ETV Bharat / entertainment

ಕ್ರಿಟಿಕಲ್​ ಕೇರ್​ ಯೂನಿಟ್​​ನಲ್ಲಿ ಖ್ಯಾತ ನಟ - ನಿರ್ದೇಶಕ ಭಾರತಿರಾಜ: ಆಸ್ಪತ್ರೆ ಅಧಿಕಾರಿಗಳ ಹೇಳಿಕೆಯಲ್ಲೇನಿದೆ?

ಫಿಲ್ಮ್​​​ಮೇಕರ್ ಭಾರತಿರಾಜ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಮುಂದುವರಿದಿದೆ.

Bharathiraja Admitted With Severe Lung Infection
ಆಸ್ಪತ್ರೆಯಲ್ಲಿ ನಟ-ನಿರ್ದೇಶಕ ಭಾರತಿರಾಜ (Photo: ETV Bharat)
author img

By ETV Bharat Entertainment Team

Published : January 5, 2026 at 5:13 PM IST

2 Min Read
Choose ETV Bharat

ಚೆನ್ನೈ (ತಮಿಳುನಾಡು): ಕಳೆದ ತಿಂಗಳ ಕೊನೆಯಲ್ಲಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ರಸಿದ್ಧ ಫಿಲ್ಮ್​​ಮೇಕರ್ ಭಾರತಿರಾಜ ಆರೋಗ್ಯ ಈಗ ಸ್ಥಿರವಾಗಿದೆ. ಆದರೆ ತೀವ್ರ ನಿಗಾ ಘಟಕದಲ್ಲಿ (Critical Care Unit / CCU) ಚಿಕಿತ್ಸೆ ಮುಂದುವರಿದಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಮುಖವಾಗಿ ತಮಿಳು ಚಲನಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿರುವ ಭಾರತಿರಾಜ, ಬಹು ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಟ, ಚಿತ್ರಕಥೆಗಾರ. ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಡಿಸೆಂಬರ್ 27 ರಂದು ಉಸಿರಾಟದ ತೊಂದರೆಯಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಇಂದು, ಜನವರಿ 5ರ ಸೋಮವಾರ, ಭಾರತಿರಾಜ ಅವರ ಹೆಲ್ತ್​​ ಕಂಡೀಶನ್ ಕುರಿತು ಆಸ್ಪತ್ರೆ ಅಧಿಕೃತ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಿದೆ.

Bharathiraja Health Update
ಭಾರತಿರಾಜ ಹೆಲ್ತ್​ ಅಪ್ಡೇಟ್ (Photo: Medical bulletin procured by ETV Bharat)

ಭಾರತಿರಾಜ ಹೆಲ್ತ್​ ಅಪ್ಡೇಟ್: ಮೆಡಿಕಲ್ ಬುಲೆಟಿನ್ ಪ್ರಕಾರ, ಭಾರತಿರಾಜ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಅವರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

"ಭಾರತಿರಾಜ ಅವರನ್ನು ತೀವ್ರ ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರನ್ನು ಕ್ರಿಟಿಕಲ್ ಕೇರ್ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಗಾಂಗ ವೈಫಲ್ಯಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ನಮ್ಮ ವೈದ್ಯಕೀಯ ತಜ್ಞರ ತಂಡವು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರಿಗೆ ಕ್ರಿಟಿಕಲ್ ಕೇರ್ ಯೂನಿಟ್​ನಲ್ಲಿ ಚಿಕಿತ್ಸೆಯ ಅಗತ್ಯವಿದೆ" ಎಂದು ಹೇಳಿಕೆ ತಿಳಿಸಿದೆ.

ತಮಿಳು ಚಿತ್ರರಂಗದ ಹಲವು ಗಣ್ಯರು ಭಾರತಿರಾಜ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. ಎಆರ್ ಮುರುಗದಾಸ್, ಆರ್​ಕೆ ಸೆಲ್ವಮಣಿ, ಸೀಮನ್, ಸೀನು ರಾಮಸಾಮಿ, ಚಿತ್ರಾ ಲಕ್ಷ್ಮಣನ್, ಲಿಂಗುಸಾಮಿ, ಅಮೀರ್ ಸೇರಿದಂತೆ ನಿರ್ಮಾಪಕ ಕಲೈಪುಲಿ ಎಸ್ ಥನು ಅವರು ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

