ETV Bharat / entertainment

'ಸೀಟ್ ಎಡ್ಜ್' 25 ದಿನಗಳ ಯಶಸ್ವಿ ಪ್ರದರ್ಶನ: ಮತ್ತೊಂದು ಸಿನಿಮಾಗೆ ಮುಂದಾದ ಇದೇ ತಂಡ

'ಸೀಟ್ ಎಡ್ಜ್' ಚಿತ್ರಮಂದಿರಗಳಲ್ಲಿ ಯಶಸ್ವಿ 25 ದಿನಗಳ ಪ್ರದರ್ಶನ ಪೂರ್ಣಗೊಳಿಸಿದ್ದು, ಚಿತ್ರಮಂದಿರಗಳಲ್ಲಿ ಓಟ ಮುಂದುವರಿಸಿದೆ.

Seat Edge Film Team
'ಸೀಟ್ ಎಡ್ಜ್' ಯಶಸ್ವಿ ಪ್ರದರ್ಶನ (Photo: ETV Bharat)
author img

By ETV Bharat Entertainment Team

Published : February 26, 2026 at 10:33 AM IST

2 Min Read
Choose ETV Bharat

ಯುವನಟ ಸಿದ್ದು ಮೂಲಿಮನಿ ಮತ್ತು ರವೀಕ್ಷಾ ಶೆಟ್ಟಿ ಜೋಡಿಯಾಗಿ ಅಭಿನಯಿಸಿದ್ದ 'ಸೀಟ್ ಎಡ್ಜ್' ಜನವರಿ 30ಕ್ಕೆ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಇತ್ತೀಚೆಗೆ ಚಿತ್ರಮಂದಿರಗಳಲ್ಲಿ 25 ದಿನಗಳ ಯಶಸ್ವಿ ಪ್ರದರ್ಶನ ಪೂರ್ಣಗೊಳಿಸಿದ್ದು, ಓಟ ಮುಂದುವರಿಸಿದೆ.

ಹೌದು, ಕರ್ನಾಟಕದಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಪರದೆಗಳಲ್ಲಿ ಸೀಟ್ ಎಡ್ಜ್ ಚಿತ್ರ ಏಕಕಾಲದಲ್ಲಿ ತೆರೆ ಕಂಡಿತ್ತು. ಆರಂಭದಲ್ಲೇ ಬಹುತೇಕ ಎಲ್ಲಾ ಪರದೆಗಳಲ್ಲೂ ಉತ್ತಮ ಪ್ರದರ್ಶನ ಕಂಡ ಚಿತ್ರ, ನಂತರ ಹೌಸ್​ಫುಲ್​​ ಪ್ರದರ್ಶನ ಕಾಣುವಲ್ಲಿ ಯಶಸ್ವಿಯಾಗಿದೆ.

ಇತ್ತೀಚೆಗೆ 25 ದಿನಗಳ ಯಶಸ್ವಿ ಪ್ರದರ್ಶನ ಪೂರ್ಣಗೊಳಿಸಿದ ಹಿನ್ನೆಲೆ ನಾಯಕ ನಟ ಸಿದ್ದು ಮೂಲಿಮನಿ‌ ಮಾತನಾಡಿ, ನಮ್ಮ ಸೀಟ್ ಎಡ್ಜ್ ಸಿನಿಮಾ ಬಿಡುಗಡೆಯಾದ ಬಹುತೇಕ ಎಲ್ಲಾ ಕಡೆಗಳಲ್ಲಿ 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ರಾಜ್ಯದ ಎಲ್ಲಾ ಭಾಗಗಳ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಸಿನಿಮಾದಲ್ಲಿನ ಹಾರರ್ - ಕಾಮಿಡಿ ಶೈಲಿಯನ್ನು ನೋಡುಗರು ಎಂಜಾಯ್ ಮಾಡುತ್ತಿದ್ದಾರೆ. ಪ್ರೇಕ್ಷಕರು ಕೊಟ್ಟ ಅಭೂತಪೂರ್ವ ಬೆಂಬಲ ಮತ್ತು ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

