ರಾತ್ರಿಯಲ್ಲಿ ನಿದ್ರಾಹೀನತೆಯಾದರೆ, ಹಗಲಿನಲ್ಲಿ ಅರೆನಿದ್ರಾವಸ್ಥೆ ತೊಂದರೆ: ಎಚ್ಚರಿಕೆ ವಹಿಸಲು ಸೂಚನೆ
ನಿದ್ರೆಯ ಸಮಸ್ಯೆಗಳಿಂದ ಅಧಿಕ ರಕ್ತದೊತ್ತಡದ ಅಪಾಯ ಕಾಡುವ ಸಾಧ್ಯತೆ ಹೆಚ್ಚಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸುತ್ತದೆ.


Published : July 8, 2026 at 5:14 PM IST
ಹಲವರು ಹಗಲಿನ ಅರೆನಿದ್ರಾವಸ್ಥೆಯನ್ನು ಅನುಭವಿಸುತ್ತಾರೆ. ರಾತ್ರಿಯಲ್ಲಿ ನಿದ್ರಿಸಲು ಕಷ್ಟಪಡುತ್ತಾರೆ. ಅಂತಹ ವ್ಯಕ್ತಿಗಳು ತಮ್ಮ ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಹೌದು, ಇತ್ತೀಚಿನ ಅಧ್ಯಯನವು ಈ ಎರಡೂ ಸಮಸ್ಯೆಗಳನ್ನು ಅನುಭವಿಸುವ ಜನರು ಅಧಿಕ ರಕ್ತದೊತ್ತಡ ಬರುವ ಅಪಾಯಕ್ಕೆ ಸಿಲುಕುತ್ತಾರೆ. ಹಗಲಿನ ಅರೆನಿದ್ರಾವಸ್ಥೆ ಹಾಗೂ ಅಧಿಕ ರಕ್ತದೊತ್ತಡದ ನಡುವಿನ ಸಂಬಂಧ ಹೊಂದಿದೆಯೇ ಎಂಬುದನ್ನು ತಿಳಿಯೋಣ.
ಪೆನ್ ಸ್ಟೇಟ್ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕರು, ಹಗಲಿನ ಅತಿಯಾದ ಅರೆನಿದ್ರಾವಸ್ಥೆಯಿಂದ ಬಳಲುತ್ತಿರುವ ವ್ಯಕ್ತಿಗಳು ಅಧಿಕ ರಕ್ತದೊತ್ತಡದ ಹೆಚ್ಚಿನ ಅಪಾಯಕ್ಕೆ ಸಿಲುಕಿದ್ದಾರೆ. ರಾತ್ರಿಯಲ್ಲಿ ನಿದ್ರಿಸಲು 30 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವವರಿಗೆ ಅಪಾಯ ಇನ್ನೂ ಹೆಚ್ಚಾಗಿರುತ್ತದೆ ಎಂದು ಅಧ್ಯಯನವು ಗಮನಿಸಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಎರಡು ಅಂಶಗಳ ಸಂಯೋಜನೆಯು ಗಮನಾರ್ಹ ಅಪಾಯ ಉಂಟುಮಾಡುತ್ತದೆ.

ನಿದ್ರೆ ಹಾಗೂ ರಕ್ತದೊತ್ತಡದ ನಡುವಿನ ಸಂಬಂಧವಿದೆಯೇ? ನಿರಂತರವಾಗಿ ಕೆಲಸ ಮಾಡುವ ಹೃದಯ ಹಾಗೂ ನಾಳೀಯ ವ್ಯವಸ್ಥೆಯು ವಿಶ್ರಾಂತಿ ಹಾಗೂ ಚೇತರಿಸಿಕೊಳ್ಳಲು ನಿದ್ರೆ ನಿರ್ಣಾಯಕ ಪಾತ್ರ ವಹಿಸುತ್ತದೆ. ನಿದ್ರೆಯ ಮಾದರಿಗಳು ಅಡ್ಡಿಪಡಿಸಿದರೆ, ಸಾಕಷ್ಟು ನಿದ್ರೆ ಪಡೆಯದಿದ್ದರೆ ಈ ಚೇತರಿಕೆಯ ಪ್ರಕ್ರಿಯೆಯು ಅಡ್ಡಿಯಾಗುತ್ತದೆ. ನಿದ್ರೆಯ ಅಭ್ಯಾಸಗಳು ರಕ್ತದೊತ್ತಡದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಹಾಗೂ ಇವುಗಳನ್ನು ನಿರ್ವಹಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಪ್ರಯೋಜನಕಾರಿಯಾಗಿದೆ.
