ETV Bharat / health

ಮಾನಸಿಕ ಸಮಸ್ಯೆಗಳಿಗೆ ಮನೋಚಿಕಿತ್ಸೆಯೇ ಮದ್ದು: ಇದು ಯಾರಿಗೆಲ್ಲ ಪ್ರಯೋಜನ?

ಇತ್ತೀಚಿನ ದಿನಗಳಲ್ಲಿ ಮಾನಸಿಕ ಸಮಸ್ಯೆಗಳಿಂದ ಮುಕ್ತರಾದವರು ಯಾರೂ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಒತ್ತಡ, ಆತಂಕ, ಖಿನ್ನತೆ ಹೀಗೆ ಹಲವು ರೀತಿಯ ಮಾನಸಿಕ ಸಂಘರ್ಷದಿಂದ ಬಳಲುತ್ತಿರುತ್ತಾರೆ. ಮನೋಚಿಕಿತ್ಸೆ ಪಡೆಯುವ ಮೂಲಕ ಅದರಿಂದ ಹೊರಬಹುದು ಎನ್ನುತ್ತಾರೆ ವೈದ್ಯರು.

BENEFITS OF PSYCHOTHERAPY
ಸಾಂದರ್ಭಿಕ ಚಿತ್ರ (Getty Images)
author img

By ETV Bharat Karnataka Team

Published : February 21, 2026 at 5:01 PM IST

3 Min Read
Choose ETV Bharat

ಇಂದು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಅಸಂಖ್ಯಾತ ಜನರಿದ್ದಾರೆ. ಹೆಚ್ಚಿನ ಜನರು ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಒಂದಲ್ಲ ಒಂದು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ಅವರಲ್ಲಿ ಹೆಚ್ಚಿನವರು ತಮ್ಮ ನೋವನ್ನು ಬಹಿರಂಗವಾಗಿ ವ್ಯಕ್ತಪಡಿಸುವವರಿಗಿಂತ ಮೌನವಾಗಿ ಒಳಗೊಳಗೆ ಅನುಭವಿಸುದುಂಟು. ಆದರೆ, ಮನೋಚಿಕಿತ್ಸೆಯನ್ನು ಪಡೆಯುವುದರೊಂದಿಗೆ ಹಾಗೂ ವೈದ್ಯರು ಹೇಳುವ ಕೆಲವು ಸಲಹೆ ಹಾಗೂ ಸೂಚನೆಗಳನ್ನು ಪಾಲನೆ ಮಾಡಿದರೆ ಇಂತಹ ನಿಮ್ಮನ್ನು ಕಾಡುತ್ತಿರುವ ಮಾನಸಿಕ ಸಮಸ್ಯೆಯಿಂದ ಬಹುಬೇಗ ಹೊರಬರಬಹುದು. ಇದಕ್ಕೆ ಮನೋಚಿಕಿತ್ಸೆ ಅಲ್ಲದೇ ಮತ್ತೇನು ಮುಖ್ಯ ಕಾರಣ ಇಲ್ಲ ಎನ್ನುತ್ತಾರೆ ತಜ್ಞ ವೈದ್ಯರು.

