ಗರ್ಭಕಂಠದ ಕ್ಯಾನ್ಸರ್ನಿಂದ ಪ್ರತಿ ಎರಡು ನಿಮಿಷಕ್ಕೆ ಒಬ್ಬ ಮಹಿಳೆ ಸಾವು, ತಡೆಗಟ್ಟುವುದು ಹೇಗೆ?: ವಿಶ್ವಸಂಸ್ಥೆ ಸಲಹೆಗಳಿವು!
ಗರ್ಭಕಂಠದ ಕ್ಯಾನ್ಸರ್ ಕಾಯಿಲೆಯು ಪ್ರಪಂಚದಾದ್ಯಂತ ಮಹಿಳೆಯರನ್ನು ಕಾಡುತ್ತಿದೆ. ಲಸಿಕೆ, ಪರೀಕ್ಷಾ ಸೌಲಭ್ಯಗಳ ಕೊರತೆಯಿಂದ ಬಡ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಶೇ.90ರಷ್ಟು ಸಾವಿನ ಪ್ರಕರಣಗಳು ವರದಿಯಾಗುತ್ತಿವೆ ಎಂದು ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.


Published : January 5, 2026 at 5:52 PM IST
ಪ್ರಪಂಚದಾದ್ಯಂತ ಮಹಿಳೆಯರನ್ನು ಕಾಡುತ್ತಿರುವ ಕಾಯಿಲೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದಾಗಿದೆ. ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳುವಂತೆ ಪ್ರತಿ ಎರಡು ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕಂಠದ ಕ್ಯಾನ್ಸರ್ನಿಂದ ಮೃತಪಡುತ್ತಿದ್ದಾರೆ. 2022ರಲ್ಲಿ ಮಾತ್ರ ವಿಶ್ವಾದ್ಯಂತ 6,60,000 ಮಹಿಳೆಯರು ಹೊಸದಾಗಿ ಸೋಂಕಿಗೆ ಒಳಗಾಗಿದ್ದರು. ಜೊತೆಗೆ 3,50,000 ಜನರು ಸಾವನ್ನಪ್ಪಿದ್ದರು. ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಕಾಯಿಲೆ ಇದಾಗಿದೆ. ಸಾಕಷ್ಟು ಲಸಿಕಾ ಸೌಲಭ್ಯಗಳು ಮತ್ತು ಪರೀಕ್ಷೆಯ ಕೊರತೆಯಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾವಿನ ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ಅಧ್ಯಯನ ತಿಳಿಸಿದೆ.
ಏನಿದು ಗರ್ಭಕಂಠದ ಕ್ಯಾನ್ಸರ್?: ಈ ಕ್ಯಾನ್ಸರ್ ಗರ್ಭಾಶಯದ ಕೆಳಗಿನ ಭಾಗ ಮತ್ತು ಯೋನಿ ಸಂಧಿಸುವ ಸ್ಥಳವಾದ 'ಗರ್ಭಕಂಠ'ದಲ್ಲಿ ಸಂಭವಿಸುತ್ತದೆ. ಈ ಕ್ಯಾನ್ಸರ್ ಒಂದು ದಿನದಲ್ಲಿ ಬೆಳೆಯುವುದಿಲ್ಲ. ವರ್ಷಗಳಲ್ಲಿ ಜೀವಕೋಶಗಳು ನಿಧಾನವಾಗಿ ಬದಲಾಗುತ್ತವೆ, ಕ್ಯಾನ್ಸರ್ ಪೂರ್ವಭಾವಿ ಗಾಯಗಳಾಗಿ ಮಾರ್ಪಾಡಾಗುತ್ತವೆ. ಈ ಅಸಹಜ ಕೋಶಗಳನ್ನು ಮೊದಲೇ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದರೆ, ಅವು ಕ್ಯಾನ್ಸರ್ ಆಗಿ ಪರಿಣಮಿಸಬಹುದು, ಗರ್ಭಾಶಯದ ಅಂಗಾಂಶವನ್ನು ನಾಶಮಾಡುತ್ತವೆ ಹಾಗೂ ದೇಹದ ಇತರ ಭಾಗಗಳಿಗೆ ಹರಡುತ್ತವೆ. ಶೇಕಡಾ 99ರಷ್ಟು ಗರ್ಭಕಂಠದ ಕ್ಯಾನ್ಸರ್‌ಗಳು ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಎಂಬ ವೈರಸ್‌ನಿಂದ ಉಂಟಾಗುತ್ತವೆ.

