ಬೀಟ್‌ರೂಟ್ Vs ದಾಳಿಂಬೆ: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಒಳ್ಳೆಯದು ಗೊತ್ತೇ?
ಬೀಟ್ರೂಟ್, ದಾಳಿಂಬೆ ಎರಡು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇವೆರಡರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದರ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ?


Published : November 4, 2025 at 5:55 PM IST
ಬೀಟ್ರೂಟ್ ಹಾಗೂ ದಾಳಿಂಬೆ ಹಣ್ಣು ಎರಡೂ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಬೀಟ್ರೂಟ್ನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಹಾಗೂ ಫೋಲೇಟ್ ಸೇರಿದಂತೆ ಜೀವಸತ್ವಗಳು ಹಾಗೂ ಖನಿಜಗಳಿಂದ ಒಳಗೊಂಡಿವೆ. ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವ ನಿಂಬೆ ರಸವನ್ನು ಸ್ವಲ್ಪ ಸೇರಿಸಿದರೆ ಮತ್ತಷ್ಟು ಪೋಷಕಾಂಶಗಳು ಲಭಿಸುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಕೆಲವು ಜನರಿಗೆ ದಾಳಿಂಬೆ ಇಷ್ಟವಾದರೆ, ಮತ್ತೆ ಕೆಲವರಿಗೆ ಬೀಟ್ರೂಟ್ ಸೇವಿಸಲು ಬಯಸುತ್ತಾರೆ. ಬೀಟ್ರೂಟ್ ಹಾಗೂ ದಾಳಿಂಬೆ ಹಣ್ಣು ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯದ ಪ್ರಯೋಜನಗಳನ್ನು ಹೊಂದಿದೆ ಎಂಬುದರ ಬಗ್ಗೆ ಆರೋಗ್ಯ ತಜ್ಞರು ತಿಳಿಸುವ ಸಲಹೆಗಳು ಇಲ್ಲಿವೆ.

ಬೀಟ್ರೂಟ್ನಿಂದ ಲಭಿಸುವ ಪ್ರಯೋಜನಗಳು:
- ಬೀಟ್ರೂಟ್ ಅನ್ನು ಕಚ್ಚಾ, ಬೇಯಿಸಿದ ಅಥವಾ ಹುರಿದು ಇಲ್ಲವೇ ಜ್ಯೂಸ್ ಮೂಲಕ ಸೇವಿಸಬಹುದು. ಬೀಟ್ರೂಟ್ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ನೈಸರ್ಗಿಕ ನೈಟ್ರೇಟ್‌ಗಳನ್ನು ಹೊಂದಿದೆ.
- ರಕ್ತದ ಹರಿವು ಹಾಗೂ ಸ್ನಾಯುಗಳಿಗೆ ಆಮ್ಲಜನಕ ತಲುಪಿಸಲು ಸಹಾಯ ಮಾಡುತ್ತದೆ. ದೈಹಿಕ ಚಟುವಟಿಕೆಗಳ ಸಮಯದಲ್ಲಿ ತ್ರಾಣ ವೃದ್ಧಿಸುತ್ತದೆ.
- ಬೀಟ್‌ರೂಟ್ ಜ್ಯೂಸ್ ಮಾಡಿ ಸೇವಿಸಿದರೆ, ದೇಹವನ್ನು ನಿರ್ವಿಶೀಕರಣಗೊಳಿಸುತ್ತದೆ. ಯಕೃತ್ತನ್ನು ಶುದ್ಧೀಕರಿಸಲು ಹಾಗೂ ದೇಹದಿಂದ ವಿಷವನ್ನು ಹೊರಹಾಕಲು ಸಾಧ್ಯವಾಗುತ್ತದೆ.

- ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ಶಮನ ಸಂಯುಕ್ತಗಳು ಇರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಉತ್ತೇಜನ
- ಬೀಟ್‌ರೂಟ್ ಉತ್ತೇಜನ ನೀಡುತ್ತದೆ.
- ಬೀಟ್‌ರೂಟ್ ಹೆಚ್ಚಿನ ನೈಟ್ರೇಟ್ ಅಂಶದಿಂದಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
- ಉತ್ತಮ ಹೃದಯರಕ್ತನಾಳದ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.
- ಬೀಟ್‌ರೂಟ್ ಜ್ಯೂಸ್‌ನೊಳಗೆ ನಿಂಬೆ ರಸ ಸೇರಿಸಿದರೆ ಲಭಿಸುವ ಪ್ರಯೋಜನ ಎಂದರೆ ಉತ್ತಮ ಜೀರ್ಣಕ್ರಿಯೆ ಸುಧಾರಿಸುತ್ತದೆ.
- ಬೀಟ್ರೂಟ್ನಲ್ಲಿ ಆಹಾರದ ನಾರಿನ ಉತ್ತಮ ಮೂಲವಾಗಿದ್ದು, ನಿಯಮಿತ ಕರುಳಿನ ಚಲನೆಗೆ ಸಹಾಯವಾಗಿದೆ, ಮಲಬದ್ಧತೆಯನ್ನು ತಡೆಯಲು ಪರಿಣಾಮಕಾರಿಯಾಗಿದೆ.