Seat Edge Film Team
ನಟ ಸಿದ್ದು ಮೂಲಿಮನಿ (Photo: ETV Bharat)

ಚಿತ್ರದ ನಾಯಕ ನಟಿ ರವೀಕ್ಷಾ ಶೆಟ್ಟಿ ಮಾತನಾಡಿ, ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಬಹಳ ಖುಷಿಯಾಗಿದೆ. ಸಿನಿಮಾ ನೋಡಿದ ಬಹುತೇಕರು ಟೈಟಲ್​ಗೆ ತಕ್ಕ ಸಿನಿಮಾ. ಚಿತ್ರ ವೀಕ್ಷಿಸಿದಾಗ ಸೀಟ್ ಎಡ್ಜ್​ನಲ್ಲಿ ಕುಳಿತ ಅನುಭವ. ಸಿನಿಮಾದ ಕಥೆ, ಹಾಡು, ಡ್ಯಾನ್ಸ್, ಕಾಮಿಡಿ, ಹಾರರ್, ಥ್ರಿಲ್ಲರ್ ಅಂಶಗಳನ್ನು ಆಡಿಯನ್ಸ್ ಎಂಜಾಯ್ ಮಾಡುತ್ತಿದ್ದಾರೆ. ಇಂಥದ್ದೊಂದು ಸಿನಿಮಾದ ಪಾತ್ರವಾಗಿರುವುದಕ್ಕೆ ಖುಷಿಯಾಗಿದೆ ಎಂದು ಹಂಚಿಕೊಂಡರು.

ನಿರ್ಮಾಪಕ ಗಿರಿಧರ ಟಿ.ವಸಂತಪುರ ಮತ್ತು ನಿರ್ದೇಶಕ ಚೇತನ್ ಶೆಟ್ಟಿ ಇಬ್ಬರೂ ಖುಷಿ ಹಂಚಿಕೊಂಡಿದ್ದು, ಸೀಟ್ ಎಡ್ಜ್ ಚಿತ್ರಕ್ಕೆ ಥಿಯೇಟರ್​​ನಲ್ಲಿ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಸೀಟ್ ಎಡ್ಜ್​​​ನಲ್ಲಿ ಕುಳಿತ ಅನುಭವ ಆಯಿತೆಂದು ಹಂಚಿಕೊಳ್ಳುತ್ತಿದ್ದಾರೆ. ಜನರಿಗೆ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ ಎಂಬ ಖುಷಿ ನಮಗಿದೆ. ಸೀಟ್ ಎಡ್ಜ್ ನಮಗೆ ಮರೆಯಲಾಗದ ಅನುಭವ, ನೆನಪುಗಳನ್ನು ಕೊಟ್ಟಿದೆ. ನಮ್ಮ ಚಿತ್ರವನ್ನು ಗೆಲ್ಲಿಸಿದ ಕನ್ನಡದ ಎಲ್ಲಾ ಚಿತ್ರಪ್ರೇಮಿಗಳಿಗೆ ಧನ್ಯವಾದಗಳು ಎಂದು ಕೃತಘ್ಞತೆ ಅರ್ಪಿಸಿದರು.

Seat Edge Film Team
ನಟ ಸಿದ್ದು ಮೂಲಿಮನಿ (Photo: ETV Bharat)