ಯಾರಿಗೆ ಇದು ಒಳ್ಳೆಯದು?: ಸೈಕೋಥೆರಪಿ ಎನ್ನುವುದು ಮಾನಸಿಕ ಆರೋಗ್ಯವನ್ನು ಸುಧಾರಿಸುವ ಒಂದು ಚಿಕಿತ್ಸಾ ವಿಧಾನವಾಗಿದ್ದು, ಇದನ್ನು ಟಾಕ್ ಥೆರಪಿ ಎಂದೂ ಕರೆಯುತ್ತಾರೆ. ಮಾನಸಿಕ ಆರೋಗ್ಯ ಸಮಸ್ಯೆ ಇದ್ದವರು ಸಂಬಂಧಿತ ತಜ್ಞ ವೈದ್ಯರನ್ನು ಸಂಪರ್ಕಿಸುವುದರ ಜೊತೆಗೆ ಮಾನಸಿಕವಾಗಿ ನಿಮ್ಮನ್ನು ತೊಂದರೆಗೊಳಿಸುವ ನಿರ್ದಿಷ್ಟ ಆಲೋಚನೆಗಳ ಬಗ್ಗೆ ಅವರೊಂದಿಗೆ ಯಾವುದೇ ಸಂಕೋಚವಿಲ್ಲದೇ ಚರ್ಚಿಸಬೇಕು. ಈ ವೇಳೆ ಅವರು ನೀಡುವ ಸಲಹೆ ಮತ್ತು ಸೂಚನೆಗಳನ್ನು ತಪ್ಪದೇ ಅನುಸರಿಸಬೇಕು. ಇದು ನಿಮಗೆ ಒಂದು ರೀತಿಯಲ್ಲಿ ಕೌನ್ಸೆಲಿಂಗ್‌ನಂತೆ ಕಾಣಿಸುತ್ತದೆ. ಆದರೆ, ಇದು ಹಾಗಿರುವುದಿಲ್ಲ. ಒಂದು ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸಲು ವೈದ್ಯರು ಹೀಗೆ ಮಾಡಬೇಕಾಗುತ್ತದೆ. ಇದು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳ್ಳುವ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಕ್ಲೀವ್ಲ್ಯಾಂಡ್ ಕ್ಲಿನಿಕ್ ಅಧ್ಯಯನದ ಪ್ರಕಾರ, ಮಾನಸಿಕ ಚಿಕಿತ್ಸೆಯು ನಿರ್ದಿಷ್ಟವಾಗಿ ಮಾನಸಿಕ, ಭಾವನಾತ್ಮಕ ಮತ್ತು ನಡವಳಿಕೆಯ ಸಮಸ್ಯೆಗಳನ್ನು ನಿಭಾಯಿಸುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.

ಒತ್ತಡ, ಚಿಂತೆ, ಆತಂಕ, ಆಘಾತ, ವಿವಿಧ ರೀತಿಯ ಭಯ, ಅಸ್ವಸ್ಥತೆ, ಕೌಟುಂಬಿಕ ಸಂಘರ್ಷ, ಲೈಂಗಿಕ ಸಮಸ್ಯೆ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವರು ಪುನಃ ಸಾಮಾನ್ಯ ಸ್ಥಿತಿಗೆ ಬರಲು ಟಾಕ್ ಥೆರಪಿ ತುಂಬಾ ಪರಿಣಾಮಕಾರಿ ಎನ್ನುತ್ತಾರೆ ತಜ್ಞರು.

ಹಲವು ಪ್ರಯೋಜನಗಳು!: ನೀವು ಬಳಲುತ್ತಿರುವ ಮಾನಸಿಕ ಸಮಸ್ಯೆಯನ್ನು ಅವಲಂಬಿಸಿ ವೈದ್ಯರು ನಾಲ್ಕು ವಿಧಾನಗಳ ಪೈಕಿ (ವೈಯಕ್ತಿಕವಾಗಿ/ಗುಂಪಾಗಿ/ದಂಪತಿಯಾಗಿ/ಕುಟುಂಬ ಸದಸ್ಯರಾಗಿ) ಒಂದರಲ್ಲಿ ಚಿಕಿತ್ಸೆ ನೀಡುತ್ತಾರೆ. ಇದಲ್ಲದೇ, ಈ ಮಾನಸಿಕ ಚಿಕಿತ್ಸೆಯು ಇತರ ಪ್ರಯೋಜನಗಳ ಜೊತೆಗೆ ಮಾನಸಿಕ ಸಮಸ್ಯೆಗಳಿಂದ ಪರಿಹಾರವನ್ನು ಸಹ ನೀಡುತ್ತದೆ ಎನ್ನುತ್ತಾರೆ ವೈದ್ಯರು.

