ಈಟಿವಿ ಭಾರತದಿಂದ ಮಧುಮೇಹದ ರಾಷ್ಟ್ರೀಯ ಅಭಿಯಾನ ಆರಂಭ: ಈ ಕ್ಯಾಂಪೇನ್ ಗುರಿ-ಉದ್ದೇಶದ ಕುರಿತು ಸಂಪೂರ್ಣ ವಿವರ ಹೀಗಿದೆ
ಜನರಿಗೆ ಮಧುಮೇಹ ಕಾಯಿಲೆಯ ನಿಖರವಾದ, ಸತ್ಯಾಸತ್ಯತೆ ಆಧಾರಿತ ಮಾಹಿತಿ ಒದಗಿಸುವುದು. ರೋಗದ ಸುತ್ತಲಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು. ದೇಶದ ಅತಿದೊಡ್ಡ ಆರೋಗ್ಯ ಬಿಕ್ಕಟ್ಟನ್ನು ನಿವಾರಿಸಲು ಈಟಿವಿ ಭಾರತ ಅಭಿಯಾನ ಆರಂಭಿಸಿದೆ. ಲೇಖನ: ಕಾಸ್ಮಿನ್ ಫರ್ನಾಂಡಿಸ್.


Published : April 20, 2026 at 8:43 PM IST
21ನೇ ಶತಮಾನದಲ್ಲಿ ಭಾರತವು ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ನಿರ್ಣಾಯಕ ಹಂತದಲ್ಲಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತದಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಆದರೆ, ಸರಿಸುಮಾರು 136 ಮಿಲಿಯನ್ ಜನರು ಮಧುಮೇಹ ಪೂರ್ವ ಸ್ಥಿತಿಯಲ್ಲಿದ್ದಾರೆ. ಅಂದರೆ, ಅವರು ಭವಿಷ್ಯದಲ್ಲಿ ರೋಗ ಪೀಡಿತರಾಗುವ ಅಪಾಯದಲ್ಲಿದ್ದಾರೆ ಎಂದು ಬಹಿರಂಗಪಡಿಸುತ್ತವೆ. ಈ ವ್ಯಕ್ತಿಗಳಲ್ಲಿ ಅನೇಕರು ತಮ್ಮ ಸ್ಥಿತಿಯ ಬಗ್ಗೆ ತಿಳಿದಿರುವುದಿಲ್ಲ ಎಂಬುದು ಗಂಭೀರ ಕಳವಳಕಾರಿ ವಿಷಯ. ಈ ಗಂಭೀರ ಹಿನ್ನೆಲೆಯಲ್ಲಿ ಈಟಿವಿ ಭಾರತ 'ರಾಷ್ಟ್ರೀಯ ಮಧುಮೇಹ ಜಾಗೃತಿ ಅಭಿಯಾನ'ವನ್ನು ಪ್ರಾರಂಭಿಸುತ್ತಿದೆ.
ಸಾಮಾನ್ಯವಾಗಿ ಜಗತ್ತನ್ನು ಪರಿವರ್ತಿಸುವ ಪ್ರಬಲ ವೈದ್ಯಕೀಯ ಕ್ರಾಂತಿಗಳು ಪ್ರಯೋಗಾಲಯಗಳಲ್ಲಿ ಹುಟ್ಟುವುದಿಲ್ಲ. ಬದಲಿಗೆ ಅವು ಜನರಲ್ಲಿ ಉತ್ಪತ್ತಿಯಾಗುವ ಜಾಗೃತಿಯಿಂದ ಹುಟ್ಟುತ್ತವೆ. ಬೆಂಗಳೂರಿನ ಸಾಫ್ಟ್‌ವೇರ್ ವೃತ್ತಿಪರರಿಂದ ಹಿಡಿದು ಒಡಿಶಾದ ದೂರದ ಹಳ್ಳಿಯ ರೈತರವರೆಗೆ, ಮಧುಮೇಹ ಕಾಯಿಲೆಯು ಯಾರನ್ನೂ ಬಿಡುವುದಿಲ್ಲ. ಒಂದು ಕಾಲದಲ್ಲಿ 'ಶ್ರೀಮಂತರ ಕಾಯಿಲೆ' ಎಂದು ಪರಿಗಣಿಸಲಾಗಿದ್ದ ಮಧುಮೇಹ ಇಂದು ನಗರ ಗಡಿಗಳನ್ನು ಮೀರಿ ಭಾರತದ ಮೂಲೆ ಮೂಲೆಗಳಲ್ಲಿ ನೆಲೆಯೂರಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಭಾರತದಲ್ಲಿ ಮಧುಮೇಹವು ಇನ್ನು ಮುಂದೆ ಶ್ರೀಮಂತರು ಅಥವಾ ಪ್ರಮುಖ ಮಹಾನಗರ ಕೇಂದ್ರಗಳಿಗೆ ಸೀಮಿತವಾದ ಕಾಯಿಲೆಯಾಗಿಲ್ಲ. ಇದು ಈಗ ದೇಶದ ಮೂಲೆ ಮೂಲೆಗಳನ್ನು ತಲುಪಿದೆ.
ಮುಂಬೈನಂತಹ ಮಹಾನಗರಗಳಲ್ಲಿ ನಿರಂತರ ಸಂಚಾರ, ಫಾಸ್ಟ್ ಫುಡ್ ಹಾಗೂ ಕಾರ್ಪೊರೇಟ್ ಒತ್ತಡವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಿದ್ದರೆ, ಬೆಣ್ಣೆ ಹಾಗೂ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿರುವ ಪಂಜಾಬ್, ಹರಿಯಾಣದ ಆಹಾರ ಸಂಸ್ಕೃತಿಯು ದೈಹಿಕ ಆರೋಗ್ಯದ ಮೇಲೆ ಹಾನಿ ಉಂಟುಮಾಡುತ್ತಿದೆ. ಉತ್ತರ ಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಕೃಷಿ ಕಾರ್ಮಿಕರಲ್ಲಿ ತೊಡಗಿರುವವರಿಗೆ ಶಕ್ತಿಯ ಪ್ರಾಥಮಿಕ ಮೂಲಗಳಾಗಿದ್ದ ಅನ್ನ, ಆಲೂಗಡ್ಡೆ ಈಗ ದೈಹಿಕ ಶ್ರಮದಲ್ಲಿನ ಕುಸಿತದಿಂದಾಗಿ ರೋಗಕ್ಕೆ ಅಪಾಯಕಾರಿ ಅಂಶಗಳಾಗಿವೆ.
