ಕೆಲವು ದೈನಂದಿನ ಅಭ್ಯಾಸಗಳಿಂದ ಕಣ್ಣಿನ ದೃಷ್ಟಿಗೆ ನಿಧಾನವಾಗಿ ಹಾನಿ: ತಜ್ಞರು ತಿಳಿಸುವುದೇನು?
ನಿಮ್ಮ ಕಣ್ಣಿನ ದೃಷ್ಟಿಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಕಂಡುಬರದಿದ್ದರೂ ಕೂಡ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತವಾಗಿದೆ ಎಂದು ವೈದ್ಯರು ಸಲಹೆ ನಿಡುತ್ತಾರೆ.


Published : October 8, 2026 at 8:03 PM IST
ಮಾನವ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಕಣ್ಣುಗಳು ಪ್ರಮುಖವಾಗಿವೆ. ನಮ್ಮ ಸುತ್ತಲಿನ ಪ್ರಪಂಚವನ್ನು ನೋಡಲು, ದೈನಂದಿನ ಕೆಲಸಗಳನ್ನು ಸರಿಯಾಗಿ ಮಾಡಲು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ. ಇಂದಿನ ಕಂಪ್ಯೂಟರ್, ಮೊಬೈಲ್ ಫೋನ್ ಅತಿಯಾದ ಬಳಕೆಯಿಂದ ನಮಗೆ ತಿಳಿಯದೆಯೇ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಕ್ರಮೇಣ ನಮ್ಮ ಕಣ್ಣಿನ ದೃಷ್ಟಿಯನ್ನು ದುರ್ಬಲಗೊಳಿಸಬಹುದು.
ಹೆಚ್ಚಿನ ಜನರು ಕಣ್ಣಿನ ಸಣ್ಣಪುಟ್ಟ ಆಯಾಸವನ್ನು ನಿರ್ಲಕ್ಷಿಸುತ್ತಾರೆ. ನಿರಂತರವಾದ ಕೆಟ್ಟ ಅಭ್ಯಾಸಗಳು ಅಂತಿಮವಾಗಿ ದೃಷ್ಟಿಯನ್ನು ಗಣನೀಯವಾಗಿ ದುರ್ಬಲಗೊಳಿಸಬಹುದು. ಕಣ್ಣಿನ ಆರೋಗ್ಯ ರಕ್ಷಿಸಲು ತಕ್ಷಣವೇ ಬದಲಾಯಿಸಿಕೊಳ್ಳಬೇಕಾದ ಕೆಲವು ದೈನಂದಿನ ಅಭ್ಯಾಸಗಳನ್ನು ತಜ್ಞರು ಇಲ್ಲಿ ತಿಳಿಸಿದ್ದಾರೆ.

ಅತಿಯಾದ ಸಮಯ ಸ್ಕ್ರೀನ್ ನೋಡುವುದಕ್ಕೆ ಮೀಸಲು: ಇಂದಿನ ಜಗತ್ತಿನಲ್ಲಿ ಮೊಬೈಲ್ ಫೋನ್, ಕಂಪ್ಯೂಟರ್ ಹಾಗೂ ಟೆಲಿವಿಷನ್‌ನಂತಹ ಪರದೆಗಳನ್ನು ಬಳಸದಿರುವುದು ಅಸಾಧ್ಯವಾಗಿದೆ. ವಿರಾಮ ಇಲ್ಲದೇ ನಿರಂತರವಾಗಿ ಪರದೆ ನೋಡುವುದರಿಂದ ಕಣ್ಣುಗಳ ಮೇಲೆ ವಿಪರೀತ ಒತ್ತಡ ಉಂಟಾಗುತ್ತದೆ. ಇದು ಕಣ್ಣು ಒಣಗುವುದು, ಮಸುಕಾದ ದೃಷ್ಟಿ ಹಾಗೂ ತಲೆನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪರದೆಗಳಿಂದ ಹೊರಹೊಮ್ಮುವ ಬೆಳಕು ರಾತ್ರಿಯ ನಿದ್ರೆಯ ಸಹಜ ಕ್ರಮಕ್ಕೆ ಅಡ್ಡಿಯಾಗಬಹುದು ನೇತ್ರ ತಜ್ಞರು ತಿಳಿಸುತ್ತಾರೆ.
ಬಿಸಿಲಿನಲ್ಲಿ ರಕ್ಷಣಾತ್ಮಕ ಕನ್ನಡಕ ಧರಿಸದಿರುವುದು: ಹೊರಗಿರುವಾಗ ಸೂರ್ಯನ ಬೆಳಕಿನಿಂದ ಕಣ್ಣುಗಳನ್ನು ಸಮರ್ಪಕವಾಗಿ ರಕ್ಷಿಸಿಕೊಳ್ಳಲು ವಿಫಲವಾದರೆ, ದೀರ್ಘಕಾಲೀನ ಹಾನಿ ಉಂಟಾಗಬಹುದು. ಸೂರ್ಯನ ತೀವ್ರ ಕಿರಣಗಳು ಕಣ್ಣಿನ ಪೊರೆ ಹಾಗೂ ದೃಷ್ಟಿ ಸಾಮರ್ಥ್ಯವನ್ನು ಕಡಿಮೆ ಮಾಡುವ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರಖರವಾದ ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಸನ್ಗ್ಲಾಸ್ ಧರಿಸುವುದು ಸೂಕ್ತವಾಗಿದೆ ಎಂದು ತಜ್ಞರು ವಿವರಿಸುತ್ತಾರೆ.

