ನೀವು ಈ ಹಣ್ಣು, ಆಹಾರಗಳನ್ನು ಸೇವಿಸಿದ ತಕ್ಷಣವೇ ನೀರು ಕುಡಿದರೆ ಈ ಆರೋಗ್ಯ ಸಮಸ್ಯೆ ಕಾಡುತ್ತೆ: ಇದಕ್ಕೆ ತಜ್ಞರು ಹೇಳುವುದೇನು?
ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ನೀರು ಕುಡಿಯುವುದು ಅಗತ್ಯ. ಆದರೆ, ಕೆಲವು ಹಣ್ಣುಗಳು ಮತ್ತು ಆಹಾರಗಳನ್ನು ಸೇವಿಸಿದ ತಕ್ಷಣವೇ ನೀರು ಕುಡಿಯುವುದು ಸರಿಯಾದ ಕ್ರಮವಲ್ಲ ಎಂಬುದು ಆರೋಗ್ಯ ತಜ್ಞರ ಅಭಿಮತ.


Published : November 4, 2025 at 7:27 PM IST
ಮಾನವನ ದೇಹವು ಶೇಕಡಾ 70ರಷ್ಟು ನೀರಿನಿಂದ ಕೂಡಿದೆ. ಪ್ರತಿನಿತ್ಯ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದರೆ, ಕೆಲವು ಜನರು ವಿವಿಧ ಹಣ್ಣು ಮತ್ತು ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯುತ್ತಾರೆ. ಕೆಲವು ಆಹಾರಗಳನ್ನು ಸೇವಿಸಿದರ ಬಳಿಕ ನೀರು ಕುಡಿದರೆ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.
ಈ ರೀತಿಯ ಕೆಲವು ಸಮಸ್ಯೆಗಳನ್ನು ತಡೆಯಲು ಯಾವ ಹಣ್ಣು ಮತ್ತು ಆಹಾರಗಳನ್ನು ಸೇವಿಸಿದ ನಂತರ ನೀರು ಕುಡಿಯಬಾರದು ಎಂಬುದರ ಬಗ್ಗೆ ತಜ್ಞರು ತಿಳಿಸುವಂತಹ ಸಲಹೆಗಳ ಬಗ್ಗೆ ವಿವರವಾಗಿ ತಿಳಿಯೋಣ.
ಯಾವೆಲ್ಲಾ ಹಣ್ಣು & ಆಹಾರಗಳನ್ನು ಸೇವಿಸಿದ ತಕ್ಷಣ ನೀರು ಕುಡಿಯಬಾರದು?:

ಪಪ್ಪಾಯಿ: ಪಪ್ಪಾಯಿ ಹಣ್ಣಿನಲ್ಲಿ ವಿವಿಧ ಪೋಷಕಾಂಶಗಳು ಸೇರಿವೆ. ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ವಿಟಮಿನ್ ಎ, ಸಿ, ಫೈಬರ್ ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಫೋಲೇಟ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಇತರ ಪ್ರಯೋಜನಕಾರಿ ಸಂಯುಕ್ತಗಳನ್ನು ಇದರಲ್ಲಿ ಸೇರಿವೆ. ಪ್ಲೇಟ್‌ಲೆಟ್ಸ್ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಿಂದ ಪಪ್ಪಾಯಿ ತಿಂದ ಬಳಿಕ ನೀರು ಕುಡಿಯಬಾರದು.
ಏಕೆಂದರೆ ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಪಪ್ಪಾಯಿಯಲ್ಲಿರುವ ಫೈಬರ್ ಮತ್ತು ಕಿಣ್ವಗಳು ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು ಹಾಗೂ ಉಬ್ಬುವುದು, ಗ್ಯಾಸ್ ಅಥವಾ ಅತಿಸಾರಕ್ಕೆ ಕಾರಣವಾಗಬಹುದು. ಹೀಗಾಗಿ ಕನಿಷ್ಠ 30 ರಿಂದ 40 ನಿಮಿಷಗಳ ಬಳಿಕ ಬಾಯಾರಿಕೆಯಾದರೆ, ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯುವುದು ಸೂಕ್ತ ಎಂದು ತಜ್ಞರು ತಿಳಿಸುತ್ತಾರೆ.