  • ಮನೋಚಿಕಿತ್ಸೆಯು ನಮ್ಮ ಆಲೋಚನೆ, ಭಾವನೆ ಮತ್ತು ನಡವಳಿಕೆಯನ್ನು ಮೊದಲಿಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ, ನಾವು ನಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ನಮ್ಮ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.
  • ಯಾವುದೋ ಒಂದು ಸಮಸ್ಯೆ ನಮ್ಮ ಜೀವನದ ಉದ್ದಕ್ಕೂ ನಮ್ಮನ್ನು ಕಾಡುತ್ತಲೇ ಇದ್ದರೆ, ಮನೋಚಿಕಿತ್ಸೆ ಪಡೆಯುವುದರಿಂದ ಅಂತಹ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಲು ಇದು ನಮಗೆ ಸಹಾಯ ಮಾಡುತ್ತದೆ.
  • ಈ ಚಿಕಿತ್ಸೆಯ ಭಾಗವಾಗಿ, ನಮ್ಮ ಸಮಸ್ಯೆಗಳನ್ನು ವೈದ್ಯರು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ನಮಗೆ ಅವಕಾಶ ಇರುವುದರಿಂದ ಇದು ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತದೆ. ಇದರಿಂದ ನಾವು ಭವಿಷ್ಯದಲ್ಲಿ ಎದುರಿಸುವ ಯಾವುದೇ ಸಮಸ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ಅಥವಾ ನಾವೇ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
  • ಸಂಬಂಧಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಈ ಮನೋಚಿಕಿತ್ಸೆ ಪರಿಣಾಮಕಾರಿಯಾಗಿದೆ! ಈ ಚಿಕಿತ್ಸೆಗೆ ಒಳಗಾಗುವವರು ಭವಿಷ್ಯದಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ತಾವಾಗಿಯೇ ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಪರಿಣಾಮವಾಗಿ ಅವರ ಸಂಬಂಧಗಳು ಸಹ ಬಲಗೊಳ್ಳುತ್ತವೆ.
  • ಈ ಚಿಕಿತ್ಸೆಯ ಭಾಗವಾಗಿ, ನಾವು ನಮ್ಮ ವಿಶಿಷ್ಟ ಗುಣಗಳ ಬಗ್ಗೆ ಕಲಿಯುತ್ತೇವೆ. ಇದು ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ಮತ್ತು ನಮ್ಮನ್ನು ನಾವೇ ದೂಷಿಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದು ಕ್ರಮೇಣ ಸ್ವ-ಪ್ರೀತಿಯನ್ನು ಹೆಚ್ಚಿಸುತ್ತದೆ.
  • ಈ ಚಿಕಿತ್ಸೆಯು ನಿದ್ರಾಹೀನತೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ. ಅಲ್ಲದೇ ಇದರಿಂದ ತಮ್ಮ ತಮ್ಮ ಆರೋಗ್ಯವನ್ನು ನೋಡಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ಆದರೆ, ಈ ಎಲ್ಲ ಪ್ರಯೋಜನಗಳನ್ನು ಪಡೆಯಲು, ಚಿಕಿತ್ಸೆಯ ಭಾಗವಾಗಿ ವೈದ್ಯರು ನೀಡುವ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಮಸ್ಯೆಗೆ ಅನುಗುಣವಾಗಿ ವೈದ್ಯರು ನೀಡುವ ಔಷಧಗಳನ್ನು ತಪ್ಪದೇ ಬಳಸಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಗಮನಿಸಿ: ಇಲ್ಲಿ ನೀಡಲಾದ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು ಮತ್ತು ವೈದ್ಯಕೀಯ ಹಾಗೂ ಆರೋಗ್ಯ ತಜ್ಞರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ವಿಟಮಿನ್​ ಕೆ ಕೊರತೆಯಾ? ಈ ಲಕ್ಷಣಗಳು ಕಂಡುಬಂದರೆ ಎಚ್ಚರವಹಿಸಿ