ETV Bharat / health

ಮಧುಮೇಹಿಗಳು ರಕ್ತದ ಜೊತೆಗೆ ಯಾವೆಲ್ಲಾ ಅಂಗಾಂಗ ದಾನ ಮಾಡಬಹುದು? ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ವೈದ್ಯರ ಸಲಹೆಗಳಿವು

ಅಂಗಾಂಗ ದಾನ ಮಾಡಲು ಮಧುಮೇಹಿಗಳು ಪ್ರಮುಖವಾಗಿ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂಬುದರ ಕುರಿತು ಮಧುಮೇಹತಜ್ಞ, ಹಿರಿಯ ವೈದ್ಯ ಡಾ.ವಿಕ್ರಾಂತ ಘಟನಟ್ಟಿ ವಿವರವಾಗಿ ತಿಳಿಸಿದ್ದಾರೆ. ಈಟಿವಿ ಭಾರತ ಪ್ರತಿನಿಧಿ ಸಿದ್ದನಗೌಡ ಪಾಟೀಲ್ ಅವರ ವರದಿ ಇಲ್ಲಿದೆ.

DIABETES  ORGANS DONATION  ಮಧುಮೇಹಿಗಳ ಅಂಗಾಂಗ ದಾನ  ಮಧುಮೇಹಿಗಳ ಡಯಟ್ ನಿಯಮ DIABETICS CAN DONATE ORGANS
ಮಧುಮೇಹಿಗಳು ರಕ್ತದ ಜೊತೆಗೆ ಯಾವೆಲ್ಲಾ ಅಂಗಾಂಗ ದಾನ ಮಾಡಬಹುದು? (ETV Bharat, Getty Images)
author img

By ETV Bharat Health Team

Published : April 20, 2026 at 9:44 AM IST

4 Min Read
Choose ETV Bharat

ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿರುವ ಅನೇಕ ಜೀವಿಗಳು ದಾನಿಗಳಿಗಾಗಿ ಕಾಯುತ್ತಿರುತ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ದಾನಿಗಳು ಸಿಗದ ಹಿನ್ನೆಲೆಯಲ್ಲಿ ಅದೆಷ್ಟೋ ಜನರು ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಾವಿರಕ್ಕೊಬ್ಬರು, ಲಕ್ಷಕ್ಕೆ ಒಬ್ಬರು ದೇಹ ಹಾಗೂ ಅಂಗಾಂಗ ದಾನ ಮಾಡಲು ಮುಂದೆ ಬರುತ್ತಿದ್ದಾರೆ. ಅದರಲ್ಲೂ ಮಧುಮೇಹದ ಕಾಯಿಲೆ ಇರುವವರಿಗೆ ತಾವು ಅಂಗಾಂಗ ದಾನ ಮಾಡಲು ಬರಲ್ಲ ಎನ್ನುವ ಗೊಂದಲವಿದೆ.

ಹೌದು, ಮಧುಮೇಹಿಗಳಿಗೆ ರಕ್ತ, ನೇತ್ರ, ಅಂಗಾಂಗ ದಾನ ಮಾಡಬೇಕೇ ಅಥವಾ ಬೇಡವೇ ಎನ್ನುವ ಕುರಿತು ಸಾಕಷ್ಟು ಗೊಂದಲಗಳಿವೆ. ಮಧುಮೇಹ ಕಾಯಿಲೆ ಹೊಂದಿರುವವರು ಅಂಗಾಂಗ ದಾನ ಮಾಡಬಹುದು. ಆದರೆ, ದಾನಿಯ ಆರೋಗ್ಯ ಸ್ಥಿತಿ ಹಾಗೂ ದಾನ ಮಾಡುವ ಅಂಗದ ಮೇಲೆ ಪ್ರಮುಖವಾಗಿ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಮಧುಮೇಹಿಗಳು ಮರಣೋತ್ತರ ದಾನದ ಮೂಲಕ ಹೃದಯ, ಯಕೃತ್ತು, ಮೂತ್ರಪಿಂಡಗಳು ಹಾಗೂ ಕಣ್ಣುಗಳನ್ನು ದಾನ ಮಾಡಬಹುದು. ಇನ್ಸುಲಿನ್ ಬಳಸದೆ ಇರುವ ಹಾಗೂ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿರುವ ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರು ಕಿಡ್ನಿ ದಾನ ಮಾಡಲು ಅರ್ಹರಾಗಿರುತ್ತಾರೆ ಎಂದು ವೈದ್ಯರು ತಿಳಿಸುತ್ತಾರೆ.

ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಮಧುಮೇಹಿಗಳು ಅಂಗಾಂಗ ದಾನ ಮಾಡಬಹುದು. ಹಾಗಾದರೆ, ಅಂಗಾಂಗ ದಾನ ಮಾಡಲು ಬಯಸುವಂತಹ ಮಧುಮೇಹಿಗಳು ಪ್ರಮುಖವಾಗಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ದೈನಂದಿನ ಜೀವನಶೈಲಿ ಹೇಗಿರಬೇಕಾಗುತ್ತದೆ? ಪಾಲಿಸಬೇಕಾದ ಆಹಾರ ಕ್ರಮಗಳೇನು? ಪ್ರತಿನಿತ್ಯ ಪಾಲಿಸಬೇಕಾದ ಆರೋಗ್ಯಕ್ಕೆ ಸಂಬಂಧಿಸಿದ ನಿಮಯಗಳೇನು ಎಂಬುದರ ಕುರಿತು ಬೆಳಗಾವಿಯ ಮಧುಮೇಹ ತಜ್ಞ ಹಾಗೂ ಹಿರಿಯ ವೈದ್ಯ ಡಾ. ವಿಕ್ರಾಂತ ಘಟನಟ್ಟಿ ಈಟಿವಿ ಭಾರತದ ಜೊತೆಗೆ ವಿವರವಾಗಿ ಮಾತನಾಡಿದ್ದಾರೆ.

DIABETES  ORGANS DONATION  ಮಧುಮೇಹಿಗಳ ಅಂಗಾಂಗ ದಾನ  ಮಧುಮೇಹಿಗಳ ಡಯಟ್ ನಿಯಮ DIABETICS CAN DONATE ORGANS
ಮಧುಮೇಹಿಗಳು ರಕ್ತದ ಜೊತೆಗೆ ಯಾವೆಲ್ಲಾ ಅಂಗಾಂಗ ದಾನ ಮಾಡಬಹುದು? (ETV Bharat)

ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿದ್ದರೆ ಯಾರು ಬೇಕಾದರೂ ರಕ್ತ, ನೇತ್ರ, ಚರ್ಮ ಮತ್ತು ಅಂಗಾಂಗ ದಾನ ಮಾಡಬಹುದು. ಪ್ರಮುಖವಾಗಿ ಖಾಲಿ ಹೊಟ್ಟೆಯಲ್ಲಿ ಶುಗರ್ ಪರೀಕ್ಷೆ ಮಾಡಿದಾಗ, ಶುಗರ್ ಲೆವಲ್ 130 mg/dL ಒಳಗಿರಬೇಕು. ಉಪಹಾರ ಸೇವಿಸಿದ ಎರಡು ಗಂಟೆಯ ಬಳಿಕ ಶುಗರ್ 180 mg/dL ಒಳಗೆ ಇರಬೇಕಾಗುತ್ತದೆ. ಅದೇ ರೀತಿಯಾಗಿ ಹೆಚ್ ಬಿಎ1ಸಿ(ಗ್ಲೈಕೆಟೇಡ್ ಹಿಮೋಗ್ಲೊಬಿನ್) 7 ಒಳಗೆ ಇರಬೇಕು. ಅಂದ್ರೆ, ಸಾಮಾನ್ಯವಾಗಿ HbA1c ಪರೀಕ್ಷೆಯು ಕಳೆದ 2 ರಿಂದ 3 ತಿಂಗಳುಗಳ ಸರಾಸರಿ ರಕ್ತದ ಸಕ್ಕರೆ ಮಟ್ಟವನ್ನು ತೋರಿಸುತ್ತದೆ. ಹೀಗೆ 3ರಿಂದ 6 ತಿಂಗಳು ಶುಗರ್ ಲೆವೆಲ್ ಒಂದೇ ರೀತಿಯಲ್ಲಿ ಇರಬೇಕಾಗುತ್ತದೆ. ಯಾವುದೇ ಮಾತ್ರೆ, ಇನ್ಸೂಲಿನ್ ತೆಗೆದುಕೊಳ್ಳುತ್ತಿದ್ದರೂ ಮಧುಮೇಹಿಗಳು ರಕ್ತದಾನ, ನೇತ್ರದಾನ ಜೊತೆಗೆ ಅಂಗಾಂಗ ದಾನ ಮಾಡಬಹುದಾಗಿದೆ ಎಂದು ಡಾ.ವಿಕ್ರಾಂತ ಘಟನಟ್ಟಿ ತಿಳಿಸುತ್ತಾರೆ.

