ಲಿವರ್ ಕ್ಯಾನ್ಸರ್ ತಡೆಯುವುದೇ ಕಾಫಿ?: ತಜ್ಞರು ಹೇಳುವುದೇನು?
ನಿಯಮಿತ ಕಾಫಿ ಸೇವನೆಯಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು.


Published : February 24, 2026 at 4:03 PM IST
ಕಾಫಿ ಸೇವನೆಯಿಂದ ಲಿವರ್ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ಅನೇಕರು ಬೆಳಿಗ್ಗೆದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಇದು ಹೊಸ ಉತ್ಸಾಹ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದಲ್ಲದೇ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಲಿವರ್‌ಗೆ ರಕ್ಷಣೆ ನೀಡುತ್ತದೆ ಎಂದು ಸಂಶೋಧನೆ ಹೇಳುತ್ತದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ (National Library of Medicine) ಅಧ್ಯಯನ ತಿಳಿಸುವ ಪ್ರಕಾರ, ದೈನಂದಿನ ಕಾಫಿ ಸೇವನೆಯನ್ನು ಎರಡು ಕಪ್‌ಗಳಿಗೆ ಹೆಚ್ಚಿಸುವುದರಿಂದ ಲಿವರ್ ಕ್ಯಾನ್ಸರ್‌ನ ಸಾಮಾನ್ಯ ವಿಧವಾದ 'ಹೆಪಟೋಸೆಲ್ಯುಲಾರ್ ಕಾರ್ಸಿನೋಮ'ವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಸುಮಾರು ಶೇ.35ರಷ್ಟು ಕಡಿಮೆ ಮಾಡುತ್ತದೆ ಎನ್ನುತ್ತದೆ. ಆಲ್ಕೋಹಾಲ್ ಸೇವನೆ, ಹೆಪಟೈಟಿಸ್ ಸೋಂಕು ಹಾಗೂ ಬಾಡಿ ಮಾಸ್ ಇಂಡೆಕ್ಸ್ (BMI) ರೀತಿಯ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನಂತರವೂ ಈ ಫಲಿತಾಂಶಗಳು ಸಕಾರಾತ್ಮಕವಾಗಿರುತ್ತವೆ ಎನ್ನುವುದು ಆರೋಗ್ಯ ತಜ್ಞರ ಮಾತು.

ಕಾಫಿ ಲಿವರ್ ಕ್ಯಾನ್ಸರ್ ಅಪಾಯವನ್ನು ಹೇಗೆ ತಗ್ಗಿಸುತ್ತದೆ?: ಕಾಫಿ ಕೇವಲ ಕೆಫೀನ್ ಹೊಂದಿರುವ ಪಾನೀಯವಲ್ಲ. ತಜ್ಞರು ತಿಳಿಸುವಂತೆ, ಇದು ಪಾಲಿಫಿನಾಲ್‌ಗಳು, ಡೈಟರ್ಪೀನ್‌ಗಳು ಹಾಗೂ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಸೇರಿದಂತೆ ಚಯಾಪಚಯ ಕ್ರಿಯೆಗೆ ಪ್ರಯೋಜನಕಾರಿಯಾದ ಸಾವಿರಕ್ಕೂ ಹೆಚ್ಚು ಸಂಯುಕ್ತಗಳನ್ನು ಹೊಂದಿದೆ. ಹಲವು ಅಧ್ಯಯನಗಳ ಪ್ರಕಾರ, ಈ ಸಂಯುಕ್ತಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ, ಆಕ್ಸಿಡೇಟಿವ್ ಒತ್ತಡ ತಡೆಯುತ್ತದೆ. ಜೊತೆಗೆ ಯಕೃತ್ತಿನ ಕಿಣ್ವಗಳ ಮಟ್ಟವನ್ನು ಸುಧಾರಿಸುತ್ತದೆ. ಇದರ ಪರಿಣಾಮವಾಗಿ ಕಾಫಿ ಗಂಭೀರ ರೂಪದ ಯಕೃತ್ತಿನ ಕಾಯಿಲೆ ಹಾಗೂ ಯಕೃತ್ತಿನ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

ಸಂಶೋಧನೆಯಿಂದ ತಿಳಿದು ಬಂದಿದ್ದು..: 1966 ಹಾಗೂ 2007ರ ನಡುವೆ ನಡೆಸಿದ ಅಧ್ಯಯನಗಳ ಆಧಾರದ ಮೇಲೆ ಮೆಟಾ-ವಿಶ್ಲೇಷಣೆಯ ಪ್ರಕಾರ, ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ (National Library of Medicine) ಅಧ್ಯಯನವು ದಿನಕ್ಕೆ ಎರಡು ಕಪ್ ಕಾಫಿ ಕುಡಿಯುವುದರಿಂದ ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಶೇ.43ರಷ್ಟು ಕಡಿಮೆ ಮಾಡಿದೆ ಎಂದು ಕಂಡುಹಿಡಿದಿದೆ. ದಿನಕ್ಕೆ ಎರಡು ಕಪ್ ನೈಸರ್ಗಿಕ ಕೆಫೀನ್ ಅಂಶವಿರುವ ಕಾಫಿ ಕುಡಿಯುವುದರಿಂದ ಎಚ್ಸಿಸಿ ಅಪಾಯ ಶೇ.27ರಷ್ಟು ಕಡಿಮೆಯಾಗಿದೆ. ಆದರೆ, ಅದೇ ಪ್ರಮಾಣದ ಕೆಫೀನ್‌ರಹಿತ ಕಾಫಿ ಕುಡಿಯುವುದರಿಂದ ಅಪಾಯ ಶೇ.14ರಷ್ಟು ಕಡಿಮೆಯಾಗಿದೆ ಎಂದು ಬಿಎಂಜೆ ಜರ್ನಲ್ (BMJ Journal) ವರದಿ ತಿಳಿಸಿದೆ.