84 ವರ್ಷದ ಚಲನಚಿತ್ರ ನಿರ್ಮಾಪಕರು ತಮ್ಮ ಪುತ್ರ, ನಟ - ನಿರ್ದೇಶಕ ಮನೋಜ್ (48) ಅವರು ನಿಧನರಾದ ನಂತರ ಭಾರಿ ನೋವಲ್ಲಿದ್ದರು. ಮನೋಜ್ ಅವರ ಅಕಾಲಿಕ ನಿಧನ ಅವರನ್ನು ತೀವ್ರ ದುಃಖಗೊಳಪಡಿಸಿತ್ತು ಎಂದು ಹೇಳಲಾಗಿದೆ. 2025ರ ಮಾರ್ಚ್ 25ರಂದು ಮನೋಜ್ ಭಾರತಿರಾಜ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು.

ಭಾರತ ಸರ್ಕಾರದಿಂದ ನೀಡಲಾಗುವ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭಾರತಿರಾಜ, 6ಕ್ಕೂ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ.

"ಎನ್ ಇನಿಯ ತಮಿಳು ಮಕ್ಕಳೆ" ಎಂದು ಪೂಜಿಸಲ್ಪಡುವ ಭಾರತಿರಾಜ, ತಮಿಳು ಚಿತ್ರರಂಗದ ಚಿತ್ರಣವನ್ನು ಬದಲಾಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸ್ಟುಡಿಯೋ ಸೆಟ್‌ಗಳಿಂದ ದೂರ ಸರಿದು ನೈಜ ಸ್ಥಳಗಳಲ್ಲಿ ವ್ಯಾಪಕವಾಗಿ ಚಿತ್ರೀಕರಣ ಮಾಡಿದ್ದಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ. 4 ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ, ಕ್ಯಾಮರಾ ಹಿಂದೆ ಮತ್ತು ಎದುರು ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಿದರು.

ಇದನ್ನೂ ಓದಿ: ಕೆಜಿಎಫ್ 2​ ದಾಖಲೆ ಪುಡಿಗಟ್ಟಿದ ಧುರಂಧರ್: ಯಶ್​ ಟಾಕ್ಸಿಕ್​​ಗೆ ಟಕ್ಕರ್ ಕೊಡಲು ಸಜ್ಜಾದ ಧುರಂಧರ್ 2

16 ವಯತಿನಿಲೆ ಮೂಲಕ ನಿರ್ದೇಶಕರಾಗಿ 70ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದರು. ನಂತರ ಕೇವಲ ಮೂರು ವರ್ಷಗಳಲ್ಲಿ ಕಿಝಾಕೆ ಪೋಗಮ್ ರೈಲ್, ಸಿಗಪ್ಪು ರೋಜಕ್ಕಲ್ ಮತ್ತು ಪುತಿಯಾ ವಾರ್ಪುಗಳಂತಹ ಬ್ಯಾಕ್-ಟು-ಬ್ಯಾಕ್ ಹಿಟ್‌ಗಳನ್ನು ನೀಡಿದರು. ಯಶಸ್ವಿ ನಿರ್ದೇಶಕರು ನಂತರ ಕಲ್ಲುಕ್ಕುಲ್ ಈರಮ್ (1980) ಮೂಲಕ ನಟನೆಯಲ್ಲೂ ತೊಡಗಿದರು. ಹೀಗೆ ಚಿತ್ರರಂಗದ ಹಲವು ವಿಭಾಗಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ,ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡಾಲಿ ಧನಂಜಯ್ ಮುಂದಿನ ಸಿನಿಮಾ 'ಹೆಗ್ಗಣ ಮುದ್ದು': ಅರುಣ್​ ಸಾಗರ್ ಪುತ್ರಿ ಅದಿತಿ ನಾಯಕಿ

2020ರಲ್ಲಿ ಅವರು ಕೊನೆಯದಾಗಿ ಬರೆದು, ನಿರ್ದೇಶಿಸಿ, ನಿರ್ಮಿಸಿ, ನಟಿಸಿದ ಮೀಂದಮ್ ಒರು ಮರಿಯತೈ ಚಿತ್ರ ಬಿಡುಗಡೆಯಾದಾಗಿನಿಂದ, ಅಭಿಮಾನಿಗಳು ಅವರ ಪುನರಾಗಮನಕ್ಕಾಗಿ ಕಾಯುತ್ತಿದ್ದಾರೆ. ಸದ್ಯ ಎಲ್ಲೆಡೆ ಶೀಘ್ರ ಚೇತರಿಕೆಗೆ ಹಾರೈಸಲಾಗುತ್ತಿದೆ.