ರಶ್ಮಿಕಾ ಮದುವೆ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಹೀಗಿತ್ತು!
ಪ್ರೇಮಪಕ್ಷಿಗಳಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಂದು ಪತಿ-ಪತ್ನಿಯರಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರ ಹರಿದಿದೆ. ಆದ್ರೆ ರಿಷಬ್ ಶೆಟ್ಟಿ.....!

By ETV Bharat Entertainment Team
Published : February 26, 2026 at 2:01 PM IST
ಇಂದು ಬೆಳಗ್ಗೆ 10.10ಕ್ಕೆ ಉದಯಪುರದಲ್ಲಿ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ಸ್ಟಾರ್ ವಿಜಯ್ ದೇವಕೊಂಡ ಹಸೆಮಣೆಯೇರಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಳೆ ಹರಿದಿದೆ. ಕಳೆದೊಂದು ವಾರದಿಂದ ಈ ಮದುವೆ ಸುದ್ದಿ ಸಖತ್ ಸದ್ದು ಮಾಡುತ್ತಿದ್ದು, ಇತ್ತೀಚೆಗೆ ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಯಿತು.
ಇಂದು ಬೆಳಗ್ಗೆ, ವರನ ಕಡೆಯಿಂದ ತೆಲುಗು ಸಂಪ್ರದಾಯಗಳ ಪ್ರಕಾರ ವಿವಾಹ ಆಚರಣೆಗಳು ಜರುಗಿದ್ದು, ಸಂಜೆ 4:30ಕ್ಕೆ ವಧುವಿನ ಕುಟುಂಬ ಕೊಡವ ಸಂಪ್ರದಾಯಗಳ ಪ್ರಕಾರ ಮತ್ತೆ ವಿವಾಹ ಆಚರಣೆಗಳನ್ನು ನಡೆಸಲಿದೆ. ಈ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತ ಸ್ನೇಹಿತರಷ್ಟೇ ಉಪಸ್ಥಿತರಿದ್ದಾರೆ. ರಶ್ಮಿಕಾ ನಟನೆಯ ಚೊಚ್ಚಲ ಚಿತ್ರ 'ಕಿರಿಕ್ ಪಾರ್ಟಿ' ನಿರ್ದೇಶಿಸಿದ್ದ ರಿಷಬ್ ಶೆಟ್ಟಿ ಅವರಿಗೆ ವಿವಾಹದ ಕುರಿತು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳಿಂದ ಪ್ರಶ್ನೆಗಳು ಎದುರಾಗಿದ್ದು, ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಈ ಬಗ್ಗೆ ಯಾವುದೇ ಉತ್ತರ ನೀಡದೇ ಹೊರಟರು.
ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್' ಭಾನುವಾರ ಅಂಜನಾದ್ರಿಯಲ್ಲಿ ತನ್ನ ಮುಹೂರ್ತ ನೆರವೇರಿಸಿಕೊಂಡಿದೆ. ನಾಯಕ ನಟ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ವರ್ಮಾ ಸೇರಿ ಚಿತ್ರತಂಡ ಸಮಾರಂಭದಲ್ಲಿ ಉಪಸ್ಥಿತವಿತ್ತು. ಅಂಜನಾದ್ರಿ ಬೆನ್ನಲ್ಲೇ, ಮಂತ್ರಾಲಯದಲ್ಲಿ ನಡೆದ ಗುರುವೈಭವೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ರಿಷಬ್, ತಮ್ಮ ಸಂತಸ ಹಂಚಿಕೊಂಡರು. ಇದೇ ವೇಳೆ ಚಿತ್ರದ ಕುರಿತು ಮಾಹಿತಿ ನೀಡಿದರು. ಅಂಜನಾದ್ರಿಯಲ್ಲಿ ಮುಹೂರ್ತ ನೆರವೇರಿಸಿಕೊಂಡ ಬಗ್ಗೆ ಖುಷಿ ವ್ಯಕ್ತಪಡಿಸಿದರು.
