ETV Bharat / health

ಖ್ಯಾತ ನಟ ನಾನಾ ಪಾಟೇಕರ್ ಹೃದಯ ಸ್ತಂಭನದಿಂದ ಸಾವು: ಕಾರ್ಡಿಯಾಕ್ ಅರೆಸ್ಟ್ & ಹಾರ್ಟ್ ಅಟ್ಯಾಕ್ ಮಧ್ಯೆಯಿರುವ ವ್ಯತ್ಯಾಸವೇನು?

ಬಾಲಿವುಡ್ ಖ್ಯಾತ ನಟ ನಾನಾ ಪಾಟೇಕರ್ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಕಾರ್ಡಿಯಾಕ್ ಅರೆಸ್ಟ್ ಹಾಗೂ ಹೃದಯಾಘಾತ ನಡುವಿನ ವ್ಯತ್ಯಾಸವೇನು ಎಂಬುದನ್ನು ಈ ಸ್ಟೋರಿಯಲ್ಲಿ ಅರಿತುಕೊಳ್ಳೋಣ.

CARDIAC ARREST  NANA PATEKAR PASSES AWAY  NANA PATEKAR  ಕಾರ್ಡಿಯಾಕ್ ಅರೆಸ್ಟ್
ನಟ ನಾನಾ ಪಾಟೇಕರ್ ಹೃದಯ ಸ್ತಂಭನ (Getty Images)
author img

By ETV Bharat Health Team

Published : October 8, 2026 at 2:10 PM IST

4 Min Read
Choose ETV Bharat

ಖ್ಯಾತ ನಟ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾನಾ ಪಾಟೇಕರ್ ಅವರ ನಿಧನಕ್ಕೆ ದೇಶದ ಗಣ್ಯರು ಮತ್ತು ಬಾಲಿವುಡ್ ಚಿತ್ರರಂಗದ ನಟ ನಟಿಯರು ಶೋಕ ವ್ಯಕ್ತಪಡಿಸಿದ್ದಾರೆ. ತಮ್ಮ ನೆಚ್ಚಿನ ನಟ ಇನ್ನು ತಮ್ಮೊಂದಿಗೆ ಇಲ್ಲ ಎಂಬುದನ್ನು ನಂಬಲು ಅವರ ಲಕ್ಷಾಂತರ ಅಭಿಮಾನಿಗಳಿಗೆ ಕಷ್ಟವಾಗುತ್ತಿದೆ. ಮಾಧ್ಯಮ ವರದಿಗಳು ತಿಳಿಸುವ ಪ್ರಕಾರ, ಗೋವಾದಲ್ಲಿರುವ ಅವರ ಮನೆಯಲ್ಲಿ ಅವರ ಆರೋಗ್ಯ ಹಠಾತ್ತನೆ ಹದಗೆಟ್ಟಿತು.

ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರಿಗೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ನಾನಾ ಪಾಟೇಕರ್ ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಜೀವ ಉಳಿಸುವುದು ಬಹುತೇಕ ಅಸಾಧ್ಯವಾಗುವಂತಹ ಗಂಭೀರ ಸ್ಥಿತಿಯಾಗಿದೆ. ಹೃದಯ ಸ್ತಂಭನ (cardiac arrest) ಎಂದರೇನು? ಹೃದಯಾಘಾತಕ್ಕಿಂತ (Heart Attack) ಹೇಗೆ ಭಿನ್ನವಾಗಿದೆ ಎಂಬುದನ್ನು ಇಲ್ಲಿ ತಿಳಿಯೋಣ..