ಹೃದ್ರೋಗದ ಅಪಾಯ ಹೆಚ್ಚು: ಉತ್ತಮ ನಿದ್ರೆಯ ಸಮಯದಲ್ಲಿ ರಕ್ತದೊತ್ತಡ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಇದು ಹೃದಯ ಮತ್ತು ರಕ್ತನಾಳಗಳಿಗೆ ವಿಶ್ರಾಂತಿ ನೀಡುತ್ತದೆ. ಅವು ಚೇತರಿಸಿಕೊಳ್ಳಲು ಸಮಯವನ್ನು ನೀಡುತ್ತದೆ. ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಮುಖ ಅಂಶವಾಗಿದೆ. ನಿದ್ರೆಗೆ ಅಡ್ಡಿಯುಂಟಾದರೆ ಅಥವಾ ನಿದ್ರಿಸಲು ಬಹಳ ಸಮಯ ತೆಗೆದುಕೊಂಡರೆ, ರಕ್ತದೊತ್ತಡ (BP) ಸಾಕಷ್ಟು ಕಡಿಮೆಯಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಕೆಲವರಿಗೆ ಇದು ಕಡಿಮೆಯಾಗದೇ ಇರಬಹುದು. ಇದು ಕ್ರಮೇಣ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇದರಿಂದ ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ.
ಒತ್ತಡ ಹೆಚ್ಚಳ: ಶಾಂತಿಯುತ ನಿದ್ರೆ ಇಲ್ಲದೆ, ದೇಹವು ಸಾಕಷ್ಟು ವಿಶ್ರಾಂತಿ ಪಡೆಯುವುದಿಲ್ಲ. ಇದು ಒತ್ತಡ ಹೆಚ್ಚಿಸುತ್ತದೆ. ದೀರ್ಘಕಾಲದ ನಿದ್ರಾಹೀನತೆಯು ಹೃದಯ ಬಡಿತ ಹಾಗೂ ರಕ್ತದೊತ್ತಡ ಹೆಚ್ಚಾಗಲು ಕಾರಣವಾಗಬಹುದು. ದೇಹವು ವಿಶ್ರಾಂತಿ ಪಡೆಯಬೇಕಾದ ಅವಧಿಗಳಲ್ಲಿ ಈ ಮಟ್ಟಗಳು ಹೆಚ್ಚಿರುತ್ತವೆ. ಇದರ ಪರಿಣಾಮವಾಗಿ ದೇಹವು ದೀರ್ಘಕಾಲದವರೆಗೆ ಹೆಚ್ಚಿನ ಪ್ರಚೋದನೆಯ ಸ್ಥಿತಿಯಲ್ಲಿರುತ್ತದೆ. ಇದು ದೀರ್ಘಾವಧಿಯಲ್ಲಿ ರಕ್ತದೊತ್ತಡದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಗೊರಕೆಯ ಸಮಸ್ಯೆ: ಕೆಲವೊಮ್ಮೆ ಸಮಸ್ಯೆಯು ನಿದ್ರೆಯ ಅವಧಿಯಲ್ಲಿ ಅಲ್ಲ. ಆದರೆ, ನಿದ್ರಿಸುವಾಗ ಸರಾಗವಾಗಿ ಉಸಿರಾಡಲು ಅಸಮರ್ಥತೆಯಲ್ಲಿ ಇರುತ್ತದೆ. ತಜ್ಞರು ಅಧಿಕ ರಕ್ತದೊತ್ತಡ ಹಾಗೂ ಸ್ಲೀಪ್ ಅಪ್ನಿಯಾ ನಡುವಿನ ಬಲವಾದ ಸಂಬಂಧವನ್ನು ಎತ್ತಿ ತೋರಿಸುತ್ತಾರೆ. ನಿದ್ರೆಯ ಸಮಯದಲ್ಲಿ ಉಸಿರಾಟವು ಪದೇ ಪದೇ ನಿಲ್ಲುವ ಸ್ಥಿತಿಯಾಗಿದೆ. ಸ್ಲೀಪ್ ಅಪ್ನಿಯಾದಲ್ಲಿ ಉಸಿರಾಟವು ಪುನಾರಂಭವಾದಾಗ ಹೆಚ್ಚಾಗಿ ಜೋರಾಗಿ ಗೊರಕೆ ಸಮಸ್ಯೆ ಕಾಡುತ್ತದೆ. ಉಸಿರಾಟದ ಪ್ರತಿಯೊಂದು ವಿರಾಮವು ರಕ್ತದೊತ್ತಡದಲ್ಲಿ ತಾತ್ಕಾಲಿಕ ಏರಿಕೆಗೆ ಕಾರಣವಾಗುತ್ತದೆ. ಇದು ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟು ಮಾಡುತ್ತದೆ. ಸ್ಲೀಪ್ ಅಪ್ನಿಯಾದ ಪ್ರಮುಖ ಲಕ್ಷಣಗಳು ಜೋರಾಗಿ ಗೊರಕೆ, ನಿದ್ರೆಯ ಸಮಯದಲ್ಲಿ ಉಸಿರಾಟದ ತೊಂದರೆ ಹಾಗೂ ಅತಿಯಾದ ಹಗಲಿನ ಆಯಾಸವನ್ನು ಒಳಗೊಂಡಿವೆ. ಈ ಸ್ಥಿತಿಯನ್ನು ಗುರುತಿಸುವುದು ಹಾಗೂ ಚಿಕಿತ್ಸೆ ನೀಡುವುದು ರಕ್ತದೊತ್ತಡವನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ.
ದೀರ್ಘಕಾಲೀನ ಆರೋಗ್ಯದ ತೊಂದರೆಗಳು: ಸಾಂದರ್ಭಿಕವಾಗಿ ನಿದ್ರೆಯನ್ನು ತ್ಯಾಗ ಮಾಡುವುದರಿಂದ ಯಾವುದೇ ಹಾನಿ ಉಂಟಾಗುವುದಿಲ್ಲ. ದೀರ್ಘಕಾಲದ ನಿದ್ರಾಹೀನತೆಯು ತೀವ್ರ ದೀರ್ಘಕಾಲೀನ ಆರೋಗ್ಯದ ಮೇಲೆ ಪರಿಣಾಮಗಳನ್ನು ಬೀರಬಹುದು. ನಿರಂತರವಾಗಿ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ವ್ಯಕ್ತಿಗಳು ಅಧಿಕ ರಕ್ತದೊತ್ತಡದ ಹೆಚ್ಚಿನ ಅಪಾಯ ಎದುರಿಸುತ್ತಾರೆ. ಇದಲ್ಲದೆ, ನಿದ್ರಾಹೀನತೆಯು ಹಾರ್ಮೋನುಗಳ ಸಮತೋಲನ, ಚಯಾಪಚಯ ಮತ್ತು ದೇಹದ ರಕ್ತದೊತ್ತಡ ನಿಯಂತ್ರಣ ಕಾರ್ಯವಿಧಾನಗಳನ್ನು ಅಡ್ಡಿಪಡಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಇದರ ಪರಿಣಾಮವಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾರಣವಾಗಿರುವ ವಿವಿಧ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯ ಪರಿಣಾಮಗಳು ತಕ್ಷಣಕ್ಕೆ ಸ್ಪಷ್ಟವಾಗಿ ಕಾಣಿಸದಿದ್ದರೂ, ದೀರ್ಘಾವಧಿಯಲ್ಲಿ ಅವು ಗಮನಾರ್ಹ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಂಶೋಧನೆ ತಿಳಿಸುತ್ತದೆ.
ಅಭ್ಯಾಸಗಳ ಮೇಲಿನ ಪರಿಣಾಮ: ನಾವು ದಣಿದಿದ್ದಾಗ ನಮ್ಮ ಅಭ್ಯಾಸಗಳು ಬದಲಾಗುತ್ತವೆ. ಇದು ಪರೋಕ್ಷವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ನಿದ್ರೆಯ ಕೊರತೆಯು ಹೆಚ್ಚಾಗಿ ಉಪ್ಪು ಹಾಗೂ ಸಕ್ಕರೆ ತಿಂಡಿಗಳ ಹಂಬಲಕ್ಕೆ ಕಾರಣವಾಗುತ್ತದೆ. ಕಾರ್ಯಗಳನ್ನು ನಿರ್ವಹಿಸಲು ಪ್ರೇರಣೆ ಕಡಿಮೆಯಾಗುತ್ತದೆ ಹಾಗೂ ಒಟ್ಟಾರೆ ಒತ್ತಡದ ಮಟ್ಟ ಹೆಚ್ಚಾಗುತ್ತದೆ. ಈ ಎಲ್ಲಾ ಅಂಶಗಳು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತವೆ ಹಾಗೂ ನಿದ್ರಾಹೀನತೆಗೆ ಮೂಲ ಕಾರಣವಾಗಿವೆ.