ಪದೇ ಪದೇ ಕಣ್ಣುಗಳನ್ನು ಉಜ್ಜುವುದು: ಕಣ್ಣಿನ ಆಯಾಸ, ತುರಿಕೆ ಉಂಟಾದಾಗ ಅನೇಕ ಜನರು ಸಹಜವಾಗಿಯೇ ತಮ್ಮ ಕೈಗಳಿಂದ ಕಣ್ಣುಗಳನ್ನು ಉಜ್ಜುತ್ತಾರೆ. ನಮ್ಮ ಕೈಗಳಲ್ಲಿರುವ ಧೂಳು, ಸೂಕ್ಷ್ಮಜೀವಿಗಳು ಕಣ್ಣುಗಳನ್ನು ಪ್ರವೇಶಿಸಿ ಅಲರ್ಜಿ ಉಂಟುಮಾಡಬಹುದು. ಅತಿಯಾದ ಒತ್ತಡದೊಂದಿಗೆ ಪದೇ ಪದೇ ಕಣ್ಣುಗಳನ್ನು ಉಜ್ಜುವುದರಿಂದ ಕಣ್ಣಿನ ರಕ್ಷಣಾತ್ಮಕ ಪೊರೆಗೆ ಹಾನಿಯಾಗಬಹುದು.
ಕಾಂಟ್ಯಾಕ್ಟ್ ಲೆನ್ಸ್‌ಗಳ ಆರೈಕೆಯ ನಿರ್ಲಕ್ಷ್ಯ: ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಇವುಗಳನ್ನು ಸರಿಯಾಗಿ ನಿರ್ವಹಿಸುವುದು ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಸ್ವಚ್ಛವಲ್ಲದ ಕೈಗಳನ್ನು ಬಳಸುವುದು ಇಲ್ಲವೇ ಸೂಕ್ತವಲ್ಲದ ದ್ರಾವಣಗಳನ್ನು ಬಳಸುವುದು ಸೋಂಕಿಗೆ ಕಾರಣವಾಗಬಹುದು. ಇದು ತೀವ್ರವಾದ ಕಣ್ಣಿನ ಅಲರ್ಜಿ, ಹುಣ್ಣುಗಳಿಗೆ ಕಾರಣವಾಗಬಹುದು.
ಕಣ್ಣಿನ ತಪಾಸಣೆ ತಪ್ಪಿಸುವುದು: ದೃಷ್ಟಿಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಕಂಡುಬರದಿದ್ದರೂ, ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಕೆಲವು ಗಂಭೀರ ಕಣ್ಣಿನ ಸಮಸ್ಯೆಗಳು ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಸೂಕ್ತ ತಪಾಸಣೆ ಇಲ್ಲದಿದ್ದರೆ ಇಂತಹ ಸಮಸ್ಯೆಗಳು ಗಂಭೀರವಾಗುವವರೆಗೆ ಗಮನಕ್ಕೆ ಬಾರದೇ ಹೋಗಬಹುದು.