CARDIAC ARREST  NANA PATEKAR PASSES AWAY  NANA PATEKAR  ಕಾರ್ಡಿಯಾಕ್ ಅರೆಸ್ಟ್
ಹೃದಯ ಸ್ತಂಭನ- ಸಾಂದರ್ಭಿಕ ಚಿತ್ರ (Getty Images)

ಏನಿದು ಹೃದಯ ಸ್ತಂಭನ? ಪುಣೆಯ ರೂಬಿ ಹಾಲ್ ಕ್ಲಿನಿಕ್‌ನ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಹರ್ಷಲ್ ಇಂಗ್ಲೆ ಅವರು ತಿಳಿಸುವ ಪ್ರಕಾರ, ಹೃದಯ ಸ್ತಂಭನವು (cardiac arrest) ಒಂದು ತೀವ್ರವಾದ ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ಇದರಲ್ಲಿ ಹೃದಯವು ಹಠಾತ್ತನೆ ಬಡಿತ ನಿಲ್ಲಿಸುತ್ತದೆ. ದೇಹದ ಅಂಗಗಳಿಗೆ ರಕ್ತದ ಹರಿವು ಸ್ಥಗಿತಗೊಳ್ಳುತ್ತದೆ. ಸಾಮಾನ್ಯವಾಗಿ ಹೃದಯದ ವಿದ್ಯುತ್ ವ್ಯವಸ್ಥೆಯ ಚಟುವಟಿಕೆಯಲ್ಲಿನ ಅಡಚಣೆಯು ಅನಿಯಮಿತ ಹೃದಯ ಬಡಿತಕ್ಕೆ (ಅರಿಥ್ಮಿಯಾ) ಕಾರಣವಾದಾಗ ಇದು ಸಂಭವಿಸುತ್ತದೆ.

ಇದರಿಂದ ಹೃದಯವು ಮೆದುಳು, ಶ್ವಾಸಕೋಶಗಳು ಮತ್ತು ದೇಹದ ಇತರೆ ಭಾಗಗಳಿಗೆ ರಕ್ತವನ್ನು ಪಂಪ್ ಮಾಡಲು ಅಸಮರ್ಥವಾಗುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿಯು ಪ್ರಜ್ಞೆ ಕಳೆದುಕೊಳ್ಳುತ್ತಾನೆ, ನಾಡಿಬಡಿತ ನಿಲ್ಲುತ್ತದೆ. ಕೆಲವೇ ನಿಮಿಷಗಳಲ್ಲಿ ಸಹಾಯ ಸಿಗದಿದ್ದರೆ, ವ್ಯಕ್ತಿಯು ಮೃತಪಡಬಹುದು. ಇದು ಯಾವಾಗಲೂ ಜೀವಕ್ಕೆ ಅಪಾಯ ಉಂಟುಮಾಡುವ ತುರ್ತುಸ್ಥಿತಿಯಾಗಿದೆ.

CARDIAC ARREST  NANA PATEKAR PASSES AWAY  NANA PATEKAR  ಕಾರ್ಡಿಯಾಕ್ ಅರೆಸ್ಟ್
ಹೃದಯ ಸ್ತಂಭನ- ಸಾಂದರ್ಭಿಕ ಚಿತ್ರ (Getty Images)

ಹೃದಯ ಸ್ತಂಭನ & ಹೃದಯಾಘಾತದ ನಡುವಿನ ವ್ಯತ್ಯಾಸವೇನು? ಡಾ.ಹರ್ಷಲ್ ಇಂಗ್ಲೆ ಅವರು ತಿಳಿಸುವ ಪ್ರಕಾರ, ಹೃದಯ ಸ್ತಂಭನ ಮತ್ತು ಹೃದಯಾಘಾತಗಳು ಎರಡು ವಿಭಿನ್ನ ಆರೋಗ್ಯದ ಸಮಸ್ಯೆಗಳಾಗಿವೆ. ಇವೆರಡರ ನಡುವಿನ ಮುಖ್ಯ ವ್ಯತ್ಯಾಸವೆಂದರೆ, ಹೃದಯಾಘಾತವು ರಕ್ತದ ಹರಿವಿಗೆ ಸಂಬಂಧಿಸಿದ ಸಮಸ್ಯೆಯಾಗಿದ್ದರೆ, ಹೃದಯ ಸ್ತಂಭನವು ಹೃದಯದ ವಿದ್ಯುತ್ ವ್ಯವಸ್ಥೆಯ ಅಸಮರ್ಪಕ ಕಾರ್ಯನಿರ್ವಹಣೆಯಾಗಿದೆ. ಹೃದಯಾಘಾತವು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ಏಕೆಂದರೆ ಹೃದಯಾಘಾತದ (Heart Attack) ಸಮಯದಲ್ಲಿ ಹೃದಯದ ಸ್ನಾಯುಗಳಿಗೆ ಆಮ್ಲಜನಕದ ಕೊರತೆಯು ಹೃದಯದ ವಿದ್ಯುತ್ ವ್ಯವಸ್ಥೆಯಲ್ಲಿ ಅಡಚಣೆಯನ್ನು ಉಂಟುಮಾಡಬಹುದು ಎಂದು ವಿವರಿಸುತ್ತಾರೆ.

ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದಾಗ ಏನು ಮಾಡಬೇಕು? ಒಬ್ಬ ವ್ಯಕ್ತಿಯು ಹಠಾತ್ತನೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದರೆ, ಮೊದಲು ಹತ್ತಿರದಲ್ಲಿ ಯಾವುದೇ ಅಪಾಯಗಳಿವೆಯೇ ಎಂದು ಪರಿಶೀಲಿಸಬೇಕಾಗುತ್ತದೆ. ಅಂದರೆ, ನೀವು ಮತ್ತು ರೋಗಿಯೂ ಸುರಕ್ಷಿತ ಸ್ಥಳದಲ್ಲಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ, ಅವರ ಭುಜಗಳನ್ನು ತಟ್ಟಿ, ನೀವು ಕ್ಷೇಮವಾಗಿದ್ದೀರಾ? ಎಂದು ಕೇಳಿ. ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ಅವರು ಸಹಜವಾಗಿ ಉಸಿರಾಡದಿದ್ದರೆ, ತಕ್ಷಣವೇ 112 ಅಥವಾ 108 ಸಂಖ್ಯೆಗೆ ಕರೆ ಮಾಡಿ.

CARDIAC ARREST  NANA PATEKAR PASSES AWAY  NANA PATEKAR  ಕಾರ್ಡಿಯಾಕ್ ಅರೆಸ್ಟ್
ಹೃದಯ ಸ್ತಂಭನ- ಸಾಂದರ್ಭಿಕ ಚಿತ್ರ (Getty Images)

ಒಂದು ವೇಳೆ AED (ಆಟೋಮೇಟೆಡ್ ಎಕ್ಸ್‌ಟರ್ನಲ್ ಡಿಫಿಬ್ರಿಲೇಟರ್) ಲಭ್ಯವಿದ್ದರೆ, ಅದನ್ನು ತರಲು ಬೇರೊಬ್ಬರಿಗೆ ತಿಳಿಸಿ. ಆಂಬ್ಯುಲೆನ್ಸ್ ಬರುವವರೆಗೆ ಕಾಯದೆ CPR ನೀಡಲು ಪ್ರಾರಂಭಿಸಬೇಕಾಗುತ್ತದೆ. AED ಬಂದ ನಂತರ, ಅದನ್ನು ಆನ್ ಮಾಡಿ ಮತ್ತು ಅದರಲ್ಲಿ ಬರುವ ಧ್ವನಿ ಸೂಚನೆಗಳನ್ನು ಅನುಸರಿಸಿ. ಸಹಾಯ ಬರುವವರೆಗೆ ಅಥವಾ ವ್ಯಕ್ತಿಯು ಪ್ರಜ್ಞೆ ಪಡೆಯುವವರೆಗೆ CPR ನೀಡುವುದನ್ನು ಮುಂದುವರಿಸಬೇಕಾಗುತ್ತದೆ. ಸಾಧ್ಯವಾದರೆ, ಪ್ರತಿ ಎರಡು ನಿಮಿಷಕ್ಕೊಮ್ಮೆ CPR ನೀಡುವ ವ್ಯಕ್ತಿಯನ್ನು ಬದಲಾಯಿಸಿ.