ಇನ್ನೂ, ಸೀಟ್ ಎಡ್ಜ್ ಸಕ್ಸಸ್​​ನಿಂದ ಖುಷಿಯಾಗಿರುವ ಚಿತ್ರತಂಡ ಸದ್ದಿಲ್ಲದೇ, ಮತ್ತೊಂದು ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಮತ್ತು ನಿರ್ದೇಶಕರು, ಮನಸ್ಸಿಗೆ ಮುಟ್ಟುವಂಥ ಸಿನಿಮಾಗಳನ್ನು ಮಾಡಿದರೆ, ಖಂಡಿತ ಪ್ರೇಕ್ಷಕರು ವೀಕ್ಷಿಸುತ್ತಾರೆ ಎಂಬ ಭರವಸೆ ನಮಗೆ ಸೀಟ್ ಎಡ್ಜ್ ಚಿತ್ರದ ಮೂಲಕ ಸಿಕ್ಕಿದೆ. ಮುಂದೆ, ಇದೇ ತಂಡದ ಜೊತೆಗೆ ಮತ್ತೊಂದು ಹೊಸ ಸಿನಿಮಾದ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಆ ಸಿನಿಮಾವನ್ನೂ ಘೋಷಣೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 'ಟಾಕ್ಸಿಕ್'ಗೂ ಮುನ್ನ ಯಶ್​ ಗಡ್ಡಕ್ಕೆ ಕತ್ತರಿ ಹಾಕಿಸಿದ ಸಿನಿಮಾ ಯಾವುದು? ಕೆಜಿಎಫ್‌ 2 ಹಿನ್ನೆಲೆ ಸ್ಥಗಿತ!

ಚಿತ್ರದ ನಾಯಕ ಸಿದ್ದು ಮೂಲಿಮನಿ, ನಾಯಕಿ ರವೀಕ್ಷಾ ಶೆಟ್ಟಿ ಅವರೊಂದಿಗೆ ಚಿತ್ರದ ಇತರೆ ಪ್ರಮುಖ ಕಲಾವಿದರಾದ ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮೀ ಸಿದ್ದಯ್ಯ ಸೇರಿದಂತೆ ಅನೇಕರು ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: ಐಟಿ ಕೆಲಸಕ್ಕೆ ಗುಡ್ ಬೈ, ಸಿನಿಮಾದಲ್ಲಿ ಸಕ್ಸಸ್; ಶಿವಣ್ಣ, ಧನ್ವೀರ್, ರವಿಚಂದ್ರನ್​ ಪುತ್ರನೊಂದಿಗೆ ನಟನೆ: 'ಹಯಗ್ರೀವ' ನಟಿ ಸಂಜನಾ ಆನಂದ್ ಸಂದರ್ಶನ

ಸದ್ಯ 25 ದಿನಗಳನ್ನು ಪೂರೈಸಿದ್ದು, ರಾಜ್ಯಾದ್ಯಂತ ಸುಮಾರು 10ಕ್ಕೂ ಹೆಚ್ಚಿನ ಕಡೆಗಳಲ್ಲಿ ನಾಲ್ಕನೇ ವಾರ ಪೂರೈಸಿ ಐದನೇ ವಾರದತ್ತ ಮುನ್ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯನಾಗಬೇಕು ಎಂದು ಘೋಸ್ಟ್ ಹಂಟಿಂಗ್​​ಗೆ ಹೊರಟ ವ್ಲಾಗರ್ ಹುಡುಗನೊಬ್ಬ ಏನೇನು ಸಮಸ್ಯೆ ಎದುರಿಸುತ್ತಾನೆ? ಕೊನೆಗೆ ಆ ಸಮಸ್ಯೆಯಿಂದ ಹೊರ ಬರುತ್ತಾನಾ? ಇಲ್ಲವಾ? ಎಂಬುದರ ಸುತ್ತ ಚಿತ್ರದ ಕಥಾಹಂದರ ಸಾಗುತ್ತದೆ. ಉತ್ತರ ಭಾರತದ ಖ್ಯಾತ ಘೋಸ್ಟ್ ಹಂಟರ್ ಸೌರವ್ ತ್ರಿಪಾಠಿ ಅವರಿಂದ ಪ್ರೇರಣೆಗೊಂಡು ಸೀಟ್ ಎಡ್ಜ್ ಚಿತ್ರ ಮಾಡಲಾಗಿದೆ.

Seat Edge Film Team
'ಸೀಟ್ ಎಡ್ಜ್' ಚಿತ್ರತಂಡ (Photo: ETV Bharat)