'ದೇವನೊಬ್ಬ ಜಾದೂಗಾರ'ಗೆ ಸಿಂಪಲ್ ಸುನಿ, ಶ್ವೇತಾ ಶ್ರೀವಾಸ್ತವ್, ಹುಚ್ಚ ವೆಂಕಟ್ ಸಾಥ್: ಟೀಸರ್ ನೋಡಿ
'ದೇವನೊಬ್ಬ ಜಾದೂಗಾರ' ಶೀರ್ಷಿಕೆಯ ಚಿತ್ರದ ಟೀಸರ್ ಅನಾವರಣಗೊಂಡಿದೆ.

By ETV Bharat Entertainment Team
Published : January 5, 2026 at 1:02 PM IST
ಜೀವನದಲ್ಲಿ ನಂಬಿಕೆ ಕಳೆದುಕೊಂಡಾಗ ಹೆಚ್ಚಿನವರಿಗೆ ದೇವರ ನೆನಪಾಗುತ್ತದೆ. ದೇವರು ತಮ್ಮ ಜೀವನದಲ್ಲಿ ಎಷ್ಟೆಲ್ಲಾ ಸವಾಲುಗಳನ್ನು ತಂದಿಟ್ಟ ಎಂದೆನಿಸಬಹುದು. ಆಗೆಲ್ಲ ಬಹುತೇಕರು 'ದೇವನೊಬ್ಬ ಜಾದೂಗಾರ' ಎಂದುಕೊಳ್ಳೋದುಂಟು. ಇದೀಗ ಖಟ್ವಾಂಗ ಸ್ಟುಡಿಯೋಸ್ ಬ್ಯಾನರ್ನಡಿ ಇದೇ ಶೀರ್ಷಿಕೆಯಲ್ಲಿ ಸಿನಿಮಾವೊಂದು ಮೂಡಿಬರುತ್ತಿದೆ.
ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿರುವ ಬಾಲಕೃಷ್ಣ ಶೆಟ್ಟಿ ಈ 'ದೇವನೊಬ್ಬ ಜಾದೂಗಾರ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ದೊಡ್ಡ ತಾರಾಬಳಗವಿರುವ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ನಟಿ ಶ್ವೇತಾ ಶ್ರೀವಾಸ್ತವ್ ಟೀಸರ್ ಬಿಡುಗಡೆ ಮಾಡಿದರು. ನಿರ್ದೇಶಕ ಸಿಂಪಲ್ ಸುನಿ ಮತ್ತು ಬಿಗ್ ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ಮೊದಲು ಮಾತನಾಡಿದ ಶ್ವೇತಾ ಶ್ರೀವಾಸ್ತವ್, ''ನಿರ್ದೇಶಕ ವರುಣ್ ವಸಿಷ್ಠ ಅವರಿಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾ ದಿನದಿಂದಲೂ ನನಗೆ ವರುಣ್ ಪರಿಚಯವಿದೆ. ಅಂದಿನಿಂದಲೂ ಅವರಿಗೆ ದೊಡ್ಡ ಸಿನಿಮಾ ನಿರ್ದೇಶನ ಮಾಡಬೇಕೆಂಬ ಕನಸಿತ್ತು. ಇಂದು ಅದು ನಿಜವಾಗಿದೆ. ಈ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಹೆಮ್ಮೆಯೆನಿಸುತ್ತದೆ. ಚಿತ್ರ ಉತ್ತಮ ಹೆಸರು ತರಲಿ, ಭವಿಷ್ಯದಲ್ಲಿ ಮತ್ತಷ್ಟು ಒಳ್ಳೆಯ ಚಿತ್ರಗಳು ಈ ಬ್ಯಾನರ್ನಲ್ಲಿ ಬರಲಿ" ಎಂದರು.

ಹೊಸ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ನಿರ್ದೇಶಕ ಸಿಂಪಲ್ ಸುನಿ ಮತ್ತು ಹುಚ್ಚ ವೆಂಕಟ್ ಶುಭಾಶಯ ಕೋರಿದರು.