DIABETES  ORGANS DONATION  ಮಧುಮೇಹಿಗಳ ಅಂಗಾಂಗ ದಾನ  ಮಧುಮೇಹಿಗಳ ಡಯಟ್ ನಿಯಮ DIABETICS CAN DONATE ORGANS
ಮಧುಮೇಹಿಗಳ ಡಯಟ್ (ETV Bharat)

ಡಯಟ್ ನಿಯಮ ಹೀಗಿರಲಿ: ಆರೋಗ್ಯಕರ ಡಯಟ್ ನಿಯಮ ಪಾಲನೆ ಮಾಡುವುದರಿಂದ ಸಮತೋಲಿತ ಪೋಷಣೆ ಮತ್ತು ದೈಹಿಕ ಆರೋಗ್ಯದ ಮೇಲೆ ಕೇಂದ್ರೀಕರಿಸುತ್ತವೆ. ದಿನಕ್ಕೆ ಶೇ.80ರಷ್ಟು ಆರೋಗ್ಯಕರ ಆಹಾರ ಸೇವಿಸಿ, ಶೇ.20 ನೆಚ್ಚಿನ ಆಹಾರ ಸೇವಿಸುವುದು. ಅಂದ್ರೆ, ಶೇ.80/20 ನಿಯಮ ಇಲ್ಲವೇ ಶೇ.90/10 ನಿಯಮವನ್ನು ಅನುಸರಿಸಬಹುದು. ಪ್ರತಿದಿನ ಹಸಿರು ತರಕಾರಿ, ಸೊಪ್ಪುಗಳು, ಪ್ರೋಟೀನ್ ಭರಿತ ಆಹಾರಗಳು, ನೈಸರ್ಗಿಕ ಆಹಾರಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಸಿಹಿತಿಂಡಿಗಳನ್ನು ಸೇವಿಸಬಾರದು, ಸ್ಯಾಚುರೇಟೆಡ್ ಫ್ಯಾಟ್ ಇರುವ ಆಹಾರಗಳನ್ನು ಕಡಿಮೆ ಮಾಡಬೇಕಾಗುತ್ತದೆ. ತಂದೆ-ತಾಯಿಗೆ ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಿಗೂ ಅದು ಬರುವ ಸಾಧ್ಯತೆ ಹೆಚ್ಚಿದೆ. ಆದರೆ, ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸಬೇಕಾಗುತ್ತದೆ. ಒಳ್ಳೆಯ ಪೌಷ್ಟಿಕ ಆಹಾರ ಸೇವಿಸಬೇಕು. ಪ್ರತಿದಿನಕ್ಕೆ 2ರಿಂದ 3 ಲೀಟರ್ ನೀರು ಕಡ್ಡಾಯವಾಗಿ ಕುಡಿಯಬೇಕು. ದೇಹವನ್ನು ಹೈಡ್ರೇಟ್​ ಆಗಿರಿಸುವಂತೆ ಗಮನಹರಿಸಬೇಕಾಗುತ್ತದೆ. ರಾತ್ರಿ 8 ಗಂಟೆ ನಿದ್ದೆ ಮಾಡಿದರೆ ರಕ್ತದಲ್ಲಿರುವ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುತ್ತೆ ಎಂದು ಡಾ.ವಿಕ್ರಾಂತ ಘಟನಟ್ಟಿ ಸಲಹೆ ನೀಡುತ್ತಾರೆ.

ದೈನಂದಿನ ಜೀವನಶೈಲಿ ಹೇಗಿರಬೇಕು? ಯಾವುದೇ ಕಾರಣಕ್ಕೂ ಜಂಕ್ ಫುಡ್, ಸಕ್ಕರೆ, ಬೆಲ್ಲದ ಪದಾರ್ಥಗಳು, ಸಕ್ಕರೆ ಸಹಿತ ಕೋಲ್ಡ್ ಡ್ರಿಂಕ್ಸ್, ಎಣ್ಣೆಯಲ್ಲಿ ಕರಿದ ತಿನಿಸುಗಳನ್ನು ತಿನ್ನಬಾರದು. ನಿಯಮಿತವಾಗಿ ಹಸಿರು ತರಕಾರಿ, ಸೊಪ್ಪು, ಋತುಮಾನಕ್ಕೆ ಅನುಗುಣವಾಗಿ ಲಭಿಸುವ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು. ಜೋಳ, ರಾಗಿ, ಸಿರಿಧಾನ್ಯಗಳಿಂದ ತಯಾರಿಸಿದ ರೊಟ್ಟಿ, ಚಪಾತಿಗಳನ್ನು ತಿನ್ನಬೇಕು. ನಿತ್ಯ 30ರಿಂದ 40 ನಿಮಿಷ ವಾಕಿಂಗ್ ಮತ್ತು ವ್ಯಾಯಾಮ ಮಾಡಬೇಕು. ದೇಹದ ಎತ್ತರಕ್ಕೆ ಅನುಗುಣವಾಗಿ ತೂಕವನ್ನು ಕಾಯ್ದುಕೊಳ್ಳಬೇಕು. ಅದೇ ರೀತಿ ಮಾನಸಿಕ ಒತ್ತಡ ನಿವಾರಣೆಗಾಗಿ ಪ್ರತಿದಿನ ಅರ್ಧ ಗಂಟೆ ಪ್ರಾಣಾಯಾಮ, ಧ್ಯಾನ ರೂಢಿಸಿಕೊಳ್ಳಬೇಕು. ಈ ನಿಯಮಗಳನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಬೇಕಾಗುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಕ್ಕರೆ ಕಾಯಿಲೆಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

