ETV Bharat / entertainment

ಮೈಸೂರಿನ ಸಂಗಮ್ ಥಿಯೇಟರ್​​ಗೆ ಸುದೀಪ್​ ಹೋಗದಿರಲು ಅಸಲಿ ಕಾರಣವೇನು? ಆಪ್ತರು ಕೊಟ್ರು ಮಾಹಿತಿ

ಇತ್ತೀಚೆಗೆ ಸುದೀಪ್​ ಮೈಸೂರಿನ ಸಂಗಮ್ ಥಿಯೇಟರ್​​ಗೆ ಭೇಟಿ ಕೊಡದೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಕಿಚ್ಚನ ಈ ನಿರ್ಧಾರಕ್ಕೆ ಒಂದು ನಿಖರ ಕಾರಣವಿದ್ದು, ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೋರ್ವರು ಮಾಹಿತಿ ನೀಡಿದ್ದಾರೆ.

Sudeep with Fans
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಅಭಿನಯ ಚಕ್ರವರ್ತಿ (Photo: Poster)
author img

By ETV Bharat Entertainment Team

Published : January 3, 2026 at 3:15 PM IST

3 Min Read
Choose ETV Bharat

ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ 'ಮಾರ್ಕ್' ಚಿತ್ರ ಕ್ರಿಸ್ಮಸ್​ಗೆ, ಡಿಸೆಂಬರ್​​​​ 25ರಂದು ಅದ್ಧೂರಿಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೂರೇ ದಿನಕ್ಕೆ ಸಕ್ಸಸ್ ಮೀಟ್​ ಹಮ್ಮಿಕೊಳ್ಳುವ ಮೂಲಕ ಚಿತ್ರತಂಡ ತಮ್ಮ ಯಶಸ್ಸನ್ನು ಸಂಭ್ರಮಿಸಿತು. ಬಳಿಕ, ಡಿಸೆಂಬರ್ 31ರಂದು ಕಿಚ್ಚ ಥಿಯೇಟರ್ ವಿಸಿಟ್ ಆರಂಭಿಸಿದ್ರು.

ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ‌ ಜೊತೆ ಕುಳಿತು ತಮ್ಮ ಯಶಸ್ವಿ ಚಿತ್ರ ವೀಕ್ಷಿಸಿ, ಏಕೆ ಹುಬ್ಬಳ್ಳಿಯಲ್ಲಿ ಯುದ್ದಕ್ಕೆ ಸಿದ್ಧ ಅಂತಾ ಹೇಳಿದೆಯೆಂದು ಸುದೀಪ್ ಸ್ಪಷ್ಟನೆ‌ ಕೊಟ್ರು. ಅದೇ ಸಂಜೆ ಮೈಸೂರಿನ ಸಂಗಮ್ ಚಿತ್ರಮಂದಿರಕ್ಕೆ ಸುದೀಪ್ ಭೇಟಿ ನೀಡಿ ಅಭಿಮಾನಿಗಳ ಜೊತೆ ಸಿನಿಮಾ ನೋಡಬೇಕಿತ್ತು. ಅದರಂತೆ, ಸಂತೋಷ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಕಿಚ್ಚ ಅಂಡ್ ಟೀಮ್ ಮಧ್ಯಾಹ್ನದ ಹೊತ್ತಿಗೆ ಮೈಸೂರು ತಲುಪಿದ್ದರು. ಖಾಸಗಿ ಹೋಟೆಲ್​​​ನಲ್ಲಿ ವಿಶ್ರಾಂತಿ ಪಡೆದಿದ್ದ ಸುದೀಪ್, ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ‌ ಭೇಟಿ ನೀಡಿ, ನಂತರ ಸಂಗಮ್ ಚಿತ್ರಮಂದಿರಕ್ಕೆ ಹೋಗದೇ ಮೈಸೂರಿನಿಂದ ತೆರಳಿದರು. ಥಿಯೇಟರ್​ ವಿಸಿಟ್​ ಮಾಡದೇ ಇದ್ದದ್ದು ಅಭಿಮಾನಿಗಳಲ್ಲಿ ದೊಡ್ಡ ನಿರಾಸೆ ಮೂಡಿಸಿತ್ತು. ಕಿಚ್ಚ ಏಕೆ ಹೀಗೆ ಮಾಡಿದ್ರು ಅನ್ನೋ ಪ್ರಶ್ನೆಯೂ ಎದ್ದಿತ್ತು.

ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಸುದೀಪ್ (Video: ETV Bharat)

ಈ ಬಗ್ಗೆ ಹೇಸರೇಳಲು ಇಚ್ಛಿಸದ ಸುದೀಪ್ ಆಪ್ತರು (ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವವರು) ಹೇಳುವಾಗೇ, ''ಮೈಸೂರಿನ ಸಂಗಮ್ ಚಿತ್ರಮಂದಿರಕ್ಕೆ ಭೇಟಿ ಕೊಟ್ಟು ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಾರೆ ಅಂತಾ ಮೊದಲೇ ಅನೌನ್ಸ್​ ಆಗಿತ್ತು. ಕಿಚ್ಚನ ಆಗಮನದ ವಿಶೇಷ ತಿಳಿದು ಬರೋಬ್ಬರಿ‌ 15,000ಕ್ಕೂ ಹೆಚ್ಚು ಅಭಿಮಾನಿಗಳಿಗೆ ಥಿಯೇಟರ್ ಬಳಿ ಬಂದು ಜಮಾಯಿಸಿದ್ದರು. ಹೀಗಾಗಿ, ಯಾವುದೇ ಅವಘಢ ಸಂಭವಿಸದಿರಲಿ ಎಂದು ಸುದೀಪ್ ಸಿನಿಮಾ ವೀಕ್ಷಿಸದೇ ವಾಪಸ್ ತೆರಳಿದರು. ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದರು. ಹೊಸ ವರ್ಷ ಹಿನ್ನೆಲೆ, ಪೊಲೀಸರು ನಾನಾ ಕಡೆ ನಿಯೋಜನೆಗೊಂಡಿದ್ದರು. ಹೊಸ ವರ್ಷದ ದಿನ ಸುದೀಪ್ ಅವರಿಂದ ಚಿತ್ರಮಂದಿರಗಳಿಗೆ ನಷ್ಟ ಹಾಗೂ ಅಭಿಮಾನಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸುದೀಪ್ ಫ್ಯಾನ್ಸ್​ ಜೊತೆ ಥಿಯೇಟರ್​​ನಲ್ಲಿ ಸಿನಿಮಾ ವೀಕ್ಷಿಸದೇ ವಾಪಸ್​ ಬರಬೇಕಾಯಿತು'' ಎಂದು ತಿಳಿಸಿದರು.

ಮೈಸೂರಿನಲ್ಲಿ ಜಮಾಯಿಸಿದ್ದ ಅಭಿಮಾನಿಗಳು (Video: ETV Bharat)

ಹೈದರಾಬಾದ್​ನಲ್ಲಿ 2024ರ ಡಿಸೆಂಬರ್​​​ನಲ್ಲಿ ಸೂಪರ್​ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಪುಷ್ಪ 2 ಸಿನಿಮಾ ನೋಡಲು ಸಂಧ್ಯಾ ಥಿಯೇಟರ್​ಗೆ ಹೋದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆಯೊಬ್ಬರು ಮೃತಪಟ್ಟು, ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲು ಅರ್ಜುನ್ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆ, ಪೊಲೀಸರು ನಟನನ್ನು ಬಂಧಿಸಿದರು. ಅಲ್ಲು ಅರ್ಜುನ್ ಒಂದು ರಾತ್ರಿ ಜೈಲಿನಲ್ಲಿ ಕಳೆಯಬೇಕಾದ ಪರಿಸ್ಥಿತಿ ಬಂದಿತ್ತು.

ಇನ್ನೂ, ಕಳೆದ ವರ್ಷ ತಮಿಳು ಸೂಪರ್​​ ಸ್ಟಾರ್ ವಿಜಯ್ ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷದ ಗೆಲುವಿಗಾಗಿ ತಮಿಳಿನಾಡಿನ‌ ನಾನಾ ಜಿಲ್ಲೆಗಳಲ್ಲಿ ರ್ಯಾಲಿ, ಸಮಾವೇಶ ನಡೆಸುತ್ತಿದ್ದರು. ಸೆಪ್ಟಂಬರ್ 27ರಂದು ಕರೂರಿನಲ್ಲಿಯೂ ರೋಡ್‌ ಶೋ ಏರ್ಪಟ್ಟಿತ್ತು. ವಿಜಯ್‌ ಅವರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಬಂದು ಸೇರಿದ್ದರು. ಈ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂಬ ಉದ್ದೇಶದಿಂದಲೂ ಸುದೀಪ್ ಮೈಸೂರಿನ ಸಂಗಮ್ ಚಿತ್ರಮಂದಿರಕ್ಕೆ ಭೇಟಿ ನೀಡಲಿಲ್ಲ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.