- ಬೀಟ್ರೂಟ್ ಆರೋಗ್ಯಕರ ಚರ್ಮಕ್ಕೆ ಕೊಡುಗೆ ನೀಡುತ್ತವೆ. ವಿಟಮಿನ್ ಸಿ ಕೊಲಾಜಿನ್ ಉತ್ಪಾದನೆಗೆ ಸಹಾಯವಾಗಿದೆ. ಚರ್ಮದ ಕಾಂತಿಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
- ಮೂಳೆ ಮತ್ತು ಹಲ್ಲುಗಳ ಆರೋಗ್ಯ ಸುಧಾರಣೆ ಮಾಡುತ್ತದೆ. ಬೀಟ್ರೂಟ್ನಲ್ಲಿ ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್, ಸೋಡಿಯಂ, ಸತು, ತಾಮ್ರ ಹಾಗೂ ಸೆಲೆನಿಯಮ್‌ನಂತಹ ಖನಿಜಗಳನ್ನು ಒದಗಿಸುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ದಾಳಿಂಬೆ ಹಣ್ಣಿನ ಪ್ರಯೋಜನಗಳು:
- ದಾಳಿಂಬೆಯು ಉತ್ಕರ್ಷಣ ನಿರೋಧಕಗಳು, ಫೈಬರ್, ಜೀವಸತ್ವಗಳು ಹಾಗೂ ಮತ್ತು ಖನಿಜಗಳಂತಹ ಪೋಷಕಾಂಶಗಳನ್ನು ಹೊಂದಿದೆ.
- ಹೃದಯದ ಆರೋಗ್ಯ ಸುಧಾರಿಸುವುದು, ಜೀರ್ಣಕ್ರಿಯೆ ಸುಧಾರಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಕ್ಯಾನ್ಸರ್‌ನಂತಹ ರೋಗಗಳ ವಿರುದ್ಧ ಹೋರಾಡುವುದು ಹಾಗೂ ಚರ್ಮವನ್ನು ರಕ್ಷಿಸುವುದು ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
- ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ದಾಳಿಂಬೆ ಹಣ್ಣು ತುಂಬಾ ಉಪಯುಕ್ತವಾಗಿದೆ.
- ದಾಳಿಂಬೆ ರಕ್ತದೊತ್ತಡ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹಾಗೂ ರಕ್ತ ಪರಿಚಲನೆ ಸುಧಾರಿಸುತ್ತದೆ.
- ದಾಳಿಂಬೆ ಸೇವನೆ ಮಾಡುವುದರಿಂದ ಅಪಧಮನಿಗಳಲ್ಲಿ ಪ್ಲೇಕ್ ರಚನೆಯ ಅಪಾಯ ಕಡಿಮೆ ಮಾಡುತ್ತದೆ.

- ದಾಳಿಂಬೆಯಲ್ಲಿರುವ ಸಂಯುಕ್ತಗಳು ದೇಹದಲ್ಲಿ ಉರಿಯೂತ ತಡೆಯುತ್ತದೆ. ಹೃದಯ ಕಾಯಿಲೆ, ಕ್ಯಾನ್ಸರ್ ಹಾಗೂ ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ದೂರ ಮಾಡುತ್ತದೆ. ಸಂಧಿವಾತದಂತಹ ಲಕ್ಷಣಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
- ಎಲಾಜಿಕ್ ಆಮ್ಲ ಮತ್ತು ಪ್ಯೂನಿಕಾಲಾಜಿನ್‌ಗಳಂತಹ ಸಂಯುಕ್ತಗಳು ಕೆಲವು ಕ್ಯಾನ್ಸರ್‌ಗಳ ವಿರುದ್ಧ ಹೋರಾಡುತ್ತದೆ. ದಾಳಿಂಬೆಯು ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಕೊಲೊನ್ ಕ್ಯಾನ್ಸರ್‌ಗೆ ಕಾರಣವಾಗುವಂತಹ ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಯುತ್ತದೆ. ಕ್ಯಾನ್ಸರ್ ಗಡ್ಡೆಯ ಬೆಳವಣಿಗೆ ತಡೆಯಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