ಚಿಕ್ಕ ಬದಲಾವಣೆಗಳನ್ನು ಮಾಡಿಕೊಳ್ಳಿ: ಶಾಂತಿಯುತ ನಿದ್ರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಸಣ್ಣ ಹೊಂದಾಣಿಕೆಗಳು ಸಹ ಗಮನಾರ್ಹ ಫಲಿತಾಂಶಗಳನ್ನು ನೀಡಬಹುದು. ಪ್ರತಿದಿನ ಒಂದೇ ಸಮಯದಲ್ಲಿ ಮಲಗಲು ಹಾಗೂ ಎಚ್ಚರಗೊಳ್ಳುವ ದಿನಚರಿಯನ್ನು ಸ್ಥಾಪಿಸುವುದು ಹಾಗೂ ಮಲಗುವ ಕೋಣೆಯಲ್ಲಿ ಅನುಕೂಲಕರ ವಾತಾವರಣವನ್ನು ಖಚಿತಪಡಿಸಿಕೊಳ್ಳುವುದು ಪ್ರಯೋಜನಕಾರಿ. ಪ್ರಮುಖವಾಗಿ ಕಾಫಿಯನ್ನು ತಪ್ಪಿಸುವುದು ಹಾಗೂ ಮಲಗುವ ಮುನ್ನ ಡಿಜಿಟಲ್ ಪರದೆಗಳಿಂದ ದೂರವಿರುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ನಿದ್ರೆಯ ಸಮಸ್ಯೆಗಳನ್ನು ಪರಿಹರಿಸುವುದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಪ್ರಾಯೋಗಿಕ ಹಾಗೂ ಪರಿಣಾಮಕಾರಿ ತಂತ್ರಗಳಲ್ಲಿ ಒಂದಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು (ಸಂಶೋಧನಾ ವರದಿಗಳು):
- https://academic.oup.com/sleep/article/49/Supplement_1/A439/8673342
- https://www.researchgate.net/publication/404680250_0985
- https://www.nature.com/articles/s41746-024-01026-7
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ತಿಳಿಯದೇ ಮಾಡುವ ಕೆಲವು ದೈನಂದಿನ ಅಭ್ಯಾಸಗಳಿಂದ ಶ್ರವಣ ನಷ್ಟ ಅಪಾಯ: ಈ ದೋಷ ತಡೆಯಲು ತಜ್ಞರ ಟಿಪ್ಸ್
- ಒಂದು ವರ್ಷದೊಳಗಿನ ಮಗುವಿಗೆ ಯಾವೆಲ್ಲಾ ಆಹಾರಗಳನ್ನು ನೀಡಬೇಕು? ತಜ್ಞರು ಸೂಚಿಸುವ ಆಹಾರಗಳಿವು ನೋಡಿ
- ಮುಖದ ತ್ವಚೆ, ಕೂದಲು ಸೌಂದರ್ಯ ಕಾಪಾಡಲು ಬಯಸುವವರು ಈ ತಪ್ಪುಗಳನ್ನು ಮಾಡಬೇಡಿ: ತಜ್ಞರು ಸಲಹೆ
- ಋತುಬಂಧಕ್ಕೂ ಮೊದಲು ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಅಪಾಯ ಕಾಡುವುದೇಕೆ? ತಜ್ಞರು ಹೀಗಂತಾರೆ
- ಡಾರ್ಕ್ ಚಾಕೊಲೇಟ್ನಿಂದ ವೇಟ್ ಲಾಸ್ ಜೊತೆಗೆ ಹೈಬಿಪಿ ನಿರ್ವಹಣೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಯಾವೆಲ್ಲಾ ಪ್ರಯೋಜನಗಳಿಗೆ ಗೊತ್ತೇ?

