ETV Bharat / entertainment

ಜಯಮಾಲಾ, ಸಾ.ರಾ.ಗೋವಿಂದುಗೆ 'ರಾಜ್​​ಕುಮಾರ್ ಪ್ರಶಸ್ತಿ' ಘೋಷಣೆ

ರಾಜ್ಯ ಸರ್ಕಾರದಿಂದ ಕೊಡಮಾಡುವ 2020 ಹಾಗೂ 2021ನೇ ಸಾಲಿನ ಸಿನಿಮಾ ಕ್ಷೇತ್ರದ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

Jayamala, Sa Ra Govindu
ಜಯಮಾಲ, ಸಾ.ರಾ.ಗೋವಿಂದು (Photo: ETV Bharat)
author img

By ETV Bharat Entertainment Team

Published : January 9, 2026 at 2:17 PM IST

2 Min Read
Choose ETV Bharat

2020 ಮತ್ತು 2021ನೇ ಸಾಲಿನ ಡಾ.ರಾಜ್​​ಕುಮಾರ್, ಪುಟ್ಟಣ ಕಣಗಾಲ್‍ ಮತ್ತು ಡಾ.ವಿಷ್ಣುವರ್ಧನ್‍ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 2020ನೇ ಸಾಲಿನ ಡಾ.ರಾಜ್​ಕುಮಾರ್ ಪ್ರಶಸ್ತಿಯನ್ನು ಹಿರಿಯ ನಟಿ ಡಾ.ಜಯಮಾಲಾ ಅವರಿಗೆ ಮತ್ತು 2021ನೇ ಸಾಲಿನ ಡಾ.ರಾಜ್​​ಕುಮಾರ್ ಪ್ರಶಸ್ತಿಯನ್ನು ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಅವರಿಗೆ ನೀಡಿ ಗೌರವಿಸಲಾಗುವುದು. ಇಬ್ಬರಿಗೂ 5 ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಪದಕವನ್ನು ನೀಡಿ ಸನ್ಮಾನಿಸಲಾಗುತ್ತದೆ.

ಎರಡೂ ವರ್ಷಗಳ ಪುಟ್ಟಣ್ಣ ಕಣಗಾಲ್‍ ಮತ್ತು ಡಾ.ವಿಷ್ಣುವರ್ಧನ್‍ ಪ್ರಶಸ್ತಿಗಳನ್ನೂ ಸಹ ಘೋಷಿಸಲಾಗಿದೆ. 2020 ಮತ್ತು 2021ನೇ ಸಾಲಿನ ಪುಟ್ಟಣ್ಣ ಕಣಗಾಲ್‍ ಪ್ರಶಸ್ತಿಯನ್ನು ಕ್ರಮವಾಗಿ ಹಿರಿಯ ನಿರ್ದೇಶಕ ಎಂ.ಎಸ್‍.ಸತ್ಯು ಮತ್ತು ಶಿವರುದ್ರಯ್ಯ ಅವರಿಗೆ, ಡಾ.ವಿಷ್ಣುವರ್ಧನ್‍ ‍ಪ್ರಶಸ್ತಿಯನ್ನು ಪ್ರಗತಿ ಅಶ್ವತ್ಥನಾರಾಯಣ್‍ ಮತ್ತು ಹಿರಿಯ ನಟ ಎಂ.ಕೆ.ಸುಂದರ್ ರಾಜ್‍ ಅವರಿಗೆ ನೀಡಿ ಗೌರವಿಸಲಾಗುತ್ತದೆ.

ಡಾ.ಜಯಮಾಲಾ ಅವರು ಡಾ.ರಾಜ್​​ಕುಮಾರ್ ಜೊತೆಗೆ ಪ್ರೇಮದ ಕಾಣಿಕೆ, ಬಡವರ ಬಂಧು, ಶಂಕರ್ ಗುರು ಸೇರಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ತೆರೆಹಂಚಿಕೊಂಡಿದ್ದರು. ಇನ್ನೂ, ಸಾ.ರಾ.ಗೋವಿಂದು ಅವರು ಡಾ.ರಾಜ್​ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದರು.