- ಚರ್ಮವನ್ನು ಆಕ್ಸಿಡೇಟಿವ್ ಹಾನಿ ಹಾಗೂ ಸೂರ್ಯನ ಯುವಿ ಕಿರಣಗಳಿಂದ ಉಂಟಾಗುವ ಸಮಸ್ಯೆಗಳಿಂದ ರಕ್ಷಣೆ ಮಾಡುತ್ತದೆ. ದಾಳಿಂಬೆ ಸೇವಿಸುವುದರಿಂದ ಕಾಲಜನ್ ಉತ್ಪಾದನೆ ಸುಧಾರಿಸುತ್ತದೆ.
- ದಾಳಿಂಬೆಯಲ್ಲಿ ಕ್ಯಾಲೊರಿಗಳು ತುಂಬಾ ಕಡಿಮೆಯಿದ್ದು, ನಾರಿನ ಸಮೃದ್ಧ ಮೂಲವಾಗಿದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಅನುಭವ ನೀಡುತ್ತದೆ. ಕ್ಯಾಲೊರಿ ಸೇವನೆ ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿ ಕೊಬ್ಬನ್ನು ಕರಗಿಸುತ್ತದೆ.

- ಟೈಪ್-2 ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ದಾಳಿಂಬೆ ಸಹಾಯ ಮಾಡುತ್ತದೆ. ಈ ಹಣ್ಣು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು, ಇನ್ಸುಲಿನ್ ಸಂವೇದನೆ ಸುಧಾರಿಸುವ ಗುಣವನ್ನು ಹೊಂದಿದೆ.
- ದಾಳಿಂಬೆ ಅರಿವಿನ ದುರ್ಬಲತೆ ಹೊಂದಿರುವ ಜನರಲ್ಲಿ ಸ್ಮರಣಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ. ದಾಳಿಂಬೆ ಆಲ್ಝೈಮರ್ನಂತಹ ನೆನಪಿನ ಶಕ್ತಿ ಕ್ಷೀಣಗೊಳ್ಳುವ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಬೀಟ್ರೂಟ್ - ದಾಳಿಂಬೆ: ಯಾವುದು ಬೆಸ್ಟ್ ಗೊತ್ತೇ?:
ದಾಳಿಂಬೆ ಹಾಗೂ ಬೀಟ್ರೂಟ್ ಎರಡೂ ರಕ್ತಹೀನತೆಯನ್ನು ತಡೆಗಟ್ಟಲು ಮತ್ತು ಹಿಮೋಗ್ಲೋಬಿನ್ ಹೆಚ್ಚಿಸಲು ಒಳ್ಳೆಯದು. ಬೀಟ್ರೂಟ್ ಕಬ್ಬಿಣ ಹಾಗೂ ಫೋಲಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ , ಕಬ್ಬಿಣ, ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದು ಹಿಮೋಗ್ಲೋಬಿನ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತಹೀನತೆವವರು ಈ ಎರಡರ ಜ್ಯೂಸ್ ಕುಡಿಯುವ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇವೆರಡರಲ್ಲಿರುವ ಕಬ್ಬಿಣದ ಪ್ರಮಾಣವು ವ್ಯತ್ಯಾಸವಿದೆ. 1 ಮಧ್ಯಮ ಗಾತ್ರದ ಬೀಟ್ರೂಟ್ ಸುಮಾರು 0.8 ಮಿಲಿಗ್ರಾಂ ಕಬ್ಬಿಣಾಂಶವಿರುತ್ತದೆ. ಒಂದು ಮಧ್ಯಮ ಗಾತ್ರದ ದಾಳಿಂಬೆಯಲ್ಲಿ 0.3 ಮಿಗ್ರಾಂ ಕಬ್ಬಿಣಾಂಶವು ಹೊಂದಿರುತ್ತದೆ. ನಿಮ್ಮ ರಕ್ತವನ್ನು ಹೆಚ್ಚಿಸಲು ಬಯಸುವವರು, ಬೀಟ್ರೂಟ್ ಉತ್ತಮ ಆಯ್ಕೆಯಾಗಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