ಒಡಿಶಾದ ಬುಡಕಟ್ಟು ಜಿಲ್ಲೆಗಳಲ್ಲಿ ಈ ರೋಗವು ಒಂದು ಕಾಲದಲ್ಲಿ ವಿರಳವಾಗಿತ್ತು. ಇತ್ತೀಚಿನ ದಿನಗಳಲ್ಲಿ ಇದರ ಹರಡುವಿಕೆಯು ವೇಗವಾಗಿ ಹೆಚ್ಚಾಗಿದೆ. ಹೆಚ್ಚಾಗಿ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ತ್ಯಜಿಸುವುದರಿಂದ ಸಂಭಸುತ್ತದೆ. ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿಯೂ ಸಹ ಪ್ರತಿದಿನ ಹಲವಾರು ಕಿಲೋಮೀಟರ್ ನಡೆಯುವ ಜನರಲ್ಲಿ ಮಧುಮೇಹದ ಹೆಚ್ಚುತ್ತಿರುವ ಸಂಭವವು ವೈದ್ಯಕೀಯ ತಜ್ಞರಲ್ಲಿ ಕಳವಳಕ್ಕೆ ಕಾರಣವಾಗಿದೆ. ಈಗಾಗಲೇ ಆರಂಭವಾಗಿರುವ ಮತ್ತು ಮುಂದಿನ ನಾಲ್ಕು ವಾರಗಳಲ್ಲಿ ಈಟಿವಿ ಭಾರತ ಈ ಬದಲಾಗುತ್ತಿರುವ ಪ್ರವೃತ್ತಿಗಳ ಕುರಿತು ರಾಜ್ಯವಾರು ಸಮಗ್ರ ಹಾಗೂ ನಿಖರವಾದ ಮಾಹಿತಿ ನೀಡಲಿದೆ.

ಧ್ಯೇಯ ಮತ್ತು ಉದ್ದೇಶ: ಮಧುಮೇಹ ಜಾಗೃತಿ ಅಭಿಯಾನದ ಪ್ರಾಥಮಿಕ ಉದ್ದೇಶವೆಂದರೆ ಜನರಿಗೆ ನಿಖರವಾದ, ಸತ್ಯಾಸತ್ಯತೆ ಆಧಾರಿತ ಮಾಹಿತಿಯನ್ನು ಒದಗಿಸುವುದು, ಮಧುಮೇಹ ರೋಗದ ಸುತ್ತಲಿನ ಭಯ ಹಾಗೂ ತಪ್ಪು ಕಲ್ಪನೆಗಳನ್ನು ಏಕಕಾಲದಲ್ಲಿ ಹೋಗಲಾಡಿಸುವುದು, ಈ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳಲು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುವುದು. ಮಾಹಿತಿಯ ಕೇವಲ ಪ್ರಸರಣವನ್ನು ಮೀರಿ, ದೇಶದ ವಿವಿಧ ಭಾಗಗಳ ತಜ್ಞರೊಂದಿಗೆ ಸಂದರ್ಶನಗಳು, ದತ್ತಾಂಶ ವರದಿಗಳು ಮತ್ತು ನಿಜ ಜೀವನದ ಕಥೆಗಳ ಮೂಲಕ ಭಾರತದಲ್ಲಿ ಮಧುಮೇಹ ಬಿಕ್ಕಟ್ಟಿನ ಸಮಗ್ರ ಅವಲೋಕಿಸುವುದು ಅಭಿಯಾನದ ಧ್ಯೇಯ ಮತ್ತು ಉದ್ದೇಶವಾಗಿದೆ.
ವೈದ್ಯರ ಮಾತುಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯ: ರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ಏಕೈಕ ಮಾರ್ಗವೆಂದರೆ ವರ್ಷಗಳಿಂದ ರೋಗಿಗಳನ್ನು ದಿನವಿಡೀ ಮೇಲ್ವಿಚಾರಣೆ ಮಾಡುತ್ತಿರುವವರ ಮಾತುಗಳನ್ನು ಅರಿತುಕೊಳ್ಳುವ ಕಾರ್ಯವನ್ನು ಈಟಿವಿ ಭಾರತ ಮಾಡುತ್ತದೆ. ನಮ್ಮ ಅಭಿಯಾನದ ನಿರ್ಣಾಯಕ ವಿಷಯವೆಂದರೆ, ವಿವಿಧ ಕ್ಷೇತ್ರಗಳ ವೈದ್ಯರ ಗುಂಪಿನ ಧ್ವನಿಗಳನ್ನು ಸೇರಿಸುವುದು. ವೈದ್ಯರು ಕಾಯುವ ಕೋಣೆಗಳಲ್ಲಿ ದಶಕಗಳನ್ನು ಕಳೆದಿರುವ, ರೋಗದ ಮಾದರಿಗಳನ್ನು ವಿಶ್ಲೇಷಿಸುವ, ಪ್ರಯೋಗಾಲಯ ವರದಿಗಳನ್ನು ಅರ್ಥೈಸುವ ಹಾಗೂ ಭಾರತದಾದ್ಯಂತ ರೋಗಿಗಳ ನೈಜ ಪ್ರಪಂಚದ ಅನುಭವಗಳನ್ನು ಅರ್ಥಮಾಡಿಕೊಂಡಿರುತ್ತಾರೆ. ದೇಶದ ಅತ್ಯಂತ ಪ್ರಸಿದ್ಧ ಮಧುಮೇಹ ತಜ್ಞರಲ್ಲಿ ಡಾ. ವಿ. ಮೋಹನ್ ಅವರನ್ನು ಒಬ್ಬರು ಎಂದು ಪರಿಗಣಿಸಲಾಗಿದೆ. ದಶಕಗಳಿಂದ ಅವರು ಇತರ ಅನೇಕ ಸಮುದಾಯಗಳಿಗಿಂತ ಭಾರತೀಯರು ಜೈವಿಕವಾಗಿ ಮಧುಮೇಹಕ್ಕೆ ಏಕೆ ಹೆಚ್ಚು ಒಳಗಾಗುತ್ತಾರೆ ಎಂಬುದರ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಅವರ ಕೆಲಸವು ಈ ಅಭಿಯಾನದ ಪ್ರಮುಖ ಪ್ರಶ್ನೆಗಳಲ್ಲಿ ಒಂದನ್ನು ಮುಂಚೂಣಿಗೆ ತರುತ್ತದೆ.