ಮಾರ್ಕ್ ಸಿನಿಮಾ ಮೊದಲ ವಾರಾಂತ್ಯದಲ್ಲಿಯೇ‌ 35 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ ಎಂದು ಚಿತ್ರತಂಡ ತಿಳಿಸಿತ್ತು. ಇದರಲ್ಲಿ ಟಿವಿ.ರೈಟ್ಸ್, ಡಿಜಿಟಲ್ ರೈಟ್ಸ್, ಆಡಿಯೋ ರೈಟ್ಸ್​ ಕೂಡಾ ಸೇರಿದೆ. ಹಿಂದಿಯಲ್ಲಿ ಥಿಯೇಟರ್​ನಲ್ಲಿ ರಿಲೀಸ್ ಆಗದೇ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುವುದರಿಂದ ಇಲ್ಲಿ ಕೂಡಾ ದೊಡ್ಡ‌ ಮೊತ್ತಕ್ಕೆ ಸೇಲ್ ಆಗಿದೆ. ಹೀಗೆ ಇರಬೇಕಾದ್ರೆ ಮಾರ್ಕ್ ಈ ವರ್ಷದ ಹಿಟ್ ಸಿನಿಮಾ‌ ಎನ್ನಬಹುದು ಅಂತಾರೆ.

ಇದರ ಜೊತೆಗೆ ಸಿನಿಮಾ ವಿಮರ್ಶಕರು ಹಾಗೂ ವಿತರಕರು ಮಾರ್ಕ್ ಸಿನಿಮಾವನ್ನು ಕಮರ್ಷಿಯಲ್ ಹಿಟ್ ಎಂದು ಶ್ಲಾಘಿಸಿದ್ದಾರೆ. ಹಿಂದಿ ಹಾಗೂ ಹಾಲಿವುಡ್ ಸಿನಿಮಾಗಳಿಗೆ ಟಕ್ಕರ್ ಕೊಟ್ಟು ದೊಡ್ಡ ಮಟ್ಟದ ಗೆಲುವನ್ನು‌ ಕಿಚ್ಚನ ಸಿನಿಮಾ ಪಡೆದುಕೊಂಡಿದೆ. ಡಿಜಿಟಲ್​​ ಮೊತ್ತ ಬಿಟ್ಟು, ಕೇವಲ ಚಿತ್ರಮಂದಿರದಲ್ಲಿ ಸಿನಿಮಾ 9 ದಿನಗಳಲ್ಲಿ 23.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ: ಹೊಸವರ್ಷ ಏರಿಕೆ ಕಂಡಿದ್ದ 'ಮಾರ್ಕ್'​​ ಗಳಿಕೆಯಲ್ಲಿ ಶೇ.68.42ರಷ್ಟು ಇಳಿಕೆ: ವಾರಾಂತ್ಯದ ಕಲೆಕ್ಷನ್​ ಮೇಲೆ ನಿರೀಕ್ಷೆ

ಮ್ಯಾಕ್ಸ್ ಬಳಿಕ ಮತ್ತೊಮ್ಮೆ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯನ್ ಜೋಡಿ ಬೆಳ್ಳಿಪರದೆ ಮೇಲೆ‌ ಮೋಡಿ‌ ಮಾಡಿದೆ. ಅಭಿನಯ ಚಕ್ರವರ್ತಿಯ ಅಮೋಘ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: 'ಟಾಕ್ಸಿಕ್'​ಗೆ ಮತ್ತೋರ್ವ ಬ್ಯೂಟಿ: 'ಸ್ಯಾಂಡಲ್​ವುಡ್​ಗೆ ಎಲ್ಲರನ್ನೂ ಕರೆಸಿಕೊಳ್ತೇನೆ' ಎಂಬ ಮಾತು ನಿಜ ಮಾಡಿದ ಯಶ್

ವಿಜಯ್ ಕಾರ್ತಿಕೇಯನ್ ಡೈರೆಕ್ಷನ್​​ನ ಚಿತ್ರದಲ್ಲಿ ದೀಪ್ಷಿಕಾ, ನವೀನ್ ಚಂದ್ರ, ಗುರು ಸೋಮಸುಂದರಂ, ರೋಶಿನಿ ಪ್ರಕಾಶ್, ಗೋಪಾಲ್‌ಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್, ಡ್ರ್ಯಾಗನ್ ಮಂಜು, ಆರ್ಚನಾ ಕೊಟ್ಟಿಗೆ, ಯೋಗಿ ಬಾಬು, ಶೈನ್ ಟಾಮ್ ಚಾಕೋ ಅಭಿನಯಿಸಿದ್ದಾರೆ. ಸತ್ಯ ಜ್ಯೋತಿ ಫಿಲ್ಮ್ ಹಾಗೂ ಕಿಚ್ಚ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಸಿನಿಮಾ ಯಶಸ್ಸಿನಲೆಯಲ್ಲಿ ತೇಲುತ್ತಿದೆ.