಾದ ಜಾಗ ಹುಡುಕುತ್ತಾ ಮಾನವರು ವಾಸಿಸುವ ಪ್ರದೇಶಗಳತ್ತ ಬರುವುದು ಹೆಚ್ಚು. ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಹಾವುಗಳು ಮನೆಯೊಳಗೆ ಬರದಂತೆ ತಡೆಯುವುದು ಅತಿ ಮುಖ್ಯ.
ಇತ್ತೀಚಿನ ದಿನಗಳಲ್ಲಿ ರೈತರು ಮಾತ್ರವಲ್ಲದೆ, ಮನೆಯಲ್ಲಿರುವ ಜನರು ಸಹ ಹಾವು ಕಡಿತದಿಂದ ಸಾವು ಸಂಭವಿಸುತ್ತಿರುವ ವರದಿಗಳು ಹೆಚ್ಚಾಗಿವೆ. ನೀವು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಮತ್ತು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ, ನೀವು ಈ ಅಪಘಾತಗಳನ್ನು ತಡೆಯಬಹುದು ಎನ್ನುತ್ತಾರೆ ತಜ್ಞರು.
ಸುರಕ್ಷಿತ ಆಶ್ರಯ ಹುಡುಕಿಕೊಂಡು ಬರುವುದು ಏಕೆ: ಮಳೆ ಬಂದಾಗ ಬಿಲಗಳು ನೀರಿನಿಂದ ತುಂಬಿಹೋಗುತ್ತವೆ. ಬಿಲಗಳಲ್ಲಿ ನೀರು ನಿಲ್ಲುವಿಕೆ, ಹೆಚ್ಚಿದ ಆರ್ದ್ರತೆಯಿಂದಾಗಿ ಹಾವು ಸೇರಿದಂತೆ, ಚೇಳು ಹಾಗೂ ಇತರೆ ವಿಷಕಾರಿ ಜೀವಿಗಳು ತಮ್ಮ ಬಿಲಗಳಿಂದ ಹೊರಬರಲು ಶುರು ಮಾಡುತ್ತವೆ. ಸುರಕ್ಷಿತ ಆಶ್ರಯ ಹುಡುಕುತ್ತಾ ಮನೆ, ಅಂಗಡಿ, ಕೊಠಡಿಗಳು, ತೋಟಗಳು ಹಾಗೂ ಹತ್ತಿರದ ಖಾಲಿ ಪ್ರದೇಶಗಳಿಗೆ ಅಲೆದಾಡುತ್ತವೆ.

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು:
- ವಿಷಪೂರಿತ ಹಾವುಗಳು ಮತ್ತು ಇತರೆ ಕೀಟಗಳು ಬರದಂತೆ ನಿಮ್ಮ ಬಾಗಿಲು ಮತ್ತು ಕಿಟಕಿಗಳನ್ನು ಯಾವಾಗಲೂ ಮುಚ್ಚಿಡಿ.
- ತಾಜಾ ಗಾಳಿಗಾಗಿ ಅವುಗಳನ್ನು ತೆರೆದಿಡಲು ನೀವು ಬಯಸಿದರೆ, ಪರದೆಯನ್ನು ಖರೀದಿಸುವುದನ್ನು ಪರಿಗಣಿಸಿ.
- ಪರದೆಯು ಕೀಟಗಳು ಮತ್ತು ಹಾವುಗಳು ನಿಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯಬಹುದು.
- ವಿಷಪೂರಿತ ಹಾವುಗಳು ಮತ್ತು ಇತರೆ ಕೀಟಗಳಿಂದ ಕಚ್ಚಲ್ಪಡದಂತೆ ಮುನ್ನೆಚ್ಚರಿಕೆಗಳನ್ನು ಮನೆಯಲ್ಲಿ ಮಕ್ಕಳಿಗೆ ಕಲಿಸಿ.
- ಮಕ್ಕಳು ಗೋಡೆಗಳ ರಂಧ್ರಗಳ ಬಳಿ ಮತ್ತು ಮರದ ಕೊಂಬೆಗಳ ಬಳಿ ಆಟವಾಡದಂತೆ ಎಚ್ಚರಿಕೆ ವಹಿಸಿ.
- ಕತ್ತಲೆಯಲ್ಲಿ ನಡೆಯುವಾಗ ಕೆಳಗೆ ಮತ್ತು ಬದಿಗಳಿಗೆ ಸರಿಯಾಗಿ ನೋಡುವಂತೆ ಅವರಿಗೆ ಸೂಚನೆ ನೀಡಿ.
- ಪೊದೆ, ಮರ, ಜೌಗು ಪ್ರದೇಶ ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರು ಹಾವು ಕಡಿತಕ್ಕೆ ಒಳಗಾಗುವ ಅಪಾಯ ಹೆಚ್ಚು.