ಭಾರತದಲ್ಲಿ ಮಧುಮೇಹದ ಅಭಿವ್ಯಕ್ತಿ ಏಕೆ ಭಿನ್ನವಾಗಿದೆ? ನಂತರ ದಕ್ಷಿಣ ಏಷ್ಯನ್ನರ ಚಯಾಪಚಯ ಗುಣಲಕ್ಷಣಗಳನ್ನು ತನಿಖೆ ಮಾಡಲು ಹಲವು ವರ್ಷಗಳವರೆಗೆ ವೈದ್ಯ ಡಾ.ಅನೂಪ್ ಮಿಶ್ರಾ ಶ್ರಮಿಸಿದ್ದಾರೆ. ಅವರ ದೃಷ್ಟಿಕೋನವು ಈ ರೋಗದ ಬಗ್ಗೆ ಹಳೆಯ ತಪ್ಪು ಕಲ್ಪನೆಗಳನ್ನು ಪ್ರಶ್ನಿಸುತ್ತದೆ. ಅಂದರೆ, ಇದು ಗೋಚರವಾಗಿ ಅಧಿಕ ತೂಕ ಹೊಂದಿರುವವರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.
ಈ ಅಭಿಯಾನದಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಧ್ವನಿ ಫೋರ್ಟಿಸ್‌ನ ವೈದ್ಯರದ್ದಾಗಿದೆ. ಸಂಜಯ್ ರೆಡ್ಡಿ ಡಯಾಬಿಟಿಸ್ ಇಂಡಿಯಾ 2026ರ ಕಾರ್ಯಕ್ರಮ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೀರ್ಘಕಾಲೀನ ಮಧುಮೇಹ ನಿರ್ವಹಣೆಯ ಸವಾಲಿನ ವಾಸ್ತವದೊಂದಿಗೆ ಹೋರಾಡುವ ರೋಗಿಗಳನ್ನು ನಿಯಮಿತವಾಗಿ ಎದುರಿಸುವ ವೈದ್ಯರ ದೃಷ್ಟಿಕೋನವನ್ನು ರೆಡ್ಡಿ ಮುಂಚೂಣಿಗೆ ತರುತ್ತಾರೆ. ಎಐಜಿ ಆಸ್ಪತ್ರೆಗಳ ಡಾ.ರಾಕೇಶ್ ಕಲಾಪಾಲ ಮೂಲಕ ಈ ಉಪಕ್ರಮವು ಚಯಾಪಚಯ ಆರೋಗ್ಯ ಮತ್ತು ಜೀರ್ಣಾಂಗ ವ್ಯವಸ್ಥೆಯ ನಡುವಿನ ಸಂಕೀರ್ಣ ಸಂಬಂಧವನ್ನು ಸಹ ಪರಿಶೋಧಿಸುತ್ತದೆ. ಕಲಾಪಾಲ ಅವರ ಕೆಲಸವು ಗ್ಯಾಸ್ಟ್ರೋಎಂಟರಾಲಜಿ ಹಾಗೂ ಚಯಾಪಚಯ ಅಸ್ವಸ್ಥತೆಗಳ ಕುತೂಹಲಕಾರಿ ಛೇದಕದಲ್ಲಿದೆ. ಕರುಳಿನ ಆರೋಗ್ಯ, ಬೊಜ್ಜು ಮತ್ತು GERD (Gastroesophageal reflux disease) ನಂತಹ ಪರಿಸ್ಥಿತಿಗಳು ಮಧುಮೇಹ ಬರುವ ಅಪಾಯಕ್ಕೆ ಹೇಗೆ ಸಂಬಂಧಿಸಿವೆ ಎಂಬುದನ್ನು ಅವರು ಸಂಶೋಧನೆ ಮಾಡುತ್ತಾರೆ.

ಮಧುಮೇಹದ ಅತ್ಯಂತ ಗಂಭೀರ ತೊಡಕುಗಳಲ್ಲಿ ಒಂದು ಡಯಾಬಿಟಿಕ್ ರೆಟಿನೋಪತಿ, ಇದು ರೆಟಿನಾದ ಸಣ್ಣ ರಕ್ತನಾಳಗಳಿಗೆ ಹಾನಿ ಉಂಟುಮಾಡುವ ಸ್ಥಿತಿಯಾಗಿದೆ ಮತ್ತು ಚಿಕಿತ್ಸೆ ನೀಡದಿದ್ದರೆ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು. ನೇತ್ರಶಾಸ್ತ್ರಜ್ಞೆ ಡಾ. ಚೈತ್ರ ಜಯದೇವ್ ಈ ರೋಗದ ಈ ನಿರ್ದಿಷ್ಟ ಅಂಶದ ಬಗ್ಗೆ ಬೆಳಕು ಚೆಲ್ಲುತ್ತಾರೆ. ವೈವಿಧ್ಯಮಯ ಕ್ಷೇತ್ರಗಳ ತಜ್ಞರ ದೃಷ್ಟಿಕೋನಗಳು ಈ ಚರ್ಚೆಗೆ ಮತ್ತೊಂದು ನಿರ್ಣಾಯಕ ಆಯಾಮವನ್ನು ಸೇರಿಸುತ್ತವೆ. ಗುಜರಾತ್‌ನಲ್ಲಿ ಮಧುಮೇಹದ ಸುತ್ತಲಿನ ಸಾಮಾನ್ಯ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಡಾ.ಭಾಗೀರಥ ಸೋಲಂಕಿ ಸುಮಾರು ಮೂರು ದಶಕಗಳ ಕ್ಲಿನಿಕಲ್ ಅನುಭವವನ್ನು ಬಳಸುತ್ತಾರೆ.
