ಧನ್ವೀರ್ ಗೌಡ 'ಹಯಗ್ರೀವ' ಸಿನಿಮಾಗೆ ಆರಂಭದಲ್ಲೇ ವಿಘ್ನ: ರಾಜ್ಯಾದ್ಯಂತ ಶೋಗಳು ಸ್ಥಗಿತ!
ಸೆನ್ಸಾರ್ ಸಮಸ್ಯೆಯಿಂದಾಗಿ 'ಹಯಗ್ರೀವ' ಸಿನಿಮಾದ ಆರಂಭಿಕ ಶೋಗಳು ರದ್ದಾಗಿವೆ.

By ETV Bharat Entertainment Team
Published : February 27, 2026 at 12:58 PM IST
'ವಾಮನ' ಸಿನಿಮಾ ಬಳಿಕ ಭರವಸೆಯ ನಟ ಧನ್ವೀರ್ ಗೌಡ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ 'ಹಯಗ್ರೀವ' ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರತಂಡಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಹೌದು, ಬೆಳಗ್ಗೆ ಮತ್ತು ಮಧ್ಯಾಹ್ನದ ಶೋಗಳು ರಾಜ್ಯಾದ್ಯಂತ ರದ್ದಾಗಿವೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಸೆನ್ಸಾರ್ ಸಮಸ್ಯೆಯಿಂದಾಗಿ ಸಿನಿಮಾದ ಮೊದಲ ಎರಡು ಶೋಗಳು ಅಂದರೆ ಬೆಳಗ್ಗೆ 10:30 ಮತ್ತು ಮಧ್ಯಾಹ್ನ 1:30ರ ಪ್ರದರ್ಶನಗಳು ರದ್ದಾಗಿವೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಚಿತ್ರತಂಡ, ''ಅನಿವಾರ್ಯ ಕಾರಣಗಳಿಂದ ನಮ್ಮ ಸಿನಿಮಾದ ಮೊದಲ ದಿನದ ಮೊದಲ ಎರಡೂ ಶೋಗಳು ರದ್ದಾಗಿದ್ದು, ಸಂಜೆ 4:30ರ ಶೋನಿಂದ ರಾಜ್ಯಾದ್ಯಂತ ಅದ್ಧೂರಿಯಾಗಿ ಪ್ರಾರಂಭ ಆಗಲಿದೆ, ನೋಡಿ ಹರಸಿ, ಬೆಂಬಲಿಸಿ'' ಎಂದು ಕೇಳಿಕೊಂಡಿದ್ದಾರೆ.
ಸೆನ್ಸಾರ್ ಕಾರಣದಿಂದಾಗಿ ಬಿಡುಗಡೆ ವಿಳಂಬ ಎದುರಿಸಿದೆ. ಚಿತ್ರದಲ್ಲಿ ಹಿಂದೂ ದೇವತೆಗಳ ಉಲ್ಲೇಖ ಇವೆ. ಕೆಲ ದೃಶ್ಯಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಅಥವಾ ಮುಖವನ್ನು ತಿರುಚಿರುವ ದೃಶ್ಯಗಳು ಸಹ ಇವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸೆನ್ಸಾರ್ ಮಂಡಳಿಯು ಸಿನಿಮಾವನ್ನು ರಿವೈಸ್ ಕಮಿಟಿಗೆ ಕಳುಹಿಸಿದ್ದು, ರಿವೈಸ್ ಕಮಿಟಿ ಸಿನಿಮಾ ನೋಡಿದ ಬಳಿಕವಷ್ಟೇ ಸೆನ್ಸಾರ್ ಪ್ರಮಾಣ ಪತ್ರ ಸಿಗಲಿದೆ.
ನಾಯಕ ನಟ ಧನ್ವೀರ್ ಗೌಡ ತಮ್ಮ ಈ ಚಿತ್ರವನ್ನು ಕಳೆದ ಒಂದು ತಿಂಗಳಿನಿಂದ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ರು. ಆಪ್ತ ಗೆಳೆಯ, ನಟ ದರ್ಶನ್ ಅವರ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಬೆಂಬಲ ಕೊಡಲಾಗಿದೆ. ಪತ್ನಿ ವಿಜಯಲಕ್ಷ್ಮಿ ದರ್ಶನ್, ಸಿನಿಮಾದ ಟ್ರೇಲರ್ ರಿಲೀಸ್ ಈವೆಂಟ್ಗೆ ಸಾಕ್ಷಿಯಾಗಿದ್ರು.