ರಕ್ತ ಪರಿಚಲನೆ ನಿಂತ ಮೂರರಿಂದ ಐದು ನಿಮಿಷಗಳಲ್ಲೇ ಮೆದುಳಿಗೆ ಹಾನಿಯಾಗುವ ಸಾಧ್ಯತೆಯಿರುವುದರಿಂದ CPR ಅತ್ಯಂತ ನಿರ್ಣಾಯಕವಾಗಿದೆ. ಡಿಫಿಬ್ರಿಲೇಷನ್ ಅಥವಾ ವೈದ್ಯಕೀಯ ಚಿಕಿತ್ಸೆ ಲಭ್ಯವಾಗುವವರೆಗೆ, CPR ಮೆದುಳು ಹಾಗೂ ಪ್ರಮುಖ ಅಂಗಗಳಿಗೆ ರಕ್ತವನ್ನು ಹಸ್ತಚಾಲಿತವಾಗಿ ಪೂರೈಸುತ್ತದೆ. ಘಟನಾ ಸ್ಥಳದಲ್ಲಿರುವ ವ್ಯಕ್ತಿಯು ತಕ್ಷಣವೇ CPR ನೀಡಿದರೆ ಬದುಕುಳಿಯುವ ಸಾಧ್ಯತೆ ಎರಡು ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ. ಅಂಬ್ಯುಲೆನ್ಸ್ ಬರಲು ಸಮಯ ಹಿಡಿಯಬಹುದಾದ್ದರಿಂದ ಅಲ್ಲಿರುವ ವ್ಯಕ್ತಿಯೇ ಜೀವ ಉಳಿಸುವ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖ ಕಾರ್ಯವಾಗಿದೆ ಎಂದು ಡಾ.ಹರ್ಷಲ್ ಇಂಗ್ಲೆ ವಿವರಿಸುತ್ತಾರೆ.

CPR ನೀಡುವ ವಿಧಾನ ಹೇಗೆ? ವಯಸ್ಕರಿಗೆ CPR ನೀಡಲು ಅವರನ್ನು ಗಟ್ಟಿಯಾದ ಹಾಗೂ ಸಮತಟ್ಟಾದ ಮೇಲ್ಮೈಯಲ್ಲಿ ಮಲಗಿಸಬೇಕು. ಒಂದು ಕೈ ಅಂಗೈಯ ಹಿಂಭಾಗದ ಭಾಗವನ್ನು ಎದೆಯ ಮಧ್ಯಭಾಗದಲ್ಲಿ ಇರಿಸಬೇಕು. ಇನ್ನೊಂದು ಕೈಯನ್ನು ಅದರ ಮೇಲೆ ಇರಿಸಿ. ನಿಮ್ಮ ತೋಳುಗಳನ್ನು ನೇರವಾಗಿಡಿ ಹಾಗೂ ನಿಮ್ಮ ಭುಜಗಳು ನೇರವಾಗಿ ಕೈಗಳ ಮೇಲ್ಭಾಗದಲ್ಲಿರುವಂತೆ ನೋಡಿಕೊಳ್ಳಬೇಕಾಗುತ್ತದೆ.

CARDIAC ARREST  NANA PATEKAR PASSES AWAY  NANA PATEKAR  ಕಾರ್ಡಿಯಾಕ್ ಅರೆಸ್ಟ್
ಸಾಂದರ್ಭಿಕ ಚಿತ್ರ (Getty Images)

ಬಲವಾಗಿ ಹಾಗೂ ವೇಗವಾಗಿ ಒತ್ತಿರಿ. ಪ್ರತಿ ನಿಮಿಷಕ್ಕೆ 100 ರಿಂದ 120 ಬಾರಿ ಒತ್ತಡ ಹೇರುವ ವೇಗದಲ್ಲಿ ಎದೆಯನ್ನು 5 ರಿಂದ 6 ಸೆಂ.ಮೀ ಆಳಕ್ಕೆ ಒತ್ತಿರಿ. ಪ್ರತಿ ಬಾರಿ ಒತ್ತಿದ ನಂತರ ಎದೆಯು ಸಂಪೂರ್ಣವಾಗಿ ತನ್ನ ಸಹಜ ಸ್ಥಿತಿಗೆ ಮರಳಲು ಅವಕಾಶ ನೀಡಿ. ತರಬೇತಿ ಪಡೆಯದ ವ್ಯಕ್ತಿಗಳು ಕೇವಲ ಕೈಗಳನ್ನು ಬಳಸುವ CPR ಅನ್ನು ಮಾಡಬೇಕು. ತರಬೇತಿ ಪಡೆದವರು ಪ್ರತಿ 30 ಬಾರಿ ಒತ್ತಡ ಹೇರಿದ ನಂತರ ಎರಡು ರೆಸ್ಕ್ಯೂ ಬ್ರೆತ್ಸ್ (ಬಾಯಿಯಿಂದ ಬಾಯಿಗೆ ಉಸಿರು ನೀಡುವುದು) ಕೊಡಬೇಕಾಗುತ್ತದೆ.