ಎಚ್ಪಿವಿ ಹೇಗೆ ಹರಡುತ್ತದೆ?: ಇದು ಲೈಂಗಿಕ ಸಂಪರ್ಕದ ಮೂಲಕ ಹರಡುವ ಸಾಮಾನ್ಯ ವೈರಸ್ ಆಗಿದೆ. ಹೆಚ್ಚಿನ ಲೈಂಗಿಕವಾಗಿ ಸಕ್ರಿಯವಾಗಿರುವ ಜನರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ವೈರಸ್‌ನಿಂದ ಸೋಂಕಿಗೆ ಒಳಗಾಗುತ್ತಾರೆ. ಸಾಮಾನ್ಯವಾಗಿ ಮಹಿಳೆಯ ಪ್ರತಿರಕ್ಷಣಾ ವ್ಯವಸ್ಥೆಯು ವೈರಸ್ ಅನ್ನು ತೆರವುಗೊಳಿಸುತ್ತದೆ. ಆದರೆ, ಕೆಲವು ಜನರಲ್ಲಿ ಸೋಂಕು ಮುಂದುವರಿಯುತ್ತದೆ ಹಾಗೂ ಕಾಲಾನಂತರದಲ್ಲಿ ಜೀವಕೋಶಗಳನ್ನು ಹಾನಿಗೊಳಿಸುತ್ತದೆ, ಇದು ಕ್ಯಾನ್ಸರ್ ಆಗಿ ಬದಲಾಗಬಹುದು ಎಂಬುದು ತಜ್ಞರ ಮಾತಾಗಿದೆ.
ಆರಂಭಿಕ ಲಕ್ಷಣಗಳಿಲ್ಲದ ಎಚ್ಪಿವಿ ಏಕೆ ತುಂಬಾ ಅಪಾಯಕಾರಿ?: ಆರಂಭಿಕ ಹಂತಗಳಲ್ಲಿ ಎಚ್ಪಿವಿಯಿಂದ ಯಾವುದೇ ನೋವು ಇಲ್ಲವೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಮುಟ್ಟಿನ ನಡುವೆ ರಕ್ತಸ್ರಾವ, ಲೈಂಗಿಕತೆಯ ನಂತರ ರಕ್ತಸ್ರಾವ ಇಲ್ಲವೇ ಋತುಬಂಧದ ನಂತರ ತೀವ್ರ ರಕ್ತಸ್ರಾವವನ್ನು ನೀವು ಗಮನಿಸಿದರೆ, ಕ್ಯಾನ್ಸರ್ ಮುಂದಿನ ಹಂತಕ್ಕೆ ಮುಂದುವರೆದಿದೆ ಎಂದರ್ಥ.

ಯುವತಿಯರ ಮೇಲೆ ಪರಿಣಾಮ: ಇತರ ಕ್ಯಾನ್ಸರ್‌ಗಳು ವಯಸ್ಸಾದವರ ಮೇಲೆ ಪರಿಣಾಮ ಬೀರುತ್ತವೆ. ಇದು 30 ರಿಂದ 50 ವರ್ಷ ವಯಸ್ಸಿನ ಯುವತಿಯರ ಮೇಲೆ (ವಿಶೇಷವಾಗಿ ಯುವ ತಾಯಂದಿರು) ಪರಿಣಾಮ ಬೀರುತ್ತದೆ.
HIV ಪೀಡಿತರಿಗೆ ಅಧಿಕ ಅಪಾಯ: HIV ಪೀಡಿತ ಮಹಿಳೆಯರಿಗೆ ಈ ಕ್ಯಾನ್ಸರ್ ಬರುವ ಸಾಧ್ಯತೆ 6 ಪಟ್ಟು ಹೆಚ್ಚು. 15-20 ವರ್ಷಗಳಲ್ಲಿ ಬೆಳೆಯಬೇಕಾದ ಕ್ಯಾನ್ಸರ್, 5-10 ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತದೆ.
ಸೌಲಭ್ಯಗಳ ಕೊರತೆ: ಲಸಿಕೆ ಹಾಗೂ ಪರೀಕ್ಷಾ ಸೌಲಭ್ಯಗಳ ಕೊರತೆಯಿಂದ ಶೇಕಡಾ 90 ಸಾವುಗಳು ಬಡ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ.

ಎಚ್ಚರಿಕೆ ಚಿಹ್ನೆಗಳಿವು: ಕ್ಯಾನ್ಸರ್ ತೀವ್ರವಾಗಿದ್ದಾಗ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು.
- ಯೋನಿಯಿಂದ ದುರ್ವಾಸನೆಯೊಂದಿಗೆ ನೀರಿನಂಶದ ಅಥವಾ ರಕ್ತಸಿಕ್ತ ಸ್ರಾವ.
- ಶ್ರೋಣಿಯ ಪ್ರದೇಶದಲ್ಲಿ ಅಥವಾ ಸಂಭೋಗದ ಸಮಯದಲ್ಲಿ ನೋವು.
- ತೀವ್ರತರವಾದ ಪ್ರಕರಣಗಳಲ್ಲಿ ಬೆನ್ನು ನೋವು, ಕಾಲು ನೋವು, ಕಾಲುಗಳಲ್ಲಿ ಊತ ಹಾಗೂ ಮೂತ್ರ ವಿಸರ್ಜನೆಯಲ್ಲಿ ತೊಂದರೆ.
ಗರ್ಭಕಂಠದ ಕ್ಯಾನ್ಸರ್ ತಡೆಯುವುದು ಹೇಗೆ?: WHO ಪ್ರಕಾರ, ಗರ್ಭಕಂಠದ ಕ್ಯಾನ್ಸರ್ ತಡೆಯಲು ಮೂರು ಸರಳ ಮಾರ್ಗಗಳಿವೆ.