ಹಾಗಾದರೆ, ನೀವು ಎಷ್ಟು ಕಾಫಿ ಕುಡಿಯಬೇಕು?: ಎಷ್ಟು ಕಾಫಿ ಕುಡಿಯಬೇಕು ಎಂಬುದರ ಕುರಿತು ಯಾವುದೇ ಸಂಶೋಧನೆ ಸ್ಪಷ್ಟವಾಗಿ ತಿಳಿಸಿಲ್ಲ. ಮಿತವಾಗಿ ಕಾಫಿ ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ದಿನಕ್ಕೆ ಎರಡರಿಂದ ನಾಲ್ಕು ಕಪ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಈ ಕ್ರಮದಲ್ಲಿ ಫಿಲ್ಟರ್ ಕಾಫಿ ಅಥವಾ ಇನ್ಸ್ಟೆಂಟ್ ಕಾಫಿ ಆಗಿರಲಿ ಪರಿಣಾಮ ಒಂದೇ. ಅತಿಯಾದ ಕಾಫಿ ಸೇವನೆಯು ಜೀರ್ಣಕಾರಿ ಅಸ್ವಸ್ಥತೆ, ನಿದ್ರಾಹೀನತೆ ಅಥವಾ ಹೆಚ್ಚಿದ ಹೃದಯ ಬಡಿತದಂತಹ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಇವು ವೈಯಕ್ತಿಕ ಸೂಕ್ಷ್ಮತೆಯನ್ನು ಅವಲಂಬಿಸಿರುತ್ತದೆ. ನಿಯಮಿತವಾಗಿ ಕಾಫಿ ಕುಡಿಯುವುದು ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸುಲಭವಾದ ಮಾರ್ಗ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಕೆಲವು ಮುನ್ನೆಚ್ಚರಿಕೆಗಳು:
ಮದ್ಯಪಾನ & ಧೂಮಪಾನ: ನೀವು ಮದ್ಯಪಾನ ಹಾಗೂ ಧೂಮಪಾನ ಮುಂದುವರಿಸಿದರೆ ಯಕೃತ್ತಿನ ಆರೋಗ್ಯಕ್ಕಾಗಿ ಕಾಫಿ ಕುಡಿಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಕಾಫಿ ಇವುಗಳಿಗೆ ಪರ್ಯಾಯವಲ್ಲ ಎಂದು ತಜ್ಞರು ಹೇಳುತ್ತಾರೆ.
ವೈದ್ಯರ ಸಲಹೆ: ಹೃದಯ ಸಮಸ್ಯೆಗಳು, ತೀವ್ರ ಆತಂಕ, ಗ್ಯಾಸ್ಟ್ರಿಕ್ ಸಮಸ್ಯೆಗಳು ಅಥವಾ ಗರ್ಭಿಣಿಯರು ಕಾಫಿಯ ಬಗ್ಗೆ ವೈದ್ಯಕೀಯ ಸಲಹೆಯನ್ನು ಪಡೆಯಲು ವೈದ್ಯರು ಸಲಹೆ ನೀಡುತ್ತಾರೆ. ಆರೋಗ್ಯಕರ ಆಹಾರವನ್ನು ಸೇವಿಸುವುದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದರ ಜೊತೆಗೆ ಇದೆಲ್ಲವನ್ನೂ ಮಾಡುವಾಗ ಕಾಫಿ ಕುಡಿಯುವುದನ್ನು ಹೆಚ್ಚುವರಿ ರಕ್ಷಣೆಯಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನು ಓದಿ:
- ಮಧುಮೇಹದಿಂದ ದೇಹದ ಯಾವೆಲ್ಲಾ ಅಂಗಗಳ ಮೇಲೆ ಪರಿಣಾಮ? ಶುಗರ್ನಿಂದ ಮೂತ್ರಪಿಂಡಗಳ ಮೇಲೆ ಆಗುವ ತೊಂದರೆ ಏನು?
- ಚಿಕ್ಕಮಕ್ಕಳಲ್ಲಿ ಹೃದಯಾಘಾತವಾಗಲು ಕಾರಣಗಳೇನು? ತಡೆಯುವುದು ಹೇಗೆ?: ಹೃದ್ರೋಗ ತಜ್ಞರು ತಿಳಿಸುವುದೇನು?
- ಕಿಡ್ನಿ ಕಸಿ ನಂತರವೂ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ
- ಸ್ಥಳೀಯ ಹಾವುಗಳ ವಿಷದಿಂದ 'ವಿಷ ನಿರೋಧಕ ಔಷಧ' ತಯಾರಿಸಿದ ಗುಜರಾತ್; ಶೀಘ್ರ ಬಿಡುಗಡೆ, ಮಾನವ ಸಾವು ತಗ್ಗುವ ನಿರೀಕ್ಷೆ
- ಮಾನಸಿಕ ಸಮಸ್ಯೆಗಳಿಗೆ ಮನೋಚಿಕಿತ್ಸೆಯೇ ಮದ್ದು: ಇದು ಯಾರಿಗೆಲ್ಲ ಪ್ರಯೋಜನ?