- ಅಕ್ಕಿ ಚೀಲಗಳು, ನಿರ್ಮಾಣ ಸಾಮಗ್ರಿಗಳು ಮತ್ತು ಅಡುಗೆ ಉರುವಲುಗಳ ನಡುವೆ ಹಾವುಗಳು ತಮ್ಮ ವಾಸಸ್ಥಾನವನ್ನು ನಿರ್ಮಿಸುತ್ತವೆ.
- ಹಾಗಾಗಿ ಅಕ್ಕಿ ಚೀಲಗಳು ಮತ್ತು ಇತರೆ ವಸ್ತುಗಳನ್ನು ನಿಮ್ಮ ಮಲಗುವ ಪ್ರದೇಶದಿಂದ ದೂರವಿಡುವುದು ಒಳ್ಳೆಯದು.
- ರೈತರು ಕೃಷಿ ಕೆಲಸಕ್ಕೆ ಹೊರಗೆ ಹೋಗುವಾಗ ಗದ್ದಲ ಮಾಡುತ್ತಾ ನಡೆಯಬೇಕು.
- ನಿಮ್ಮ ಕೈಯಲ್ಲಿ ಕೋಲು ಹಿಡಿದು ನೆಲದ ಮೇಲೆ ಶಬ್ಧ ಮಾಡುತ್ತಾ ಮುಂದೆ ನಡೆಯಬೇಕು.
- ಹುಲ್ಲಿನಲ್ಲಿ ಹೆಚ್ಚು ಹೊತ್ತು ಇರಬೇಕಾದರೆ ಶೂ ಧರಿಸುವುದು ಉತ್ತಮ.
- ರಾತ್ರಿ ವೇಳೆ ಟಾರ್ಚ್ ಅಥವಾ ಇತರೆ ಬೆಳಕು ಇರುವುದನ್ನು ಖಚಿತಪಡಿಸಿಕೊಳ್ಳಿ.
- ಹಾವುಗಳು ಮೋಟಾರ್ ಮತ್ತು ಸ್ಟಾರ್ಟರ್ ಬಾಕ್ಸ್‌ಗಳಲ್ಲಿ ಆಶ್ರಯ ಪಡೆಯುವುದು ಹೆಚ್ಚು.
- ಹಾಗಾಗಿ ವಾಹನಗಳ ಬಳಕೆಯ ಸಂದರ್ಭದಲ್ಲಿ ಎಚ್ಚರ ವಹಿಸುವುದು ಉತ್ತಮ.
ಹಾವುಗಳು ಮನೆಯ ಬಳಿ ಸುಳಿಯದಂತೆ ಹೀಗಿ ಮಾಡಿ:
ಗೊಬ್ಬರದ ಅಂಗಡಿಯಲ್ಲಿ ದೊರೆಯುವ ಪೋಟೆಕ್ಸ್ ಎಂಬ ಔಷಧಿಯನ್ನು ಮರುಳಿನಲ್ಲಿ ಬೆರೆಸಿ ಮನೆ ಹಾಗೂ ಮನೆಯ ತಡೆಗೋಡೆ ಸುತ್ತ ಹಾಕಿ. ಈ ಔಷಧಿಯ ವಾಸನೆಗೆ ಹಾವುಗಳು ಸುಳಿಯುವುದಿಲ್ಲ. - ಉರಗ ತಜ್ಞ ಬಸವರಾಜ್
ಕಳೆದ ತಿಂಗಳು (ಜು.24) ಶಿರಸಿ ತಾಲೂಕಿನ ಸಹಸ್ರಳ್ಳಿಯಲ್ಲಿ ವಿಷಪೂರಿತ ಹಾವು ಕಚ್ಚಿ 6ನೇ ತರಗತಿಯಲ್ಲಿ ಓದುತ್ತಿದ್ದ ಮಿಥುನ್ ಮತ್ತು ಈತನ ತಂಗಿ ದೀಕ್ಷಾ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ನಡೆದಿತ್ತು. ರಾತ್ರಿ ಮಿಥುನ್ ಹಾಗೂ ದೀಕ್ಷಾ ತಂದೆ ಪುಟ್ಟಪ್ಪ ನಾಯ್ಕ ಅವರ ಪಕ್ಕದಲ್ಲಿ ಮಲಗಿದ್ದರು. ಬೆಳಗಿನ ಜಾವ ಇಬ್ಬರೂ ಮಕ್ಕಳು ದಿಢೀರ್ ಎದ್ದು ವಾಂತಿ ಮಾಡಿಕೊಳ್ಳಲಾರಂಭಿಸಿದ್ದರು. ಇದರಿಂದ ಗಾಬರಿಯಾದ ಪಾಲಕರು ತಕ್ಷಣವೇ ಅಕ್ಕಪಕ್ಕದವರನ್ನು ಕರೆದಿದ್ದರು. ಈ ಸಂದರ್ಭದಲ್ಲಿ ಹಾವೊಂದು ಮನೆಯೊಳಗಿಂದ ಕತ್ತಲಲ್ಲಿ ಹೊರಬರುತ್ತಿದ್ದುದನ್ನು ಗಮನಿಸಿದ್ದರು. ಇಬ್ಬರನ್ನೂ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ದಾರಿ ಮಧ್ಯೆ ಸಾವನ್ನಪ್ಪಿದ್ದ.

