ಶ್ರೀಕೃಷ್ಣದೇವರಾಯರಾಗಿ ಅಭಿನಯ ಚಕ್ರವರ್ತಿ: ನಟಸಾರ್ವಭೌಮನ ಬಳಿಕ ಶ್ರೇಷ್ಠ ಚಕ್ರವರ್ತಿ ಪಾತ್ರದಲ್ಲಿ ಸುದೀಪ್
Devaraaya: ಸುದೀಪ್ ಜನ್ಮದಿನದ ಹಿನ್ನೆಲೆ, 'ದೇವರಾಯ' ಟೈಟಲ್ ಅನೌನ್ಸ್ಮೆಂಟ್ ವಿಡಿಯೋ ಅನಾವರಣಗೊಂಡಿದೆ. 2027ರ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಸಿನಿಮಾ ತೆರೆಗಪ್ಪಳಿಸಲಿದೆ.

By ETV Bharat Entertainment Team
Published : September 2, 2026 at 1:41 PM IST
ತಮ್ಮ ಅಮೋಘ ಅಭಿನಯ ಹಾಗೂ ಕಂಚಿನ ಕಂಠದಿಂದ ಕನ್ನಡಿಗರು ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಕಿಚ್ಚ ಸುದೀಪ್ ಅವರಿಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 53ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರನ್ನನಿಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದುಬಂದಿದೆ. ಅಭಿನಯ ಚಕ್ರವರ್ತಿ ಸಂಪಾದಿಸಿರುವ ಕೋಟ್ಯಂತರ ಅಭಿಮಾನಿಗಳಿಗೆ ಭರ್ಜರಿ ಬರ್ತ್ಡೇ ಟ್ರೀಟ್ ದೊರೆತಿದೆ. ಹೌದು, ಮುಂಬರುವ ಚಿತ್ರತಂಡಗಳು ತಮ್ಮ ಸಿನಿಮಾ ಅಪ್ಡೇಟ್ ಒದಗಿಸಿವೆ.
ಸುದೀಪ್ ಅವರ ಮುಂದಿನ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಐತಿಹಾಸಿಕ ಪ್ರಾಜೆಕ್ಟ್ 'ದೇವರಾಯ' ಅಧಿಕೃತವಾಗಿ ಘೋಷಣೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆದಿದೆ. ತೆಲುಗಿನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಪ್ರಿಯಾ ಸುದೀಪ್ ಒಡೆತನದ 'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್' ಜಂಟಿಯಾಗಿ ಈ ಬೃಹತ್ ಕ್ಯಾನ್ವಾಸ್‌ನ ಸಿನಿಮಾ ನಿರ್ಮಿಸಲು ಮುಂದಾಗಿವೆ.
ವಿಜಯನಗರ ಸಾಮ್ರಾಜ್ಯವನ್ನು ಸುವರ್ಣ ಯುಗಕ್ಕೆ ಕೊಂಡೊಯ್ದು, ಸಾಹಸ, ಚಾಣಾಕ್ಷ ಆಡಳಿತ ಹಾಗೂ ಸಾಹಿತ್ಯ - ಕಲೆಗಳ ಪೋಷಣೆಗೆ ಹೆಸರಾದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಪಾತ್ರಕ್ಕೆ ಸುದೀಪ್ ಜೀವ ತುಂಬುತ್ತಿದ್ದಾರೆ. ಈ ಹಿಂದೆ ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‌ಕುಮಾರ್ ಅವರು ಕೃಷ್ಣದೇವರಾಯರ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ಅಜರಾಮರಗೊಳಿಸಿದ್ದರು. ಇದೀಗ ದಶಕಗಳ ಬಳಿಕ, ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅದ್ದೂರಿ ಮೇಕಿಂಗ್‌ನೊಂದಿಗೆ ಮೂಡಿಬರಲಿರುವ ಈ ಚಿತ್ರವು ಸುದೀಪ್ ಅವರ ಸಿನಿಪಯಣದಲ್ಲೇ ಅತ್ಯಂತ ದೊಡ್ಡ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ.