ರಾಜಸ್ಥಾನದಲ್ಲಿ 'ಡಯಾಬಿಸಿಟಿ' ನಡೆಸುತ್ತಿರುವ ಡಾ.ರಾಜೇಶ್ ಪಾರಿಖ್ ರಾಜ್ಯದಲ್ಲಿ ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳ ಬಗ್ಗೆ ಮಾತನಾಡುತ್ತಾರೆ. ಟೈಪ್ 1 ಮತ್ತು ಟೈಪ್ 2 ಮಧುಮೇಹ ಎರಡೂ ಈಗ ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಆವರ್ತನವನ್ನು ಗುರುತಿಸಲಾಗುತ್ತಿದೆ. ರಾಯ್‌ಪುರದ ಡಾ. ಅರುಣ್ ಕೆಡಿಯಾ ಅವರಂತಹ ತಜ್ಞರು ಈ ಬದಲಾವಣೆಯ ಹಿಂದಿನ ಮೂಲ ಕಾರಣಗಳನ್ನು ಅಧ್ಯಯನ ಮಾಡಿಕೊಂಡುಬಂದಿದ್ದಾರೆ. ಪ್ರತಿಯೊಬ್ಬ ವೈದ್ಯರು ರೋಗವನ್ನು ಸ್ವಲ್ಪ ವಿಭಿನ್ನ ಮಸೂರದ ಮೂಲಕ ನೋಡುತ್ತಾರೆ.
ಪ್ರತಿಯೊಬ್ಬರೂ ಉತ್ತರಿಸಲು ಬಯಸುವ ಪ್ರಶ್ನೆಗಳು ಯಾವುವು?: ಭಾರತದಲ್ಲಿ ಟೈಪ್ 2 ಮಧುಮೇಹದ 'ಚಿಕಿತ್ಸೆ'ಯನ್ನು ಸುತ್ತುವರೆದಿರುವ ಸಾಮಾನ್ಯ ಪುರಾಣವೆಂದರೆ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು. ವಾಸ್ತವದಲ್ಲಿ ಟೈಪ್ 2 ಮಧುಮೇಹವನ್ನು ಹಿಮ್ಮುಖಗೊಳಿಸಬಹುದು ಅಥವಾ ಉಪಶಮನಕ್ಕೆ ತರಬಹುದು, ಆದರೆ ಅದನ್ನು ಸಂಪೂರ್ಣವಾಗಿ 'ಗುಣಪಡಿಸಲು' ಸಾಧ್ಯವಿಲ್ಲ.
ದೇಶಾದ್ಯಂತ, ಚಿಕಿತ್ಸಾಲಯಗಳು, ಕ್ಷೇಮ ಕಾರ್ಯಕ್ರಮಗಳು ಹಾಗೂ ಡಿಜಿಟಲ್ ವೇದಿಕೆಗಳು 'ಮಧುಮೇಹವನ್ನು ಗುಣಪಡಿಸಲು' ಭರವಸೆ ನೀಡುತ್ತವೆ. ಸರಿಯಾದ ಆಹಾರ ಯೋಜನೆ, ವ್ಯಾಯಾಮ ದಿನಚರಿ ಅಥವಾ ಚಯಾಪಚಯ ಮರುಹೊಂದಿಸುವಿಕೆಯೊಂದಿಗೆ ರೋಗವು ಕಣ್ಮರೆಯಾಗಬಹುದು ಎಂದು ಜಾಹೀರಾತುಗಳು ಹೇಳುತ್ತವೆ. ಆದರೆ ವೈದ್ಯಕೀಯ ವಿಜ್ಞಾನವು ಹೆಚ್ಚು ಸೂಕ್ಷ್ಮವಾದ ಕಥೆಯನ್ನು ಹೇಳುತ್ತದೆ.