ಚಿತ್ರದ ನಿರ್ದೇಶಕ ವರುಣ್ ಮಾತನಾಡಿ, "ಕಾಲೇಜು ದಿನಗಳಿಂದಲೂ ಶಾರ್ಟ್ ಮೂವಿ ಮಾಡಿಕೊಂಡು ಬಂದಿದ್ದೇನೆ. ಒಮ್ಮೆ ಫೇಸ್ ಬುಕ್ನಲ್ಲಿ ಸಚಿನ್ ಅವರ ಪರಿಚಯವಾಯಿತು. ನಂತರ ಉಡುಪಿಗೆ ಹೋದಾಗ ಅವರನ್ನು ಭೇಟಿ ಮಾಡಿದೆ. ಆಗ ನನಗೆ ಅವರಲ್ಲೊಬ್ಬ ನಟ ಇದ್ದಾನೆ ಎಂಬುದು ಗೊತ್ತಿರಲಿಲ್ಲ. ಆದರೆ ಅವರು ಮುಂದಿನ ದಿನಗಳಲ್ಲಿ ದೊಡ್ಡ ಕಲಾವಿದರಾಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದ್ದಾರೆ. ಸುಧಾ ಬೆಳವಾಡಿ ಪ್ರಮುಖ ಪಾತ್ರ ಒಂದನ್ನು ನಿರ್ವಹಿಸಿದ್ದಾರೆ. ಇಲ್ಲಿ ಪ್ರತೀ ಕಲಾವಿದರು ಮತ್ತೋರ್ವರಿಗೆ ಕಾಂಪೀಟ್ ಮಾಡುವ ರೀತಿಯಲ್ಲಿ ಅಭಿನಯಿಸಿದ್ದಾರೆ. ಇಲ್ಲಿ ಪ್ರತಿಯೊಬ್ಬ ನಟರ ಮೇಲೆ ಕಥೆ ಸಾಗುತ್ತದೆ" ಎಂದು ಹೇಳಿದರು.

"ಕಾಶಿಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು, ದೇವ ಎನ್ನುವ ಲಾರಿ ಚಾಲಕನ ಜೀವನವನ್ನು ಕೇಂದ್ರವಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅವನ ಜೀವನದಲ್ಲಿ ನಡೆಯುವ ಕಲ್ಪನಾತೀತ ಘಟನೆಗಳ ಜೊತೆಗೆ ಓರ್ವ ಮಂಗಳಮುಖಿ ಪಾತ್ರವೂ ಚಿತ್ರದಲ್ಲಿದೆ. ಪ್ರತಿಯೊಬ್ಬರ ಜೀವನದಲ್ಲಿಯೂ ದೇವರ ಲೆಕ್ಕಾಚಾರ ಇರುತ್ತದೆ. ಹಾಗಾಗಿ ದೇವನೊಬ್ಬ ಜಾದೂಗಾರ ಹೆಸರಿನಲ್ಲಿ ಚಿತ್ರ ಮಾಡಲಾಗಿದೆ. ಕಾಶಿಪುರದಲ್ಲಿರುವ ಇಬ್ಬರು ಪ್ರಮುಖ ವ್ಯಕ್ತಿಗಳು ದೇವನ ಮೇಲೆ ಬೀರಿದ ಪ್ರಭಾವ, ಅದರಿಂದ ದೇವನ ಜೀವನ ಬದಲಾಗುವ ರೀತಿ, ಅಂತಿಮವಾಗಿ ದೇವ ಏನಾಗುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ಹೇಳುತ್ತಿದ್ದೇನೆ. 4 ವರ್ಷಗಳಿಂದ ಶೂಟಿಂಗ್ ನಡೆದಿದೆ. ಸಚಿನ್ ಹಾಗೂ ನಿರ್ಮಾಪಕರು ಭಾರತಕ್ಕೆ ಬಂದಾಗ ಮಾತ್ರ ಶೂಟಿಂಗ್ ಮಾಡಲಾಗಿದೆ. ಬೆಂಗಳೂರು, ತುಮಕೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ಸಹ ಅಂತಿಮ ಹಂತದಲ್ಲಿದೆ. ಸಿನಿಮಾವನ್ನು ಶೀಘ್ರದಲ್ಲೇ ತೆರೆಗೆ ತರಲು ಯೋಜಿಸಿದ್ದೇವೆ" ಎಂದು ನಿರ್ದೇಶಕ ವರುಣ್ ಮಾಹಿತಿ ನೀಡಿದರು.
ನಾಯಕ ನಟ ಸಚಿನ್ ಮಾತನಾಡಿ, ''ನಾನು ಮತ್ತು ವರುಣ್ ಫೇಸ್ ಬುಕ್ನಲ್ಲಿ ಸ್ನೇಹಿತರಾದವರು. ನನಗೆ ಅಭಿನಯಿಸುವ ಆಸೆ ಇದ್ದರೂ ಸರಿಯಾಗಿ ಅವಕಾಶ ಸಿಗಲಿಲ್ಲ. ಪ್ರತಿಭಾವಂತನಾಗಿದ್ದ ವರುಣ್ ಬೆಳೆಯಲಿ ಎಂದು ಅವನಿಗೆ ನೆರವಾದೆ. ಊರಿಗೆ ಬಂದಾಗ ನಾನು ಅವನೊಂದಿಗೆ ಸೇರಿ ಶಾರ್ಟ್ ಮೂವಿ ಮಾಡಿದೆ. ಆಗ ನನ್ನ ರಾ ಲುಕ್ ನೋಡಿ ಈ ಕಥೆ ಹೇಳಿದ್ದ. ಈಗ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಕನ್ನಡ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ಹರಸಿ'' ಎಂದು ಕೇಳಿಕೊಂಡರು.