ಪ್ರಿಯಾ ಸುದೀಪ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ಟಿ.ಜಿ.ವಿಶ್ವಪ್ರಸಾದ್ ಹಾಗೂ ಕೃತಿ ಪ್ರಸಾದ್ ಬಂಡವಾಳ ಹೂಡುತ್ತಿದ್ದಾರೆ. ತೆಲುಗಿನಲ್ಲಿ 'ಕಾರ್ತಿಕೇಯ 2', 'ಧಮಾಕಾ', 'ಬ್ರೋ' ಹಾಗೂ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಅಂತಹ ಪ್ಯಾನ್-ಇಂಡಿಯಾ ಮತ್ತು ಬಿಗ್ - ಬಜೆಟ್ ಚಿತ್ರಗಳನ್ನು ನಿರ್ಮಿಸಿ ಜನಪ್ರಿಯತೆ ಗಳಿಸಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಇದೀಗ ಕನ್ನಡದಲ್ಲೂ ಭದ್ರವಾಗಿ ನೆಲೆವೂರಲು ಸಜ್ಜಾಗಿದೆ.
ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್, ಗ್ಲಿಂಪ್ಸ್ ಮೂಲಕ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿರುವ ಚಿತ್ರತಂಡ, ಈ ಬೃಹತ್ ಚಿತ್ರವನ್ನು ನಿರ್ದೇಶನ ಮಾಡುವುದು ಯಾರು ಎಂಬುದನ್ನು ಸದ್ಯಕ್ಕೆ ಗೌಪ್ಯವಾಗಿಟ್ಟಿದೆ. ಚಿತ್ರೀಕರಣ ಹಾಗೂ ತಾಂತ್ರಿಕ ಸಿದ್ಧತೆಗಳಿಗೆ ಹೆಚ್ಚಿನ ಸಮಯಾವಕಾಶ ಬೇಕಿರುವುದರಿಂದ, 'ದೇವರಾಯ' ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಂಡ ಯೋಜನೆ ಹಾಕಿಕೊಂಡಿದೆ.

ಕಿಚ್ಚ ಸುದೀಪ್ ಕೈಯಲ್ಲಿ ಎರಡ್ಮೂರು ಸಿನಿಮಾಗಳಿದ್ದು, ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಬಾಷಾ ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ. ಕೆ.ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ನಿರ್ಮಾಣದ ಈ ಸಿನಿಮಾ 2027ರ ಮಾರ್ಚ್ ಒಳಗೆ ಟೀಸರ್ ಬಿಡುಗಡೆಗೊಳಿಸಿ ಪ್ರಚಾರ ಪ್ರಾರಂಭಿಸಲಿದೆ. 2027ರ ಜುಲೈ-ಸೆಪ್ಟಂಬರ್ ನಡುವೆ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಅಗಲಿವೆ. 2027ರ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ: ಸುದೀಪ್ ಜನ್ಮದಿನ: 'ಬಿಲ್ಲ ರಂಗ ಬಾಷಾ ಪೋಸ್ಟರ್ ಅನ್ನು ಬಿಗ್ ಸ್ಕ್ರೀನ್ನಲ್ಲಿ ಜೀವಂತವಾಗಿ ನೋಡಲು ಕಾತರ'
ಇನ್ನೂ, ಖ್ಯಾತ ತಮಿಳು ಫಿಲ್ಮ್ ಮೇಕರ್ ಪಿ.ಸಮುದ್ರಖನಿ ಆ್ಯಕ್ಷನ್ ಕಟ್ ಹೇಳುತ್ತಿರುವ 'ಸ್ಕೂಲ್ ಬಸ್' ಸಿನಿಮಾದ ವಿಶೇಷ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅರ್ಪಿಸುತ್ತಿರುವ ಈ ಚಿತ್ರವನ್ನು ಲೆನಿನ್ ಕ್ರಿಯೇಷನ್ಸ್ ಬ್ಯಾನರ್ ಅಡಿ ಡಾ.ಪಿ.ಲೆನಿನ್ ಮುತ್ತುರಾಜ್ ಮತ್ತು ಡಾ.ಎ.ಟಿ.ಆಶಾ ಲೆನಿನ್ ನಿರ್ಮಾಣ ಮಾಡುತ್ತಿದ್ದಾರೆ. ಭಾರತದ ಬಹುಭಾಷೆಗಳಲ್ಲಿ ಮಾತ್ರವಲ್ಲದೇ ಇಂಗ್ಲಿಷ್, ಚೈನೀಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.
ಇದನ್ನೂ ಓದಿ: ಪಿ.ಸಮುದ್ರಖನಿ ನಿರ್ದೇಶನದ 'ಸ್ಕೂಲ್ ಬಸ್'ನಲ್ಲಿ ಸುದೀಪ್: ಜನ್ಮದಿನಕ್ಕೆ ಫಸ್ಟ್ ಲುಕ್ ಗ್ಲಿಂಪ್ಸ್ ರಿಲೀಸ್