ಟೈಪ್ 2 ಮಧುಮೇಹ ಹೊಂದಿರುವ ಕೆಲವು ರೋಗಿಗಳು ಉಪಶಮನ ಸಾಧಿಸುತ್ತಾರೆ, ಅಂದರೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಔಷಧಿಗಳಿಲ್ಲದೆ ಸ್ವಲ್ಪ ಸಮಯದವರೆಗೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಉಪಶಮನವು ಸಂಪೂರ್ಣ ಚಿಕಿತ್ಸೆಗೆ ಸಮನಾಗಿರುವುದಿಲ್ಲ. ಆಧಾರವಾಗಿರುವ ಚಯಾಪಚಯ ಅಸ್ವಸ್ಥತೆ ಮುಂದುವರಿಯುತ್ತದೆ. ಜೀವನಶೈಲಿಯ ಬದಲಾವಣೆಗಳನ್ನು ಉಳಿಸಿಕೊಳ್ಳದಿದ್ದರೆ, ರೋಗವು ಮರುಕಳಿಸಬಹುದು. ಈ ಸಂಕೀರ್ಣ ಸತ್ಯವನ್ನು ಎದುರಿಸುವ ಮೂಲಕ ಈ ಅಭಿಯಾನವು ಪ್ರಾರಂಭವಾಗುತ್ತದೆ. 'ಉಪಶಮನ'ವು ಒಂದು ಪ್ರಮುಖ ಪ್ರಗತಿಯನ್ನು ಪ್ರತಿನಿಧಿಸುತ್ತದೆಯೇ ಅಥವಾ ದೀರ್ಘಕಾಲೀನ ರೋಗ ನಿರ್ವಹಣೆಗೆ ಕೇವಲ ಹೊಸ ಲೇಬಲ್ ಆಗಿದೆಯೇ ಎಂದು ಅನ್ವೇಷಿಸಲು ಪ್ರಸಿದ್ಧ ಮಧುಮೇಹಶಾಸ್ತ್ರಜ್ಞರು ಹಾಗೂ ಅಂತಃಸ್ರಾವಶಾಸ್ತ್ರಜ್ಞರೊಂದಿಗೆ ಸಂದರ್ಶನಗಳನ್ನು ಒಳಗೊಂಡಿದೆ. ತಜ್ಞರ ಉತ್ತರವು ನಿಮ್ಮನ್ನು ಆಶ್ಚರ್ಯಗೊಳಿಸಬಹುದು.
ದೇಶಾದ್ಯಂತದ ವಿವಿಧ ಸ್ಟೋರಿಗಳು: ಭಾರತದಲ್ಲಿ ಮಧುಮೇಹದ ಅತ್ಯಂತ ಆಕರ್ಷಕ ಅಂಶವೆಂದರೆ ಅದನ್ನು ಒಂದೇ ನಿರೂಪಣೆಯಿಂದ ವ್ಯಾಖ್ಯಾನಿಸಲಾಗಿಲ್ಲ. ಬದಲಾಗಿ ಇದು ಅನೇಕ ವೈಯಕ್ತಿಕ ಸ್ಟೋರಿಗಳಿಂದ ಹೆಣೆಯಲಾದ ವಸ್ತ್ರ. ಉದಾಹರಣೆಗೆ ರಾಜಸ್ಥಾನವನ್ನು ತೆಗೆದುಕೊಳ್ಳಿ, ಅಲ್ಲಿ ದತ್ತಾಂಶದ ಸೂಕ್ಷ್ಮ ವಿಶ್ಲೇಷಣೆಯು ವಿವಿಧ ವಯೋಮಾನದ ಗುಂಪುಗಳು ಹಾಗೂ ಭೌಗೋಳಿಕ ಸ್ಥಳಗಳಲ್ಲಿ ಮಧುಮೇಹದ ಹರಡುವಿಕೆ ಮತ್ತು ಸ್ವರೂಪ ಎಷ್ಟು ವೈವಿಧ್ಯಮಯವಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ.
ದೆಹಲಿಯನ್ನು ಪರಿಗಣಿಸಿ, ಅಲ್ಲಿ ಹೆಚ್ಚುತ್ತಿರುವ ಮಧುಮೇಹ ಪ್ರಮಾಣಗಳು ನಗರ ಜೀವನಶೈಲಿಯ ಸ್ಟೋರಿಗಳನ್ನು ಹೇಳುತ್ತವೆ. ಅನುಕೂಲತೆಯ ಆಕರ್ಷಣೆ ಮತ್ತು ಅದು ನೀಡುವ ಪ್ರತಿಕೂಲ ದೈಹಿಕ ಪರಿಣಾಮಗಳ ನಡುವೆ ಸಿಲುಕಿಕೊಂಡಿದೆ. ಇದಲ್ಲದೆ, ಈ ವೈಜ್ಞಾನಿಕ ಒಳನೋಟಗಳಿಗೆ ಜೀವ ತುಂಬುವ ಬಲವಾದ ಸ್ಟೋರಿಗಳಿವೆ. ಇಂತಹ ಒಂದು ಸ್ಟೋರಿ ಪಲ್ಲವಿ ಉಪಾಧ್ಯಾಯ (ದಕ್ಷಿಣ ದೆಹಲಿಯ 'ಮಿಲೆಟ್ ಕ್ವೀನ್' ಎಂದು ಕರೆಯುತ್ತಾರೆ), ಅವರು ತಮ್ಮ ಆಹಾರದಿಂದ ಗೋಧಿ, ಅಕ್ಕಿಯನ್ನು ತೆಗೆದುಹಾಕಿ ಅವುಗಳನ್ನು ಸಿರಿಧಾನ್ಯಗಳಿಂದ ಬದಲಾಯಿಸಿದರು, ಈ ಬದಲಾವಣೆಯು ಅವರ HbA1c ಮಟ್ಟದಲ್ಲಿ ನಾಟಕೀಯ ಇಳಿಕೆಗೆ ಕಾರಣವಾಯಿತು.
ನಂತರ ಐಟಿ ವೃತ್ತಿಪರರೊಬ್ಬರ ಸ್ಟೋರಿಯು ಇದೆ, ಅವರು ತುಂಬಾ ಸರಳವಾದ ಅಭ್ಯಾಸವನ್ನು ಅಳವಡಿಸಿಕೊಂಡರು. ದಿನವಿಡೀ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವ ಬದಲು, ಅವರು ಪ್ರತಿ ಗಂಟೆಗೆ ಸಂಕ್ಷಿಪ್ತ 'ಮೈಕ್ರೋ ವಾಕ್' (ಲಘು ನಡಿಗೆ) ಮಾಡಲು ಪ್ರಾರಂಭಿಸಿದರು.