ಸಾಕಷ್ಟು ನೀರು ಕುಡಿಯದಿರುವುದು: ಶರೀರದಲ್ಲಿ ನೀರಿನಂಶದ ಕೊರತೆಯು ನೇರವಾಗಿ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಸೇವನೆ ಕಡಿಮೆಯಾದಾಗ ಕಣ್ಣೀರಿನ ಉತ್ಪಾದನೆ ಕಡಿಮೆಯಾಗಿ ಕಣ್ಣುಗಳು ಒಣಗುವಂತಾಗುತ್ತದೆ. ಇದರಿಂದಾಗಿ ಕಣ್ಣಿನಲ್ಲಿ ಕಿರಿಕಿರಿ ಮತ್ತು ಅಸ್ವಸ್ಥತೆ ಉಂಟಾಗುತ್ತದೆ.
ನಿದ್ರೆಯ ಕೊರತೆ: ದಿನವಿಡೀ ಕಾರ್ಯನಿರ್ವಹಿಸುವ ಕಣ್ಣುಗಳಿಗೆ ವಿಶ್ರಾಂತಿ ಪಡೆಯಲು, ಅಗತ್ಯವಾದ ತೇವಾಂಶವನ್ನು ಉಳಿಸಿಕೊಳ್ಳಲು ನಿದ್ರೆ ಅತ್ಯಗತ್ಯ. ದೀರ್ಘಕಾಲದ ನಿದ್ರೆಯ ಕೊರತೆಯು ಕಣ್ಣುಗಳು ಒಣಗುವುದು, ಕಣ್ಣಿನ ಆಯಾಸ ಹಾಗೂ ಮಸುಕಾದ ದೃಷ್ಟಿಗೆ ಕಾರಣವಾಗುತ್ತದೆ.
ಅಸಮರ್ಪಕ ಆಹಾರ ಪದ್ಧತಿ: ನಾವು ಸೇವಿಸುವ ಆಹಾರವು ಕಣ್ಣಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತರಕಾರಿಗಳು, ಹಣ್ಣುಗಳು ಹಾಗೂ ಪೌಷ್ಟಿಕ ಆಹಾರಗಳನ್ನು ನಿರ್ಲಕ್ಷಿಸುವುದರಿಂದ ಕಣ್ಣುಗಳು ದುರ್ಬಲಗೊಳ್ಳಬಹುದು. ವಿಟಮಿನ್ ಎ, ಸಿ ಹಾಗೂ ಇ ಸಮೃದ್ಧವಾಗಿರುವ ಆಹಾರಗಳು, ತರಕಾರಿಗಳನ್ನು ಸೇವಿಸುವುದರಿಂದ ದೀರ್ಘಕಾಲದವರೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಸ್ವಲ್ಪ ಗಮನ ಹರಿಸುವುದರ ಜೊತೆಗೆ ಸೂಕ್ತ ಆರೈಕೆಯ ಮೂಲಕ ನಮ್ಮ ಜೀವಿತಾವಧಿ ಉದ್ದಕ್ಕೂ ದೃಷ್ಟಿಯನ್ನು ಸ್ಪಷ್ಟವಾಗಿ ಹಾಗೂ ಆರೋಗ್ಯಕರವಾಗಿ ಇರಿಸಿಕೊಳ್ಳಬಹುದು ಎಂದು ನೇತ್ರ ತಜ್ಞರು ತಿಳಿಸುತ್ತಾರೆ.

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ನಟಿ ಸಮಂತಾ 'ಪವರ್ ಮಾರ್ನಿಂಗ್ ದಿನಚರಿ': ಸತತ 21 ದಿನಗಳವರೆಗೆ ಪಾಲಿಸಿದರೆ ಅತ್ಯುತ್ತಮ ಫಲಿತಾಂಶ
- ಖ್ಯಾತ ನಟ ನಾನಾ ಪಾಟೇಕರ್ ಹೃದಯ ಸ್ತಂಭನದಿಂದ ಸಾವು: ಕಾರ್ಡಿಯಾಕ್ ಅರೆಸ್ಟ್ & ಹಾರ್ಟ್ ಅಟ್ಯಾಕ್ ಮಧ್ಯೆಯಿರುವ ವ್ಯತ್ಯಾಸವೇನು?
- ಎಂಡೊಮೆಟ್ರಿಯೊಸಿಸ್ನಿಂದ ಸದ್ದಿಲ್ಲದೇ ಹೆಚ್ಚಿಸುತ್ತಿರುವ ಟೈಪ್ - 2 ಡಯಾಬಿಟಿಸ್ ಅಪಾಯ: ಏಳು ಮಹಿಳೆಯರಲ್ಲಿ ಒಬ್ಬರಿಗೆ ತೊಂದರೆ
- ಯುವಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣಗಳೇನು? ಚಿಹ್ನೆಗಳನ್ನು ಪತ್ತೆ ಮಾಡುವುದು ಹೇಗೆ?
- ಜನಪ್ರಿಯ ಕಂಪನಿಯೊಂದರ ಜೀರಿಗೆ ಪುಡಿ ನಿರ್ಬಂಧಿಸಿದ್ದು ಏಕೆ?: ಮನೆಯಲ್ಲಿಯೇ ಜೀರಿಗೆ ಪುಡಿ ತಯಾರಿಸುವುದು ಹೇಗೆ?