ಸಕ್ಕರೆ ಕಾಯಿಲೆಗೆ ಭಯ ಬೇಡ: ಮಧುಮೇಹಿಗಳು ಸಕ್ಕರೆ ಕಾಯಿಲೆಗೆ ಹೆದರುವ ಅವಶ್ಯಕತೆ ಇಲ್ಲ. ಹೆಚ್​ಬಿಎ1ಸಿ 7ರೊಳಗೆ ಕಾಯ್ದುಕೊಂಡರೆ ಕಿಡ್ನಿ, ಕಣ್ಣು, ಹೃದಯ, ನರಗಳು ಸೇರಿ ದೇಹದ ಯಾವುದೇ ಭಾಗಕ್ಕೂ ದುಷ್ಪರಿಣಾಮ ಬೀರುವುದಿಲ್ಲ. ಸಕ್ಕರೆ ಕಾಯಿಲೆ ಬಂದರೆ, ಕೆಲವೊಂದಿಷ್ಟು ಜನರು ಇನ್ನೇನು ನಮ್ಮ ಜೀವನವೇ ಮುಗಿತು. ಆಯಸ್ಸು ಕಡಿಮೆ ಆಗುತ್ತದೆ ಎಂದು ಭಾವಿಸುವುದು ತಪ್ಪು ಕಲ್ಪನೆ. ನಿಮ್ಮ ಸಮೀಪದ ಮಧುಮೇಹಿ ತಜ್ಞರನ್ನು ಸಂಪರ್ಕಿಸಿ, ಅವರು ನೀಡುವಂತಹ ಸಲಹೆಗಳ ಪ್ರಕಾರ ನಿಮ್ಮ ಆಹಾರ ಶೈಲಿ, ಜೀವನಶೈಲಿಯನ್ನು ಬದಲಾಯಿಸಿಕೊಂಡರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎನ್ನುತ್ತಾರೆ ಡಾ.ವಿಕ್ರಾಂತ ಘಟನಟ್ಟಿ.

DIABETES  ORGANS DONATION  ಮಧುಮೇಹಿಗಳ ಅಂಗಾಂಗ ದಾನ  ಮಧುಮೇಹಿಗಳ ಡಯಟ್ ನಿಯಮ DIABETICS CAN DONATE ORGANS
ಮಧುಮೇಹಿಗಳ ಜೀವನಶೈಲಿ (ETV Bharat)

ದಾನ ಮಾಡುವ ಅಂಗಾಂಗಗಳು ದುಷ್ಪರಿಣಾಮಕ್ಕೆ ಈಡಾಗಿರಬಾರದು: ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಹಿರಿಯ ಅಂಗಾಂಗ ಕಸಿಶಸ್ತ್ರ ತಜ್ಞ ವೈದ್ಯ ಡಾ.ಮಹೇಶ ಗೋಪಶೆಟ್ಟಿ ಅವರು ಈಟಿವಿ ಭಾರತದ ಜೊತೆಗೆ ಮಾತನಾಡಿ, ಸಕ್ಕರೆ ಕಾಯಿಲೆಯಿಂದ ದೇಹದ ಅಂಗಾಂಗಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರದೇ ಇದ್ದರೆ ಹೃದಯ, ಕಿಡ್ನಿ, ಲೀವರ್, ಕಣ್ಣು, ಚರ್ಮವನ್ನೂ ಸಹ ದಾನ ಮಾಡಬಹುದು. ಲಿವರ್ ಫ್ಯಾಟ್ ಕಂಟೆಂಟ್ ಎಷ್ಟು ಪ್ರಮಾಣದಲ್ಲಿ ಇದೆ ಎನ್ನುವುದನ್ನು ನೋಡಿಕೊಂಡು ಆ ಅಂಗಾಂಗಗಳನ್ನು ಬೇರೆಯವರಿಗೆ ಕಸಿ ಮಾಡುತ್ತೇವೆ. ಆದರೆ, ಪ್ಯಾಂಕ್ರಿಯಾಸ್ ಕಸಿ ಮಾಡಲು ಬರುವುದಿಲ್ಲ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಟೈಪ್ 2 ಮಧುಮೇಹ ಪೀಡಿತ ಮಹಿಳೆಯರಿಗೆ ಕಾಡುವ ಆರೋಗ್ಯ ಅಪಾಯಗಳೇನು? ತಡೆಯಲು ಆರೋಗ್ಯಕರ ಜೀವನಶೈಲಿ & ಆಹಾರ ಕ್ರಮಗಳೇನು? ವೈದ್ಯರ ಸಲಹೆಗಳೇನು?