ವೈಯಕ್ತಿಕ ಉಪಾವಾಖ್ಯಾನಗಳನ್ನು ಮೀರಿ, ಈ ಅಭಿಯಾನವು ಈ ವಿಷಯದ ಸುತ್ತಲಿನ ಉದಯೋನ್ಮುಖ ವಿಜ್ಞಾನವನ್ನು ಆಳವಾಗಿ ಪರಿಶೀಲಿಸುತ್ತದೆ. ಪ್ರಮುಖ ಮಧುಮೇಹಶಾಸ್ತ್ರಜ್ಞರು, ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸಕರು ಮತ್ತು ಸಂಶೋಧಕರು ಸೇರಿದಂತೆ ಪ್ರಸಿದ್ಧ ತಜ್ಞರು, ವಿಜ್ಞಾನಿಗಳು ಇನ್ನೂ ಚರ್ಚಿಸುತ್ತಿರುವ ಪ್ರಶ್ನೆಗಳನ್ನು ಅನ್ವೇಷಿಸುತ್ತಾರೆ. ಉದಾಹರಣೆಗೆ:
- ಭಾರತೀಯರು ಆನುವಂಶಿಕವಾಗಿ ಮಧುಮೇಹಕ್ಕೆ ಏಕೆ ಹೆಚ್ಚು ಒಳಗಾಗುತ್ತಾರೆ?
- ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಮಧುಮೇಹ ಏಕೆ ಹೆಚ್ಚಾಗಿ ಕಂಡುಬರುತ್ತಿದೆ?
- ಟೈಪ್ 2 ಮಧುಮೇಹವನ್ನು ಪ್ರಚೋದಿಸುವಲ್ಲಿ ಒತ್ತಡವು ಯಾವ ಪಾತ್ರವನ್ನು ವಹಿಸುತ್ತದೆ?
- ಕರುಳಿನ ಆರೋಗ್ಯವು ಚಯಾಪಚಯ ಕಾಯಿಲೆಗೆ ಸಂಬಂಧಿಸಿದೆಯೇ?
- ತೆಳ್ಳಗಿನ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಸಹ ಮಧುಮೇಹಕ್ಕೆ ಏಕೆ ಒಳಗಾಗುತ್ತಿದ್ದಾರೆ?
ಕೆಲವು ಸಂಶೋಧಕರು ಈಗ ಕಡಿಮೆ ತಿಳಿದಿರುವ ವರ್ಗವನ್ನು ಚರ್ಚಿಸುತ್ತಿದ್ದಾರೆ - ಕೆಲವೊಮ್ಮೆ ಟೈಪ್ 5 ಮಧುಮೇಹ ಎಂದು ಕರೆಯಲಾಗುತ್ತದೆ - ಇದು ತೆಳ್ಳಗಿನ ವ್ಯಕ್ತಿಗಳಲ್ಲಿ ಅಪೌಷ್ಟಿಕತೆ ಮತ್ತು ಚಯಾಪಚಯ ಬದಲಾವಣೆಗಳೊಂದಿಗೆ ಸಂಬಂಧಿಸಿದೆ. ಈ ರೋಗವು ನಾವು ಒಮ್ಮೆ ಸಂಪೂರ್ಣ ಸತ್ಯವೆಂದು ಭಾವಿಸಿದ ಸಾಂಪ್ರದಾಯಿಕ ಜ್ಞಾನವನ್ನು ಧಿಕ್ಕರಿಸುತ್ತದೆ ಎಂದು ತೋರುತ್ತದೆ. ಮಧುಮೇಹ ಮತ್ತು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ, ಅಧಿಕ ರಕ್ತದೊತ್ತಡ ಹಾಗೂ ಹೃದಯಾಘಾತದಂತಹ ಇತರ ಪರಿಸ್ಥಿತಿಗಳ ನಡುವಿನ ಸಂಕೀರ್ಣ ಸಂಬಂಧಗಳನ್ನು ವೈದ್ಯರು ಚರ್ಚಿಸುತ್ತಾರೆ.
ಮಧುಮೇಹವು ಮುಖ್ಯಾಂಶವಾಗಿದ್ದರೆ ಪ್ರಿಡಿಯಾಬಿಟಿಸ್ ಎಂಬುದು ನಿರೂಪಣೆಯನ್ನು ಸಂಪೂರ್ಣವಾಗಿ ಬದಲಾಯಿಸಬಹುದಾದ ಅಡಿಟಿಪ್ಪಣಿಯಾಗಿದೆ. ಭಾರತದಲ್ಲಿ ಸುಮಾರು 136 ಮಿಲಿಯನ್ ವಯಸ್ಕರು ಪ್ರಸ್ತುತ ಪ್ರಿಡಿಯಾಬಿಟಿಸ್‌ನೊಂದಿಗೆ ವಾಸಿಸುತ್ತಿದ್ದಾರೆ. ಅವರಲ್ಲಿ ಬಹುಪಾಲು ಜನರಿಗೆ ಯಾವುದೇ ಲಕ್ಷಣಗಳನ್ನು ಕಂಡುಬರುವುದಿಲ್ಲ. ಪ್ರಿಡಿಯಾಬಿಟಿಸ್‌ನೊಂದಿಗೆ ಬದುಕುವುದು ಅರಿವಿಲ್ಲದೆ ಪ್ರಪಾತದ ಅಂಚಿನಲ್ಲಿ ನಿಲ್ಲುವುದಕ್ಕೆ ಸಮಾನವಾಗಿದೆ. ಆದರೂ, ತಡೆಗಟ್ಟುವಿಕೆ ಹೆಚ್ಚು ಸಾಧ್ಯವಿರುವ ಹಂತವೂ ಇದೇ ಆಗಿದೆ. ಈ ಅಭಿಯಾನದ ಪ್ರಾಥಮಿಕ ಧ್ಯೇಯವೆಂದರೆ ಓದುಗರಿಗೆ ಆಗಾಗ್ಗೆ ಕಡೆಗಣಿಸಲ್ಪಡುವ ಈ ಹಂತವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು. ಅದು ಏನು, ಅದನ್ನು ಮೊದಲೇ ಹೇಗೆ ಗುರುತಿಸುವುದು ಹಾಗೂ ಯಾವ ಸರಳ ಜೀವನಶೈಲಿಯ ಬದಲಾವಣೆಗಳು ರೋಗವು ಸಂಪೂರ್ಣವಾಗಿ ಮುಂದುವರಿಯುವುದನ್ನು ತಡೆಯಬಹುದು.