- ವ್ಯಾಕ್ಸಿನೇಷನ್: HPV ಲಸಿಕೆಯು 9 ರಿಂದ 14 ವರ್ಷ ವಯಸ್ಸಿನ ಹುಡುಗಿಯರಲ್ಲಿ ಲೈಂಗಿಕವಾಗಿ ಸಕ್ರಿಯರಾಗುವ ಮೊದಲು ಶೇ.90ರಷ್ಟು ಸೋಂಕುಗಳನ್ನು ತಡೆಯಬಹುದು.
- ಸ್ಕ್ರೀನಿಂಗ್: 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು (25 ವರ್ಷದಿಂದ HIV ಪೀಡಿತರು) ಪ್ರತಿ 5ರಿಂದ 10 ವರ್ಷಗಳಿಗೊಮ್ಮೆ HPV ಪರೀಕ್ಷೆಯನ್ನು ಮಾಡಿಸಬೇಕು.
- ಆರಂಭಿಕ ಚಿಕಿತ್ಸೆ: ಪರೀಕ್ಷೆಯಲ್ಲಿ ಪೂರ್ವಭಾವಿ ಬದಲಾವಣೆಗಳು ಪತ್ತೆಯಾದರೆ, ಕ್ರಯೋಥೆರಪಿಯಂತಹ ಸರಳ ಚಿಕಿತ್ಸೆಗಳು ಕ್ಯಾನ್ಸರ್ ತಡೆಗಟ್ಟಬಹುದು. ವಿಶ್ವ ಆರೋಗ್ಯ ಸಂಸ್ಥೆಯು 2030ರ ವೇಳೆಗೆ ರೋಗವನ್ನು ತೊಡೆದುಹಾಕುವ ಗುರಿ ಹಾಕಿಕೊಳ್ಳಲಾಗಿದೆ. ಶೇ.90ರಷ್ಟು ಹುಡುಗಿಯರಿಗೆ ಲಸಿಕೆ ಹಾಕುವುದು, ಶೇಕಡಾ 70ರಷ್ಟು ಮಹಿಳೆಯರನ್ನು ಪರೀಕ್ಷಿಸುವುದು. ಶೇಕಡಾ 90ರಷ್ಟು HPV ಸೋಂಕಿತ ಮಹಿಳೆಯರಿಗೆ ಚಿಕಿತ್ಸೆ ನೀಡುವುದು. ಈ ಗುರಿಗಳನ್ನು ಸಾಧಿಸುವುದರಿಂದ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಎಂದು WHO ತಿಳಿಸುತ್ತದೆ.
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ಸಿಹಿ ತಿನಿಸುಗಳನ್ನು ಸೇವಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವು: ವೈದ್ಯರ ಸಲಹೆಗಳೇನು?
- ಚಿಕ್ಕ ಚಿಕ್ಕ ವಿಷಯ ಮರೆತು ಬಿಡುವುದು ಬುದ್ಧಿಮಾಂದ್ಯತೆ, ಆಲ್ಝೈಮರ್ ಚಿಹ್ನೆಯೇ? ತಡೆಯುವುದು ಹೇಗೆ ಗೊತ್ತೇ?
- ಚಳಿಗಾಲದಲ್ಲಿ ಗಂಟಲು ನೋವು ಹಾಗೂ ಮೂಗು ಕಟ್ಟಿಕೊಂಡು ಉಸಿರಾಟಕ್ಕೆ ತೊಂದರೆಯಾಗುತ್ತಿದೆಯೇ? ತಜ್ಞರು ಸೂಚಿಸುವ ಮನೆಮದ್ದುಗಳಿವು
- ನಿಮ್ಮ ಬಾಯಿ ದುರ್ವಾಸನೆ ಬೀರುತ್ತಿದೆಯೇ? ತಜ್ಞರ ಟಿಪ್ಸ್ ಪಾಲಿಸಿ, ನಿಮ್ಮ ಉಸಿರು ಯಾವಾಗಲೂ ಫ್ರೆಶ್!
- ಫ್ರಿಡ್ಜ್ನಲ್ಲಿ ಮೊಟ್ಟೆಗಳನ್ನು ಎಷ್ಟು ದಿನಗಳವರೆಗೆ ಇಡಬಹುದು? ಹಾಳಾಗಿದ್ರೆ ತಿಳಿಯುವುದು ಹೇಗೆ?