ಮೊದಲೇ ಕಾಣಿಸುವ ಮುನ್ನೆಚ್ಚರಿಕೆ ಲಕ್ಷಣಗಳು: ಈ ಮುನ್ನೆಚ್ಚರಿಕೆ ಲಕ್ಷಣಗಳು ಘಟನೆಗೂ ಕೆಲವು ಗಂಟೆಗಳು, ದಿನಗಳು ಅಥವಾ ವಾರಗಳ ಮೊದಲೇ ಕಾಣಿಸಿಕೊಳ್ಳಬಹುದು. ಇವುಗಳಲ್ಲಿ ಎದೆ ನೋವು ಇಲ್ಲವೇ ಎದೆಯ ಮೇಲೆ ಒತ್ತಡ, ಉಸಿರಾಟದ ತೊಂದರೆ, ವೇಗವಾದ ಹೃದಯ ಬಡಿತ, ತಲೆತಿರುಗುವಿಕೆ ಹಾಗೂ ಮೂರ್ಛೆ ಹೋಗುವುದು, ತೀವ್ರ ಆಯಾಸ, ವಾಕರಿಕೆ, ಮೈಯಿಂದ ತಣ್ಣನೆಯ ಬೆವರು ಬರುವುದು. ತೋಳುಗಳು, ದವಡೆ, ಕುತ್ತಿಗೆ ಇಲ್ಲವೇ ಬೆನ್ನಿಗೆ ಹರಡುವ ನೋವು ಸೇರಿವೆ. ಹೃದ್ರೋಗ, ಕುಟುಂಬದಲ್ಲಿ ಹಠಾತ್ ಹೃದಯ ಸ್ತಂಭನದಿಂದ ಮೃತಪಟ್ಟ ಇತಿಹಾಸ, ಇಲ್ಲವೇ ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಹಾಗೂ ಹೃದಯದ ಲಯದಲ್ಲಿನ ಅಸಹಜತೆಗಳಂತಹ ಸಮಸ್ಯೆಗಳನ್ನು ಹೊಂದಿರುವವರು ಹಾಗೂ ಧೂಮಪಾನಿಗಳು ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಇವರು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ತಿಳಿಸುತ್ತಾರೆ.

ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಯುವಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣಗಳೇನು? ಚಿಹ್ನೆಗಳನ್ನು ಪತ್ತೆ ಮಾಡುವುದು ಹೇಗೆ?
  2. ನ್ಯುಮೋನಿಕ್ ಪ್ಲೇಗ್ ಕಾಯಿಲೆ: ಈ ಸೋಂಕಿನ ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?
  3. ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುವ ಚಟದಿಂದ ಹದಗೆಡುತ್ತಿರುವ ಯುವಕರ ಆರೋಗ್ಯ: ನೂತನ ಅಧ್ಯಯನ
  4. ಮಕ್ಕಳು ಖುಷಿಯಾಗಿ ಆಹಾರ ಸೇವಿಸಬೇಕೆ?: ತಜ್ಞರು ಸೂಚಿಸುವ ಟಿಪ್ಸ್ ಇಲ್ಲಿವೆ
  5. ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ದಡಾರ ವೈರಸ್: ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
  6. ಜನಪ್ರಿಯ ಕಂಪನಿಯೊಂದರ ಜೀರಿಗೆ ಪುಡಿ ನಿರ್ಬಂಧಿಸಿದ್ದು ಏಕೆ?: ಮನೆಯಲ್ಲಿಯೇ ಜೀರಿಗೆ ಪುಡಿ ತಯಾರಿಸುವುದು ಹೇಗೆ?