ಆಹಾರ ಕೇವಲ ಪೌಷ್ಟಿಕಾಂಶವಲ್ಲ, ಸಂಕೀರ್ಣ ಸಾಂಸ್ಕೃತಿಕ ಒಗಟು: ಆಹಾರವು ಕೇವಲ ಪೌಷ್ಟಿಕಾಂಶದ ಮೂಲವಲ್ಲ; ಇದು ಸಂಕೀರ್ಣ ಸಾಂಸ್ಕೃತಿಕ ಒಗಟು ಆಗಿದೆ. ಇದು ಹೊಟ್ಟೆಯನ್ನು ತುಂಬುವ ಒಂದು ಸಾಧನವಲ್ಲ, ಬದಲಾಗಿ ನಮ್ಮ ಗುರುತು, ಇತಿಹಾಸ, ಭೌಗೋಳಿಕತೆ ಮತ್ತು ಸಾಮಾಜಿಕ ಮೌಲ್ಯಗಳ ಪ್ರತಿಬಿಂಬವಾಗಿದೆ. ಭಾರತದಲ್ಲಿ ಆಹಾರವು ಕೇವಲ ಪೋಷಣೆಗಿಂತ ಹೆಚ್ಚಿನದನ್ನು ಸೂಚಿಸುತ್ತದೆ. ಇದು ಗುರುತು, ಭೌಗೋಳಿಕತೆ, ಧರ್ಮ ಹಾಗೂ ಇತಿಹಾಸದ ಆಳವಾದ, ಸಂಕೀರ್ಣವಾದ ವಸ್ತ್ರವನ್ನು ಪ್ರತಿನಿಧಿಸುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳೊಂದಿಗೆ ನೇರವಾಗಿ ಹೆಣೆದುಕೊಂಡಿರುವ ಅಂಶಗಳಿವೆ.
ಪಂಜಾಬ್‌ನಲ್ಲಿ ಹೇರಳವಾಗಿ ಬೆಣ್ಣೆಯುಕ್ತ ಗ್ರೇವಿಗಳನ್ನು ಸೇವಿಸುತ್ತಾರೆ. ಉತ್ತರ ಪ್ರದೇಶದಲ್ಲಿ ಪೇಡಾ ಮತ್ತು ಜಲೇಬಿಯಂತಹ ಸಿಹಿತಿಂಡಿಗಳು ಬಹಳ ಜನಪ್ರಿಯವಾಗಿವೆ. ದಕ್ಷಿಣದ ಪಾಕಪದ್ಧತಿಯು ಹೆಚ್ಚಾಗಿ ಅಕ್ಕಿಯನ್ನು ತನ್ನ ಪ್ರಧಾನ ಆಹಾರವಾಗಿ ಒಳಗೊಂಡಿರುತ್ತದೆ. ದೇಶಾದ್ಯಂತ ಗೋಧಿ ರೋಟಿಸ್ (ಫ್ಲಾಟ್‌ಬ್ರೆಡ್‌ಗಳು) ದೈನಂದಿನ ಊಟದಲ್ಲಿ ಪ್ರಾಬಲ್ಯ ಹೊಂದಿವೆ. ಈ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಹೊರತಾಗಿಯೂ ಮಧುಮೇಹದ ಹರಡುವಿಕೆ ಗಮನಾರ್ಹವಾಗಿ ಕಡಿಮೆಯಾಗಿ ಅಥವಾ ಹೆಚ್ಚಿರಲು ಕಾರಣವೇನು? ಈ ಅಭಿಯಾನದಿಂದ ಹಲವು ಬದಲಾವಣೆಗಳನ್ನು ತರಲು ಸಾಧ್ಯವಿದೆ.
ಮಧುಮೇಹವು ಯುವ ಪೀಳಿಗೆಯ ಸಮಸ್ಯೆಯಾಗಬಹುದೇ?: ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಆತಂಕಕಾರಿ ಪ್ರವೃತ್ತಿಗಳಲ್ಲಿ ಒಂದು ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಮಧುಮೇಹದ ಹೆಚ್ಚುತ್ತಿದೆ. ಜೀವನಶೈಲಿಯ ಬದಲಾವಣೆಗಳು ಖಂಡಿತವಾಗಿಯೂ ಈ ವಿದ್ಯಮಾನದಲ್ಲಿ ಪಾತ್ರವಹಿಸುತ್ತವೆ. ಸಂಶೋಧಕರು ಕೆಲವು ಜೈವಿಕ ಪ್ರಶ್ನೆಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ಪೋಷಕರ ಅಭ್ಯಾಸಗಳು ತಮ್ಮ ಮಕ್ಕಳ ಚಯಾಪಚಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆಯೇ? ಕೆಲವು ಅಧ್ಯಯನಗಳು, ಉದಾಹರಣೆಗೆ, ತಂದೆಯ ತಂಬಾಕು ಸೇವನೆಯು ಎಪಿಜೆನೆಟಿಕ್ ಬದಲಾವಣೆಗಳ ಮೂಲಕ ಮುಂದಿನ ಪೀಳಿಗೆಯಲ್ಲಿ ಮಧುಮೇಹದ ಅಪಾಯ ಹೆಚ್ಚಿಸಬಹುದು ಎಂದು ಸೂಚಿಸುತ್ತವೆ. ಇದು ನಿಜವೆಂದು ಸಾಬೀತಾದರೆ ಮಧುಮೇಹವು ಪೀಳಿಗೆಯ ಸಮಸ್ಯೆಯಾಗಿ ವಿಕಸನಗೊಳ್ಳಬಹುದು.