ಗುರುವಾರದಂದು ದರ್ಶನ್ ಅವರ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ನಿಂದ ಪೋಸ್ಟ್ ಶೇರ್ ಮಾಡಲಾಗಿದೆ. ಅದರಲ್ಲಿ ದರ್ಶನ್ ಹಾಗೂ ಧನ್ವೀರ್ ಜೊತೆಗಿರುವ ಫೋಟೋವನ್ನು ಕಾಣಬಹುದು. ಇದು ದಿ ಡೆವಿಲ್ ಸಿನಿಮಾ ಶೂಟಿಂಗ್ ಸಂದರ್ಭದ ಕ್ಷಣದಂತೆ ತೋರಿದೆ.
ಪೋಸ್ಟ್ ಶೇರ್ ಮಾಡಿದ ದರ್ಶನ್ ಟೀಮ್, ''ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ ಹಯಗ್ರೀವ ನಾಳೆ ತೆರೆಗೆ ಬರುತ್ತಿದೆ. ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ. ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ. ಎಲ್ಲಾ ಕನ್ನಡ ಸಿನಿಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್‌ಗೆ ಹೋಗಿ ಹಯಗ್ರೀವ ನೋಡಿರಿ. ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ. ಜೈ ಕನ್ನಡ! ಜೈ ಕರ್ನಾಟಕ!'' ಎಂದು ಬರೆದುಕೊಂಡಿದೆ.
ಇದನ್ನೂ ಓದಿ: 'ದರ್ಶನ್ ಆ ಕೃತ್ಯಕ್ಕೆ ಕೈ ಹಾಕಿಲ್ಲವೆಂಬ ನಂಬಿಕೆಯಿದೆ, ಕಾಲ ಉತ್ತರಿಸಲಿದೆ': 'ಹಯಗ್ರೀವ' ನಟ ಧನ್ವೀರ್ ಗೌಡ ಸಂದರ್ಶನ
ದರ್ಶನ್ ಮೇಲಿನ ಅಭಿಮಾನದಿಂದ ಹಲವರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತಿಕ್ರಿಯಿಸಿದ ಸೋಷಿಯಲ್ ಮೀಡಿಯಾ ಬಳಕೆದಾರರೋರ್ವರು, ''ನಿಮ್ಮ ಜೊತೆ ನಿಂತವರ ಜೊತೆಗೆ ಸದಾ ನಾವಿರ್ತೀವಿ ಬಾಸ್. ಜೈ ಡಿ ಬಾಸ್'' ಎಂದು ತಿಳಿಸಿದ್ದಾರೆ. ''ನಿಯತ್ತಿಗೆ ಇನ್ನೊಂದ್ ಹೆಸರೇ ಧನ್ವೀರ್ ಅಣ್ಣ'' ಎಂದು ಅಭಿಮಾನಿಯೋರ್ವರು ಗುಣಗಾನ ಮಾಡಿದ್ದಾರೆ. ಮತ್ತೋರ್ವರು, ''ನಿಮ್ಮ ಕಷ್ಟದಲ್ಲಿ, ನಿಮ್ಮ ಪರವಾಗಿ ನಿಮ್ಮ ಒಳಿತಿಗಾಗಿ ಕಾನೂನಾತ್ಮಕ ಹೋರಾಟದಲ್ಲಿ ಜೊತೆಯಾಗಿ ನಿಂತವರಿಗೆ ನಮ್ಮ ಬೆಂಬಲ ಸದಾ ಇರುತ್ತೇ ಬಾಸ್'' ಎಂದು ತಿಳಿಸಿದ್ದಾರೆ. ಮತ್ತೊಂದು ಕಾಮೆಂಟ್ನಲ್ಲಿ ''ಖಂಡಿತಾ ಬಾಸ್ನ ಅದು ನಮ್ ಸಿನಿಮಾ ಹಯಗ್ರೀವ'' ಎಂದು ತಿಳಿಸಲಾಗಿದೆ
ಇದನ್ನೂ ಓದಿ: 'ಚಿತ್ರೀಕರಣದ ವೇಳೆ ಯಾವುದೇ ಅಡೆತಡೆ ಎದುರಾದಾಗ.....': ರಿಷಬ್ ಶೆಟ್ಟಿ
ರಘುಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ, ಧನ್ವೀರ್ ಜೊತೆ ನಟಿ ಸಂಜನಾ ಆನಂದ್ ತೆರೆಹಂಚಿಕೊಂಡಿದ್ದಾರೆ. ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ನಡಿ ನಿರ್ಮಾಪಕ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ ಚಿತ್ರದಲ್ಲಿ ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಸೇರಿ ಹಲವರು ನಟಿಸಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ, ಕಾರ್ತಿಕ್ ಛಾಯಾಗ್ರಹಣ ಹಾಗೂ ಉಮೇಶ್ ಸಂಕಲನವಿದೆ. ಶೈಲೇಶ್ ರಾಜ್ ಹಾಗೂ ಚೇತನ್ ಸಿದ್ ಸಂಭಾಷಣೆ ಬರೆದಿದ್ದು, ರಘುಕುಮಾರ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