ಇದೇ ವೇಳೆ ಪತ್ರಕರ್ತರೊಬ್ಬರು, ನಟಿ ರಶ್ಮಿಕಾ ಮಂದಣ್ಣ ಮದುವೆಯಾಗುತ್ತಿದ್ದಾರೆ. ನಿಮಗೆ ಆಹ್ವಾನ ಬಂದಿದೆಯೇ? ಎಂದು ಕೇಳಿದಾಗ, ತಾಳ್ಮೆಯಿಂದ ಉತ್ತರ ಕೊಡುತ್ತಿದ್ದ ರಿಷಬ್ ಸರಳವಾಗಿ ಧನ್ಯವಾದಗಳು ಎಂದು ತಿಳಿಸಿ ಹೊರಟೇ ಹೋದರು. ಈ ನಡೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.
'ಆಮಂತ್ರಣ ಬಂದಿಲ್ಲ, ಬಂದರೆ ಹೋಗ್ತೇನೆ'-ಪ್ರಮೋದ್ ಶೆಟ್ಟಿ: ಫೆಬ್ರವರಿ 18ರಂದು 'ಶೇಷ 2016' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಪ್ರಮೋದ್ ಶೆಟ್ಟಿ ಅವರಿಗೂ ಇದೇ ಪ್ರಶ್ನೆ ಎದುರಾಗಿತ್ತು. ಅಂದು ಪ್ರತಿಕ್ರಿಯಿಸಿದ್ದ ನಟ, ''ರಶ್ಮಿಕಾ ಮದುವೆಯ ಆಮಂತ್ರಣ ಪತ್ರಿಕೆ ನನಗಿನ್ನೂ ಬಂದಿಲ್ಲ, ಬಂದ್ರೆ ಹೋಗುತ್ತೇನೆ. ಆದ್ರೆ ಅವರು ನನಗೆ ಇನ್ವಿಟೇಶನ್ ಕೊಡೋದಿಲ್ಲ ಅಂತಾನೂ ಗೊತ್ತು. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲಿ ಹೊಸತೇನಿದೆ?'' ಎಂದು ತಿಳಿಸಿದ್ದರು.
ಇದನ್ನೂ ಓದಿ: 'ರಶ್ಮಿಕಾ ನಮಗೆ ಮದುವೆ ಆಹ್ವಾನ ಕೊಡೋದಿಲ್ಲ, ಗಿಲ್ಟ್ ಫೀಲ್ ಇಟ್ಟುಕೊಳ್ಳಲು ರಕ್ಷಿತ್ ಶೆಟ್ಟಿ ಚಾಕ್ಲೆಟ್ ತಿನ್ನೋ ಮಗುವಲ್ಲ'
ಇದೇ ವೇಳೆ ರಕ್ಷಿತ್ ಶೆಟ್ಟಿ ಏನಾದ್ರು ಗಿಲ್ಟ್ ಫೀಲ್ನಲ್ಲಿದ್ದಾರಾ? ಎಂಬ ಪ್ರಶ್ನೆ ಎದುರಾದಾಗ, "ಅದೆಲ್ಲಾ ಯಾವ ಕಾಲದಲ್ಲೋ ಹೋಯ್ತು. ಏನು ಚಿಕ್ಕ ಮಕ್ಕಳಾ, ಅದರಲ್ಲೇ ಕೊರಗಿ ಕೂರೋಕೆ? ಚಾಕ್ಲೆಟ್ ತಿನ್ನೋವ್ರಾ? ಅದೆಲ್ಲಾ ಮುಗಿದೋಯ್ತು" ಎಂದು ತಿಳಿಸಿದ್ದರು.
ಇದನ್ನೂ ಓದಿ: ಹಸೆಮಣೆಯೇರಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ: ಸಂಜೆ ಕೊಡವ ಸಂಪ್ರದಾಯದಂತೆ ಮತ್ತೆ ವಿವಾಹ
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ 'ದಿ ವೆಡ್ಡಿಂಗ್ ಆಫ್ ವಿರೋಶ್' ಹೆಸರಿನಲ್ಲಿ ನಡೆದಿದೆ. 24ರಂದು ಮೆಹೆಂದಿ ಕಾರ್ಯಕ್ರಮ, 25ರಂದು ಬುಧವಾರ ಹಲ್ದಿ ಮತ್ತು ಸಂಗೀತ ಸಮಾರಂಭ ಜರುಗಿದ್ದು, ಇಂದು ಸಪ್ತಪದಿ ತುಳಿದಿದ್ದಾರೆ. ವಿವಾಹ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ಮಾರ್ಚ್ 4ರಂದು ನಡೆಯಲಿದೆ.