2020 ಮತ್ತು 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿ ಕೆಲ ತಿಂಗಳುಗಳೇ ಆಗಿವೆ. ಆದರೆ, ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್‍ ಮತ್ತು ಡಾ.ವಿಷ್ಣುವರ್ಧನ್‍ ಪ್ರಶಸ್ತಿಗಗಳಿಗೆ ಹೆಸರುಗಳು ಆಯ್ಕೆಯಾಗಿರದ ಕಾರಣ, ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿರಲಿಲ್ಲ. ಇದೀಗ ಈ ಪ್ರತಿಷ್ಠಿತ ಪ್ರಶಸ್ತಿಗಳಿಗೂ ಕಲಾವಿದರು ಆಯ್ಕೆ ಆಗಿರುವುದರಿಂದ, ಸದ್ಯದಲ್ಲೇ ಎರಡೂ ವರ್ಷಗಳ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇದನ್ನೂ ಓದಿ: ಆಸ್ಕರ್ ಅಂಗಳದಲ್ಲಿ ಕನ್ನಡ ಚಿತ್ರಗಳು: ರಾಷ್ಟ್ರಪ್ರಶಸ್ತಿ ಬಳಿಕ ಹೊಂಬಾಳೆ ಫಿಲ್ಮ್ಸ್​​ನ ಮತ್ತೊಂದು ಮೈಲಿಗಲ್ಲು

2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು 2025ರ ಅಕ್ಟೋಬರ್​​ ಆರಂಭದಲ್ಲಿ ರಾಜ್ಯ ಸರ್ಕಾರ ಘೋಷಿಸಿತು. ಸೂಪರ್ ಹಿಟ್ '777 ಚಾರ್ಲಿ' ಚಿತ್ರದ ಅಭಿನಯಕ್ಕಾಗಿ ನಟ ರಕ್ಷಿತ್‍ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಮತ್ತು ಮ್ಯೂಟ್‍ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕಾಗಿ ಅರ್ಚನಾ ಜೋಯಿಸ್‍ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಣೆಯಾಗಿದೆ. ಕೆ.ಎಂ.ರಘು ಆ್ಯಕ್ಷನ್​ ಕಟ್ ಹೇಳಿರುವ ದೊಡ್ಡಹಟ್ಟಿ ಬೋರೇಗೌಡ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಇದನ್ನೂ ಓದಿ: ರಮೇಶ್ ಅರವಿಂದ್ ಮುಖ್ಯಭೂಮಿಕೆಯ 'ದೈಜಿ' ಚಿತ್ರದಲ್ಲಿ ಖುಷಿ ರವಿ

ಕೋವಿಡ್ -19 ಮತ್ತು ಇತರೆ ಕಾರಣಗಳಿಂದ 5 ವರ್ಷಗಳ ವಿಳಂಬದ ನಂತರ ರಾಜ್ಯ ಸರ್ಕಾರ ತನ್ನ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲು ಪ್ರಾರಂಭಿಸಿದ್ದು, ಪ್ರದಾನ ಸಮಾರಂಭಗಳು ಜರುಗಬೇಕಿದೆ. 2025ರ ನವೆಂಬರ್​ 3ರ ಸಂಜೆ ಮೈಸೂರಿನಲ್ಲಿ 2018-19ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಒಂದೇ ಸೂರಿನಡಿ ಕನ್ನಡ ಚಿತ್ರರಂಗದ ಗಣ್ಯರು ಬಂದು ಸೇರಿದ್ದರು. 2020ರ ನಂತರದ ಸಾಲುಗಳ ಪ್ರಶಸ್ತಿ ಪ್ರದಾನ ಸಮಾರಂಭ ಇನ್ನಷ್ಟೇ ಜರುಗಬೇಕಿದೆ.