ಪರಿಹಾರಗಳಿಗೆ ಪರಿಣಾಮಕಾರಿ ಹುಡುಕಾಟ: ಸವಾಲು ಎಷ್ಟೇ ಕಷ್ಟಕರವೆಂದು ತೋರುತ್ತದೆಯಾದರೂ ಭರವಸೆಯ ಒಂದು ಬೆಳಕು ಉಳಿದಿದೆ. ಭಾರತದಾದ್ಯಂತ ವೈದ್ಯರು, ಸಂಶೋಧಕರು, ಯೋಗ ತಜ್ಞರು, ಆಯುರ್ವೇದ ವೈದ್ಯರು ಹಾಗೂ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ವೈವಿಧ್ಯಮಯ ಪರಿಹಾರಗಳನ್ನು ಪ್ರಯೋಗಿಸುತ್ತಿದ್ದಾರೆ. ಕೆಲವರು ಮಧುಮೇಹ ರೋಗಿಗಳಿಗೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ವ್ಯಾಯಾಮ ದಿನಚರಿಗಳ ಮೇಲೆ ಕೇಂದ್ರೀಕರಿಸುತ್ತಿದ್ದಾರೆ. ಇತರರು ಯೋಗವನ್ನು ಚಯಾಪಚಯ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಬಲ ಸಾಧನವೆಂದು ಗಮನಿಸುತ್ತಾರೆ. ಕೆಲವು ವ್ಯಕ್ತಿಗಳು ಗಿಡಮೂಲಿಕೆ ಚಿಕಿತ್ಸೆಗಳು, ಆಧುನಿಕ ಔಷಧಗಳು ಅಥವಾ ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ಶರೀರಶಾಸ್ತ್ರಕ್ಕೆ ಅನುಗುಣವಾಗಿ ವಿಶೇಷ ಪೌಷ್ಟಿಕಾಂಶ ಯೋಜನೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದ ಯುವ ವಿಜ್ಞಾನಿ ಪ್ರಿಯಾಂಶು ನೇಮಾ, ಮಧುಮೇಹಕ್ಕೆ ಹೊಸ ಚಿಕಿತ್ಸೆಗಳನ್ನು ಕಂಡುಹಿಡಿಯಲು 'ಕಂಪ್ಯೂಟೇಶನಲ್ ಡ್ರಗ್ ಡಿಸ್ಕವರಿ' ಮತ್ತು 'ಟ್ರಾನ್ಸ್‌ಕ್ರಿಪ್ಟೋಮಿಕ್ಸ್' ನಂತಹ ತಂತ್ರಗಳನ್ನು ಸಹ ಬಳಸುತ್ತಿದ್ದಾರೆ. ಆಸ್ಪತ್ರೆಗಳಿಂದ ವಿಶ್ವವಿದ್ಯಾಲಯಗಳು ಮತ್ತು ಸಮುದಾಯ ಆರೋಗ್ಯ ಶಿಬಿರಗಳವರೆಗೆ ಎಲ್ಲೆಡೆ ಹೊಸ ಅನ್ವಯಿಕೆಗಳು ಹೊರಹೊಮ್ಮುತ್ತಿವೆ. ಭಾರತದಲ್ಲಿ ಮಧುಮೇಹದ ಸ್ಟೋರಿ ಇನ್ನೂ ಮುಗಿದಿಲ್ಲ. ವಾಸ್ತವವಾಗಿ ಈ ನಿರೂಪಣೆಯ ಅತ್ಯಂತ ನಿರ್ಣಾಯಕ ಅಧ್ಯಾಯಗಳನ್ನು ಇನ್ನೂ ಬರೆಯಬೇಕಿದೆ. ಇವುಗಳನ್ನು ನಿಮ್ಮಂತಹ ಓದುಗರು ಬರೆಯುತ್ತಾರೆ, ಅವರು ಚಿಂತನಶೀಲ, ಉದ್ದೇಶಪೂರ್ವಕ ಹೆಜ್ಜೆಗಳನ್ನು ಮುಂದಿಡುವ ಮೂಲಕ ಈ ಅಭಿಯಾನದ ಅಂತ್ಯದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ.
ಇವುಗಳನ್ನೂ ಓದಿ:
- ದೇಶದಲ್ಲಿ 10 ಕೋಟಿಗಿಂತಲೂ ಹೆಚ್ಚು ಜನರಿಗೆ ಮಧುಮೇಹ!: ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ? ಈ ಆಹಾರಗಳು ನಿಮಗಲ್ಲ
- ಮಧುಮೇಹಿಗಳು ರಕ್ತದ ಜೊತೆಗೆ ಯಾವೆಲ್ಲಾ ಅಂಗಾಂಗ ದಾನ ಮಾಡಬಹುದು? ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ವೈದ್ಯರ ಸಲಹೆಗಳಿವು
- ಟೈಪ್ 2 ಮಧುಮೇಹ ಪೀಡಿತ ಮಹಿಳೆಯರಿಗೆ ಕಾಡುವ ಆರೋಗ್ಯ ಅಪಾಯಗಳೇನು? ತಡೆಯಲು ಆರೋಗ್ಯಕರ ಜೀವನಶೈಲಿ & ಆಹಾರ ಕ್ರಮಗಳೇನು? ವೈದ್ಯರ ಸಲಹೆಗಳೇನು?
- ದೇಹದ ಈ 6 ಭಾಗಗಳಲ್ಲಿ ಮೊದಲು ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು: WHO ವರದಿ ತಿಳಿಸುವುದೇನು?
- ಚಿಕ್ಕ ಮಕ್ಕಳಲ್ಲಿ ಕೂಡ ಸಂಧಿವಾತ ಬರಬಹುದೇ? ಜುವೆನೈಲ್ ಇಡಿಯೋಪಥಿಕ್ ಆರ್ಥರೈಟಿಸ್ ಎಂದರೇನು & ಇದರ ಚಿಹ್ನೆಗಳೇನು?