ಅದೇ ರೀತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯ ಅರಣ್ಯ ಕಚೇರಿ ವ್ಯಾಪ್ತಿಯ 17ನೇ ಮೈಲಿಗಲ್ಲು ಬಳಿಯ ಕಣಗಲಕೊಪ್ಪ ಗ್ರಾಮದ ಮನೆ ಸಮೀಪ ಸಂಗ್ರಹಿಸಿಟ್ಟಿದ್ದ ಸೌದೆಯೊಳಗೆ ಸುಮಾರು 16 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿ ಆತಂಕ ಉಂಟು ಮಾಡಿತ್ತು. ಕಾಳಿಂಗ ಕಂಡ ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ನೇಕ್ ಕಿರಣ್ ಎಂಬುವರಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿನಲ್ಲಿ ಬಿಟ್ಟಿದ್ದರು. ಹಾವು ಸೆರೆ ಕಾರ್ಯಾಚರಣೆಯನ್ನು ನೋಡಲು ಸ್ಥಳದಲ್ಲಿ ನೂರಾರು ಜನ ಜಮಾಸಿದ್ದರು. ಹಾವು ಸುಮಾರು 16 ಅಡಿ ಉದ್ದ, 8.700 ಕೆ.ಜಿ ತೂಕವಿತ್ತು.
ಇತ್ತೀಚಿಗೆ, ಚಿಕ್ಕಮಗಳೂರಿನ ಗಬ್ಗಲ್ ಸಮೀಪದ ಕೆ.ತಲಗೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮನೆ ಮುಂಭಾಗ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಂಡುಬಂದಿದ್ದು, ಮನೆಯೊಳಗೆ ನುಗ್ಗಲು ಯತ್ನಿಸಿತ್ತು. ಈ ದೃಶ್ಯ ಕಂಡ ಮನೆಯಲ್ಲಿದ್ದ ತಾಯಿ ಮತ್ತು ಮೂವರು ಹೆಣ್ಣುಮಕ್ಕಳು ಭಯಭೀತರಾಗಿ ಹೊರಗೆ ಓಡಿ ಬಂದಿದ್ದರು. ನಂತರ ಉರಗ ತಜ್ಞರು ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದರು.
ಈ ಹಾವುಗಳಿಂದ ಅಪಾಯ: ಹಾವುಗಳಲ್ಲಿ ಪ್ರಮುಖವಾಗಿ ನಾಲ್ಕು ವಿಷಪೂರಿತ ಜಾತಿಯ ಹಾವುಗಳಿವೆ. ಅವುಗಳಲ್ಲಿ ನಾಗರಹಾವು, ಮಂಡಲದ ಹಾವು, ರಕ್ತ ಮಂಡಲ ಹಾವು ಹಾಗೂ ಕಟ್ಟುಹಾವು. ಇವುಗಳು ತುಂಬಾ ವಿಷಕಾರಿ. ಹಾವುಗಳನ್ನು ರೈತರು ಮತ್ತು ಮಕ್ಕಳು ಕಚ್ಚಿಸಿಕೊಳ್ಳುವುದು ಅಧಿಕ. ಇದಕ್ಕೆ ಮುಖ್ಯ ಕಾರಣವೆಂದರೆ ಹಾವು ಕಚ್ಚಿದ ನಂತರ ತಕ್ಷಣದ ಪ್ರತಿಕ್ರಿಯೆಯ ಕೊರತೆ. ಜೊತೆಗೆ ವೈದ್ಯಕೀಯ ಚಿಕಿತ್ಸೆ ಸಿಗದಿರುವುದು.
"ಹಾವು ಕಚ್ಚಿದಾಗ, ತಡಮಾಡದೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಬನ್ನಿ. ಆಸ್ಪತ್ರೆಗಳ ತುರ್ತು ವಿಭಾಗಗಳಲ್ಲಿ ಆಂಟಿವೆನಮ್ ಔಷಧ ಇರುತ್ತದೆ. ಯಾವುದೇ ವಿಷ ಜಂತು ಕಚ್ಚಲಿ, ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿ ಡಾ. ಶ್ರೀನಿವಾಸ್.
ಇದನ್ನೂ ಓದಿ: ಮಳೆಗಾಲದಲ್ಲಿ ಮನೆಗೆ ಹಾವು, ಚೇಳು ನುಗ್ಗುತ್ತಿವೆಯೇ? ಇವುಗಳು ಬರದಂತೆ ತಡೆಯುವುದು ಹೇಗೆ? ತಜ್ಞರ ಸಲಹೆಗಳು