ನಾಯಕಿ ಪ್ರಿಯಾ ಜೆ.ಆಚಾರ್ ಮಾತನಾಡಿ, "ನನ್ನದು ಇದರಲ್ಲಿ ವಿಶೇಷ ಪಾತ್ರ. ಆದರೆ ಈಗಲೇ ಪಾತ್ರದ ಬಗ್ಗೆ ಏನೂ ಹೇಳಲಾಗದು" ಎಂದರು.
ನಿರ್ಮಾಪಕ ಬಾಲಕೃಷ್ಣ ಶೆಟ್ಟಿ ಮಾತನಾಡಿ, "ಹಲವು ವರ್ಷಗಳಿಂದ ವಿದೇಶದಲ್ಲಿದ್ದರೂ ನಾನು ಅಲ್ಲಿ ಕನ್ನಡ ಸಂಘ ಮಾಡಿದೆ. ಅನಿವಾಸಿ ಭಾರತೀಯರಿಗೆ ಮೊದಲ ಎನ್.ಆರ್.ಐ. ಸಂಘ ಕಟ್ಟಿದ್ದು ನಾನು. ನನಗೆ ಕನ್ನಡ ಎಂದರೆ ಬಹಳ ಅಭಿಮಾನ. ಅಂತಹ ಸಮಯದಲ್ಲಿ ವರುಣ್ ನನ್ನ ಬಳಿ ಬಂದು ಕಥೆ ಹೇಳಿದರು. ನನ್ನ ಮಗನಿಗೆ ಚಿತ್ರನಟನಾಗಬೇಕು ಎಂದು ಬಾಲ್ಯದಿಂದಲೇ ಆಸೆ ಇತ್ತು. ಅಂತಹ ಸಮಯದಲ್ಲಿ ನನ್ನ ಮಗನನ್ನು ನಾಯಕನೆಂದು ಮನಸ್ಸಿನಲ್ಲಿಟ್ಟುಕೊಂಡು ನಿರ್ದೇಶಕ ವರುಣ್ ಕಥೆ ಹೇಳಿದ್ದರು. ಇದು ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಚಿತ್ರ. ತಂಡದ ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ" ಎಂದರು.
ಇದನ್ನೂ ಓದಿ: ಮತ್ತೆ ಪ್ರೀತಿ ಹೊತ್ತು ಬರಲು ಸಜ್ಜಾದ ಡಾರ್ಲಿಂಗ್ ಕೃಷ್ಣ: 'ಲವ್ ಮಾಕ್ಟೇಲ್ 3'ರ ಕಥೆಯೇನು?
ಮುಖ್ಯಮಂತ್ರಿಯ ಪಾತ್ರ ನಿರ್ವಹಿಸಿದ ಸುಧಾ ಬೆಳವಾಡಿ ಮಾತನಾಡಿ, ''ಟೈಟಲ್ ನೋಡಿ ಸಿನಿಮಾ ನೋಡಬೇಕು ಎನಿಸೋ ಚಿತ್ರವಿದು. ನಿರ್ದೇಶಕರು ಹಾಗೂ ನಿರ್ಮಾಪಕರು ಬಹಳಷ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಸೌದಿ ಅರೇಬಿಯಾದಿಂದ ಬಂದು ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಬೆಂಬಲ ನೀಡಬೇಕು" ಎಂದು ಮನವಿ ಮಾಡಿದರು.
ಇದನ್ನೂ ಓದಿ: ಡಾಲಿ ಧನಂಜಯ್ ಮುಂದಿನ ಸಿನಿಮಾ 'ಹೆಗ್ಗಣ ಮುದ್ದು': ಅರುಣ್ ಸಾಗರ್ ಪುತ್ರಿ ಅದಿತಿ ನಾಯಕಿ
ದೇವನೊಬ್ಬ ಜಾದೂಗಾರ ಚಿತ್ರಕ್ಕೆ ವಿಜೇತ್ ಚಂದ್ರ ಸಂಕಲನವಿದ್ದರೆ, ಋತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಚೇತನ್ ಎ. ಡಿಐ, ಶ್ಯಾಮ್ ರಾವ್ ನಗರಗದ್ದೆ ಅವರ ಛಾಯಾಗ್ರಹಣವಿದೆ. ಲಹರಿಯ ಸೋದರ ಸಂಸ್ಥೆ ಎಂ.ಆರ್.ಟಿ.ಯೂಟ್ಯೂಬ್ ಚಾನಲ್ನಲ್ಲಿ ಟೀಸರ್ ಬಿಡುಗಡೆ ಆಗಿದೆ.