ಬಾಳೆಹಣ್ಣು: ಬಾಳೆಹಣ್ಣು ಪೋಷಕಾಂಶಗಳ ಕಣಜವಾಗಿದೆ. ಜೀರ್ಣಕ್ರಿಯೆಗೆ, ರಕ್ತದೊತ್ತಡ ನಿಯಂತ್ರಣಕ್ಕೆ ಹಾಗೂ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಮೂಳೆಗಳ ಬಲವರ್ಧನೆಗೆ ಹಾಗೂ ಉತ್ತಮ ನಿದ್ರೆಗೆ ಹೆಚ್ಚು ಸಹಕಾರಿಯಾಗಿದೆ. ಬಾಳೆಹಣ್ಣಿನಲ್ಲಿ ನಾರಿನಂಶ, ವಿಟಮಿನ್ ಬಿ6 ಮತ್ತು ಪೊಟ್ಯಾಶಿಯಂ ಸೇರಿದಂತೆ ವಿವಿಧ ಖನಿಜಗಳು ಹೇರಳವಾಗಿವೆ. ಕಫದ ಸಮಸ್ಯೆ ಇರುವವರು ರಾತ್ರಿ ಬಾಳೆಹಣ್ಣು ಸೇವಿಸುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿನ ಜೀರ್ಣಕಾರಿ ಕಿಣ್ವಗಳು ದುರ್ಬಲಗೊಳ್ಳುತ್ತದೆ. ಜೊತೆಗೆ ಜೀರ್ಣಕ್ರಿಯೆ ಪ್ರಕ್ರಿಯೆಯು ತುಂಬಾ ನಿಧಾನವಾಗುತ್ತದೆ. ಬಾಳೆಹಣ್ಣು ಸೇವಿಸಿದ ಬಳಿಕ ಕನಿಷ್ಠ 30 ನಿಮಿಷಗಳ ಬಳಿಕ ನೀರು ಕುಡಿಯಬಹುದು ಎನ್ನುತ್ತಾರೆ ತಜ್ಞರು.

ಸಿಟ್ರಸ್ ಹಣ್ಣುಗಳು: ಸಿಟ್ರಸ್ ಅಥವಾ ಹುಳಿ ಹಣ್ಣುಗಳು ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆಯನ್ನು ಉತ್ತೇಜಿಸುತ್ತವೆ. ಅಂದ್ರೆ, ನಿಂಬೆ, ಕಿತ್ತಳೆ, ದ್ರಾಕ್ಷಿಹಣ್ಣು ಹಾಗೂ ನಿಂಬೆಹಣ್ಣುಗಳಂತಹ ಹುಳಿ, ರಸಭರಿತವಾದ ಹಣ್ಣುಗಳನ್ನು ಸೇವಿಸಿದ ತಕ್ಷಣ ನೀರು ಕುಡಿಯುವುದರಿಂದ ಈ ಆಮ್ಲಗಳು ದುರ್ಬಲಗೊಳ್ಳುತ್ತವೆ. ಪಿಎಚ್ ಸಮತೋಲನಕ್ಕೆ ಅಡ್ಡಿಪಡಿಸುತ್ತದೆ. ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಅನಿಲ ಅಥವಾ ಅಜೀರ್ಣಕ್ಕೆ ಕಾರಣವಾಗಬಹುದು. ಸಿಟ್ರಸ್ ಹಣ್ಣುಗಳನ್ನು ಸೇವಿಸಿದ ಬಳಿಕ ಕನಿಷ್ಠ 30 ನಿಮಿಷಗಳ ಕಾಲ ನೀರು ಕುಡಿಯಬಾರದು.

ಬಿಸಿ ಹಾಲು: ಬಿಸಿ ಬಿಸಿಯಾದ ಹಾಲು ಸೇವಿಸಿದ ಬಳಿಕ ನೀರು ಕುಡಿಯುವುದರಿಂದ ಹೊಟ್ಟೆಯ ಆಮ್ಲಗಳು ಹಾಲಿನಲ್ಲಿರುವ ಪ್ರೋಟೀನ್‌ಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗೆ ಮಾಡುವುದು ಚಯಾಪಚಯ ಕ್ರಿಯೆಯನ್ನು ನಿಧಾನವಾಗಿಸುತ್ತದೆ. ಇದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಿ ಆರೋಗ್ಯವಾಗಿರಲು, ಹಾಲು ಕುಡಿದ ಬಳಿಕ ಒಂದು ಗಂಟೆ ನಂತರ ನೀರು ಕುಡಿಯುವುದು ಒಳ್ಳೆಯದು ಎಂದು ಹೇಳುತ್ತಾರೆ ತಜ್ಞರು.

ಶೇಂಗಾ: ಶೇಂಗಾದಲ್ಲಿ ಸಾಮಾನ್ಯವಾಗಿ ಕೊಬ್ಬು ಮತ್ತು ಪ್ರೋಟೀನ್ ಅಧಿಕವಾಗಿರುತ್ತದೆ. ಇವುಗಳನ್ನು ತಿಂದ ತಕ್ಷಣವೇ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ತುಂಬಾ ನಿಧಾನಗೊಳ್ಳುತ್ತದೆ. ಇದರ ಪರಿಣಾಮವಾಗಿ ಅಜೀರ್ಣ ಇಲ್ಲವೇ ಹೊಟ್ಟೆಯಲ್ಲಿ ಭಾರವಾದ ಅನುಭವವಾಗುತ್ತದೆ. ಈ ರೀತಿಯ ಆರೋಗ್ಯದ ಸಮಸ್ಯೆ ವಿಶೇಷವಾಗಿ ಮಕ್ಕಳಲ್ಲಿ ಸಾಮಾನ್ಯವಾಗಿದೆ. ಶೇಂಗಾ ತಿಂದ ಬಳಿಕ ಅರ್ಧ ಗಂಟೆ ಕಾಲ ನೀರು ಕುಡಿಯಬಾರದು ತಜ್ಞರು ಸಲಹೆ ನೀಡುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.


